5 ಪಾಲಿಕೆಗಳಿಗೆ ಐಎಎಸ್ ಅಧಿಕಾರಿಗಳ ನೇಮಕ ‘ಸಂವಿಧಾನ ಬಾಹಿರ’ವೇ? ನಿಯಮ ಉಲ್ಲಂಘನೆ ಆರೋಪ!
ನಿಯಮಗಳಿಗೆ ಯಾವುದೇ ತಿದ್ದುಪಡಿ ಮಾಡದೆ, ಕೇವಲ ಒಂದು ಆಡಳಿತಾತ್ಮಕ ಆದೇಶದ ಮೂಲಕ 5 ಹಿರಿಯ ಐಎಎಸ್ ಅಧಿಕಾರಿಗಳನ್ನು ಆಯುಕ್ತರನ್ನಾಗಿ ನೇಮಿಸಿರುವುದು ಕಾನೂನುಬಾಹಿರ ಎಂದು ರಮೇಶ್ ವಾದಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿ
ಇತ್ತೀಚೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ವಿಭಜಿಸಿ, ಸೆಪ್ಟೆಂಬರ್ 2 ರಿಂದ ಜಾರಿಗೆ ಬರುವಂತೆ ರಚಿಸಲಾಗಿರುವ ಐದು ಹೊಸ ನಗರ ಪಾಲಿಕೆಗಳಿಗೆ ರಾಜ್ಯ ಸರ್ಕಾರ ಆಯುಕ್ತರು ಮತ್ತು ಅಪರ ಆಯುಕ್ತರನ್ನಾಗಿ ಬರೋಬ್ಬರಿ 15 ಐಎಎಸ್ (IAS) ಅಧಿಕಾರಿಗಳನ್ನು ನೇಮಕ ಮಾಡಿದೆ. ಆದರೆ, ಈ ನೇಮಕಾತಿ ಆದೇಶವು 'ಕರ್ನಾಟಕ ವೃಂದ ಮತ್ತು ನೇಮಕಾತಿ ನಿಯಮ'ಗಳನ್ನು ಉಲ್ಲಂಘಿಸಿದ್ದು, ಇದು ಸಂಪೂರ್ಣ "ಸಂವಿಧಾನ ಬಾಹಿರ" ಎಂದು ಗಂಭೀರ ಆರೋಪ ಕೇಳಿಬಂದಿದೆ.
ಕೇವಲ 'ಸರ್ಕಾರಿ ಆದೇಶ'ದ ಮೂಲಕ ಮಾಡಲಾಗಿರುವ ಈ ನೇಮಕಾತಿಗಳಿಂದಾಗಿ ವಾರ್ಷಿಕ ಸುಮಾರು 9 ಕೋಟಿ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಪೋಲಾಗಲಿದೆ ಎಂಬ ಆತಂಕಕಾರಿ ವಿಷಯವನ್ನು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎನ್.ಆರ್. ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ನಿಯಮ ಉಲ್ಲಂಘನೆ ಎಲ್ಲಾಗಿದೆ?
ಹೊಸದಾಗಿ ರಚನೆಯಾದ 5 ನಗರ ಪಾಲಿಕೆಗಳಿಗೆ ಆಯುಕ್ತರನ್ನು ನೇಮಿಸುವ ಮುನ್ನ, ರಾಜ್ಯ ಸರ್ಕಾರವು ಕಡ್ಡಾಯವಾಗಿ "ಕರ್ನಾಟಕ ವೃಂದ ಮತ್ತು ನೇಮಕಾತಿ ನಿಯಮ"ಗಳಿಗೆ ಹಾಗೂ "ಕರ್ನಾಟಕ ಸರ್ಕಾರ ಸಚಿವಾಲಯ ಸೇವೆ (ನೇಮಕಾತಿ) ನಿಯಮ, 2019" ಕ್ಕೆ ಸೂಕ್ತ ತಿದ್ದುಪಡಿ ತರಬೇಕಿತ್ತು. ಆದರೆ, ಯಾವುದೇ ತಿದ್ದುಪಡಿ ಮಾಡದೆ, ಕೇವಲ ಒಂದು ಆಡಳಿತಾತ್ಮಕ ಆದೇಶದ ಮೂಲಕ 5 ಹಿರಿಯ ಐಎಎಸ್ ಅಧಿಕಾರಿಗಳನ್ನು ಆಯುಕ್ತರನ್ನಾಗಿ ನೇಮಿಸಿರುವುದು ಕಾನೂನುಬಾಹಿರ ಎಂದು ರಮೇಶ್ ವಾದಿಸಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವಂತಿದೆ ಎಂಬುದು ಅವರ ಆಕ್ಷೇಪ.
10 ಅಪರ ಆಯುಕ್ತರ ಅಗತ್ಯವಿತ್ತೇ?
ಪಾಲಿಕೆಗಳ ಆಯುಕ್ತರ ನೇಮಕ ಒಂದೆಡೆಯಾದರೆ, ಪ್ರತಿ ಪಾಲಿಕೆಗೆ ತಲಾ ಇಬ್ಬರಂತೆ (ಒಬ್ಬರು ಅಭಿವೃದ್ಧಿ ಮತ್ತು ಇನ್ನೊಬ್ಬರು ಆಡಳಿತ) ಒಟ್ಟು 10 ಮಂದಿ ಐಎಎಸ್ ಅಧಿಕಾರಿಗಳನ್ನು 'ಅಪರ ಆಯುಕ್ತ'ರನ್ನಾಗಿ ನೇಮಿಸಲಾಗಿದೆ. ವಾಸ್ತವದಲ್ಲಿ, ಈಗಾಗಲೇ ಪಾಲಿಕೆಗಳಲ್ಲಿ ಕೆಎಎಸ್ ಶ್ರೇಣಿಯ ಜಂಟಿ ಆಯುಕ್ತರಿದ್ದಾರೆ. ಅವರಿಗೆ ಆಡಳಿತ ಮತ್ತು ಕಂದಾಯದ ಜವಾಬ್ದಾರಿ ನೀಡಬಹುದಿತ್ತು. ಹಾಗೆಯೇ, 10 ವಲಯಗಳಿಗೆ ತಲಾ ಒಬ್ಬರಂತೆ ಮುಖ್ಯ ಇಂಜಿನಿಯರ್‌ಗಳು ಇರುವಾಗ, ಮತ್ತೆ ಪ್ರತ್ಯೇಕವಾಗಿ 'ಅಪರ ಆಯುಕ್ತ (ಅಭಿವೃದ್ಧಿ)' ಹುದ್ದೆ ಸೃಷ್ಟಿಸಿ ಐಎಎಸ್ ಅಧಿಕಾರಿಗಳನ್ನು ನೇಮಿಸುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಎದ್ದಿದೆ.
ಸಾರ್ವಜನಿಕ ಹಣದ ಭಾರೀ ಪೋಲು?
ಈ "ಅನಗತ್ಯ" ಮತ್ತು "ಅವೈಜ್ಞಾನಿಕ" ನೇಮಕಾತಿಗಳಿಂದ ಸರ್ಕಾರದ ಬೊಕ್ಕಸಕ್ಕೆ ಆಗುವ ನಷ್ಟದ ಲೆಕ್ಕಾಚಾರವನ್ನೂ ರಮೇಶ್ ಮುಂದಿಟ್ಟಿದ್ದಾರೆ. ಆಯುಕ್ತರಾಗಿ ಹಿರಿಯ ಐಎಎಸ್ ಅಧಿಕಾರಿಗಳ ಬದಲಿಗೆ ಪ್ರಾಯೋಗಿಕ ಅವಧಿಯಲ್ಲಿರುವ ಕಿರಿಯ ಐಎಎಸ್ ಅಥವಾ ಹಿರಿಯ ಕೆಎಎಸ್ ಅಧಿಕಾರಿಗಳನ್ನು ನೇಮಿಸಿದ್ದರೆ, ಪ್ರತಿ ತಿಂಗಳು ಕನಿಷ್ಠ 10 ಲಕ್ಷ ರೂಪಾಯಿ ಉಳಿತಾಯವಾಗುತ್ತಿತ್ತು. ಅಪರ ಆಯುಕ್ತರಾಗಿ 10 ಮಂದಿ ಐಎಎಸ್ ಅಧಿಕಾರಿಗಳ ವೇತನ, ಭತ್ಯೆ, ಕಚೇರಿ ಸಿಬ್ಬಂದಿ ಮತ್ತು ವಾಹನ ನಿರ್ವಹಣೆಗೆ ತಿಂಗಳಿಗೆ ಕನಿಷ್ಠ 45 ಲಕ್ಷ ರೂಪಾಯಿಯಂತೆ ವರ್ಷಕ್ಕೆ ಸುಮಾರು 5.40 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂಬುದಾಗಿ ಅವರು ಆರೋಪಿಸಿದ್ದಾರೆ.
ಯಾವುದೇ ಮಾನದಂಡವಿಲ್ಲದೆ ಮಾಡಲಾದ ಈ ನೇಮಕಾತಿಗಳಿಂದ ವರ್ಷಕ್ಕೆ ಕನಿಷ್ಠ 9 ಕೋಟಿ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ.
ಸಂವಿಧಾನ ಬಾಹಿರ ನೇಮಕಾತಿ ಆದೇಶವನ್ನು ಹಿಂಪಡೆಯಬೇಕು. ಅನಗತ್ಯವಾಗಿ ಸೃಷ್ಟಿಸಲಾಗಿರುವ 10 ಅಪರ ಆಯುಕ್ತರ ಹುದ್ದೆಗಳನ್ನು ರದ್ದುಗೊಳಿಸಿ, ಪಾಲಿಕೆಗಳಿಗೆ ಆಗುವ ಆರ್ಥಿಕ ಹೊರೆ ತಪ್ಪಿಸಬೇಕು ಎಂದು ಎನ್.ಆರ್. ರಮೇಶ್ ಅವರು ಮುಖ್ಯಮಂತ್ರಿಗಳನ್ನು ಮತ್ತು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳನ್ನು ಒತ್ತಾಯಿಸಿದ್ದಾರೆ.