There are many opportunities in the bank for those who have completed their graduation and SSLC.
x
ರಾಯಚೂರು ಜಿಲ್ಲಾ ಕೇಂದ್ರ ಬ್ಯಾಂಕ್‌

ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ : ರಾಯಚೂರು-ಕೊಪ್ಪಳ ಡಿಸಿಸಿ ಬ್ಯಾಂಕ್‌ನಲ್ಲಿ 70 ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಾಖಾ ವ್ಯವಸ್ಥಾಪಕರು ಗ್ರೇಡ್‌-1 ದರ್ಜೆಯ 15 ಹುದ್ದೆಗಳು, ಸಹಾಯಕರು ಗ್ರೇಡ್‌-1 ದರ್ಜೆಯ 45 ಹುದ್ದೆಗಳು, ಅಟೆಂಡರ್‌ 10 ಹುದ್ದೆ ಸೇರಿದಂತೆ ಒಟ್ಟು 70 ಹುದ್ದೆಗಳಿವೆ.


Click the Play button to hear this message in audio format

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಅರಸುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಯುವಜನತೆಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಆರ್‌ಕೆಡಿಸಿಸಿ) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವಿಶೇಷವೆಂದರೆ ಪದವೀಧರರ ಜೊತೆಗೆ ಎಸ್‌ಎಸ್‌ಎಲ್‌ಸಿ (SSLC) ಪಾಸಾದವರಿಗೂ ಇಲ್ಲಿ ಸರ್ಕಾರಿ ಕೆಲಸ ಪಡೆಯುವ ಸುವರ್ಣಾವಕಾಶವಿದೆ.

ಒಟ್ಟು 70 ಹುದ್ದೆಗಳ ನೇಮಕಾತಿಗೆ ಬ್ಯಾಂಕ್ ಆಡಳಿತ ಮಂಡಳಿ ಮುಂದಾಗಿದ್ದು, ಕಲ್ಯಾಣ ಕರ್ನಾಟಕ ವೃಂದ ಹಾಗೂ ಉಳಿಕೆ ಮೂಲ ವೃಂದದ ಅಡಿಯಲ್ಲಿ ಈ ನೇಮಕಾತಿ ನಡೆಯಲಿದೆ. ನವೆಂಬರ್ 21 ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತರು ಡಿಸೆಂಬರ್ 22ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ಬ್ಯಾಂಕ್ ಒಟ್ಟು ಮೂರು ವಿಭಾಗಗಳಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಇದರಲ್ಲಿ ಶಾಖಾ ವ್ಯವಸ್ಥಾಪಕರು (ಗ್ರೇಡ್‌-1) ದರ್ಜೆಯ 15 ಹುದ್ದೆಗಳು, ಸಹಾಯಕರು (ಗ್ರೇಡ್‌-1) ದರ್ಜೆಯ ಬರೋಬ್ಬರಿ 45 ಹುದ್ದೆಗಳು ಹಾಗೂ 10 ಅಟೆಂಡರ್‌ ಹುದ್ದೆಗಳು ಸೇರಿವೆ. ಬ್ಯಾಂಕಿಂಗ್ ವೃತ್ತಿಜೀವನವನ್ನು ಆರಂಭಿಸಲು ಬಯಸುವವರಿಗೆ ಇದು ಉತ್ತಮ ವೇದಿಕೆಯಾಗಿದೆ.

ವಿದ್ಯಾರ್ಹತೆ ಏನು?

ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಶಾಖಾ ವ್ಯವಸ್ಥಾಪಕರು (ಗ್ರೇಡ್‌-1) ಮತ್ತು ಸಹಾಯಕರು (ಗ್ರೇಡ್‌-1) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ಇದರೊಂದಿಗೆ ಕಡ್ಡಾಯವಾಗಿ ಕಂಪ್ಯೂಟರ್‌ ಜ್ಞಾನವನ್ನು ಹೊಂದಿರಬೇಕು. ಇನ್ನು ಅಟೆಂಡರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಉತ್ತೀರ್ಣರಾಗಿದ್ದರೆ ಸಾಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಕರ್ಷಕ ವೇತನ ಶ್ರೇಣಿ

ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಶಾಖಾ ವ್ಯವಸ್ಥಾಪಕರು (ಗ್ರೇಡ್‌-1) ಹುದ್ದೆಗೆ 61,300 ರೂ. ಮೂಲ ವೇತನವಿದ್ದರೆ, ಸಹಾಯಕರು (ಗ್ರೇಡ್‌-1) ಹುದ್ದೆಗೆ 44,425 ರೂ. ವೇತನವಿದೆ. ಇನ್ನು ಎಸ್‌ಎಸ್‌ಎಲ್‌ಸಿ ಆಧಾರದ ಮೇಲೆ ನೇಮಕವಾಗುವ ಅಟೆಂಡರ್‌ ಹುದ್ದೆಗೆ 37,500 ರೂ. ಮೂಲ ವೇತನವನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ಮತ್ತು ಸಹಾಯವಾಣಿ

ಅಭ್ಯರ್ಥಿಗಳು ಅರ್ಜಿಗಳನ್ನು ಕೇವಲ ಆನ್‌ಲೈನ್‌ ಮುಖಾಂತರವೇ ಸಲ್ಲಿಸಬೇಕು. ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿ ಶುಲ್ಕ, ವಯೋಮಿತಿ, ಮೀಸಲಾತಿ ಮತ್ತು ಇತರೆ ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್‌ ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ತೊಂದರೆಗಳು ಎದುರಾದರೆ ಅಥವಾ ಗೊಂದಲಗಳಿದ್ದರೆ, ಅಭ್ಯರ್ಥಿಗಳು ಬ್ಯಾಂಕ್‌ನ ಸಹಾಯವಾಣಿ ಸಂಖ್ಯೆ 8310460727 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಆರ್‌ಕೆಡಿಸಿಸಿ ಬ್ಯಾಂಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More
Next Story