ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಹೇಳಿಕೆ: ಯಾರ ಅವಧಿಯಲ್ಲಿ ನಡೆದಿತ್ತು ಭ್ರಷ್ಟಾಚಾರ?

ದ ಫೆಡರಲ್‌ ಕರ್ನಾಟಕಕ್ಕೆ ಪ್ರತಿಕ್ರಿಯೆ ನೀಡಿದ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ, ತಮ್ಮ ಹೇಳಿಕೆಯನ್ನು ರಾಜಕೀಯ ನಾಯಕರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದು, ನೋವು ತಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Update: 2025-12-07 12:47 GMT
Click the Play button to listen to article

ರಾಜ್ಯದ ಆಡಳಿತ ಯಂತ್ರದಲ್ಲಿ ಬೇರೂರಿರುವ ಭ್ರಷ್ಟಾಚಾರದ ಕುರಿತು ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಅವರು ನೀಡಿದ ಹೇಳಿಕೆಯೊಂದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಶೇ. 63ರಷ್ಟು ಭ್ರಷ್ಟಾಚಾರವಿದೆ ಎಂಬ ಅವರ ಮಾತು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದೆ. ಈ ನಡುವೆ, ವಿವಾದ ತಾರಕಕ್ಕೇರುತ್ತಿದ್ದಂತೆ ಸ್ವತಃ ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರೇ ಸ್ಪಷ್ಟನೆ ನೀಡಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ , ಸಮಾಜದಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರದ ಬಗ್ಗೆ ಕಟುವಾದ ಮಾತುಗಳಲ್ಲಿ ಎಚ್ಚರಿಸಿದ್ದರು. ಸರ್ಕಾರಿ ಕಚೇರಿಗಳಲ್ಲಿ ಕೆಲಸವಾಗಬೇಕಾದರೆ ಲಂಚ ಇಲ್ಲದೆ ಸಾಧ್ಯವಿಲ್ಲ ಎಂಬ ಸ್ಥಿತಿ ಇದೆ.  "ರಾಜ್ಯದಲ್ಲಿ ಶೇ.63ರಷ್ಟು ಭ್ರಷ್ಟಾಚಾರವಿದೆ" ಎಂಬ ಅಂಕಿ ಅಂಶ 2019ರಲ್ಲಿ ನಡೆದ 'ಇಂಡಿಯಾ ಕರಪ್ಷನ್ ಸರ್ವೆ' ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಹೇಳಿದ್ದರು. ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ, ಮಾಧ್ಯಮಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭವಾಯಿತು. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂಬುದಕ್ಕೆ ಸ್ವತಃ ಉಪ ಲೋಕಾಯುಕ್ತರೇ ಸಾಕ್ಷಿ ನುಡಿದಿದ್ದಾರೆ ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಬಿಂಬಿಸಲು ಪ್ರಾರಂಭಿಸಿದವು. 

ರಾಜಕೀಯ ಲಾಭದ ಲೆಕ್ಕಾಚಾರ ಮತ್ತು ಕೆಸರೆರಚಾಟ

ನ್ಯಾ. ಬಿ. ವೀರಪ್ಪ ಹೇಳಿಕೆಯನ್ನು ರಾಜಕೀಯ ಪಕ್ಷಗಳು ತಮಗೆ ಅನುಕೂಲವಾಗುವಂತೆ ಬಳಸಿಕೊಂಡವು. ಕಾಂಗ್ರೆಸ್‌ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಉಪಲೋಕಾಯುಕ್ತರ ಹೇಳಿಕೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದೆ. ಬಿಜೆಪಿಯು ಈ ಹಿಂದೆ ಕಾಂಗ್ರೆಸ್ ತನ್ನ ವಿರುದ್ಧ ನಡೆಸಿದ್ದ ಶೇ.40 ರಷ್ಟು ಕಮಿಷನ್ ಸರ್ಕಾರ ಎಂಬ ಅಭಿಯಾನಕ್ಕೆ ಪ್ರತ್ಯುತ್ತರವಾಗಿ ಇದನ್ನು ಬಳಸಿಕೊಂಡಿತು. ಲೋಕಾಯುಕ್ತರೇ ಹೇಳುತ್ತಿದ್ದು, ಈಗ ಶೇ.63 ರಷ್ಟು ಭ್ರಷ್ಟಾಚಾರವಿದೆ. ಅಂದರೆ ಕಾಂಗ್ರೆಸ್ ಸರ್ಕಾರದ್ದು ಶೇ.63 ಕಮಿಷನ್ ಸರ್ಕಾರ ಎಂದು ಟೀಕಿಸಲಾರಂಭಿಸಿತು. 

ಬಿಜೆಪಿಯ ಆರೋಪವು ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ತಂದೊಡ್ಡಿತು. ಸ್ವತಃ ಸಾಂವಿಧಾನಿಕ ಹುದ್ದೆಯಲ್ಲಿರುವವರೇ ಹೀಗೆ ಹೇಳಿದರೆ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ಆತಂಕ ಸರ್ಕಾರದಲ್ಲಿ ಮೂಡಿತು. ಆದರೆ, ಉಪಲೋಕಾಯುಕ್ತರೇ ಸ್ಪಷ್ಟನೆ ನೀಡಿದ ಬಳಿಕ ಕಾಂಗ್ರೆಸ್‌ ಸರ್ಕಾರವು ಪ್ರತಿಪಕ್ಷ ಬಿಜೆಪಿಗೆ ಪ್ರತ್ಯುತ್ತರ ನೀಡಿತು. ಉಪಲೋಕಾಯುಕ್ತರೇ ಸ್ಪಷ್ಟನೆ ನೀಡಿದ್ದು, ಅದಕ್ಕೆ ಬಿಜೆಪಿಗರ ಉತ್ತರವೇನು ಎಂಬುದಾಗಿ ತಿರುಗೇಟು ನೀಡಿತು. 2019ರಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಮತ್ತು ನಂತರ ಬಿಜೆಪಿ ಸರ್ಕಾರವಿತ್ತು. ಹೀಗಾಗಿ ಆ ವರದಿ ಇಂದಿನ ಸರ್ಕಾರಕ್ಕೆ ನೇರವಾಗಿ ಅನ್ವಯಿಸುವುದಿಲ್ಲ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. 

ಉಪಲೋಕಾಯುಕ್ತರ ಸ್ಪಷ್ಟನೆ

ದ ಫೆಡರಲ್‌ ಕರ್ನಾಟಕಕ್ಕೆ ಪ್ರತಿಕ್ರಿಯೆ ನೀಡಿದ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ, ತಮ್ಮ ಹೇಳಿಕೆಯನ್ನು ರಾಜಕೀಯ ನಾಯಕರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದು, ನೋವು ತಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಯಾವುದೇ ನಿರ್ದಿಷ್ಟ ಸರ್ಕಾರವನ್ನಾಗಲೀ ಅಥವಾ ಅವಧಿಯನ್ನಾಗಲೀ ಗುರಿಯಾಗಿಟ್ಟುಕೊಂಡು ಹೇಳಿರಲಿಲ್ಲ.  2019ರಲ್ಲಿ ನಡೆದ 'ಇಂಡಿಯಾ ಕರಪ್ಷನ್ ಸರ್ವೆ' ವರದಿಯಲ್ಲಿರುವ ಮಾಹಿತಿಯನ್ನು ಮಾತ್ರ ಉಲ್ಲೇಖಿಸಲಾಗಿದೆ. ಆ ಸರ್ವೆಯ ಪ್ರಕಾರ ಶೇ. 63ರಷ್ಟು ಭ್ರಷ್ಟಾಚಾರವಿದೆ ಎಂದು ವರದಿಯಾಗಿತ್ತು. ಯಾವುದೇ ರಾಜಕೀಯ ಪಕ್ಷದ ಪರ ಅಥವಾ ವಿರೋಧವಲ್ಲ. ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನಾಗಲೀ ಅಥವಾ ಹಿಂದಿನ ಬಿಜೆಪಿ ಸರ್ಕಾರವನ್ನಾಗಲೀ ಉದ್ದೇಶಿಸಿ ಈ ಮಾತು ಹೇಳಿಲ್ಲ. ಒಟ್ಟಾರೆ ಆಡಳಿತ ವ್ಯವಸ್ಥೆಯಲ್ಲಿ ಬೇರೂರಿರುವ ಲಂಚಗುಳಿತನದ ಬಗ್ಗೆ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಉಪ ಲೋಕಾಯುಕ್ತರು ಹೇಳಿಕೆಗೆ ಸೀಮಿತವಾಗಿದ್ದಾರೆ: ಎಚ್‌.ಡಿ.ಕುಮಾರಸ್ವಾಮಿ

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಉಪ ಲೋಕಾಯುಕ್ತರಾಗಿ ಅವರು ಏನ್ ಕೆಲಸ ಮಾಡ್ತಿದ್ದಾರೆ? ಅವರ ಜವಬ್ದಾರಿ ಏನು? ಮಾಧ್ಯಮ ಮುಂದೆ ಹೇಳಿಕೆ ನೀಡಲಷ್ಟೇ ಅವರಿಗೆ ಅಧಿಕಾರ ನೀಡಲಾಗಿದೆಯಾ? ಇಲ್ಲಾ ದಾಖಲೆಗಳನ್ನ ಸಂಗ್ರಹಿಸಿ ಕ್ರಮ ತೆಗೆದುಕೊಳ್ಳಲಿಕ್ಕೆ ಅಧಿಕಾರ ನೀಡಲಾಗಿದೆಯಾ? ಯಾರ ಕಾಲದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು ಅನ್ನೋದು ಬೇರೆ ಚರ್ಚೆ. ಭ್ರಷ್ಟಾಚಾರ ಗೊತ್ತಿದ್ದೂ ಉಪ ಲೋಕಾಯುಕ್ತರು ಹೇಳಿಕೆಗೆ ಸೀಮಿತವಾಗಿದ್ದಾರೆ. ಹೀಗಾದರೆ ಪ್ರಯೋಜನವೇನು? ಎಂದು ಅಭಿಪ್ರಾಯಪಟ್ಟರು.

ಅಧಿಕಾರಕ್ಕೆ ಬಂದು 3 ವರ್ಷ ಆಗಿದೆ. ಈ ಮೂರು ವರ್ಷದ ಆಡಳಿತ ಎಷ್ಟು ಪರಿಶುದ್ಧ, ಪಾರದರ್ಶಕವಾಗಿದೆ ಎಂಬ ಬಗ್ಗೆ ವರದಿ ಮಾಡಿಸಲಿ ಎಂದು ಒತ್ತಾಯಿಸಿದರು

ಭ್ರಷ್ಟಾಚಾರ ತಾಂಡವವಾಡುತ್ತಿದೆ: ಆರ್‌.ಅಶೋಕ್‌

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ರಾಜ್ಯ ಸರ್ಕಾರದ ಪ್ರತಿ ಇಲಾಖೆಯಲ್ಲೂ ಅಕ್ರಮ, ಅವ್ಯವಹಾರ ತುಂಬಿ ತುಳುಕುತ್ತಿದೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬುದಾಗಿ ಉಪಲೋಕಾಯುಕ್ತರ ಹೇಳಿದ್ದು ಅಕ್ಷರಶಃ ನಿಜ. ಸರ್ಕಾರಿ ಶಾಲೆಗಳಲ್ಲಿ ಖರೀದಿ ಮಾಡಿರುವ ಲ್ಯಾಪ್‌ಟ್ಯಾಪ್‌, ಎಲ್ ಇಡಿ ಪ್ರೊಜೆಕ್ಟರ್, ಯುಪಿಎಸ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಕೆಟಿಟಿಪಿ ನಿಯಮ ಉಲ್ಲಂಘನೆ ಮಾಡಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿರುವ ಸತ್ಯಾಂಶ ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದರು. 

ಸರಿಯಾಗಿ ಅರ್ಥೈಸಿಕೊಳ್ಳದೆ ಹೇಳಿಕೆ : ಮುಖ್ಯಮಂತ್ರಿ ತಿರುಗೇಟು

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಟ್ವಿಟರ್‌ನಲ್ಲಿ ಟ್ರಾನ್ಸ್‌ಪರೆನ್ಸಿ ಇಂಡಿಯಾ ಇಂಟರ್ ನ್ಯಾಶನಲ್ ನವರು 2019ರ ನವೆಂಬರ್‌ನಲ್ಲಿ ಇಂಡಿಯಾ ಕರಪ್ಷನ್ ಸರ್ವೆ ಎಂಬ ನೀಡಿರುವ ವರದಿಯಲ್ಲಿ ರಾಜ್ಯದಲ್ಲಿ ಶೇ.63 ಭ್ರಷ್ಟಾಚಾರ ಇದೆ ಎಂಬುದಾಗಿತ್ತು. ಅದೇ ವರದಿಯನ್ನು ಆಧರಿಸಿ ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ ಮಾತನಾಡಿದ್ದಾರೆ. ಈ ವರದಿ ಹೊರಬರುವ ವೇಳೆಯಲ್ಲಿ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇತ್ತು. ಆರ್.ಅಶೋಕ್  ಉಪಲೋಕಾಯುಕ್ತರ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಬಿಜೆಪಿಯ ಪಾಪದ ಗಂಟನ್ನು ನಮ್ಮ ತಲೆಗೆ ಕಟ್ಟಲು ಹೋಗಿ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. 

ಬಿಜೆಪಿ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಭ್ರಷ್ಟಾಚಾರ ಹಗರಣಗಳು ಒಂದೇ, ಎರಡೇ. ಕೊರೊನಾ ಕಾಲದಲ್ಲಿ ಜನ ಹಾದಿಬೀದಿಯಲ್ಲಿ ಸಾಯುವಾಗಲೂ ವೆಂಟಿಲೇಟರ್, ಮಾಸ್ಕ್, ಸ್ಯಾನಿಟೈಸರ್, ಐಸಿಯು ಖರೀದಿ ಎನ್ನದೆ ಎಲ್ಲದರಲ್ಲಿಯೂ ನಿರ್ಲಜ್ಜರಾಗಿ ಲೂಟಿ ಮಾಡಲಾಗಿತ್ತು. ಪ್ರತಿ ಇಲಾಖೆಯಲ್ಲಿ ಕನಿಷ್ಠ ಶೇ.40 ಕಮಿಷನ್ ಚಾಲ್ತಿಯಲ್ಲಿ ಇತ್ತು. ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಎಂಬುವವರು ಅಂದಿನ ಸಚಿವ ಈಶ್ವರಪ್ಪನವರ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದರು. ಅಲ್ಲದೇ ಹಲವು ಭ್ರಷ್ಟಾಚಾರದ ಆರೋಪಗಳು ಬಯಲಾಗಿದ್ದವು.  ಬಿಜೆಪಿ ಕಾಲದ ಹಗರಣಗಳನ್ನು ಪಟ್ಟಿಮಾಡುತ್ತಾ ಹೋದರೆ ಒಂದು ಮಹಾಗ್ರಂಥವನ್ನೇ ಬರೆಯಬಹುದು ಎಂದು ಟೀಕಾಪ್ರಹಾರ ನಡೆಸಿದ್ದಾರೆ. 

ಇಂಡಿಯಾ ಕರಪ್ಷನ್ ಸರ್ವೆ ವರದಿ ಉಲ್ಲೇಖ

ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ಉಲ್ಲೇಖಿಸಿದ 2019ರ ವರದಿಯ ಸಮೀಕ್ಷೆಯ ಪ್ರಕಾರ, ಕರ್ನಾಟಕವು ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿತ್ತು. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಕರ್ನಾಟಕದ ಶೇ. 63ರಷ್ಟು ನಾಗರಿಕರು ತಾವು ಸರ್ಕಾರಿ ಕೆಲಸ ಮಾಡಿಸಿಕೊಳ್ಳಲು ಲಂಚ ನೀಡಿದ್ದಾಗಿ ಒಪ್ಪಿಕೊಂಡಿದ್ದರು. ಭ್ರಷ್ಟಾಚಾರದ ಪ್ರಮುಖ ತಾಣಗಳಾಗಿ ಆಸ್ತಿ ನೋಂದಣಿ , ಪೊಲೀಸ್ ಇಲಾಖೆ ಮತ್ತು ಮುನ್ಸಿಪಲ್ ಕಾರ್ಪೊರೇಷನ್‌ಗಳನ್ನು ಗುರುತಿಸಲಾಗಿತ್ತು. 

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಇಂಡಿಯಾ' ಮತ್ತು 'ಲೋಕಲ್ ಸರ್ಕಲ್ಸ್' ಸಂಸ್ಥೆಯು ನಡೆಸಿದ 'ಇಂಡಿಯಾ ಕರಪ್ಷನ್ ಸರ್ವೆ - 2019' ಸಮೀಕ್ಷೆ ವರದಿಯಾಗಿದೆ. ಆ ಸಮೀಕ್ಷೆಯ ಪ್ರಕಾರ ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ತೆಲಂಗಾಣ ರಾಜ್ಯಗಳು ಅತಿ ಹೆಚ್ಚು ಭ್ರಷ್ಟಾಚಾರ ಇರುವ ಪಟ್ಟಿಯಲ್ಲಿದ್ದು, ಇದರಲ್ಲಿ ಕರ್ನಾಟಕವು  ಸಹ ದೇಶದ ಅತಿ ಹೆಚ್ಚು ಭ್ರಷ್ಟಾಚಾರ ಇರುವ ರಾಜ್ಯಗಳ ಪಟ್ಟಿಯಲ್ಲಿತ್ತು. ಇದನ್ನು ಉಪಲೋಕಾಯುಕ್ತರು ಉಲ್ಲೇಖಿಸಿದ್ದರು. 

Tags:    

Similar News