ರಾಹುಲ್ ಆರೋಪಕ್ಕೆ ಲಿಂಬಾವಳಿ ಪ್ರತ್ಯುತ್ತರ: ಏಳೂ ಉದಾಹರಣೆಗಳು ಸುಳ್ಳೆಂದ ಮಾಜಿ ಶಾಸಕ
ಸಣ್ಣ ಮನೆಯಲ್ಲಿ 80 ಮತದಾರರು ಎಂಬ ಆರೋಪಕ್ಕೆ, ಅದು ಹೋಟೆಲ್ ಕಾರ್ಮಿಕರ ವಸತಿ. ಅಲ್ಲಿ 80 ಜನರಲ್ಲ, ಕೇವಲ 8 ಜನ ಮಾತ್ರ ಮತ ಹಾಕಿದ್ದಾರೆ. ಹೋಟೆಲ್ ಕಾರ್ಮಿಕರಿಗೆ ಮತದಾನದ ಹಕ್ಕಿಲ್ಲವೇ ಎಂದು ಅರವಿಂದ ಲಿಂಬಾವಳಿ ಪ್ರಶ್ನಿಸಿದರು.;
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನವಾಗಿದೆ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ನೀಡಿರುವ ಏಳೂ ಉದಾಹರಣೆಗಳು ಸತ್ಯಕ್ಕೆ ದೂರವಾಗಿವೆ ಎಂದು ಮಹಾದೇವಪುರ ಕ್ಷೇತ್ರದ ಮಾಜಿ ಶಾಸಕ ಅರವಿಂದ ಲಿಂಬಾವಳಿ ಅವರು ತಮ್ಮ ಶಾಸಕಿ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಪರವಾಗಿ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ರಾಹುಲ್ ಗಾಂಧಿ ಅವರ ಪ್ರತಿಯೊಂದು ಆರೋಪಕ್ಕೂ ದಾಖಲೆ ಸಮೇತ ಉತ್ತರ ನೀಡಿದ ಅವರು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿನ ಅಕ್ರಮಗಳ ಪಟ್ಟಿಯನ್ನೇ ಬಿಡುಗಡೆ ಮಾಡಿ, ನೇರ ಸವಾಲು ಹಾಕಿದರು.
ರಾಹುಲ್ ಗಾಂಧಿ ಅವರು ಪ್ರಸ್ತಾಪಿಸಿದ್ದ ಪ್ರತಿಯೊಂದು ಆರೋಪವನ್ನೂ ಲಿಂಬಾವಳಿ ಅವರು ವಿವರವಾಗಿ ಖಂಡಿಸಿದರು. ಗುರುತ್ ಸಿಂಗ್ ಎಂಬ ವ್ಯಕ್ತಿಯ ಹೆಸರು ನಾಲ್ಕು ವೋಟರ್ ಲಿಸ್ಟ್‌ನಲ್ಲಿದೆ ಎಂಬುದು ನಿಜವಾದರೂ, ಅರ್ಜಿ ತಿರಸ್ಕೃತಗೊಂಡಿದ್ದರಿಂದ ಅವರು ನಾಲ್ಕು ಬಾರಿ ಅರ್ಜಿ ಸಲ್ಲಿಸಿದ್ದರು. ಇದು ನಾಲ್ಕು ಪ್ರತ್ಯೇಕ ಮತಗಳಲ್ಲ ಎಂದು ಸ್ಪಷ್ಟಪಡಿಸಿದರು.
ಶಕುನ್ ರಾಣಿ ಎಂಬುವರು ಎರಡು ಕಡೆ ಮತದಾನ ಮಾಡಿದ್ದಾರೆ ಎಂಬುದು ಸುಳ್ಳು, ಅವರು ಒಂದೇ ಕಡೆ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.
ಸಣ್ಣ ಮನೆಯೊಂದರಲ್ಲೇ 80 ಮತದಾರರಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಅದು ಹೋಟೆಲ್ ಕಾರ್ಮಿಕರ ವಸತಿ ಸ್ಥಳ. ಅಲ್ಲಿ 80 ಜನರಲ್ಲ, ಕೇವಲ 8 ಜನ ಮಾತ್ರ ಮತ ಹಾಕಿದ್ದಾರೆ. ಹೋಟೆಲ್ ಕಾರ್ಮಿಕರಿಗೆ ಮತದಾನದ ಹಕ್ಕಿಲ್ಲವೇ ಎಂದು ಪ್ರಶ್ನಿಸಿದರು.
ಮತದಾರರು ನಕಲಿ ವಿಳಾಸ ನೀಡಿದ್ದಾರೆ ಎಂಬ ಆರೋಪ ಪ್ರತಿಕ್ರಿಯಿಸಿ, ಮತದಾರರು ವಿಳಾಸ ಕೊಟ್ಟಿದ್ದಾರೆ. ಆದರೆ, ಅದು ಸರಿಯಾಗಿ ನಮೂದಾಗಿಲ್ಲ ಅಷ್ಟೇ. ಇದನ್ನೇ ನಕಲಿ ವಿಳಾಸ ಎನ್ನುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಕ್ಷೇತ್ರದಲ್ಲಿಯೇ ಅಕ್ರಮ ಎಂದ ಲಿಂಬಾವಳಿ
ರಾಹುಲ್ ಗಾಂಧಿ ಆರೋಪಗಳಿಗೆ ತಿರುಗೇಟು ನೀಡಿದ ಲಿಂಬಾವಳಿ, ಕಾಂಗ್ರೆಸ್ ಶಾಸಕರಿರುವ ವರುಣಾ, ಮಾನ್ವಿ, ಮಸ್ಕಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ವಿಳಾಸವೇ ಇಲ್ಲದಿರುವ (ಝೀರೋ ಅಡ್ರೆಸ್) ದಾಖಲೆಗಳನ್ನು ಬಿಡುಗಡೆ ಮಾಡಿದರು.
"ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲೇ ವಿಳಾಸವಿಲ್ಲದ ಮತದಾರರಿದ್ದಾರೆ, ಇದಕ್ಕೆ ರಾಹುಲ್ ಗಾಂಧಿ ಏನು ಹೇಳುತ್ತಾರೆ?" ಎಂದು ಪ್ರಶ್ನಿಸಿದರು. ಇದೇ ವೇಳೆ, ಬೆಂಗಳೂರಿನ ಇತರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಉದಾಹರಣೆಗಳನ್ನು ಅವರು ಮುಂದಿಟ್ಟರು. ಬಿಟಿಎಂ ಲೇಔಟ್ ಬೂತ್ 100ರಲ್ಲಿ ಒಂದೇ ಮನೆಯಲ್ಲಿ 100ಕ್ಕೂ ಹೆಚ್ಚು ಮತದಾರರಿದ್ದಾರೆ. ಚಾಮರಾಜಪೇಟೆಯ ಬೂತ್ 45ರಲ್ಲಿ ಆಯಿಷಾಬಾನು ಎಂಬ ಹೆಸರಿನಲ್ಲಿ ಎರಡು ಮತಗಳಿವೆ. ಶಿವಾಜಿನಗರದಲ್ಲಿ ರಹಮತ್ ಉಲ್ಲಾ ಎಂಬುವವರ ಹೆಸರು ಬೂತ್ 169 ಮತ್ತು 11ರಲ್ಲಿ ಇದೆ ಎಂದು ಹೇಳಿದರು.
"ರಾಹುಲ್ ಗಾಂಧಿ ನೀಡಿರುವ ಏಳೂ ಉದಾಹರಣೆಗಳು ಸುಳ್ಳು. ಮಹಾದೇವಪುರ ಕ್ಷೇತ್ರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಆರೋಪ ಮಾಡುವ ಮೊದಲು ರಾಜ್ಯ ಕಾಂಗ್ರೆಸ್ ನಾಯಕರು ಸರಿಯಾಗಿ ಅಧ್ಯಯನ ಮಾಡಬೇಕಿತ್ತು," ಎಂದು ಲಿಂಬಾವಳಿ ಅಸಮಾಧಾನ ವ್ಯಕ್ತಪಡಿಸಿದರು.