ಶಬರಿಮಲೆ ಚಿನ್ನ ಕಳವು ಪ್ರಕರಣ: ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೊಟ್ಟಿಯನ್ನು ಬೆಂಗಳೂರಿಗೆ ಕರೆತಂದ ಎಸ್ಐಟಿ
ಉಣ್ಣಿಕೃಷ್ಣನ್ ಪೊಟ್ಟಿ ಮೂಲತಃ ಬೆಂಗಳೂರಿನ ನಿವಾಸಿಯಾಗಿದ್ದು, ಇಲ್ಲಿನ ದೇವಸ್ಥಾನವೊಂದರಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾನೆ. ಶಬರಿಮಲೆ ದೇವಸ್ಥಾನಕ್ಕೆ ಆತ ನೀಡಿದ್ದ ಕೆಲವು ಪ್ರಾಯೋಜಿತ ಕಾಮಗಾರಿಗಳಿಗೆ ಕರ್ನಾಟಕದ ವ್ಯಕ್ತಿಗಳು ಹಣಕಾಸು ನೆರವು ನೀಡಿದ್ದಾರೆ ಎಂಬ ಶಂಕೆ ತನಿಖಾಧಿಕಾರಿಗಳಿಗಿದೆ.
ಇಡೀ ದೇಶಾದ್ಯಂತ ಸಂಚಲನ ಮೂಡಿಸಿರುವ ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೊಟ್ಟಿಯನ್ನು ಶುಕ್ರವಾರ (ಅಕ್ಟೋಬರ್ 24) ಸಾಕ್ಷ್ಯ ಸಂಗ್ರಹಕ್ಕಾಗಿ ಬೆಂಗಳೂರಿಗೆ ಕರೆತಂದಿದೆ. ತನಿಖೆಯ ಭಾಗವಾಗಿ ಚೆನ್ನೈ ಮತ್ತು ಹೈದರಾಬಾದ್‌ಗೂ ಆರೋಪಿಯನ್ನು ಕರೆದೊಯ್ಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ 17ರಂದು, ಪತ್ತನಂತಿಟ್ಟ ಜಿಲ್ಲೆಯ ರಾನ್ನಿ ನ್ಯಾಯಾಲಯವು ಉಣ್ಣಿಕೃಷ್ಣನ್ ಪೊಟ್ಟಿಯನ್ನು ಅಕ್ಟೋಬರ್ 30ರವರೆಗೆ ಎಸ್ಐಟಿ ವಶಕ್ಕೆ ನೀಡಿತ್ತು. ಕಸ್ಟಡಿ ಅವಧಿ ಮುಗಿಯುವ ಮುನ್ನವೇ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸುವ ಉದ್ದೇಶದಿಂದ ತನಿಖಾ ತಂಡವು ತನಿಖೆಯನ್ನು ಚುರುಕುಗೊಳಿಸಿದೆ. ಈ ಹಿನ್ನೆಲೆಯಲ್ಲಿ, ಶುಕ್ರವಾರ ಮುಂಜಾನೆಯೇ ತಿರುವನಂತಪುರಂನ ಅಪರಾಧ ವಿಭಾಗದ ಕಚೇರಿಯಿಂದ ಪೊಟ್ಟಿಯನ್ನು ಬಿಗಿ ಭದ್ರತೆಯಲ್ಲಿ ಬೆಂಗಳೂರಿಗೆ ಕರೆತರಲಾಗಿದೆ..
ಬೆಂಗಳೂರಿನ ನಂಟು ಏನು?
ಉಣ್ಣಿಕೃಷ್ಣನ್ ಪೊಟ್ಟಿ ಮೂಲತಃ ಬೆಂಗಳೂರಿನ ನಿವಾಸಿಯಾಗಿದ್ದು, ಇಲ್ಲಿನ ದೇವಸ್ಥಾನವೊಂದರಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾನೆ. ಶಬರಿಮಲೆ ದೇವಸ್ಥಾನಕ್ಕೆ ಆತ ನೀಡಿದ್ದ ಕೆಲವು ಪ್ರಾಯೋಜಿತ ಕಾಮಗಾರಿಗಳಿಗೆ ಕರ್ನಾಟಕದ ವ್ಯಕ್ತಿಗಳು ಹಣಕಾಸು ನೆರವು ನೀಡಿದ್ದಾರೆ ಎಂಬ ಶಂಕೆ ತನಿಖಾಧಿಕಾರಿಗಳಿಗಿದೆ. ಈ ಹಿನ್ನೆಲೆಯಲ್ಲಿ, ಹಣಕಾಸು ವ್ಯವಹಾರಗಳು ಮತ್ತು ಸ್ಥಳೀಯ ಸಂಪರ್ಕಗಳ ಬಗ್ಗೆ ಮಾಹಿತಿ ಕಲೆಹಾಕಲು ಎಸ್ಐಟಿ ತಂಡ ಪೊಟ್ಟಿಯನ್ನು ಬೆಂಗಳೂರಿಗೆ ಕರೆತಂದಿದೆ.
ಏನಿದು ಚಿನ್ನ ಕಳವು ಪ್ರಕರಣ?
2019ರಲ್ಲಿ, ತಿರುವಾಂಕೂರು ದೇವಸ್ವಂ ಮಂಡಳಿಯು (TDB) ಶಬರಿಮಲೆ ದೇವಸ್ಥಾನದ 'ದ್ವಾರಪಾಲಕ' ವಿಗ್ರಹಗಳ ಚಿನ್ನದ ಲೇಪಿತ ತಗಡುಗಳನ್ನು ಎಲೆಕ್ಟ್ರೋಪ್ಲೇಟಿಂಗ್ ಮಾಡಿಸಲು ಪೊಟ್ಟಿಗೆ ನೀಡಿತ್ತು. ಚೆನ್ನೈನ ಸಂಸ್ಥೆಯೊಂದರಲ್ಲಿ ಎಲೆಕ್ಟ್ರೋಪ್ಲೇಟಿಂಗ್ ಮಾಡಿಸಿದ ನಂತರ, ಪೊಟ್ಟಿ ಆ ತಗಡುಗಳನ್ನು ಮಂಡಳಿಯ ಅನುಮತಿಯಿಲ್ಲದೆ ಚೆನ್ನೈ, ಬೆಂಗಳೂರು ಮತ್ತು ಕೇರಳದ ಹಲವು ಕಡೆಗಳಲ್ಲಿ ಪ್ರದರ್ಶಿಸಿದ್ದಾನೆ ಎಂದು ಆರೋಪಿಸಲಾಗಿದೆ.
ದ್ವಾರಪಾಲಕ ವಿಗ್ರಹದ ತಗಡುಗಳು ಮತ್ತು 'ಶ್ರೀಕೋವಿಲ್' (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳಿಂದ ಚಿನ್ನ ಕಣ್ಮರೆಯಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಉಣ್ಣಿಕೃಷ್ಣನ್ ಪೊಟ್ಟಿ ಪ್ರಮುಖ ಆರೋಪಿಯಾಗಿದ್ದಾನೆ. SIT ವರದಿಯ ಪ್ರಕಾರ, ಪೊಟ್ಟಿ ಸುಮಾರು 2 ಕೆ.ಜಿ.ಯಷ್ಟು ಚಿನ್ನವನ್ನು ದುರುಪಯೋಗಪಡಿಸಿಕೊಂಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ಶಬರಿಮಲೆಯ ಮಾಜಿ ಆಡಳಿತಾಧಿಕಾರಿ ಬಿ. ಮುರಾರಿ ಬಾಬು ಅವರನ್ನು SIT ತಂಡವು ಅಕ್ಟೋಬರ್ 22ರಂದು ಬಂಧಿಸಿತ್ತು.