Assembly Session| ಹಗರಣಗಳ ಬ್ರಹ್ಮಾಸ್ತ್ರ ಝಳಪಿಸುವಲ್ಲಿ ಸೋತಿತೇ ಪ್ರತಿಪಕ್ಷ ಬಿಜೆಪಿ?
x

Assembly Session| ಹಗರಣಗಳ 'ಬ್ರಹ್ಮಾಸ್ತ್ರ' ಝಳಪಿಸುವಲ್ಲಿ ಸೋತಿತೇ ಪ್ರತಿಪಕ್ಷ ಬಿಜೆಪಿ?

ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳ ಕುರಿತು ಚಾರ್ಜ್‌ಶೀಟ್‌ ಬಿಡುಗಡೆ ಮಾಡಿದಾಗಿಯೂ ಯಾವುದರ ವಿರುದ್ಧ ಸರಿಯಾಗಿ ಹೋರಾಟ ರೂಪಿಸದಿರುವುದು ಪ್ರತಿಪಕ್ಷ ಬಿಜೆಪಿಗೆ ಹಿನ್ನಡೆ ತಂದಿದೆ.


Click the Play button to hear this message in audio format

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಎಷ್ಟು ಮುಖ್ಯವೋ, ಪ್ರಬಲ ವಿರೋಧ ಪಕ್ಷವೂ ಅಷ್ಟೇ ಮುಖ್ಯ. ಆಡಳಿತ ಪಕ್ಷದ ಒಂದೊಂದು ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸುವ, ಸಾಧಕ-ಬಾಧಕ ವಿಮರ್ಶಿಸುವ, ಪ್ರಶ್ನಿಸುವ ಜವಾಬ್ದಾರಿ ಪ್ರತಿಪಕ್ಷಗಳದ್ದು. ಹಾಗಾಗಿಯೇ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳನ್ನು ʼಕಾವಲು ನಾಯಿʼ ಎಂದೇ ಕರೆಯಲಾಗುತ್ತದೆ. ವಿಪರ್ಯಾಸ ಎಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷದಲ್ಲಿ ಸಾಕಷ್ಟು ಭ್ರಷ್ಟಾಚಾರ ಆರೋಪಗಳು, ಹಗರಣಗಳು ಸದ್ದು ಮಾಡಿದರೂ ಬಿಜೆಪಿ ಮಾತ್ರ ಸಮರ್ಥ ಪ್ರತಿಪಕ್ಷವಾಗಿ ಎದುರಿಸುವಲ್ಲಿ ವಿಫಲವಾಗಿದೆ.

ಪ್ರತಿ ಬಾರಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಪ್ರತಿಭಟನೆ, ಹೋರಾಟಕ್ಕೆ ಇಳಿಯುವ ಕೇಸರಿ ಪಡೆ ಮುಖಂಡರು, ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ಸಂಪೂರ್ಣ ವಿಫಲರಾಗುತ್ತಿದ್ದರು. ಅಸಮರ್ಥ ಪ್ರತಿಪಕ್ಷ ಎಂಬುದನ್ನು ಆ ಪಕ್ಷದ ನಾಯಕರೇ ಹಲವು ಬಾರಿ ಬಹಿರಂಗ ವೇದಿಕೆಗಳಲ್ಲಿ ಟೀಕಿಸಿದ್ದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ (MUDA) ಪ್ರಕರಣ ದೊಡ್ಡ ಸದ್ದು ಮಾಡಿತು. ಜಾರಿ ನಿರ್ದೇಶನಾಲಯ ಇಸಿಐಆರ್‌ ದಾಖಲಿಸಿ, ತನಿಖೆ ಆರಂಭಿಸಿತು. ಪ್ರತಿಪಕ್ಷಗಳು ಮೈಸೂರುವರೆಗೆ ಪಾದಯಾತ್ರೆ ನಡೆಸಿದ್ದು ಬಿಟ್ಟರೆ ಹಗರಣದ ಒಳ ಸುಳಿಗಳನ್ನು ಜನರ ಮುಂದಿಡುವಲ್ಲಿ ಬಿಜೆಪಿ ವಿಫಲವಾಯಿತು. ಅದೇ ರೀತಿ ವಾಲ್ಮೀಕಿ ನಿಗಮದ ಹಗರಣ, ವಕ್ಫ್ ಆಸ್ತಿ ವಿವಾದ, ಭೋವಿ ಅಭಿವೃದ್ಧಿ ನಿಗಮದ ಹಗರಣ, ಅಬಕಾರಿ ಸುಂಕ ಹೆಚ್ಚಳ, ಗ್ಯಾರೆಂಟಿ ಯೋಜನೆಗಳಿಗೆ ಪರಿಶಿಷ್ಟರ ಅನುದಾನ ಬಳಕೆ, ಆರೋಗ್ಯ ಸೇವೆಗಳ ಶುಲ್ಕ ಹೆಚ್ಚಳ... ಹೀಗೆ ಸಾಲು ಸಾಲು ಅಸ್ತ್ರಗಳು ಬತ್ತಳಿಕೆಗೆ ಸೇರಿದರೂ ಅವುಗಳನ್ನು ಪ್ರಯೋಗಿಸುವಲ್ಲಿ ಪ್ರತಿಪಕ್ಷ ಸಂಪೂರ್ಣ ವಿಫಲವಾಯಿತು.

ತನ್ನ ಗೊಂದಲಗಳಲ್ಲೇ ಕಾಲಹರಣ

ಬಿಜೆಪಿಯು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಬದಲು ತನ್ನೊಳಗಿನ ಗೊಂದಲಗಳಲ್ಲೇ ಕಾಲಹರಣ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆಗೆ ಬಿಜೆಪಿಯಲ್ಲಿ ಎದ್ದಿರುವ ಬಂಡಾಯ ಮುಂದುವರಿದಿದೆ. ಈ ಮಧ್ಯೆ, ಜೆಡಿಎಸ್‌ ಮೈತ್ರಿಯನ್ನು ಕಾಪಿಟ್ಟುಕೊಳ್ಳುವುದರಲ್ಲೇ ಕಾಯಕವಾಗಿದೆ.

ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳ ಕುರಿತು ಚಾರ್ಜ್‌ಶೀಟ್‌ ಬಿಡುಗಡೆ ಮಾಡಿದಾಗಿಯೂ ಯಾವುದರ ವಿರುದ್ಧ ಸರಿಯಾಗಿ ಹೋರಾಟ ರೂಪಿಸದಿರುವುದು ಪ್ರತಿಪಕ್ಷ ಬಿಜೆಪಿಗೆ ಹಿನ್ನಡೆ ತಂದಿದೆ. ಸ್ವಪಕ್ಷೀಯ ನಾಯಕ ಅರವಿಂದ ಲಿಂಬಾವಳಿ ಅವರೇ ಕರ್ನಾಟಕದಲ್ಲಿ ಪ್ರಬಲ ವಿರೋಧ ಪಕ್ಷವಾಗುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದ್ದರು.

ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್‌.ಅಶೋಕ್‌ ಮಧ್ಯೆ ಸಾಮರಸ್ಯ ಇಲ್ಲ, ತಿಳಿವಳಿಕೆ ಕೊರತೆಯಿಂದ ಸಮರ್ಥ ಪ್ರತಿಪಕ್ಷ ನಾಯಕರಾಗುವಲ್ಲಿ ಸೋತಿದ್ದಾರೆ. ಬಹುತೇಕ ಗಂಭೀರ ಸಮಸ್ಯೆಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿಲ್ಲ. ಪರಿಣಾಮಕಾರಿ ಹೋರಾಟ ರೂಪಿಸಿಲ್ಲ. ಆಡಳಿತ ಪಕ್ಷದೊಂದಿಗೆ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು.

ಬಿಜೆಪಿಯ ಅಸ್ತ್ರಗಳೇನು?

ರಾಜ್ಯದಲ್ಲಿ ಶೇ. 63ರಷ್ಟು ಭ್ರಷ್ಟಾಚಾರವಿದೆ ಎಂದು ಉಪ ಲೋಕಾಯುಕ್ತರಾದ ನ್ಯಾ.ಬಿ. ವೀರಪ್ಪ ವರದಿ ಕುರಿತು ಪ್ರಸ್ತಾಪಿಸಿ ಚರ್ಚೆಗೆ ಆಗ್ರಹಿಸುವ ಸಾಧ್ಯತೆ ಇದೆ. ಆದರೆ, ಈ ವರದಿಯನ್ನು ಯಡಿಯೂರಪ್ಪ ಅವಧಿಯಲ್ಲಿ ನೀಡಿದ್ದು ಎಂದು ಸರ್ಕಾರ ತಿರುಗೇಟು ನೀಡಿದೆ. ಈ ವಿಚಾರವು ಆಡಳಿತ ಹಾಗೂ ವಿಪಕ್ಷಗಳ ಮಧ್ಯೆ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.

ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಪ್ರಸ್ತಾಪಿಸಿ, ನಿಲುವಳಿ ಸೂಚನೆ ಮಂಡನೆಗೆ ವಿಪಕ್ಷಗಳು ಮುಂದಾಗಲಿವೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ನೀಡಿದ್ದ ಹಲವು ಭರವಸೆಗಳ ಅನುಷ್ಠಾನದ ಸ್ಥಿತಿಗತಿ ಕುರಿತು ಸರ್ಕಾರದಿಂದ ಮಾಹಿತಿ ಕೋರುವ ನಿರೀಕ್ಷೆಯಿದೆ.

ಕಬ್ಬು ಬೆಳೆಗಾರ ಬೇಡಿಕೆಗಳು, ಮೆಕ್ಕೆಜೋಳ, ಹೆಸರು, ಉದ್ದು ಹಾಗೂ ರಾಗಿ ಖರೀದಿ ಕೇಂದ್ರ ತೆರೆಯುವಲ್ಲಿ ನಿರ್ಲಕ್ಷ್ಯ, ಬೆಳೆಹಾನಿ ಪರಿಹಾರದಲ್ಲಿ ಲೋಪಗಳು, ತುಂಗಭದ್ರಾ ಜಲಾಶಯದ 32 ಕ್ರೆಸ್ಟ್ ಬದಲಾವಣೆಯಲ್ಲಿ ವಿಳಂಬದಿಂದಾಗಿ ಎರಡನೇ ಬೆಳೆಗೆ ನೀರು ಒದಗಿಸಲು ಸಾಧ್ಯವಾಗದಿರುವ ವಿಷಯಗಳನ್ನು ಪ್ರಸ್ತಾಪಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ.

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ಉಚಿತ ಅಕ್ಕಿ ನೀಡುತ್ತಿದ್ದು, ಸದ್ದಿಲ್ಲದೇ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಪ್ರಕ್ರಿಯೆ ನಡೆಸುತ್ತಿರುವುದನ್ನು ವಿಪಕ್ಷಗಳು ಪ್ರಸ್ತಾಪಿಸಲಿವೆ. ಬಗರ್ ಹುಕುಂ ಸಾಗುವಳಿ ಮಂಜೂರಾತಿ ನೀಡದಿರುವುದು, ಸರ್ಕಾರಿ ಶಾಲೆಗಳ ಅವ್ಯವಸ್ಥೆ, ರಾಜ್ಯದಾದ್ಯಂತ ರಸ್ತೆ-ಗುಂಡಿಗಳ ಸಮಸ್ಯೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ತರಾಟೆಗೆ ತೆಗೆದುಕೊಳ್ಳಲಿವೆ.

ಈಚೆಗೆ ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ದರೋಡೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಶೇಷ ಆತಿಥ್ಯ ಒದಗಿಸಿದ ವಿಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.

ಬಿಜೆಪಿಯ ವೈಫಲ್ಯಗಳೇನು?

ಬಿಜೆಪಿಯಲ್ಲೇ ಬಣ ರಾಜಕೀಯ ಇರುವುದು ಪ್ರತಿಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಪಕ್ಷದ ಹಿರಿಯ ನಾಯಕರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಜಿ.ಎಂ. ಸಿದ್ದೇಶ್ವರ್‌ ಇತರರು ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದು, ಬಂಡಾಯ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ಬಿಜೆಪಿಗೆ ಮುಜುಗರ ತಂದೊಡ್ಡಿದೆ. ಸರ್ಕಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಡ ಮಾಡಬೇಕಾದ ಸಂದರ್ಭದಲ್ಲಿ ಈ ಬಂಡಾಯವು ಬಿಜೆಪಿ ಮೇಲೆಯೇ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಬಿಜೆಪಿಯು ರಾಜ್ಯ ಸರ್ಕಾರ ಹಲವು ಭ್ರಷ್ಟಾಚಾರ ಆರೋಗಳಲ್ಲಿ ಒಂದನ್ನೂ ಕೂಡ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವಲ್ಲಿ ಸೋತಿದೆ. ಈ 'ಹಿಟ್ ಅಂಡ್ ರನ್' ಪ್ರವೃತ್ತಿಯಿಂದ ಸರ್ಕಾರದ ಮೇಲೆ ಒತ್ತಡ ಹೇರಲು ಸಾಧ್ಯವಾಗದು. ರೈತರ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟ ಮಾಡಿದರೂ ಸರ್ಕಾರ ಅದನ್ನು ಮುಂದುವರಿಸಲು ಬಿಡುವುದಿಲ್ಲ ಎನ್ನಲಾಗಿದೆ. ಯಾವುದೇ ಒಂದು ವಿಷಯದ ವಿರುದ್ಧ ಹೋರಾಟ ರೂಪಿಸಿ, ಅದು ಪೂರ್ಣಗೊಳ್ಳುವ ಮುನ್ನವೇ ಮತ್ತೊಂದು ವಿಷಯಕ್ಕೆ ಜಿಗಿಯುವುದರಿಂದ ಸರ್ಕಾರಕ್ಕೆ ವಿರೋಧ ಪಕ್ಷದ ಭೀತಿಯಿಲ್ಲ. ನಿರಂತರ ಮತ್ತು ಸಂಘಟಿತ ಹೋರಾಟದ ಕೊರತೆ ಎದ್ದು ಕಾಣುತ್ತಿದ್ದು, ಬಿಜೆಪಿಗೆ ಹಿನ್ನಡೆಯಾಗಿದೆ ಎನ್ನಲಾಗಿದೆ.

ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಅನೇಕ ಸಂದರ್ಭ ಹಾಗೂ ವಿಷಯಗಳಲ್ಲಿ ಜೆಡಿಎಸ್‌ ನಾಯಕರ ಮೇಲೆ ಅವಲಂಬಿಸಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ ನಿಜವಾದ ವಿರೋಧ ಪಕ್ಷದ ನಾಯಕನಂತೆ ಕಾಣಿಸಿಕೊಂಡಿದ್ದಾರೆ.

ಕಾಂಗ್ರೆಸ್‌ ತಂತ್ರಗಾರಿಕೆಗಳ ಮುಂದೆ ಬಿಜೆಪಿ ತಂತ್ರ ಫಲಿಸದಿರುವುದು ಕೂಡ ಹಿನ್ನಡೆಗೆ ಕಾರಣವಾಗಿದೆ. ಬಿಜೆಪಿ ಭ್ರಷ್ಟಾಚಾರದ ವಿಷಯ ಪ್ರಸ್ತಾಪಿಸಿದಾಗ ಕಾಂಗ್ರೆಸ್ ಕೋವಿಡ್ ಕಾಲದ ಹಗರಣ ಬಿಚ್ಚಿಡುತ್ತಿದ್ದು, ಬಿಜೆಪಿಗೆ ತಲೆ ನೋವಾಗಿದೆ.

ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯಗಳ ಬಗ್ಗೆ ರಾಜ್ಯ ಸರ್ಕಾರ ಸಾರ್ವಜನಿಕವಾಗಿ ಚರ್ಚೆಗೆ ಒಳಪಡಿಸುತ್ತಿದೆ. ಆದರೆ, ಇದನ್ನು ಸಮರ್ಥಿಸಿಕೊಳ್ಳಲಾಗದ ಸ್ಥಿತಿಯಿಂದ ರಾಜ್ಯ ಸರ್ಕಾರದ ಮುಂದೆ ಮಂಡಿಯೂರಬೇಕಾಗಿದೆ.

ರಾಜ್ಯ ಸರ್ಕಾರದ ವಿರುದ್ಧದ ಆರೋಪಗಳು ಕೇಳಿ ಬಂದಾಗ ಕೇವಲ ಪತ್ರಿಕಾಗೋಷ್ಠಿ ಮತ್ತು ಟ್ವೀಟ್‌ಗಳಿಗೆ ‌ಮಾತ್ರ ಬಿಜೆಪಿ ಸೀಮತವಾಗಿದೆ. ಜನಾಂದೋಲನ ರೂಪಿಸುವಲ್ಲಿ ಎಡವಿದೆ. ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಅವಧಿಯಲ್ಲಿ ಸಣ್ಣ ಸಣ್ಣ ವಿಚಾರವನ್ನೂ ರಾಜ್ಯವ್ಯಾಪಿ ತೆಗೆದುಕೊಂಡು ಹೋಗಿ, ಸರ್ಕಾರಕ್ಕೆ ಚಳಿ ಬಿಡಿಸುತ್ತಿದ್ದರು. ಹಾಗಾಗಿ ಯಡಿಯೂರಪ್ಪ ವರ್ಚಸ್ಸು ಹೆಚ್ಚಿತ್ತು. ಆದರೆ, ಈಗಿನ ಬಿಜೆಪಿ ನಾಯಕರಲ್ಲಿ ಆ ಒಗ್ಗಟ್ಟು ಇಲ್ಲದಿರುವುದು ಸರ್ಕಾರಕ್ಕೆ ವರವಾಗಿ ಪರಿಣಮಿಸಿದೆ.

ಬಿಜೆಪಿ ಮುಂದಿರುವ ಸವಾಲುಗಳೇನು?

ಸೋಮವಾರ (ಡಿ.8) ದಿಂದ ಆರಂಭವಾಗುವ ಬೆಳಗಾವಿ ಅಧಿವೇಶನವು ಬಿಜೆಪಿಗೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ. ಪಕ್ಷದೊಳಗಿನ ಭಿನ್ನಮತ ಬದಿಗಿಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಅನಿವಾರ್ಯತೆ ಬಂದೊದಗಿದೆ. ಹಾಗಾದಾಗ ಮಾತ್ರ ಬಿಜೆಪಿ ಸಮರ್ಥ ಪ್ರತಿಪಕ್ಷವಾಗಿ ಅಸ್ತಿತ್ವ ಉಳಿಸಿಕೊಳ್ಳಬಹುದು ಎಂದು ವಿಶ್ಲೇಷಿಸಲಾಗಿದೆ.

Read More
Next Story