ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ: ಸುವರ್ಣಸೌಧದಲ್ಲಿ ರಂಗೇರಿದ ರಾಜಕೀಯ ಚಟುವಟಿಕೆ

ಅಧಿವೇಶನ ಆರಂಭಕ್ಕೂ ಒಂದು ದಿನ ಮುಂಚಿತವಾಗಿಯೇ (ಭಾನುವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಗೆ ಆಗಮಿಸಿದ್ದು, ಇದು ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಹೊಸ ಹುರುಪು ಮೂಡಿಸಿದೆ.

Update: 2025-12-08 03:03 GMT
Click the Play button to listen to article

ಕುಂದಾನಗರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ (ಸೋಮವಾರ) ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ವೇದಿಕೆ ಸಜ್ಜಾಗಿದೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು ಹಾಗೂ ರಾಜ್ಯ ರಾಜಕೀಯದ ಮಹತ್ವದ ಚರ್ಚೆಗಳಿಗೆ ಸಾಕ್ಷಿಯಾಗಲಿರುವ ಈ ಅಧಿವೇಶನಕ್ಕಾಗಿ ಗಡಿಜಿಲ್ಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಆಡಳಿತ ಯಂತ್ರ ಸಂಪೂರ್ಣ ಸನ್ನದ್ಧಗೊಂಡಿದೆ.

ಅಧಿವೇಶನ ಆರಂಭಕ್ಕೂ ಒಂದು ದಿನ ಮುಂಚಿತವಾಗಿಯೇ (ಭಾನುವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಗೆ ಆಗಮಿಸಿದ್ದು, ಇದು ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಹೊಸ ಹುರುಪು ಮೂಡಿಸಿದೆ. ಇತ್ತೀಚೆಗೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಕೆಲ ಆಂತರಿಕ ಭಿನ್ನಾಭಿಪ್ರಾಯಗಳು ಕೇಳಿಬಂದಿದ್ದವು. ಆದರೆ, ಅಧಿವೇಶನದ ಹಿನ್ನೆಲೆಯಲ್ಲಿ ಎಲ್ಲ ಮನಸ್ತಾಪಗಳನ್ನು ಬದಿಗೊತ್ತಿ, ಪಕ್ಷದ ಸ್ಥಳೀಯ ಮುಖಂಡರು ಒಗ್ಗಟ್ಟಿನಿಂದ ಸಿಎಂ ಅವರನ್ನು ಸ್ವಾಗತಿಸಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಸಿಎಂ ಬೆಂಬಲಿಗರು ಮತ್ತು ಸಚಿವರು ಕಳೆದ ಮೂರ್ನಾಲ್ಕು ದಿನಗಳಿಂದಲೇ ಬೆಳಗಾವಿಯಲ್ಲಿ ಬೀಡುಬಿಟ್ಟಿದ್ದಾರೆ.

ವಿದ್ಯುತ್ ದೀಪಗಳಿಂದ ಅಲಂಕೃತ ಶಕ್ತಿಸೌಧ

ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧವನ್ನು ಮಧುವಣಗಿತ್ತಿಯಂತೆ ಸಿಂಗರಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ರಾತ್ರಿ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವವರಿಗೆ ಸೌಧದ ನೋಟ ಕಣ್ಮನ ಸೆಳೆಯುತ್ತಿದೆ. ಅಧಿವೇಶನ ಮುಗಿಯುವವರೆಗೂ ಪ್ರತಿದಿನ ಸಂಜೆ ಸೌಧವು ದೀಪಗಳ ಬೆಳಕಿನಲ್ಲಿ ಕಂಗೊಳಿಸಲಿದೆ.

ನಗರದ ಪ್ರಮುಖ ರಸ್ತೆಗಳು ಹಾಗೂ ಸೌಧಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಸ್ವಾಗತ ಕೋರುವ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿವೆ. ಕಳೆದ 15 ದಿನಗಳಿಂದ 130ಕ್ಕೂ ಹೆಚ್ಚು ಕಾರ್ಮಿಕರು ಸೌಧದ ಆವರಣದಲ್ಲಿ ಸ್ವಚ್ಛತೆ ಮತ್ತು ಸೌಂದರ್ಯೀಕರಣದ ಕೆಲಸದಲ್ಲಿ ತೊಡಗಿದ್ದು, ಭಾನುವಾರ ತಡರಾತ್ರಿಯವರೆಗೂ ಅಂತಿಮ ಹಂತದ ತಯಾರಿ ಭರದಿಂದ ಸಾಗಿತ್ತು.

ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಣೆ ಭಾಗ್ಯ

ಪ್ರಜಾಪ್ರಭುತ್ವದ ನಡಾವಳಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ, ಶಾಲಾ ಮಕ್ಕಳಿಗೆ ಕಲಾಪ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. "ಪ್ರತಿದಿನ 300 ರಿಂದ 500 ವಿದ್ಯಾರ್ಥಿಗಳು ಅಧಿವೇಶನಕ್ಕೆ ಭೇಟಿ ನೀಡಲಿದ್ದಾರೆ. ವಿದ್ಯಾರ್ಥಿಗಳು ಮೊದಲು ವಿಜ್ಞಾನ ಪಾರ್ಕ್ ವೀಕ್ಷಿಸಿ, ನಂತರ ಆಡಿಟೋರಿಯಂನಲ್ಲಿ ಸಂವಿಧಾನದ ಮಹತ್ವದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ತದನಂತರ ಹಂತ ಹಂತವಾಗಿ ಕಲಾಪ ವೀಕ್ಷಣೆ ಮಾಡಲಿದ್ದಾರೆ," ಎಂದು ಬೆಳಗಾವಿ ಡಿಡಿಪಿಐ ಲೀಲಾವತಿ ಹಿರೇಮಠ ಮಾಹಿತಿ ನೀಡಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

ಅಧಿವೇಶನಕ್ಕೆ ಬರುವ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೌಧದ ಮುಂಭಾಗದ ವೇದಿಕೆಯಲ್ಲಿ ಪ್ರತಿದಿನ ಬೆಳಿಗ್ಗೆ 9ರಿಂದ 10 ಗಂಟೆಯವರೆಗೆ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಕಲಾವಿದರಿಂದ ಭರತನಾಟ್ಯ, ಯಕ್ಷಗಾನ, ಡೊಳ್ಳು ಕುಣಿತ, ಕೊಳಲು ವಾದನ ಹಾಗೂ ಲೈವ್ ಪೇಂಟಿಂಗ್‌ಗಳಂತಹ ಪ್ರದರ್ಶನಗಳು ನಡೆಯಲಿವೆ.

Tags:    

Similar News