ಚಿಂತಾಮಣಿ ಬಳಿ ಶಾಲಾ ವಾಹನಕ್ಕೆ ಬೈಕ್ ಡಿಕ್ಕಿ, ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು
ಕೆಂಚಾರ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಒಂದೇ ಬೈಕ್‌ನಲ್ಲಿ ಐವರು ಪ್ರಯಾಣಿಸುತ್ತಿದ್ದುದು ದುರಂತದ ತೀವ್ರತೆಗೆ ಕಾರಣವಾಯಿತು ಎಂದು ಹೇಳಲಾಗಿದೆ.
ಮದುವೆ ಸಮಾರಂಭಕ್ಕೆ ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದ ಕುಟುಂಬವೊಂದು ಭೀಕರ ಅಪಘಾತದಲ್ಲಿ ಸಂಪೂರ್ಣ ಛಿದ್ರವಾದ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ. ಶಾಲಾ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಗುರುವಾರ ಸಂಜೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬುರುಡಗುಂಟೆ ಗ್ರಾಮದ ಸಮೀಪ ಸಂಭವಿಸಿದೆ. ಚಿಲಕಲನೇರ್ಪು ಗ್ರಾಮದ ಬಾಲಾಜಿ (32), ಅವರ ಮಾವ ವೆಂಕಟೇಶಪ್ಪ (45), ಮಗ ಆರ್ಯ (4) ಹಾಗೂ ಸಂಬಂಧಿ ಹರೀಶ್ (11) ಮೃತಪಟ್ಟ ದುರ್ದೈವಿಗಳು.[3]
ಚಿಲಕಲನೇರ್ಪು ಗ್ರಾಮದ ನಿವಾಸಿ ಬಾಲಾಜಿ, ತಮ್ಮ ಮಾವ, ಮಗ, ಮಗಳು ಹಾಗೂ ಇನ್ನೊಬ್ಬ ಸಂಬಂಧಿಕ ಸೇರಿ ಒಟ್ಟು ಐದು ಮಂದಿ ಪಲ್ಸರ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬುರುಡಗುಂಟೆ ಬಳಿ ಎದುರಿನಿಂದ ವೇಗವಾಗಿ ಬಂದ ಶಾಲಾ ವಾಹನವು ಬೈಕ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಬಾಲಕಿ ಸ್ಥಿತಿ ಗಂಭೀರ
ಅಪಘಾತದಲ್ಲಿ ಬಾಲಾಜಿ ಅವರ ಪುತ್ರಿ ಶಿವಾನಿ (8) ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆಕೆಯನ್ನು ತಕ್ಷಣವೇ ಬುರುಡಗುಂಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ, ಬಳಿಕ ಕೋಲಾರದ ಆಸ್ಪತ್ರೆಗೆ ರವಾನಿಸಲಾಗಿದೆ.
ಕೆಂಚಾರ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಒಂದೇ ಬೈಕ್‌ನಲ್ಲಿ ಐವರು ಪ್ರಯಾಣಿಸುತ್ತಿದ್ದುದು ದುರಂತದ ತೀವ್ರತೆಗೆ ಕಾರಣವಾಯಿತು ಎಂದು ಹೇಳಲಾಗಿದೆ.