ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ 'ದೊಡ್ಮನೆ'ಯಲ್ಲಿ ಅದ್ಧೂರಿ ಸತ್ಕಾರ

ಬೆಂಗಳೂರಿನಲ್ಲಿರುವ ಡಾ. ರಾಜ್ ನಿವಾಸಕ್ಕೆ ಭೇಟಿ ನೀಡಿದ ವಿಶ್ವವಿಜೇತ ತಂಡವನ್ನು ನಟ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಯುವ ರಾಜಕುಮಾರ್ ಅವರು ಅತ್ಯಂತ ಪ್ರೀತಿ ಹಾಗೂ ಗೌರವದಿಂದ ಬರಮಾಡಿಕೊಂಡರು.

Update: 2025-12-07 12:48 GMT

ಮಹಿಳಾ ಆಟಗಾರ್ತಿಯರನ್ನು ಡಾ.ರಾಜ್‌ ಕುಟುಂಬ ಗೌರವಿಸಿತು.

Click the Play button to listen to article

ಇತ್ತೀಚೆಗೆ ನಡೆದ ಅಂಧರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಐತಿಹಾಸಿಕ ಜಯ ಸಾಧಿಸಿ, ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಿಗೆ ಸ್ಯಾಂಡಲ್‌ವುಡ್‌ ದಿಗ್ಗಜ ಡಾ. ರಾಜ್‌ಕುಮಾರ್ ಅವರ ನಿವಾಸದಲ್ಲಿ ಅಭೂತಪೂರ್ವ ಸ್ವಾಗತ ಸನ್ಮಾನ ಗೌರವ ಲಭಿಸಿತು.

ಶನಿವಾರ ಬೆಂಗಳೂರಿನಲ್ಲಿರುವ ಡಾ. ರಾಜ್ ನಿವಾಸಕ್ಕೆ ಭೇಟಿ ನೀಡಿದ ವಿಶ್ವವಿಜೇತ ತಂಡವನ್ನು ನಟ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಯುವ ರಾಜಕುಮಾರ್ ಅವರು ಅತ್ಯಂತ ಪ್ರೀತಿ ಹಾಗೂ ಗೌರವದಿಂದ ಬರಮಾಡಿಕೊಂಡರು. ಸಾಧಕಿಯರಿಗೆ ಸಿಹಿ ಹಂಚಿ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ರಾಜ್ ಕುಟುಂಬದ ಸದಸ್ಯರು ಆಟಗಾರ್ತಿಯರ ಸಾಧನೆಯನ್ನು ಕೊಂಡಾಡಿದರು. ಕ್ರೀಡಾಪಟುಗಳೊಂದಿಗೆ ಆತ್ಮೀಯವಾಗಿ ಬೆರೆತ ರಾಘವೇಂದ್ರ ರಾಜಕುಮಾರ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.

ವಿಶ್ವಕಪ್ ಗೆದ್ದ ಹುಮ್ಮಸ್ಸಿನಲ್ಲಿರುವ ಭಾರತೀಯ ತಂಡವು ಕಳೆದ ಕೆಲವು ದಿನಗಳಿಂದ ದೇಶದ ಅತ್ಯುನ್ನತ ಗಣ್ಯರಿಂದ ಪ್ರಶಂಸೆಗಳನ್ನು ಸ್ವೀಕರಿಸುತ್ತಿದೆ. ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದ ತಂಡ, ಅವರಿಂದಲೂ ಶುಭ ಹಾರೈಕೆಗಳನ್ನು ಪಡೆದಿತ್ತು. ಅದಕ್ಕೂ ಮೊದಲು ತಂಡವನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿಯಾಗಿ ಸರ್ಕಾರದ ವತಿಯಿಂದ ಅಭಿನಂದಿಸಿದ್ದರು. ಈ ಸರಣಿ ಸನ್ಮಾನಗಳ ಮುಂದುವರಿದ ಭಾಗವಾಗಿ, ಇದೀಗ ಕನ್ನಡದ ಸಾಂಸ್ಕೃತಿಕ ಪ್ರತೀಕದಂತಿರುವ ಡಾ. ರಾಜ್ ಅವರ ಮನೆಯಲ್ಲಿ ಸಿಕ್ಕ ಗೌರವವು ಆಟಗಾರ್ತಿಯರ ಸಂತಸವನ್ನು ಇಮ್ಮಡಿಗೊಳಿಸಿದೆ.

ಈ ವಿಶೇಷ ಸಂದರ್ಭದಲ್ಲಿ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ (CABI) ಅಧ್ಯಕ್ಷರಾದ ಮಹಾಂತೇಶ್ ಕಿವಡಸಣ್ಣವರ್ ಅವರು ಉಪಸ್ಥಿತರಿದ್ದರು. ರಾಜಕುಮಾರ್ ಕುಟುಂಬದ ಆತಿಥ್ಯ ಮತ್ತು ಸರಳತೆಯನ್ನು ಕಂಡು ಅವರು ಭಾವುಕರಾದರು. "ಡಾ. ರಾಜ್ ಕುಟುಂಬವು ಕಲೆಗೆ ಮಾತ್ರವಲ್ಲ, ಕ್ರೀಡೆ ಮತ್ತು ಸಾಮಾಜಿಕ ಕಳಕಳಿಗೂ ಸದಾ ಮುಂಚೂಣಿಯಲ್ಲಿರುತ್ತದೆ. ವಿಶ್ವಕಪ್ ಗೆದ್ದ ನಮ್ಮ ಹೆಣ್ಣುಮಕ್ಕಳನ್ನು ತಮ್ಮ ಮನೆಗೇ ಆಹ್ವಾನಿಸಿ, ಪ್ರೀತಿಯಿಂದ ಸನ್ಮಾನಿಸಿರುವುದು ನಮ್ಮ ಸಂಸ್ಥೆಗೆ ಮತ್ತು ಅಂಧ ಕ್ರಿಕೆಟ್ ಸಮುದಾಯಕ್ಕೆ ಸಂದ ದೊಡ್ಡ ಗೌರವ," ಎಂದು ಮಹಾಂತೇಶ್ ಸಂತಸ ವ್ಯಕ್ತಪಡಿಸಿದರು.

Tags:    

Similar News