Mysore MUDA Case | ಸಿದ್ಧರಾಮಯ್ಯ ಆಪ್ತ ಮರೀಗೌಡ, ಇತರ ಆರು ಮಂದಿಗೆ ಇಡಿ ನೋಟಿಸ್
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಆಪ್ತ ಕೆ. ಮರೀಗೌಡ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.;
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಆಪ್ತ ಕೆ. ಮರೀಗೌಡ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷರಾಗಿದ್ದ ಕೆ. ಮರೀಗೌಡ ಅವರು ಇತ್ತೀಚೆಗೆ ಅನಾರೋಗ್ಯದ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ್ದು, ವಿಚಾರಣೆಗೆ ಕೂಡಲೇ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಅವರಿಗೂ ಇಡಿ ಸಮನ್ಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಡಾದ ಮಾಜಿ ಆಯುಕ್ತ ನಟೇಶ್ ಮತ್ತು ದಿನೇಶ್ ಕುಮಾರ್ ಅವರಿಗೂ ED ನೋಟಿಸ್ ನೀಡಿದೆ. ಒಂದೊಮ್ಮೆ ಇವರನ್ನು ತನಿಖೆಗೊಳಪಡಿಸಿದರೆ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿದ್ದರಾಮಯ್ಯ ಅವರಿಗೆ ಇಡಿ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನಟೇಶ್ ಮತ್ತು ದಿನೇಶ್ ಕುಮಾರ್ ಅವರ ನಿವಾಸಗಳ ಮೇಲೆ ಇತ್ತೀಚಿಗೆ ಇಡಿ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ನಟೇಶ್ ಅವರ ನಿವಾಸದಿಂದ ನಾಲ್ಕು ಬ್ಯಾಗ್ ಗಳಲ್ಲಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಅವರ ಸ್ವಂತ ಕಾರಿನಲ್ಲಿ ಇಡಿ ಕಚೇರಿಗೆ ಕರೆದೊಯ್ಯಲಾಗಿತ್ತು. ನಟೇಶ್ ಮತ್ತು ದಿನೇಶ್ ಕುಮಾರ್ ಅವರು ಸುಳ್ಳು ದಾಖಲೆ ಸೃಷ್ಟಿಸಿ ನೂರಾರು ಕೋಟಿ ಮೌಲ್ಯದ ಮುಡಾ ನಿವೇಶನಗಳನ್ನು ಕೆಲವರಿಗೆ ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ ಎಂಬ ಆರೋಪವಿದೆ.
ತಮ್ಮ ಪತ್ನಿಗೆ ಮುಡಾದಿಂದ ಅಕ್ರಮವಾಗಿ 14 ನಿವೇಶನ ಹಂಚಿಕೆ ಮಾಡಿರುವ ಪ್ರಕರಣದಲ್ಲಿ ಸಿದ್ದರಾಮಯ್ಯ ಪ್ರಮುಖ ಆರೋಪಿಯಾಗಿದ್ದಾರೆ. ಈ ಸಂಬಂಧ ಸದ್ಯ ಲೋಕಾಯುಕ್ತ ಹಾಗೂ ಇಡಿ ತನಿಖೆ ನಡೆಸುತ್ತಿದೆ. ಸಿಎಂ ಪತ್ನಿ ಮುಡಾಕ್ಕೆ ನಿವೇಶನಗಳನ್ನು ವಾಪಸ್ ನೀಡಿದ್ದಾರೆ.