ಕೆಎಸ್‌ಸಿಎ ಚುನಾವಣೆ : 12 ವರ್ಷಗಳ ಬಳಿಕ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್
ಭಾನುವಾರ ನಡೆದ ಜಿದ್ದಾಜಿದ್ದಿನ ಕಣದಲ್ಲಿ ಎದುರಾಳಿ ಶಾಂತಕುಮಾರ್ ಅವರನ್ನು 191 ಮತಗಳ ಅಂತರದಿಂದ ಮಣಿಸುವ ಮೂಲಕ ವೆಂಕಟೇಶ್ ಪ್ರಸಾದ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಕ್ರಿಕೆಟ್ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಟೀಮ್ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ಭರ್ಜರಿ ಜಯ ಸಾಧಿಸಿದ್ದಾರೆ.
ಭಾನುವಾರ ನಡೆದ ಜಿದ್ದಾಜಿದ್ದಿನ ಕಣದಲ್ಲಿ ಎದುರಾಳಿ ಶಾಂತಕುಮಾರ್ ಅವರನ್ನು 191 ಮತಗಳ ಅಂತರದಿಂದ ಮಣಿಸುವ ಮೂಲಕ ವೆಂಕಟೇಶ್ ಪ್ರಸಾದ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸುಮಾರು 12 ವರ್ಷಗಳ ಸುದೀರ್ಘ ಅಂತರದ ಬಳಿಕ ಅವರು ಮತ್ತೆ ಕೆಎಸ್‌ಸಿಎ ಆಡಳಿತದ ಮುಖ್ಯವಾಹಿನಿಗೆ ಮರಳಿದ್ದಾರೆ.
ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಬೆಂಬಲಿತ ಬಣದಿಂದ ಸ್ಪರ್ಧಿಸಿದ್ದ ವೆಂಕಟೇಶ್ ಪ್ರಸಾದ್ ಅವರು ಒಟ್ಟು 749 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರಾಬಲ್ಯ ಮೆರೆದರು. ಇವರ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಬ್ರಿಜೇಶ್ ಪಾಟೀಲ್ ಬಣದ ಅಭ್ಯರ್ಥಿ ಶಾಂತಕುಮಾರ್ ಅವರು 558 ಮತಗಳಿಗೆ ತೃಪ್ತಿಪಟ್ಟು ಪರಾಭವಗೊಂಡರು. ಈ ಬಾರಿ ಸದಸ್ಯರು ಅತ್ಯಂತ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಒಟ್ಟು 1315 ಮತಗಳು ಚಲಾವಣೆಯಾಗಿದ್ದು, ಇದು ಕೆಎಸ್‌ಸಿಎ ಇತಿಹಾಸದಲ್ಲಿ 2013ರ ನಂತರ ದಾಖಲಾದ ಅತಿ ಹೆಚ್ಚು ಮತದಾನವಾಗಿದೆ. ಅಂದು 1351 ಮತಗಳು ಚಲಾವಣೆಯಾಗಿದ್ದವು.
ಇತರೆ ಪ್ರಮುಖ ಹುದ್ದೆಗಳ ಫಲಿತಾಂಶ
ಕೇವಲ ಅಧ್ಯಕ್ಷ ಸ್ಥಾನವಷ್ಟೇ ಅಲ್ಲದೆ, ವೆಂಕಟೇಶ್ ಪ್ರಸಾದ್ ಅವರ ಬಣವು ಇತರೆ ಪ್ರಮುಖ ಸ್ಥಾನಗಳಲ್ಲೂ ಜಯಭೇರಿ ಬಾರಿಸಿದೆ. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಸುಜಿತ್ ಸೋಮಸುಂದರ್ ಅವರು ಆಯ್ಕೆಯಾಗಿದ್ದಾರೆ. ಹಾಗೆಯೇ ಸಂಸ್ಥೆಯ ಪ್ರಮುಖ ಜವಾಬ್ದಾರಿಯಾದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಂತೋಷ್ ಮೆನನ್ ಅವರು ಗೆಲುವು ಸಾಧಿಸಿದ್ದರೆ, ಖಜಾಂಚಿಯಾಗಿ ಮಧುಕರ್ ಅವರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸೇರಿದಂತೆ ಒಟ್ಟು 16 ಸ್ಥಾನಗಳಿಗೆ ನಡೆದ ಈ ಚುನಾವಣೆಯಲ್ಲಿ ಮತದಾರರು ಸಂಪೂರ್ಣವಾಗಿ ಹೊಸ ಬದಲಾವಣೆಗೆ ಒಲವು ತೋರಿರುವುದು ಸ್ಪಷ್ಟವಾಗಿದೆ.
ನ್ಯಾಯಾಲಯದ ಅಂಗಳದಿಂದ ಬಂದ ಚುನಾವಣೆ
ಈ ಬಾರಿಯ ಚುನಾವಣೆ ಕೇವಲ ಮೈದಾನಕ್ಕಷ್ಟೇ ಸೀಮಿತವಾಗಿರಲಿಲ್ಲ, ಬದಲಾಗಿ ಕಾನೂನು ಹೋರಾಟದ ಸ್ವರೂಪವನ್ನೂ ಪಡೆದಿತ್ತು. ಆರಂಭದಲ್ಲಿ ಎದುರಾಳಿ ಶಾಂತಕುಮಾರ್ ಅವರ ನಾಮಪತ್ರವು ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡಿದ್ದರಿಂದ, ವೆಂಕಟೇಶ್ ಪ್ರಸಾದ್ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಈ ನಿರ್ಧಾರವನ್ನು ಪ್ರಶ್ನಿಸಿ ಶಾಂತಕುಮಾರ್ ಅವರು ಕೊನೆಯ ಕ್ಷಣದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಶಾಂತಕುಮಾರ್ ಅವರ ನಾಮಪತ್ರವನ್ನು ಸಿಂಧುಗೊಳಿಸಿ ಚುನಾವಣೆ ನಡೆಸುವಂತೆ ಆದೇಶಿಸಿತ್ತು. ಅಂತಿಮವಾಗಿ ನಡೆದ ಮತಸಮರದಲ್ಲಿ ವೆಂಕಿ ಬಣವೇ ಮೇಲುಗೈ ಸಾಧಿಸಿದೆ.
ಒಂದೂವರೆ ದಶಕದ ಬಳಿಕ ಮತ್ತೆ ಅಧಿಕಾರಕ್ಕೆ
ವೆಂಕಟೇಶ್ ಪ್ರಸಾದ್ ಅವರಿಗೆ ಕೆಎಸ್‌ಸಿಎ ಆಡಳಿತ ಹೊಸದೇನಲ್ಲ. ಅವರು ದಶಕದ ಹಿಂದೆಯೇ, ಅಂದರೆ 2010ರಿಂದ 2013ರ ಅವಧಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಂದು ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದರೆ, ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿದ್ದರು. ಇದೀಗ 12 ವರ್ಷಗಳ ಬಳಿಕ ಅದೇ ತಂಡದ ಬೆಂಬಲದೊಂದಿಗೆ ಸ್ವತಃ ಅಧ್ಯಕ್ಷರಾಗಿ ಅವರು ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದಾರೆ. 1994ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ವೆಂಕಿ, 33 ಟೆಸ್ಟ್ ಪಂದ್ಯಗಳಿಂದ 96 ವಿಕೆಟ್ ಹಾಗೂ 161 ಏಕದಿನ ಪಂದ್ಯಗಳಿಂದ 196 ವಿಕೆಟ್‌ಗಳನ್ನು ಕಬಳಿಸಿ ಟೀಮ್ ಇಂಡಿಯಾದ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. ಇದೀಗ ಮೈದಾನದ ಆಚೆಗೂ ಅವರು ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.