ಖರ್ಗೆ ಕೋಟೆ ಚಿತ್ತಾಪುರದಲ್ಲಿ ʼದಂಡʼ ಹಿಡಿಯಲು ದಾಂಗುಡಿ; ಆರ್‌ಎಸ್‌ಎಸ್ v/s ದಲಿತ ಸಂಘಟನೆಗಳು
ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ಕೋರಿರುವ ಬೆನ್ನಲ್ಲೇ ದಲಿತ ಸಂಘಟನೆಗಳು ಕೂಡ ಅವಕಾಶ ಕೋರಿರುವುದು ಸಂಘರ್ಷಕ್ಕೆ ಕಾರಣವಾಗಿದೆ. ಪಥಸಂಚಲನದ ಮೂಲಕ ಆರ್‌ಎಸ್‌ಎಸ್ ಮತ್ತು ದಲಿತ ಸಂಘಟನೆಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಇದೀಗ ರಾಜಕೀಯ ಹಾಗೂ ಧರ್ಮಾಧರಿತ ಚಟುವಟಿಕೆಗಳಿಂದ ರಾಜ್ಯದ ಗಮನ ಸೆಳೆಯುತ್ತಿದೆ. ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿದ ಬಳಿಕ ಕಾಂಗ್ರೆಸ್ ಹಾಗೂ ಸಂಘ ಪರಿವಾರದ ಸಂಘರ್ಷ ತಾರಕಕ್ಕೇರಿದೆ.
ಪಥ ಸಂಚಲನಕ್ಕೆ ಜಿಲ್ಲಾಡಳಿತ, ಅನುಮತಿ ನಿರಾಕರಿಸಿದ ಬಳಿಕ ಸೃಷ್ಟಿಯಾದ ವಿವಾದ ಹೈಕೋರ್ಟ್ ಅಂಗಳ ತಲುಪಿದೆ. ಇಂದು (ಅ.24) ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠವು ಅ.30ಕ್ಕೆ ವಿಚಾರಣೆ ಮುಂದೂಡಿದೆ. ಈ ಮಧ್ಯೆ ದಲಿತ ಸಂಘಟನೆಗಳು ಸಹ ಪಥ ಸಂಚಲನಕ್ಕೆ ಅನುಮತಿ ಕೋರಿರುವುದು ತೀವ್ರ ಕುತೂಹಲ ಕೆರಳಿಸಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ದಲಿತ ಸಂಘಟನೆಗಳು ಶಕ್ತಿ ಪ್ರದರ್ಶಿಸಲು ಪೈಪೋಟಿಗೆ ಇಳಿದಿದ್ದು, ಚಿತ್ತಾಪುರದತ್ತ ಎಲ್ಲರ ಚಿತ್ತ ನೆಟ್ಟಿದೆ.
ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಲಾಠಿ ಬಳಸಲು ಅವಕಾಶ ನೀಡಿದರೆ ನಮಗೂ ಪಥಸಂಚಲನದಲ್ಲಿ ಲಾಠಿ ಬಳಸಲು ಅವಕಾಶ ನೀಡಬೇಕು ಎಂದು ದಲಿತ ಸಂಘಟನೆಗಳು ಕೋರಿರುವುದು ಜಿಲ್ಲಾಡಳಿತಕ್ಕೆ ತಲೆಬಿಸಿ ತಂದಿದೆ. ಸಂಘಟನೆಗಳ ನಡುವಿನ ಕಿತ್ತಾಟದ ಪರಿಣಾಮ ನ.2 ರಂದು ಪಥಸಂಚಲನ ನಡೆಯಲಿದೆಯೇ ಎಂಬ ಪ್ರಶ್ನೆಗಳು ಎದುರಾಗಿವೆ. ಜತೆಗೆ ಚಿತ್ತಾಪುರ ಪಟ್ಟಣದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.
"ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅವಕಾಶ ನೀಡುವಂತೆ ಆರ್‌ಎಸ್‌ಎಸ್ ಮೊದಲಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಕಾನೂನು ಪ್ರಕಾರ ಆರ್‌ಎಸ್‌ಎಸ್‌ಗೆ ಪಥ ಸಂಚಲನ ಆಯೋಜನೆಗೆ ಅನುಮತಿ ಕೊಡಬೇಕು. ಈ ಮಧ್ಯೆ, ದಲಿತ ಸಂಘಟನೆಗಳು ಕೂಡ ಪಥ ಸಂಚಲನಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವುದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ ಎಂದು ಹಿಂದೂ ಜನಜಾಗೃತಿ ವೇದಿಕೆ ರಾಜ್ಯ ವಕ್ತಾರ ಮೋಹನ್ ಗೌಡ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಮೂರೂ ಸಂಘಟನೆಗಳು ಅರ್ಜಿ ಸಲ್ಲಿಸಿದರೆ ಎಲ್ಲರಿಗೂ ರಕ್ಷಣೆ ಕೊಡಲಾಗುವುದಿಲ್ಲ ಎಂಬ ನೆಪ ಹೇಳುವುದು ಅರ್ಜಿಯ ಹಿಂದಿನ ಉದ್ದೇಶವಾಗಿದೆ. ನಾವು ನ್ಯಾಯಾಲಯದ ಆದೇಶದಂತೆ ಮುನ್ನಡೆಯುತ್ತೇವೆ. ಆರ್‌ಎಸ್‌ಎಸ್ ಚಟುವಟಿಕೆಗಳು ಸಾಮಾಜಿಕವಾಗಿವೆ, ಸರ್ಕಾರಿ ಅಧಿಕಾರಿಗಳು ಕೂಡ ಭಾಗವಹಿಸಬಹುದು ಎಂದು 2024 ರಲ್ಲಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹೀಗಿರುವಾಗ ರಾಜ್ಯದಲ್ಲಿ ಅನಗತ್ಯವಾಗಿ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಹಕ್ಕು ಕಸಿಯುತ್ತಿದೆ. ಆರ್‌ಎಸ್‌ಎಸ್‌ನಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಯಲ್ಲ, ಬದಲಿಗೆ ದೇಶಾಭಿಮಾನ, ದೇಶಪ್ರೇಮ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಆರ್‌ಎಸ್‌ಎಸ್ ಕಾರ್ಯಕರ್ತರು ಲಾಠಿ ಹಿಡಿದು ಪಥ ಸಂಚಲನ ಮಾಡುವುದು ಈ ಹಿಂದಿನಿಂದಲೂ ನಡೆದು ಬಂದಿದೆ. ಲಾಠಿಯು ಮಾರಕಾಸ್ತ್ರವಲ್ಲ. ಜೀವ ರಕ್ಷಣೆಗಾಗಿ ಲಾಠಿ ಅಥವಾ ಇನ್ನಿತರೆ ಅಸ್ತ್ರ ಬಳಕೆಗೆ ಸಂವಿಧಾನದ ಕಲಂ 96 ರಲ್ಲಿ ಅವಕಾಶ ಮಾಡಿಕೊಟ್ಟಿದೆ. ಆದರೂ ರಾಜ್ಯ ಸರ್ಕಾರ ವೃಥಾ ಗೊಂದಲ ಸೃಷ್ಟಿಸುತ್ತಿದೆ ಎಂದು ದೂರಿದರು.
ಅಖಾಡಕ್ಕಿಳಿದ ದಲಿತ ಸಂಘಟನೆಗಳು
ನ.2ರಂದು ಚಿತ್ತಾಪುರದಲ್ಲಿ ತಮಗೂ ಪಥಸಂಚಲನ ನಡೆಸಲು ಅನುಮತಿ ನೀರುವಂತೆ ಕೋರಿ ಭೀಮ್ ಆರ್ಮಿ ಹಾಗೂ ದಲಿತ ಪ್ಯಾಂಥರ್ ಸಂಘಟನೆಗಳು ಅರ್ಜಿ ಸಲ್ಲಿಸಿವೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಸಂಘಟನೆಗಳ ವೈಯಕ್ತಿಕ ಪ್ರತಿಷ್ಠೆಯಿಂದಾಗಿ ಚಿತ್ತಾಪುರದ ಕದನ ಈಗ ರಾಜ್ಯದ ಗಮನ ಸೆಳೆದಿದೆ.
ಪಥಸಂಚಲನಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ ಬಳಿಕ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ 'ಎಲ್ಲರ ದೃಷ್ಟಿ ಚಿತ್ತಾಪುರದತ್ತ' ಎಂಬ ಅಭಿಯಾನ ಕೈಗೊಂಡಿದ್ದಾರೆ. ವಾಟ್ಸ್ಆ್ಯಪ್ ಸ್ಟೇಟಸ್‌ಗಳಲ್ಲೂ ಪಥ ಸಂಚಲನದ ಫೋಟೊ, ಸಂದೇಶ ಹಾಕಿಕೊಂಡಿದ್ದಾರೆ. ಸರ್ಕಾರಕ್ಕೆ ತಿರುಗೇಟು ನೀಡುವ ಸಲುವಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ದಲಿತ ಸಂಘಟನೆಗಳು ಕೂಡ ಆರ್‌ಎಸ್‌ಎಸ್, ಬಿಜೆಪಿಗೆ ಠಕ್ಕರ್ ನೀಡಲು ಸಿದ್ಧತೆ ಆರಂಭಿಸಿವೆ. ಸಂಘಟನೆಗಳ ಈ ಜಟಾಪಟಿಯನ್ನು ರಾಜಕೀಯ ಪಕ್ಷಗಳು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿವೆ.
ಹೈಕೋರ್ಟ್ ಆದೇಶ ಆಧರಿಸಿ ಕ್ರಮಕ್ಕೆ ಚಿಂತನೆ
ಪಥಸಂಚಲನಕ್ಕೆ ಅವಕಾಶ ನೀಡುವ ವಿಚಾರದಲ್ಲಿ ಜಿಲ್ಲಾಡಳಿತವು ಹೈಕೋರ್ಟ್ ಆದೇಶ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದೆ. ಇಂದು(ಅ.24) ಅರ್ಜಿ ವಿಚಾರಣೆ ನಡೆದಿದ್ದು, ಅ.30ಕ್ಕೆ ಮುಂದೂಡಿಕೆಯಾಗಿದೆ. ಹಾಗಾಗಿ, ಹೈಕೋರ್ಟ್ ಆದೇಶದತ್ತ ಎಲ್ಲರ ಚಿತ್ತ ನೆಟ್ಟಿದೆ.
ಸರ್ಕಾರಿ ಜಾಗಗಳಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆ ನಡೆಸಲು ಅನುಮತಿ ಕಡ್ಡಾಯ ಮಾಡಲಾಗಿದೆ. ಈ ವಿಷಯವನ್ನೇ ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದೆ ಎನ್ನಲಾಗಿದೆ. ಈಗ ವಿಚಾರಣೆ ಮುಂದೂಡಿರುವುದರಿಂದ ನ.2ರಂದು ಆರ್‌ಎಸ್‌ಎಸ್ ಸೇರಿದಂತೆ ಯಾವುದೇ ಸಂಘಟನೆಗಳು ಪಥ ಸಂಚಲನ ನಡೆಸುವುದು ಅನುಮಾನವಾಗಿದೆ.
ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿದ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ಎಸ್.ಎಸ್. ತಾವಡೆ," ನೋಂದಣಿ ಇಲ್ಲದ ಆರ್‌ಎಸ್‌ಎಸ್ ಸಂಘಟನೆಗೆ ಸಂಭ್ರಮಾಚರಣೆ ಎಲ್ಲಿಂದ ಬಂತು. ಸಂವಿಧಾನದ ವಿರುದ್ಧವಾಗಿ ಮಾತನಾಡುವವರಿಗೆ ಪಥ ಸಂಚಲನಕ್ಕೆ ಏಕೆ ಅನುಮತಿ ನೀಡಬೇಕು ಎಂದು ಪ್ರಶ್ನಿಸಿದರು.
"ನಾವು ಸಂವಿಧಾನ ಉಳಿಸಲು ಮುಂದಾಗಬೇಕಿದೆ. ಆರ್‌ಎಸ್‌ಎಸ್ ಕೈಯಲ್ಲಿ ಲಾಠಿ ಹಿಡಿದು ನಡೆಸುವ ಆಕ್ರಮಣಕಾರಿ ಪ್ರದರ್ಶನದ ಮೂಲಕ ಯುವಜನರು, ಮುಗ್ಧ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡಿದರೆ, ನಾವೂ ಸಂವಿಧಾನ ಪ್ರತಿ ಹಾಗೂ ಲಾಠಿ ಹಿಡಿದು ಪಥಸಂಚಲನ ನಡೆಸುತ್ತೇವೆ," ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಲ್ಲಿಯೂ ಆರ್‌ಎಸ್‌ಎಸ್‌ಗೆ ಕಡಿವಾಣ ಹಾಕುವ ಬಗ್ಗೆ ಹೇಳಿಲ್ಲ. ಸರ್ಕಾರಿ ಸ್ಥಳದಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆಗಳ ನಿಯಂತ್ರಣ ಕುರಿತು ಹೇಳಿಕೆ ನೀಡಿದ್ದಾರೆ. ಅಲ್ಲದೇ, ಇದರ ಬಗ್ಗೆ ಬಿಜೆಪಿ ಅವಧಿಯಲ್ಲೇ ಆದೇಶ ಹೊರಡಿಸಲಾಗಿದೆ. ಹೀಗಿರುವಾಗ ಆರ್‌ಎಸ್‌ಎಸ್, ಬಿಜೆಪಿಯವರು ಪ್ರಿಯಾಂಕ್ ಖರ್ಗೆ ವಿರುದ್ಧ ಹೇಳಿಕೆ ನೀಡುತ್ತಿದ್ದು, ಬೆದರಿಕೆ ಹಾಕುತ್ತಿದ್ದಾರೆ. ಈ ಕಾರಣಕ್ಕಾಗಿ ನಾವು ಪಥಸಂಚಲನಕ್ಕೆ ಅನುಮತಿ ಕೋರಿದ್ದೇವೆ. ಆರ್‌ಎಸ್‌ಎಸ್ ಅಳಿಸಿ, ಸಂವಿಧಾನ ಉಳಿಸಿ ಹೆಸರಲ್ಲಿ ಪಥಸಂಚಲನ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಪ್ರಿಯಾಂಕ್ ಪತ್ರದಿಂದ ಭುಗಿಲೆದ್ದ ವಿವಾದ
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆರ್‌ಎಸ್‌ಎಸ್ ಸಂಘಟನೆ ತನ್ನ ಚಟುವಟಿಕೆಗಳಿಗೆ ಸರ್ಕಾರಿ ಸ್ಥಳಗಳನ್ನು ಬಳಸಿಕೊಳ್ಳುತ್ತಿದೆ. ತಮಿಳುನಾಡು ರಾಜ್ಯದಲ್ಲಿ ಇದನ್ನು ನಿರ್ಬಂಧಿಸಿದಂತೆ ರಾಜ್ಯದಲ್ಲಿಯೂ ನಿರ್ಬಂಧಿಸಬೇಕು ಎಂದು ಪತ್ರ ಬರೆದಿದ್ದರು. ಇದರಲ್ಲಿ ದೋಣೆ ಬಳಕೆ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಪ್ರಿಯಾಂಕ್ ಖರ್ಗೆ ಪತ್ರವು ರಾಜ್ಯದಲ್ಲಿ ತೀವ್ರ ಕೋಲಾಹಲವನ್ನುಂಟು ಮಾಡಿತು. ಪ್ರಿಯಾಂಕ್ ಖರ್ಗೆ ಪತ್ರದ ಬೆನ್ನಲ್ಲೇ ಸಚಿವ ಸಂಪುಟ ಸಭೆಯಲ್ಲಿಯೂ ಸಹ ಈ ಬಗ್ಗೆ ತೀರ್ಮಾನ ಕೈಗೊಂಡಿದೆ. ಈ ನಿರ್ಧಾರವು ಕಾಂಗ್ರೆಸ್, ಬಿಜೆಪಿ ನಡುವಿನ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿತ್ತು.
ಈ ನಡುವೆ ಅ.19ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ ನಡೆಸಲು ಮುಂದಾಗಿತ್ತು. ಆದರೆ, ಜಿಲ್ಲಾಡಳಿತವು ರದ್ದುಗೊಳಿಸಿತು. ಬಳಿಕ ಆರ್‌ಎಸ್‌ಎಸ್ ನ್ಯಾಯಾಲಯದ ಮೊರೆ ಹೋಯಿತು. ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ಆರ್‌ಎಸ್‌ಎಸ್‌ಗೆ ಸೂಚನೆ ನೀಡಿತ್ತು. ಅದರಂತೆ ಆರ್‌ಎಸ್‌ಎಸ್ ಹೊಸದಾಗಿ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಈಗ ಅರ್ಜಿ ವಿಚಾರಣೆ ಮತ್ತೊಮ್ಮೆ ಮುಂದೂಡಿಕೆಯಾಗಿದೆ. ಒಟ್ಟಿನಲ್ಲಿ ರಾಜಕೀಯ ಜಟಾಪಟಿಯ ನಡುವೆ ಎಲ್ಲರ ಕಣ್ಣು ಚಿತ್ತಾಪುರದ ಮೇಲೆ ನೆಟ್ಟಿದೆ.