ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮುಗಿಸಿ ಬರುವಾಗ ಲಾರಿ ಹರಿದು ಜೋಡಿ ಸಾವು
ಕರಿಯಪ್ಪ ಮತ್ತು ಕವಿತಾ ಅವರಿಗೆ ಕಳೆದ 5 ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥವಾಗಿತ್ತು. ಇದೇ ಡಿಸೆಂಬರ್ 21ರಂದು ಅದ್ದೂರಿಯಾಗಿ ಮದುವೆ ಮಾಡಲು ಎರಡೂ ಕುಟುಂಬಗಳು ಸಕಲ ಸಿದ್ಧತೆ ನಡೆಸಿದ್ದವು.
ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಜೋಡಿಯೊಂದು, ಮದುವೆಗೆ ಮುಂಚಿನ ಸಂಭ್ರಮದ ಕ್ಷಣಗಳನ್ನು ಸೆರೆಹಿಡಿಯಲು ಹೋಗಿ ಶವವಾಗಿ ಮರಳಿದ ಘೋರ ದುರಂತ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮುಗಿಸಿಕೊಂಡು ಬೈಕ್‌ನಲ್ಲಿ ಮರಳುತ್ತಿದ್ದಾಗ ಲಾರಿ ಹರಿದ ಪರಿಣಾಮ ಭಾವಿ ದಂಪತಿ ಇಬ್ಬರೂ ಮೃತಪಟ್ಟಿದ್ದಾರೆ.
ಭಾನುವಾರ (ಡಿ.7) ಗಂಗಾವತಿ ತಾಲೂಕಿನ ಬೆಣಕಲ್ ಬಳಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಕರಿಯಪ್ಪ ಮಡಿವಾಳ ಹನುಮನಹಟ್ಟಿ (26) ಮತ್ತು ಕವಿತಾ ಪವಾಡೆಪ್ಪ ಮಡಿವಾಳ (19) ಎಂದು ಗುರುತಿಸಲಾಗಿದೆ. ಹೊಸಪೇಟೆಯ ಪಂಪಾವನ ಮತ್ತು ಮುನಿರಾಬಾದ್ ಜಲಾಶಯದ ಬಳಿ ಫೋಟೋಶೂಟ್ ಮುಗಿಸಿಕೊಂಡು, ಕವಿತಾ ಅವರನ್ನು ಗಂಗಾವತಿಯಲ್ಲಿರುವ ಅವರ ಮನೆಗೆ ಬಿಡಲು ಕರಿಯಪ್ಪ ಬೈಕ್‌ನಲ್ಲಿ ಕರೆತರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕ್ವಾರಿ ಲಾರಿಯೊಂದು ಇವರ ಬೈಕ್ ಮೇಲೆ ಹರಿದಿದೆ.
ಸ್ಥಳದಲ್ಲೇ ಪ್ರಾಣಬಿಟ್ಟ ಯುವತಿ
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಯುವತಿ ಕವಿತಾ ಸ್ಥಳದಲ್ಲೇ ಅಸುನೀಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಕರಿಯಪ್ಪ ಅವರನ್ನು ತಕ್ಷಣ ಗಂಗಾವತಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಕರಿಯಪ್ಪ ಮತ್ತು ಕವಿತಾ ಅವರಿಗೆ ಕಳೆದ 5 ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥವಾಗಿತ್ತು. ಇದೇ ಡಿಸೆಂಬರ್ 21ರಂದು ಅದ್ದೂರಿಯಾಗಿ ಮದುವೆ ಮಾಡಲು ಎರಡೂ ಕುಟುಂಬಗಳು ಸಕಲ ಸಿದ್ಧತೆ ನಡೆಸಿದ್ದವು. ಮದುವೆಗೆ ಕೇವಲ ಎರಡು ವಾರ ಬಾಕಿ ಇರುವಾಗಲೇ ಈ ದುರಂತ ಸಂಭವಿಸಿದ್ದು, ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.