ರಾಜ್ಯಕ್ಕೆ 27,607 ಕೋಟಿ ರೂ. ಬಂಡವಾಳ: 13 ಯೋಜನೆಗಳಿಗೆ ಸರ್ಕಾರದ ಗ್ರೀನ್ ಸಿಗ್ನಲ್

ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಮತ್ತು ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವ ಕುರಿತು ಶುಕ್ರವಾರ ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ 11 ಹೊಸ ಕೈಗಾರಿಕಾ ಯೋಜನೆಗಳು ಮತ್ತು 2 ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಯಿತು.

Update: 2025-10-24 11:38 GMT

ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಬಲ ನೀಡುವ ಮಹತ್ವದ ಬೆಳವಣಿಗೆಯೊಂದರಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಯೋಜನಾ ಮಂಜೂರಾತಿ ಸಮಿತಿ ಸಭೆಯು, ಒಟ್ಟು 27,607.26 ಕೋಟಿ ರೂಪಾಯಿ ಮೌಲ್ಯದ ಬಂಡವಾಳ ಹೂಡಿಕೆಯ 13 ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಬೃಹತ್ ಹೂಡಿಕೆಯಿಂದ ರಾಜ್ಯದಲ್ಲಿ 8,704ಕ್ಕೂ ಹೆಚ್ಚು ನೇರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಮತ್ತು ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವ ಕುರಿತು ಶುಕ್ರವಾರ ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ 11 ಹೊಸ ಕೈಗಾರಿಕಾ ಯೋಜನೆಗಳು ಮತ್ತು 2 ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಯಿತು.

ಹರಿದು ಬರಲಿದೆ ಬಂಡವಾಳದ ಹೊಳೆ

ಅನುಮೋದನೆಗೊಂಡ ಪ್ರಮುಖ ಹೂಡಿಕೆದಾರರಲ್ಲಿ ಜಿಂದಾಲ್, ರಿಲಯನ್ಸ್, ಟೊಯೋಟಾ, ಗ್ರಾಸಿಂನಂತಹ ದೈತ್ಯ ಕಂಪನಿಗಳು ಸೇರಿವೆ. ಅತಿ ಹೆಚ್ಚು ಹೂಡಿಕೆ ಮಾಡಲಿರುವ ಕಂಪನಿಗಳಲ್ಲಿ ಎಸ್ಎಫ್ಎಕ್ಸ್ ಇಂಡಿಯಾ ( 9,298 ಕೋಟಿ ರೂಪಾಯಿ) ಮತ್ತು ಜಿಂದಾಲ್ ಎಲೆಕ್ಟ್ರಿಕಲ್ ಸ್ಟೀಲ್ ( 7,102 ಕೋಟಿ ರೂಪಾಯಿ) ಮುಂಚೂಣಿಯಲ್ಲಿವೆ.

ರಿಲಯನ್ಸ್ ಕನ್ಸೂಮರ್ ಪ್ರಾಡಕ್ಟ್ಸ್ (1,622 ಕೋಟಿ ರೂಪಾಯಿ), ಸ್ನೈಡರ್ ಎಲೆಕ್ಟ್ರಿಕ್ (1,520.75 ಕೋಟಿ ರೂಪಾಯಿ), ಗ್ರಾಸಿಂ ಇಂಡಸ್ಟ್ರೀಸ್ ( 1,386 ಕೋಟಿ ರೂಪಾಯಿ), ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ (1,330 ಕೋಟಿ ರೂಪಾಯಿ), ಜಿಂದಾಲ್ ಸ್ಟೀಲ್ಸ್ (1,300.57 ಕೋಟಿ ರೂಪಾಯಿ), ವಾಯು ಅಸೆಟ್ಸ್ (1,251 ಕೋಟಿ ರೂಪಾಯಿ), ಕ್ಯೂಪಿಐಎಐ ಇಂಡಿಯಾ (1,136 ಕೋಟಿ ರೂಪಾಯಿ), ಎಚ್ಎಸ್ಎಸ್ ಟೆಕ್ಸ್ಟೈಲ್ಸ್ (740 ಕೋಟಿ ರೂಪಾಯಿ) ಮತ್ತು ತೇಜಸ್ ನೆಟ್ವರ್ಕ್ಸ್ (542.19 ಕೋಟಿ ರೂಪಾಯಿ) ಸೇರಿದಂತೆ ಹಲವು ಕಂಪನಿಗಳು ರಾಜ್ಯದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಲಿವೆ.

ಹೆಚ್ಚುವರಿ ಹೂಡಿಕೆ

ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಎಂಬೆಸಿ ಇಂಡಸ್ಟ್ರಿಯಲ್ ಪಾರ್ಕ್ (80 ಕೋಟಿ ರೂಪಾಯಿ) ಮತ್ತು ಬಾಲಾಜಿ ವೇಫರ್ಸ್ (298.75 ಕೋಟಿ ರೂಪಾಯಿ) ಕಂಪನಿಗಳು ತಮ್ಮ ಘಟಕಗಳ ವಿಸ್ತರಣೆಗಾಗಿ ಹೆಚ್ಚುವರಿ ಬಂಡವಾಳ ಹೂಡಲು ಅನುಮೋದನೆ ಪಡೆದಿವೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇಂಧನ ಸಚಿವ ಕೆ.ಜೆ. ಜಾರ್ಜ್, ಕಾನೂನು ಸಚಿವ ಎಚ್.ಕೆ. ಪಾಟೀಲ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಉಪಸ್ಥಿತರಿದ್ದರು.

ಅಧಿಕಾರಿಗಳಿಗೆ ಎಚ್ಚರಿಕೆ

"ಕೈಗಾರಿಕೆಗಳಿಗೆ ಅನುಮೋದನೆ ನೀಡಲು ವಿಳಂಬ ಮಾಡುತ್ತಾ, ನೆಪಗಳನ್ನು ಹೇಳಿಕೊಂಡು ಕೂರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಕ್ಕಪಕ್ಕದ ರಾಜ್ಯಗಳಿಗೆ ಬಾರದ ಸಮಸ್ಯೆ ನಮಗೇಕೆ ಬರುತ್ತದೆ ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.

ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಹಾಳುಮಾಡುವ ಯಾವುದೇ ವಿಳಂಬ ಧೋರಣೆಯನ್ನು ಸಹಿಸುವುದಿಲ್ಲ ಎಂದು ಅವರು ಸ್ಪಷ್ಟ ಸಂದೇಶ ರವಾನಿಸಿದರು.

ಸಭೆಯಲ್ಲಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅಗ್ನಿಶಾಮಕ ಇಲಾಖೆಗಳಿಂದ ಅನುಮೋದನೆ ಪಡೆಯುವುದು ವಿಳಂಬವಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, "ಭೂ ಬಳಕೆ ಬದಲಾವಣೆ ಸೇರಿದಂತೆ ವಿವಿಧ ನಿರಾಕ್ಷೇಪಣಾ ಪತ್ರಗಳ (NOC) ನೀಡಿಕೆಯ ಕಾಲಮಿತಿಯನ್ನು ಕಡಿಮೆ ಮಾಡಬೇಕು. ಇದಕ್ಕಾಗಿ ನಿಯಮಾವಳಿಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ, ವಿವರವಾದ ಪ್ರಸ್ತಾವನೆ ಸಲ್ಲಿಸಿ," ಎಂದು ಸೂಚಿಸಿದರು.

"ಕಾಲಮಿತಿಯೊಳಗೆ ಅನುಮೋದನೆ ನೀಡಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕೆಗಳಿಗೆ ರಸ್ತೆ, ನೀರು, ವಿದ್ಯುತ್‌ನಂತಹ ಮೂಲಸೌಲಭ್ಯಗಳನ್ನು ಒದಗಿಸಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು," ಎಂದು ತಾಕೀತು ಮಾಡಿದರು.

ಸಚಿವ ಪ್ರಿಯಾಂಕ್ ಖರ್ಗೆ ಎತ್ತಿದ ಪ್ರಮುಖಾಂಶಗಳು

ಸಭೆಯಲ್ಲಿ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ ಅನುಕೂಲಕರ ವಾತಾವರಣವಿದ್ದರೂ ಅಧಿಕಾರಿಗಳು ಅದನ್ನು ಬಳಸಿಕೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿಗಳ ಗಮನ ಸೆಳೆದರು. "ನಮ್ಮಲ್ಲಿ ಕೌಶಲ್ಯಯುತ ಮಾನವ ಸಂಪನ್ಮೂಲ (Workforce) ಹೆಚ್ಚಾಗಿದೆ. ಆದರೆ, ಅನುಮೋದನೆ ಪ್ರಕ್ರಿಯೆಗಳು ಮಾತ್ರ ವೇಗ ಪಡೆದುಕೊಳ್ಳುತ್ತಿಲ್ಲ. ಅಧಿಕಾರಿಗಳು ನೆಪ ಹೇಳಿಕೊಂಡು ವಿಳಂಬ ಮಾಡುವುದನ್ನು ನಿಲ್ಲಿಸಬೇಕು," ಎಂದರು.

ಹೂಡಿಕೆ ಆಕರ್ಷಣೆಯಲ್ಲಿ ತಮಿಳುನಾಡಿಗೆ ಹೋಲಿಸಿದ ಅವರು, "ತಮಿಳುನಾಡಿನಲ್ಲಿ 51 ವಿಶೇಷ ಆರ್ಥಿಕ ವಲಯಗಳಿದ್ದು (SEZ), ಅವು ಶೇ.8.9ರಷ್ಟು ಕೊಡುಗೆ ನೀಡುತ್ತಿವೆ. ನಮ್ಮ ರಾಜ್ಯದಲ್ಲಿ ಕೇವಲ 37 SEZಗಳಿದ್ದರೂ, ನಾವು ಶೇ.8.2ರಷ್ಟು ಕೊಡುಗೆ ನೀಡುತ್ತಿದ್ದೇವೆ. ಇದರರ್ಥ, ನಮ್ಮ ಸಾಮರ್ಥ್ಯ ಹೆಚ್ಚಿದ್ದರೂ ಅಧಿಕಾರಿಗಳು ಅನುಕೂಲಕರ ಪರಿಸ್ಥಿತಿಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ," ಎಂದು ಅಂಕಿಅಂಶಗಳ ಸಮೇತ ವಿವರಿಸಿದರು.

ಬೃಹತ್ ಹೂಡಿಕೆಯ ಪ್ರಗತಿ

ಈ ವರ್ಷದ ಆರಂಭದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯವು 10.27 ಲಕ್ಷ ರೂಪಾಯಿ ಕೋಟಿ ಮೊತ್ತದ ಬಂಡವಾಳವನ್ನು ಆಕರ್ಷಿಸಿದೆ. ಈ ಪೈಕಿ ಈಗಾಗಲೇ ಶೇ.60ರಷ್ಟು ಹೂಡಿಕೆಗಳು ಅನುಷ್ಠಾನದ ಹಂತದಲ್ಲಿವೆ. ಇದಲ್ಲದೆ, ಸುಮಾರು 1.5 ಲಕ್ಷ ಕೋಟಿಗೂ ರೂಪಾಯಿ ಹೆಚ್ಚಿನ ಮೊತ್ತದ ಹೂಡಿಕೆ ಪ್ರಸ್ತಾವನೆಗಳು ವಿವಿಧ ಹಂತಗಳಲ್ಲಿವೆ. "ಬಂಡವಾಳ ಹೂಡಿಕೆ ಹೆಚ್ಚಾದರೆ ಮಾತ್ರ ಉದ್ಯೋಗ ಸೃಷ್ಟಿ ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕು," ಎಂದು ಮುಖ್ಯಮಂತ್ರಿಗಳು ಸೂಚಿಸಿದರು. 

Tags:    

Similar News