ದಾವಣಗೆರೆ: ಮಹಿಳೆಯನ್ನು ಬಲಿಪಡೆದ ರಾಟ್ ವೀಲರ್ ನಾಯಿ ಮಾಲೀಕನ ಬಂಧನ
ವಿಶೇಷವೆಂದರೆ, ಮಹಿಳೆಯನ್ನು ಕೊಂದಿದ್ದ ಆ ಎರಡೂ ರಾಟ್ ವೀಲರ್ ನಾಯಿಗಳು ಭಾನುವಾರ (ಡಿ.7) ಮೃತಪಟ್ಟಿವೆ. ಘಟನೆಯ ನಂತರ ಗ್ರಾಮಸ್ಥರು ನಾಯಿಗಳನ್ನು ಹಿಡಿಯಲು ಬೆನ್ನಟ್ಟಿದ್ದರಿಂದ ಅವುಗಳು ದಣಿದಿದ್ದವು.
ರಾಟ್ ವೀಲರ್ ತಳಿಯ ನಾಯಿಗಳ ಮಾಲೀಕ ಶೈಲೇಂದ್ರ ಕುಮಾರ್
ಕಳೆದ ಗುರುವಾರ (ಡಿ.5) ಹೊನ್ನೂರು ಕ್ರಾಸ್ ಬಳಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಕಚ್ಚಿ ಕೊಂದಿದ್ದ ರಾಟ್ ವೀಲರ್ ತಳಿಯ ನಾಯಿಗಳ ಮಾಲೀಕನನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಭಾನುವಾರ (ಡಿ.7) ಬಂಧಿಸಿದ್ದಾರೆ.
ದಾವಣಗೆರೆ ನಗರದ ಶಿವಾಲಿ ಚಿತ್ರಮಂದಿರದ ಮಾಲೀಕರ ಅಳಿಯ ಶೈಲೇಂದ್ರ ಕುಮಾರ್ ಬಂಧಿತ ಆರೋಪಿ. ಕಳೆದ ಹಲವು ವರ್ಷಗಳಿಂದ ಈತ ಅಪಾಯಕಾರಿ ರಾಟ್ ವೀಲರ್ ನಾಯಿಗಳನ್ನು ಸಾಕುತ್ತಿದ್ದ ಎಂದು ತಿಳಿದುಬಂದಿದೆ. ಡಿ.5 ರಂದು ಈತನೇ ತನ್ನ ಎರಡು ನಾಯಿಗಳನ್ನು ಆಟೋದಲ್ಲಿ ತಂದು ಹೊನ್ನೂರು ಕ್ರಾಸ್ ಬಳಿ ಅನಾಥವಾಗಿ ಬಿಟ್ಟು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಸಾವು
ಆರೋಪಿ ಬಿಟ್ಟುಹೋದ ಈ ನಾಯಿಗಳು, ಮಲ್ಲಶೆಟ್ಟಿಹಳ್ಳಿ ಗ್ರಾಮದ ಅನಿತಾ (38) ಎಂಬುವರ ಮೇಲೆ ದಾಳಿ ಮಾಡಿ ಕಚ್ಚಿ ಕೊಂದಿದ್ದವು. ಈ ಘಟನೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ನಾಯಿಗಳ ಮಾಲೀಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದರು.
ವಿಶೇಷವೆಂದರೆ, ಮಹಿಳೆಯನ್ನು ಕೊಂದಿದ್ದ ಆ ಎರಡೂ ರಾಟ್ ವೀಲರ್ ನಾಯಿಗಳು ಭಾನುವಾರ (ಡಿ.7) ಮೃತಪಟ್ಟಿವೆ.. ಘಟನೆಯ ನಂತರ ಗ್ರಾಮಸ್ಥರು ನಾಯಿಗಳನ್ನು ಹಿಡಿಯಲು ಬೆನ್ನಟ್ಟಿದ್ದರಿಂದ ಅವುಗಳು ದಣಿದಿದ್ದವು. ನಂತರ ಅವುಗಳನ್ನು ಸೆರೆಹಿಡಿದು ಪ್ರಾಣಿ ಜನನ ನಿಯಂತ್ರಣ (ABC) ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ನಿರಂತರ ಓಟದಿಂದ ಆಂತರಿಕ ರಕ್ತಸ್ರಾವವಾಗಿ ಅವು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.