ಯಾದಗಿರಿ ರೈಲ್ವೆ ಕೋಚ್ ಕಾರ್ಖಾನೆ: ಕಮರುತ್ತಿದೆಯೇ ಕಲ್ಯಾಣ ಕರ್ನಾಟಕದ ಕನಸು?
ಸ್ಥಳೀಯರಿಗೆ ಉದ್ಯೋಗ ನೀಡಬೇಕಿದ್ದ ಯಾದಗಿರಿ ರೈಲ್ವೆ ಕೋಚ್ ಕಾರ್ಖಾನೆ ಪರ ರಾಜ್ಯದವರ ಪಾಲಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಕೇಂದ್ರ ಸರ್ಕಾರದ ಬದಲಾದ ನೀತಿಗಳು, ಆದ್ಯತೆಗಳ ನಡುವೆ ಸಿಲುಕಿಕೊಂಡಿದೆ.
ಅಭಿವೃದ್ಧಿಯ ದೃಷ್ಟಿಯಿಂದ ಹಿಂದುಳಿದ ಹಣೆಪಟ್ಟಿ ಹೊತ್ತಿರುವ ಯಾದಗಿರಿ ಜಿಲ್ಲೆ ಅಪಾರ ನೈಸರ್ಗಿಕ ಸಂಪನ್ಮೂಲ ಮತ್ತು ಮಾನವ ಶಕ್ತಿಯನ್ನು ಹೊಂದಿರುವ ಪ್ರದೇಶ. ಕಲ್ಯಾಣ ಕರ್ನಾಟಕದ ಈ ಜಿಲ್ಲೆಯ ಅಭಿವೃದ್ಧಿಗೆ ಆಶಾಕಿರಣವಾಗಿದ್ದ ರೈಲ್ವೆ ಕೋಚ್ ಕಾರ್ಖಾನೆ ಇಂದು ತನ್ನ ಅಸ್ತಿತ್ವಕ್ಕಾಗಿ ಹೋರಾಡುವ ಪರಿಸ್ಥಿತಿಯಲ್ಲಿದೆ. ದಶಕಗಳ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ಕಂಡ ಕನಸು, ಇಂದು ನಿರ್ಲಕ್ಷ್ಯದ ಸುಳಿಯಲ್ಲಿ ಸಿಲುಕಿದೆ. ಸ್ಥಳೀಯರಿಗೆ ಉದ್ಯೋಗ ನೀಡಬೇಕಿದ್ದ ಕಾರ್ಖಾನೆ, ಪರರಾಜ್ಯದವರ ಪಾಲಾಗುತ್ತಿದ್ದು, ಉತ್ಪಾದನಾ ಸಾಮರ್ಥ್ಯವೂ ಕುಂಠಿತಗೊಂಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ (2013-14) ಮಂಜೂರಾಗಿದ್ದ ಈ ಯೋಜನೆ, ಇದೀಗ ಕೇಂದ್ರ ಸರ್ಕಾರದ ಬದಲಾದ ನೀತಿಗಳು ಮತ್ತು ಆದ್ಯತೆಗಳ ನಡುವೆ ಸಿಲುಕಿಕೊಂಡಿದೆ. ಇತ್ತೀಚೆಗೆ ಗುರುಮಿಟ್ಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ್ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾದ ಬಳಿಕ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಘಟಕದ ದುಸ್ಥಿತಿ ಕುರಿತು ಮಾಹಿತಿ ನೀಡಿದ್ದು, ರೈಲ್ವೆ ಕೋಚ್ ಉಳಿವಿಗೆ ಹೆಚ್ಚಿನ ಅನುದಾನ ನೀಡುವಂತೆ ಕೋರಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ರೈಲ್ವೆ ಮಂಡಳಿಯು ಯಾದಗಿರಿ ಘಟಕಕ್ಕೆ ನೀಡುತ್ತಿದ್ದ ಕೆಲಸದ ಪ್ರಮಾಣವನ್ನು ಕಡಿಮೆ ಮಾಡಿದೆ. ಇದರಿಂದಾಗಿ ಅಲ್ಲಿನ ಗುತ್ತಿಗೆ ನೌಕರರಿಗೆ ಕೆಲಸ ಇಲ್ಲದಂತಾಗಿದೆ. ಇದನ್ನು ಸರಿಪಡಿಸಲು ನಿರಂತರ ಕೆಲಸ ನೀಡುವಂತೆ ಮನವಿ ಮಾಡಲಾಗಿದೆ. 2024-25ರ ಕೇಂದ್ರ ಬಜೆಟ್‌ನಲ್ಲಿ ಯಾದಗಿರಿ ಘಟಕಕ್ಕೆ ನಿರ್ದಿಷ್ಟವಾಗಿ ಯಾವುದೇ 'ಬೃಹತ್ ಪ್ಯಾಕೇಜ್' ಘೋಷಣೆಯಾಗಿಲ್ಲ. ಇದು ಸ್ಥಳೀಯರಲ್ಲಿ ನಿರಾಶೆ ಮೂಡಿಸಿದೆ. ಕೇವಲ ದೈನಂದಿನ ನಿರ್ವಹಣೆಗೆ ಬೇಕಾದ ಅನುದಾನವಷ್ಟೇ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗಿದೆ.
ಹಿನ್ನೆಲೆ ಮತ್ತು ಸ್ಥಾಪನೆಯ ಉದ್ದೇಶ
2013-14ರ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ, ಯಾದಗಿರಿ ಜಿಲ್ಲೆಯ ಕಡೆಚೂರು-ಬಾಡಿಯಾಳ್ ಕೈಗಾರಿಕಾ ಪ್ರದೇಶದಲ್ಲಿ ರೈಲ್ವೆ ಕೋಚ್ ಕಾರ್ಖಾನೆಯನ್ನು ಮಂಜೂರು ಮಾಡಿದ್ದರು. ಇದು ಕೇವಲ ಒಂದು ಕಾರ್ಖಾನೆಯಾಗಿರದೆ, ಹಿಂದುಳಿದ ಯಾದಗಿರಿ ಜಿಲ್ಲೆಯ ಆರ್ಥಿಕ ಚಿತ್ರಣವನ್ನೇ ಬದಲಿಸುವ ಯೋಜನೆಯಾಗಿತ್ತು. ಸುಮಾರು 150 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ತಲೆ ಎತ್ತಿದ ಈ ಘಟಕದ ಮೂಲ ಉದ್ದೇಶ, ರೈಲ್ವೆ ಬೋಗಿಗಳ ತಯಾರಿಕೆ ಮತ್ತು ನಿರ್ವಹಣೆಯಾಗಿತ್ತು. ಈ ಭಾಗದಲ್ಲಿ ಕೈಗಾರಿಕೆಗಳು ಕಡಿಮೆಯಿರುವುದರಿಂದ, ಬೃಹತ್ ಸಾರ್ವಜನಿಕ ವಲಯದ ಉದ್ದಿಮೆಯೊಂದು ಬಂದರೆ ಸಾವಿರಾರು ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಸಿಗುತ್ತದೆ ಎಂಬುದು ಅಂದಿನ ಲೆಕ್ಕಾಚಾರವಾಗಿತ್ತು. ಆರಂಭದ ದಿನಗಳಲ್ಲಿ ಕಾಮಗಾರಿ ವೇಗವಾಗಿ ನಡೆದರೂ, ನಂತರ ಬಂದ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಯೋಜನೆಯು ಅಂದುಕೊಂಡ ವೇಗದಲ್ಲಿ ಸಾಗಲಿಲ್ಲ. ಪ್ರಸ್ತುತ ಉತ್ಪಾದನಾ ಸಾಮರ್ಥ್ಯದ ಕುಸಿತ, ಕನ್ನಡಿಗರ ಉದ್ಯೋಗದ ಹಕ್ಕು ಮತ್ತು ವಂಚನೆ, ರಾಜಕೀಯ ಇಚ್ಛಾಶಕ್ತಿ ಮತ್ತು ಕೇಂದ್ರದ ಮಲತಾಯಿ ಧೋರಣೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ.
ಉತ್ಪಾದನಾ ಸಾಮರ್ಥ್ಯದ ಕುಸಿತ
ಯಾದಗಿರಿ ಘಟಕವು ಪೂರ್ಣ ಪ್ರಮಾಣದ ಉತ್ಪಾದನಾ ಘಟಕವಾಗಿ ಕಾರ್ಯನಿರ್ವಹಿಸುವ ಬದಲು, ಕೇವಲ ಸಣ್ಣಪುಟ್ಟ ರಿಪೇರಿ ಅಥವಾ ನಿರ್ವಹಣಾ ಘಟಕದಂತೆ ಸೀಮಿತಗೊಳ್ಳುತ್ತಿದೆ ಎಂಬುದು ಪ್ರಮುಖ ಆರೋಪವಾಗಿದೆ. ಇಲ್ಲಿ ಲಭ್ಯವಿರುವ ಮೂಲಸೌಕರ್ಯ, ಯಂತ್ರೋಪಕರಣಗಳು ಮತ್ತು ಜಾಗದ ವಿಸ್ತೀರ್ಣವನ್ನು ಗಮನಿಸಿದರೆ, ಇಲ್ಲಿ ಹೊಸ ತಲೆಮಾರಿನ ಎಲ್‌ಎಚ್‌ಬಿ ಬೋಗಿಗಳನ್ನು ಅಥವಾ 'ವಂದೇ ಭಾರತ್' ಬೋಗಿಗಳ ಬಿಡಿಭಾಗಗಳನ್ನು ತಯಾರಿಸುವ ಸಾಮರ್ಥ್ಯವಿದೆ. ಆದರೆ, ಕೇಂದ್ರ ಸರ್ಕಾರವು ಇಲ್ಲಿಗೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಪೂರೈಸುವಲ್ಲಿ ಮತ್ತು 'ವರ್ಕ್ ಆರ್ಡರ್' ನೀಡುವಲ್ಲಿ ಹಿಂದೇಟು ಹಾಕುತ್ತಿದೆ.
ದಿನದಿಂದ ದಿನಕ್ಕೆ ಇಲ್ಲಿ ನಡೆಯುವ ಕೆಲಸದ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಹೂಡಿಕೆ ಮಾಡಲಾದ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ವ್ಯರ್ಥವಾಗುತ್ತಿದೆ. ರೈಲ್ವೆ ಇಲಾಖೆಯು ಹೊಸ ಯೋಜನೆಗಳನ್ನು ಉತ್ತರ ಭಾರತದ ಕಾರ್ಖಾನೆಗಳಿಗೆ ನೀಡುತ್ತಿದ್ದು, ಯಾದಗಿರಿ ಘಟಕವನ್ನು ಕಡೆಗಣಿಸುತ್ತಿದೆ ಎಂಬುದು ಸ್ಥಳೀಯರ ಬಲವಾದ ದೂರು ಆಗಿದೆ.
ಕನ್ನಡಿಗರ ಉದ್ಯೋಗದ ಹಕ್ಕು ಮತ್ತು ವಂಚನೆ
ರೈಲ್ವೆ ಕೋಚ್ ಯೋಜನೆಯ ಅತ್ಯಂತ ಸಂವೇದನಾಶೀಲ ವಿಚಾರವೆಂದರೆ ಉದ್ಯೋಗದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ. ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಪರೀಕ್ಷೆಗಳ ಮೂಲಕ ನಡೆಯುವ ನೇಮಕಾತಿಯಲ್ಲಿ ಉತ್ತರ ಭಾರತದ ರಾಜ್ಯಗಳ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಬರುತ್ತಿದ್ದಾರೆ. ಸ್ಥಳೀಯವಾಗಿ ಸ್ಥಾಪಿತವಾದ ಕಾರ್ಖಾನೆಯಲ್ಲಿ 'ಸಿ' ಮತ್ತು 'ಡಿ' ಗ್ರೂಪ್ ಹುದ್ದೆಗಳಿಗಾದರೂ ಸ್ಥಳೀಯರಿಗೆ ಮೀಸಲಾತಿ ಅಥವಾ ಆದ್ಯತೆ ನೀಡಬೇಕು ಎಂಬ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ.
ಪ್ರಸ್ತುತ ಘಟಕದಲ್ಲಿ ಕಾರ್ಯನಿರ್ವ ಹಿಸಲು ಮಾನವ ಸಂಪನ್ಮೂಲದ ಅವಶ್ಯಕತೆಯಿದೆ. ವರದಿಗಳ ಪ್ರಕಾರ, ಕನ್ನಡಿಗರಿಗೆ ಆದ್ಯತೆ ನೀಡಿದರೆ ತಕ್ಷಣವೇ ಸುಮಾರು 200ಕ್ಕೂ ಹೆಚ್ಚು ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸಬಹುದು. ಯಾದಗಿರಿಯಂತಹ ಜಿಲ್ಲೆಯಲ್ಲಿ 200 ಉದ್ಯೋಗಗಳು 200 ಕುಟುಂಬಗಳ ಬದುಕನ್ನು ಹಸನಾಗಿಸಬಲ್ಲವು. ಆದರೆ, ಪ್ರಸ್ತುತ ಅಲ್ಲಿ ಬೆರಳೆಣಿಕೆಯಷ್ಟು ಕನ್ನಡಿಗರು ಮಾತ್ರ ಇದ್ದು, ಅವರ ಸಂಖ್ಯೆಯೂ ಕ್ರಮೇಣ ಕಡಿಮೆಯಾಗುತ್ತಿದೆ. ಖಾಯಂ ನೇಮಕಾತಿಯಲ್ಲಿ ಕನ್ನಡಿಗರಿಗೆ ಅವಕಾಶ ಸಿಗುತ್ತಿಲ್ಲ, ಕನಿಷ್ಠ ಗುತ್ತಿಗೆ ಆಧಾರದ ಮೇಲಾದರೂ ಸ್ಥಳೀಯರನ್ನು ತೆಗೆದುಕೊಳ್ಳಿ ಎಂಬುದು ಒತ್ತಾಯವಾಗಿದೆ. ಆದರೆ, ಗುತ್ತಿಗೆದಾರರೂ ಸಹ ಹೊರಗಿನಿಂದ ಕೆಲಸಗಾರರನ್ನು ಕರೆತರುತ್ತಿದ್ದಾರೆ ಎಂಬ ಆರೋಪವಿದೆ.
ರಾಜಕೀಯ ಇಚ್ಛಾಶಕ್ತಿ ಮತ್ತು ಕೇಂದ್ರದ ಮಲತಾಯಿ ಧೋರಣೆ
ರೈಲ್ವೆ ಕೋಚ್‌ಗೆ ಶಕ್ತಿ ತುಂಬಲು ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಈ ಸಮಸ್ಯೆ ಕೇವಲ ಆಡಳಿತಾತ್ಮಕವಾಗಿರದೆ, ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದೆ. : ಈ ಯೋಜನೆ ಮಲ್ಲಿಕಾರ್ಜುನ ಖರ್ಗೆ ಅವರ ಕನಸಿನ ಕೂಸು. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಕಾಂಗ್ರೆಸ್ ನಾಯಕರು ಆರಂಭಿಸಿದ ಯೋಜನೆ ಎಂಬ ಕಾರಣಕ್ಕೆ ಇದಕ್ಕೆ ಅನುದಾನ ಕಡಿತಗೊಳಿಸಲಾಗಿದೆಯೇ ಅಥವಾ ನಿರ್ಲಕ್ಷಿಸಲಾಗಿದೆಯೇ ಎಂಬ ಅನುಮಾನಗಳನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.
ವಲಸೆ ತಡೆಗಟ್ಟುವಿಕೆಗೆ ಈ ಘಟಕ ಮುಖ್ಯ
ಯಾದಗಿರಿ ಜಿಲ್ಲೆಯಿಂದ ಪ್ರತಿವರ್ಷ ಸಾವಿರಾರು ಜನರು ಕೆಲಸ ಅರಸಿ ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಪುಣೆಗೆ ವಲಸೆ ಹೋಗುತ್ತಾರೆ. ಈ ಘಟಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದರೆ, ವಲಸೆಯನ್ನು ದೊಡ್ಡ ಮಟ್ಟದಲ್ಲಿ ತಡೆಯಬಹುದು. ಡಾ. ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕುಗಳನ್ನು ಹೊಂದಿರುವ ಯಾದಗಿರಿ ಜಿಲ್ಲೆಗೆ ಇಂತಹ ಬೃಹತ್ ಕೈಗಾರಿಕೆಗಳೇ ಸಂಜೀವಿನಿಯಾಗಿದೆ. ಈಗಾಗಲೇ ಭೂಸ್ವಾಧೀನವಾಗಿ, ಕಟ್ಟಡಗಳು ನಿರ್ಮಾಣವಾಗಿವೆ. ಯಂತ್ರೋಪಕರಣಗಳಿವೆ. ಇವುಗಳನ್ನು ಬಳಸದೆ ಬಿಡುವುದು ರಾಷ್ಟ್ರೀಯ ನಷ್ಟ ಎಂದು ಹೇಳಲಾಗಿದೆ.
ಹೊರ ರಾಜ್ಯಕ್ಕೆ ಸ್ಥಳಾಂತರದ ಕೂಗು
ಈ ಯೋಜನೆಯನ್ನು ಮಂಜೂರು ಮಾಡಿದಾಗ (2013-14) ಅಂದಾಜು ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಇದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಕಟ್ಟಡ ನಿರ್ಮಾಣ, ಭೂಸ್ವಾಧೀನ ಮತ್ತು ಮೂಲಭೂತ ಸೌಕರ್ಯಗಳಿಗಾಗಿ ಆರಂಭಿಕ ಹಂತದಲ್ಲಿ ನೂರಾರು ಕೋಟಿ ರೂ.ಗಳನ್ನು ಕೇಂದ್ರ ರೈಲ್ವೆ ಇಲಾಖೆ ವಿನಿಯೋಗಿಸಿದೆ. ಘಟಕದ ಶೆಡ್‌ಗಳ ನಿರ್ಮಾಣ, ವಿದ್ಯುದ್ದೀಕರಣ ಮತ್ತು ಹಳಿಗಳ ಜೋಡಣೆಗೆ ಅನುದಾನ ಬಳಕೆಯಾಗಿದೆ. ಕಟ್ಟಡ ನಿರ್ಮಾಣವಾಗಿದ್ದರೂ, ಘಟಕವನ್ನು ಪೂರ್ಣ ಪ್ರಮಾಣದ ಉತ್ಪಾದನಾ ಘಟಕವನ್ನಾಗಿ ಪರಿವರ್ತಿಸಲು ಬೇಕಾದ ಅನುದಾನದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಡಿತವಾಗಿದೆ ಎಂಬ ಆರೋಪವಿದೆ. ಅಲ್ಲದೇ, ಉತ್ತರ ಭಾರತದ ರಾಜ್ಯಗಳಿಗೆ ಘಟಕವನ್ನು ಸ್ಥಳಾಂತರ ಮಾಡುವ ಕೂಗು ಕೇಳಿಬಂದಿದೆ. ಸಿಬ್ಬಂದಿ ಕೊರತೆ, ಉತ್ಪಾದನೆ ಕುಂಠಿತದಿಂದಾಗಿ ಉತ್ತರ ಭಾರತಕ್ಕೆ ಕೊಂಡೊಯ್ಯುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಕಳೆದ ಕೆಲವು ಕೇಂದ್ರ ಬಜೆಟ್‌ಗಳಲ್ಲಿ ಯಾದಗಿರಿ ಘಟಕಕ್ಕೆ ಮೀಸಲಿಟ್ಟ ಹಣವು ಕೇವಲ ಸಂಬಳ ಮತ್ತು ನಿರ್ವಹಣೆಗೆ ಸಾಕಾಗುವಷ್ಟಿದೆ ಹೊರತು, ಹೊಸ ಯಂತ್ರೋಪಕರಣಗಳ ಖರೀದಿಗೆ ಅಥವಾ ವಿಸ್ತರಣೆಗೆ ಬೇಕಾದ ದೊಡ್ಡ ಮೊತ್ತದ ಪ್ಯಾಕೇಜ್ ಘೋಷಣೆಯಾಗಿಲ್ಲ. ರಾಯ್ ಬರೇಲಿ ಅಥವಾ ಚೆನ್ನೈನ ಪೆರಂಬೂರ್ ಘಟಕಗಳಿಗೆ ಹೋಲಿಸಿದರೆ, ಯಾದಗಿರಿ ಘಟಕಕ್ಕೆ ಆಧುನಿಕ ತಂತ್ರಜ್ಞಾನ ಅಳವಡಿಸಲು (ಬೇಕಾದ ಬಂಡವಾಳ ಹೂಡಿಕೆಯನ್ನು ಕೇಂದ್ರ ಮಾಡುತ್ತಿಲ್ಲ ಎಂಬುದು ಸ್ಥಳೀಯರ ದೂರು ಆಗಿದೆ.
ಅಭಿವೃದ್ಧಿಗೆ ಬೇಕಾಗಿರುವ ಅನುದಾನದ ಅವಶ್ಯಕತೆಗಳು
ಪ್ರಸ್ತುತ ಈ ಘಟಕವನ್ನು ಪುನಶ್ಚೇತನಗೊಳಿಸಲು ತುರ್ತು ಅನುದಾನದ ಅಗತ್ಯವಿದೆ ಎಂದು ತಜ್ಞರು ಮತ್ತು ಜನಪ್ರತಿನಿಧಿಗಳು ಒತ್ತಾಯಿಸುತ್ತಿದ್ದಾರೆ. ಎಲ್‌ಎಚ್‌ಬಿ ಕೋಚ್‌ಗಳು ಮತ್ತು ಮೆಟ್ರೋ ಬೋಗಿಗಳನ್ನು ತಯಾರಿಸಲು ಅತ್ಯಾಧುನಿಕ ರೋಬೋಟಿಕ್ ಯಂತ್ರಗಳನ್ನು ಅಳವಡಿಸಲು ಸುಮಾರು 500 ಕೋಟಿ ರೂ. ಗೂ ಹೆಚ್ಚಿನ ವಿಶೇಷ ಅನುದಾನದ ಅಗತ್ಯವಿದೆ. ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಮತ್ತು ಟೌನ್‌ಶಿಪ್ ಅಭಿವೃದ್ಧಿಗೆ ಅನುದಾನ ಬೇಕಿದೆ. ಸ್ಥಳೀಯ ಕನ್ನಡಿಗರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗಕ್ಕೆ ಅಣಿಗೊಳಿಸಲು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಹಣಕಾಸಿನ ನೆರವು ಬೇಕಿದೆ.
ಶಾಸಕ ಶರಣಗೌಡ ಕಂದಕೂರ್ ಮನವಿ
ಗುರುಮಿಟ್ಕಲ್ ಶಾಸಕ ಶರಣಗೌಡ ಕಂದಕೂರ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಯಾದಗಿರಿ ಜಿಲ್ಲೆಯ ಅಭಿವೃದ್ಧಿಯ ಸಂಕೇತವಾಗಬೇಕಿದ್ದ ಬೋಗಿ ತಯಾರಿಕಾ ಘಟಕ ದಿನದಿಂದ ದಿನಕ್ಕೆ ಸೊರಗುತ್ತಿದ್ದು, ಇದನ್ನು ಮುಚ್ಚದಂತೆ ತಡೆಯಬೇಕು ಹಾಗೂ ಘಟಕವನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳಿಸಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಯಾದಗಿರಿ ರೈಲ್ವೆ ಕೋಚ್ ಫ್ಯಾಕ್ಟರಿಯು ಹಂತ ಹಂತವಾಗಿ ತನ್ನ ಚಟುವಟಿಕೆಗಳನ್ನು ಕಡಿಮೆ ಮಾಡುತ್ತಿದೆ. ಇಲ್ಲಿ ನಡೆಯಬೇಕಿದ್ದ ಉತ್ಪಾದನಾ ಕಾರ್ಯಗಳು ಸ್ಥಗಿತಗೊಳ್ಳುವ ಹಂತ ತಲುಪಿವೆ. ಈ ಘಟಕವನ್ನು ಮುಚ್ಚಲಾಗುತ್ತದೆ ಎಂಬ ಆತಂಕ ಜಿಲ್ಲೆಯ ಜನರಲ್ಲಿ ಮನೆಮಾಡಿದೆ. ಯಾವುದೇ ಕಾರಣಕ್ಕೂ ಈ ಘಟಕವನ್ನು ಮುಚ್ಚಬಾರದು ಅಥವಾ ನಿರ್ಲಕ್ಷಿಸಬಾರದು. ಪ್ರಸ್ತುತ ಈ ಘಟಕವು ಕೇವಲ ಸಣ್ಣಪುಟ್ಟ ನಿರ್ವಹಣಾ ಕಾರ್ಯಗಳಿಗೆ ಸೀಮಿತವಾಗಿದೆ. ಇಲ್ಲಿ ಲಭ್ಯವಿರುವ ಮೂಲಸೌಕರ್ಯಗಳನ್ನು ಬಳಸಿಕೊಂಡು ಪೂರ್ಣ ಪ್ರಮಾಣದ ಬೋಗಿ ತಯಾರಿಕೆಯನ್ನು ಆರಂಭಿಸಬೇಕು. ರೈಲ್ವೆ ಇಲಾಖೆಯು ಈ ಘಟಕಕ್ಕೆ ಹೆಚ್ಚಿನ 'ವರ್ಕ್ ಆರ್ಡರ್' ನೀಡುವ ಮೂಲಕ ಘಟಕಕ್ಕೆ ಜೀವ ತುಂಬಬೇಕು. ಅಲ್ಲದೇ, "ಘಟಕದಲ್ಲಿ ತಯಾರಿಕೆ ಹೆಚ್ಚಳವಾದರೆ ಸ್ಥಳೀಯರಿಗೆ ಉದ್ಯೋಗ ಲಭಿಸಲಿದೆ. ಆದರೆ, ಪ್ರಸ್ತುತ ಇರುವ ಅಲ್ಪಸ್ವಲ್ಪ ಉದ್ಯೋಗಗಳಲ್ಲೂ ಹೊರರಾಜ್ಯದವರ ಪಾಲೇ ಹೆಚ್ಚಾಗಿದೆ. ಕನ್ನಡಿಗರ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ. ಕೇಂದ್ರ ಸಚಿವರಾದ ತಾವು ಮಧ್ಯಪ್ರವೇಶಿಸಿ, ಈ ಘಟಕದಲ್ಲಿ 'ಸಿ' ಮತ್ತು 'ಡಿ' ಗ್ರೂಪ್ ಹುದ್ದೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಮತ್ತು ಭೂಮಿ ಕಳೆದುಕೊಂಡ ರೈತ ಕುಟುಂಬದವರಿಗೆ ಆದ್ಯತೆ ನೀಡುವಂತೆ ಕ್ರಮ ಕೈಗೊಳ್ಳಬೇಕು. ಇದರಿಂದ ಸುಮಾರು 200ಕ್ಕೂ ಹೆಚ್ಚು ಸ್ಥಳೀಯ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಕೋರಿದ್ದಾರೆ.
ಯಾವುದೇ ಕಾರಣಕ್ಕೂ ಹೊರರಾಜ್ಯಕ್ಕೆ ಹೋಗಲು ಬಿಡುವುದಿಲ್ಲ
ರೈಲ್ವೆ ಬೋಗಿ ತಯಾರಿಕಾ ಘಟಕವನ್ನು ಹಂತ ಹಂತವಾಗಿ ನಿಷ್ಕ್ರಿಯಗೊಳಿಸಿ ಮುಚ್ಚುವ ಕೇಂದ್ರ ಚಿಂತನೆ ನಡೆಸಿದೆ ಎಂಬ ಸ್ಥಳೀಯರ ಆರೋಪಗಳಿಗೆ ದ ಫೆಡರಲ್ ಕರ್ನಾಟಕಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಶರಣಗೌಡ ಕಂದಕೂರ್, ಯಾವುದೇ ಕಾರಣಕ್ಕೂ ಘಟಕವನ್ನು ಸ್ಥಳಾಂತರವಾಗುವುದಕ್ಕೆ ಬಿಡುವುದಿಲ್ಲ. ಶರಣಗೌಡ ಕಂದಕೂರ್ ಇರುವವರೆಗೆ ಅದು ಸಾಧ್ಯವೇ ಇಲ್ಲ. ಕೇಂದರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲಿಯೇ ಇದು ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ. ರೈಲ್ವೆ ಬೋಗಿ ತಯಾರಿಕಾ ಘಟಕವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಏನೆಲ್ಲಾ ಪ್ರಯತ್ನ ಮಾಡಲು ಸಾಧ್ಯವೋ? ಅದನ್ನು ಮಾಡುತ್ತೇನೆ ಎಂದು ಹೇಳಿದರು.
ಸಚಿವ ವಿ. ಸೋಮಣ್ಣ ಭರವಸೆ:
ಶಾಸಕರ ಮನವಿಯನ್ನು ಆಲಿಸಿದ ಕೇಂದ್ರ ಸಚಿವ ವಿ. ಸೋಮಣ್ಣ, ಯಾದಗಿರಿ ರೈಲ್ವೆ ಕೋಚ್ ಫ್ಯಾಕ್ಟರಿಯ ಸಮಸ್ಯೆಗಳ ಬಗ್ಗೆ ಗಮನಹರಿಸಲಾಗುವುದು. ಘಟಕವನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಬದಲಾಗಿ ಅದನ್ನು ಹೇಗೆ ಮೇಲ್ದರ್ಜೆಗೇರಿಸಬಹುದು ಮತ್ತು ಸ್ಥಳೀಯರಿಗೆ ಹೇಗೆ ಅನುಕೂಲ ಕಲ್ಪಿಸಬಹುದು ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಕಾರಾತ್ಮಕ ಭರವಸೆ ನೀಡಿದ್ದಾರೆ.
ಯಾದಗಿರಿ ರೈಲ್ವೆ ಕೋಚ್ ಕಾರ್ಖಾನೆ ಕೇವಲ ಒಂದು ಕಟ್ಟಡವಲ್ಲ, ಅದು ಆ ಭಾಗದ ಲಕ್ಷಾಂತರ ಜನರ ಬದುಕಿನ ಭರವಸೆ. ಅದು ಕ್ಷೀಣಿಸುತ್ತಿರುವುದು ಎಂದರೆ ಆ ಭಾಗದ ಅಭಿವೃದ್ಧಿಯ ಕನಸು ಕಮರಿದಂತೆ. ಕೇಂದ್ರ ಸರ್ಕಾರ ತನ್ನ ಮಲತಾಯಿ ಧೋರಣೆಯನ್ನು ಬಿಡಬೇಕು. ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಂಡು, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ, ಈ ಕಾರ್ಖಾನೆಗೆ ಮರುಜೀವ ನೀಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಇಲ್ಲದಿದ್ದರೆ, ಇದು ಮತ್ತೊಂದು ವಿಫಲ ಯೋಜನೆಯಾಗಿ ಇತಿಹಾಸದ ಪುಟ ಸೇರುವ ಅಪಾಯವಿದೆ.