ಯಾರೂ ಅನಿವಾರ್ಯವಲ್ಲ, ಹೈಕಮಾಂಡ್ ತೀರ್ಮಾನವೇ ಅಂತಿಮ: ಯತೀಂದ್ರ ಹೇಳಿಕೆಗೆ ಮಹದೇವಪ್ಪ ಉತ್ತರ
ಪಕ್ಷದಲ್ಲಿ ವ್ಯಕ್ತಿಗಿಂತ ವ್ಯವಸ್ಥೆಯೇ ದೊಡ್ಡದು ಎಂಬುದನ್ನು ಒತ್ತಿ ಹೇಳಿದ ಸಚಿವರು, "ಒಂದು ಕಾಲದಲ್ಲಿ 'ಇಂದಿರಾ ಗಾಂಧಿ, ಇಂದಿರಾ ಗಾಂಧಿ' ಎನ್ನುತ್ತಿದ್ದರು. ಅವರು ನಿಧನರಾದ ನಂತರವೂ ಕಾಂಗ್ರೆಸ್ ಪಕ್ಷ ಮುಂದುವರೆಯಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು, "ಪಕ್ಷದಲ್ಲಿ ಯಾವಾಗ, ಏನು ಆಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಅದನ್ನು ಬಿಟ್ಟು ಬೇರೆಯವರ ಮಾತಿಗೆ ಯಾವುದೇ ಬೆಲೆ ಇಲ್ಲ," ಎಂದು ಹೇಳುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ನಿಲುವು, ವಿಪಕ್ಷಗಳ ಟೀಕೆ ಮತ್ತು ನಾಯಕತ್ವದ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಖಡಾಖಂಡಿತವಾಗಿ ಮಂಡಿಸಿದರು.
ಯತೀಂದ್ರ ಹೇಳಿಕೆಗೆ ವಿಶ್ಲೇಷಣೆ ಇಲ್ಲ
"ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಅವರ (ಯತೀಂದ್ರ) ಹೇಳಿಕೆಗೆ ನೀವೇನೇನೋ ಅರ್ಥ ಕಲ್ಪಿಸಿಕೊಂಡರೆ ನಾನೇನು ಮಾಡಲು ಸಾಧ್ಯ? ಅವರ ಹೇಳಿಕೆಯನ್ನು ನಾನು ವಿಶ್ಲೇಷಿಸುವುದಿಲ್ಲ, ಅದರ ಬಗ್ಗೆ ಅವರನ್ನೇ ಕೇಳಿಕೊಳ್ಳಿ," ಎಂದು ಹೇಳುವ ಮೂಲಕ ಡಾ. ಯತೀಂದ್ರ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡರು. "ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿಗಳಿದ್ದಾರೆ, ಹೈಕಮಾಂಡ್ ಇದೆ. ಅವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ನಮ್ಮ ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಅಂತಿಮ," ಎಂದು ಸ್ಪಷ್ಟಪಡಿಸಿದರು.
ವಿಪಕ್ಷಗಳ ಕೆಲಸವೇ ಬೆಂಕಿ ಹಚ್ಚುವುದು
'ನವೆಂಬರ್‌ನಲ್ಲಿ ಸರ್ಕಾರದಲ್ಲಿ ಕ್ರಾಂತಿಯಾಗಲಿದೆ' ಎಂಬ ಪ್ರತಿಪಕ್ಷಗಳ 'ಡೆಡ್‌ಲೈನ್' ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, "ವಿರೋಧ ಪಕ್ಷದವರು ಇರುವುದೇ ಬೆಂಕಿ ಹಚ್ಚಲು, ತುಪ್ಪ ಸುರಿಯಲು ಮತ್ತು ತಂದಿಡಲು. ನಮ್ಮ ಮಂತ್ರಿಮಂಡಲವನ್ನು ಬಿಜೆಪಿಯವರು ರಚನೆ ಮಾಡುತ್ತಾರೆಯೇ? ಸಂಪುಟದಲ್ಲಿ ಏನು ಆಗಬೇಕು ಎಂಬುದು ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್‌ಗೆ ಗೊತ್ತು," ಎಂದು ತಿರುಗೇಟು ನೀಡಿದರು. "ಹೈಕಮಾಂಡ್ ನಮಗೇನಾದರೂ ಆ ಬಗ್ಗೆ ಹೇಳಿದೆಯಾ? 'Gentleman you should lead' ಅಂತ ಯಾರಿಗಾದರೂ ಅಧಿಕೃತವಾಗಿ ತಿಳಿಸಿದೆಯಾ?" ಎಂದು ಪ್ರಶ್ನಿಸುವ ಮೂಲಕ ವಿಪಕ್ಷಗಳ ಹೇಳಿಕೆಯನ್ನು ತಳ್ಳಿಹಾಕಿದರು.
ವ್ಯವಸ್ಥೆಗೆ ಯಾರೂ ಅನಿವಾರ್ಯರಲ್ಲ
ಪಕ್ಷದಲ್ಲಿ ವ್ಯಕ್ತಿಗಿಂತ ವ್ಯವಸ್ಥೆಯೇ ದೊಡ್ಡದು ಎಂಬುದನ್ನು ಒತ್ತಿ ಹೇಳಿದ ಸಚಿವರು, "ಒಂದು ಕಾಲದಲ್ಲಿ 'ಇಂದಿರಾ ಗಾಂಧಿ, ಇಂದಿರಾ ಗಾಂಧಿ' ಎನ್ನುತ್ತಿದ್ದರು. ಅವರು ನಿಧನರಾದ ನಂತರವೂ ಕಾಂಗ್ರೆಸ್ ಪಕ್ಷ ಮುಂದುವರೆಯಲಿಲ್ಲವೇ? ಹೊಸ ನಾಯಕತ್ವ ಹೊರಹೊಮ್ಮಲಿಲ್ಲವೇ? ಕಾಂಗ್ರೆಸ್ ವ್ಯವಸ್ಥೆಗೆ ಯಾರೂ ಅನಿವಾರ್ಯರಲ್ಲ. ಸಿದ್ದರಾಮಯ್ಯನವರು ಈಗ ಮುಖ್ಯಮಂತ್ರಿಗಳಾಗಿದ್ದಾರೆ, ಹಾಗಾದರೆ ಬದಲಾವಣೆ ಎಲ್ಲಿದೆ? ನಾವು ಈ ವಿಚಾರದಲ್ಲಿ ಬಹಳ ಸ್ಪಷ್ಟವಾಗಿದ್ದೇವೆ," ಎಂದು ಹೇಳಿದರು. ಈ ಮೂಲಕ, ಪಕ್ಷದ ಚೌಕಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂಬ ಸಂದೇಶವನ್ನು ರವಾನಿಸಿದ್ದಾರೆ.