
Part-1: ಬೆಳಗಾವಿ ಅಧಿವೇಶನ: ಪ್ರತಿವರ್ಷ ವೆಚ್ಚ ಹೆಚ್ಚು, ಪ್ರತಿದಿನ 2 ಕೋಟಿ ಖರ್ಚು
ಚಳಿಗಾಲದ ಅಧಿವೇಶನವು ಡಿ. 8 - 19 ರವರೆಗೆ ನಡೆಯಲಿದ್ದು, ಬೆಳಗಾವಿ ಜಿಲ್ಲಾಡಳಿತವು ಸಕಲ ಸಿದ್ಧತೆಯನ್ನು ಕೈಗೊಂಡಿದೆ. ಕೇವಲ ರಾಜಕೀಯ ಚರ್ಚೆಗಳಿಗೆ ವೇದಿಕೆಯಾಗದೆ, ಆರ್ಥಿಕವಾಗಿ ಮತ್ತು ಆಡಳಿತಾತ್ಮಕವಾಗಿ ದೊಡ್ಡ ಸವಾಲಾಗಿ ಪರಿಣಮಿಸಿದೆ.
ರಾಜ್ಯ ರಾಜಕಾರಣದ ಶಕ್ತಿ ಕೇಂದ್ರ ಬೆಂಗಳೂರಿನ ವಿಧಾನಸೌಧವಾದರೆ, ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಆ ಭಾಗದ ಧ್ವನಿಗಾಗಿ ನಿರ್ಮಿಸಲಾದ ಬೆಳಗಾವಿಯ ಸುವರ್ಣ ವಿಧಾನಸೌಧವು ವರ್ಷಕ್ಕೊಮ್ಮೆ ಚಳಿಗಾಲದ ಅಧಿವೇಶನದ ಮೂಲಕ ಜೀವಂತಿಕೆ ಪಡೆಯುತ್ತದೆ.
ಈ ಬಾರಿಯ ಚಳಿಗಾಲದ ಅಧಿವೇಶನವು ಡಿ. 8 ರಿಂದ ಡಿ.19 ರವರೆಗೆ ನಡೆಯಲಿದ್ದು, ಇದಕ್ಕಾಗಿ ಬೆಳಗಾವಿ ಜಿಲ್ಲಾಡಳಿತವು ಸಕಲ ಸಿದ್ಧತೆಯನ್ನು ಕೈಗೊಂಡಿದೆ. ಈ ಅಧಿವೇಶನವು ಕೇವಲ ರಾಜಕೀಯ ಚರ್ಚೆಗಳಿಗೆ ವೇದಿಕೆಯಾಗದೆ, ಆರ್ಥಿಕವಾಗಿ ಮತ್ತು ಆಡಳಿತಾತ್ಮಕವಾಗಿ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಬಾರಿಯ ಕಲಾಪವನ್ನು ಸುಗಮವಾಗಿ ನಡೆಸಲು ಅಂದಾಜು 20 ಕೋಟಿ ರೂ.ನಷ್ಟು ಭಾರಿ ಮೊತ್ತದ ಅವಶ್ಯಕತೆ ಇದೆ.
ಬೆಳಗಾವಿ ಚಳಿಗಾಲದ ಅಧಿವೇಶನ ಆಡಳಿತ ಮತ್ತು ಪ್ರತಿಪಕ್ಷಗಳ ವಾಕ್ಸಮರಕ್ಕೆ ಸಾಕ್ಷಿಯಾಗಲಿದೆ. ಆದರೆ ಇದರ ಹಿಂದಿನ ಆರ್ಥಿಕ ಹೊರೆ ಮಾತ್ರ ಜನಸಾಮಾನ್ಯರ ಹುಬ್ಬೇರಿಸುವಂತಿದೆ. ಬೆಳಗಾವಿ ಜಿಲ್ಲಾಡಳಿತದ ಮೂಲಗಳ ಪ್ರಕಾರ, ಈ ಬಾರಿಯ ಖರ್ಚು ವೆಚ್ಚಗಳು ಕಳೆದ ಬಾರಿಗಿಂತ ಶೇ. 10 ರಿಂದ 20 ರಷ್ಟು ಹೆಚ್ಚಾಗಲಿವೆ. ಈ ನಡುವೆ, ಈ ಹಿಂದೆ ಕೇಳಿಬಂದ ಭಾರಿ ಭ್ರಷ್ಟಾಚಾರ ಮತ್ತು ದುಂದುವೆಚ್ಚದ ಆರೋಪಗಳಿಂದ ಎಚ್ಚೆತ್ತ ಸರ್ಕಾರವು ಅಂತಹ ಅಕ್ರಮಗಳು ನಡೆಯದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಇದಕ್ಕಾಗಿ ವಿಶೇಷ ಮೇಲ್ವಿಚಾರಣಾ ಸಮಿತಿಗಳನ್ನು ರಚನೆ ಮಾಡಲಾಗಿದೆ. ಈ ಮೂಲಕ ಪ್ರತಿ ವೆಚ್ಚದ ಮೇಲೆ ನಿಗಾವಹಿಸಲಾಗುತ್ತಿದೆ.
ಉತ್ತರ ಕರ್ನಾಟಕದ ಆಶೋತ್ತರಗಳ ಪ್ರತೀಕವಾಗಿರುವ ಕುಂದಾನಗರಿ ಬೆಳಗಾವಿಯ ಸುವರ್ಣ ವಿಧಾನಸೌಧವು ಮತ್ತೊಂದು ಚಳಿಗಾಲದ ಅಧಿವೇಶನಕ್ಕೆ ಮದುವಣಗಿತ್ತಿಯಂತೆ ಸಜ್ಜಾಗುತ್ತಿದೆ. ವಿಧಾನಮಂಡಲದ ಉಭಯ ಸದನಗಳ ಅಧಿವೇಶನಕ್ಕೆ ಜಿಲ್ಲಾಡಳಿತ ಭರ್ಜರಿ ತಯಾರಿ ನಡೆಸಿದೆ. ಆಡಳಿತ ಯಂತ್ರದ ಶಕ್ತಿ ಕೇಂದ್ರ ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರಗೊಳ್ಳುತ್ತಿದ್ದು, ಗಡಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹತ್ತು ದಿನಗಳ ಈ ಅಧಿವೇಶನಕ್ಕಾಗಿ ಬರೋಬ್ಬರಿ 20 ಕೋಟಿ ರೂ. ಖರ್ಚಾಗುವ ಅಂದಾಜನ್ನು ಅಧಿಕಾರಿಗಳು ಹಾಕಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿ ಅಧಿವೇಶನವೆಂದರೆ ಅದು ಕೇವಲ 224 ಶಾಸಕರು ಮತ್ತು 75 ಮೇಲ್ಮನೆ ಸದಸ್ಯರ ಆಗಮನವಷ್ಟೇ ಅಲ್ಲ. ಇಡೀ ಸರ್ಕಾರದ ವ್ಯವಸ್ಥೆಯೇ ಬೆಳಗಾವಿಗೆ ಹರಿದು ಬರುತ್ತದೆ. ಅಧಿವೇಶನದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಗಳು, ಸಂಪುಟ ದರ್ಜೆ ಸಚಿವರು, ಶಾಸಕರು, ಎಂಎಲ್‌ಸಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು, ಸಾವಿರಾರು ಸಂಖ್ಯೆಯ ಪೊಲೀಸ್ ಸಿಬ್ಬಂದಿ, ಸಚಿವಾಲಯದ ಸಿಬ್ಬಂದಿ, ಶಾಸಕರ ಆಪ್ತ ಸಹಾಯಕರು, ಚಾಲಕರು ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಬರುವ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಸುಮಾರು 8,500 ಕ್ಕೂ ಹೆಚ್ಚು ಜನರು ಬೆಳಗಾವಿಗೆ ಲಗ್ಗೆ ಇಡುತ್ತಿದ್ದಾರೆ.ಇಷ್ಟು ದೊಡ್ಡ ಸಂಖ್ಯೆಯ ಜನಸಮೂಹವನ್ನು ನಿರ್ವಹಿಸುವುದು ಬೆಳಗಾವಿ ಜಿಲ್ಲಾಡಳಿತಕ್ಕೆ ಒಂದು ಸಾಹಸದ ಕೆಲಸವೇ ಸರಿ. ಇವರೆಲ್ಲರ ವಸತಿ, ಊಟ ಮತ್ತು ಸಾರಿಗೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸುವುದು ಆಡಳಿತದ ಮುಂದಿರುವ ಅತಿದೊಡ್ಡ ಸವಾಲಾಗಿದೆ.
ಗಗನಕ್ಕೇರಿದ ಬಾಡಿಗೆ ದರಗಳು
ಅಧಿವೇಶನಕ್ಕೆ ಬರುವ ಗಣ್ಯರು ಮತ್ತು ಸಿಬ್ಬಂದಿಗೆ ವಸತಿ ಕಲ್ಪಿಸಲು ಜಿಲ್ಲಾಡಳಿತವು ನಗರದ ಬಹುತೇಕ ಎಲ್ಲಾ ವಸತಿಗೃಹಗಳನ್ನು ಮತ್ತು ಹೋಟೆಲ್‌ಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ನಗರದ 95 ಕ್ಕೂ ಹೆಚ್ಚು ವಸತಿಗೃಹಗಳಲ್ಲಿ ಸುಮಾರು 3,500 ಕೊಠಡಿಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ. ಆದರೂ, ಹೋಟೆಲ್ ಕೊಠಡಿಗಳ ಕೊರತೆ ಎದುರಾಗಿದ್ದು, ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ನಗರದ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ಗಳಲ್ಲಿನ ಖಾಲಿ ಫ್ಲಾಟ್‌ಗಳನ್ನು ಬಾಡಿಗೆಗೆ ಪಡೆಯಲಾಗಿದೆ. 25 ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಲ್ಲಿ 200 ಕ್ಕೂ ಹೆಚ್ಚು ಮನೆಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ಹಿರಿಯ ಅಧಿಕಾರಿಗಳು ಮತ್ತು ಶಾಸಕರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದಲ್ಲದೆ, ನಗರದ ಪ್ರಮುಖ ಕಲ್ಯಾಣ ಮಂಟಪಗಳು ಮತ್ತು ಸರ್ಕಾರಿ ಅತಿಥಿ ಗೃಹಗಳನ್ನು ಪೊಲೀಸ್ ಸಿಬ್ಬಂದಿ ಹಾಗೂ ಸಚಿವಾಲಯದ ಸಿಬ್ಬಂದಿಯ ವಸತಿಗಾಗಿ ಬಳಸಿಕೊಳ್ಳಲಾಗುತ್ತಿದೆ.
ಇಷ್ಟೆಲ್ಲಾ ಜನ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಾಡಿಗೆ ದರಗಳು ಗಗನಕ್ಕೇರಿವೆ. ಸಾಮಾನ್ಯವಾಗಿ 450 ರಿಂದ 1050 ರೂ. ಇರುವ ಸಾಮಾನ್ಯ ವಸತಿಗೃಹಗಳ ಬಾಡಿಗೆ ದರವು, ಅಧಿವೇಶನದ ಕಾರಣಕ್ಕೆ 650 ರಿಂದ 1,500 ರೂ. ವರೆಗೆ ಏರಿಕೆಯಾಗಿದೆ. ಇನ್ನು ಐಷಾರಾಮಿ ಹೋಟೆಲ್‌ಗಳ ದರಗಳಂತೂ ದುಪ್ಪಟ್ಟಾಗಿವೆ. ದಿನಕ್ಕೆ 3,400 ರೂ. ವರೆಗೆ ಐಷಾರಾಮಿ ಹೋಟೆಲ್ ಕೊಠಡಿಗಳ ದರ ನಿಗದಿಯಾಗಿದೆ ಎಂದು ತಿಳಿದುಬಂದಿದೆ. ಅಪಾರ್ಟ್‌ಮೆಂಟ್‌ಗಳಲ್ಲಿನ ಮನೆಗಳ ಬಾಡಿಗೆಯನ್ನು ಹತ್ತು ದಿನಗಳ ಅವಧಿಗೆ 18 ಸಾವಿರ ರೂ.ನಿಂದ 25 ರೂ. ವರೆಗೆ ನಿಗದಿಪಡಿಸಲಾಗಿದೆ. ಈ ಬೆಲೆ ಏರಿಕೆಯು ಒಟ್ಟಾರೆ ಅಧಿವೇಶನದ ಖರ್ಚು 20 ಕೋಟಿ ರೂ. ತಲುಪಲು ಪ್ರಮುಖ ಕಾರಣವಾಗಿದೆ.
ದಿನಕ್ಕೆ 2 ಕೋಟಿ ರೂ. ಖರ್ಚು..!
ಅಧಿವೇಶನದ ಒಟ್ಟು ಅಂದಾಜು ವೆಚ್ಚ 20 ಕೋಟಿ ರೂ. ಎಂದು ಲೆಕ್ಕ ಹಾಕಲಾಗಿದೆ. ಅಂದರೆ, ಸರಾಸರಿ ದಿನಕ್ಕೆ ಬರೋಬ್ಬರಿ 2 ಕೋಟಿ ರೂ. ಜನರ ತೆರಿಗೆ ಹಣ ಖರ್ಚಾಗಲಿದೆ. ಈ ವೆಚ್ಚದಲ್ಲಿ ಸಿಂಹಪಾಲು 'ವಸತಿ ಮತ್ತು ಊಟೋಪಚಾರ'ಕ್ಕೆ ಹೋಗುತ್ತದೆ. 8,500 ಜನರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಭೋಜನದ ವ್ಯವಸ್ಥೆ ಮಾಡಬೇಕಿದೆ. ಉತ್ತರ ಕರ್ನಾಟಕದ ಶೈಲಿಯ ಖಡಕ್ ರೊಟ್ಟಿ, ಎಣ್ಣೆಗಾಯಿ ಸೇರಿದಂತೆ ವಿವಿಧ ಭಕ್ಷ್ಯಗಳ ಭೋಜನ ಕೂಟಕ್ಕೆ ಕೋಟ್ಯಂತರ ರೂಪಾಯಿ ವ್ಯಯವಾಗಲಿದೆ.
ಕಳೆದ ಮೂರು ವರ್ಷಗಳ ವೆಚ್ಚದ ಅಂಕಿಅಂಶಗಳನ್ನು ಗಮನಿಸಿದರೆ, ವೆಚ್ಚ ಏರಿಕೆಯ ಪ್ರಮಾಣ ಸ್ಪಷ್ಟವಾಗುತ್ತದೆ. 2021ರಲ್ಲಿ 13.85 ಕೋಟಿ, 2022ರಲ್ಲಿ 14.20 ಕೋಟಿ, 2023ರಲ್ಲಿ 16.50 ಕೋಟಿ ಖರ್ಚಾಗಿತ್ತು. ಈ ಬಾರಿ ಹಣದುಬ್ಬರ ಮತ್ತು ಹೆಚ್ಚುವರಿ ಸೌಲಭ್ಯಗಳ ಕಾರಣದಿಂದ ಈ ಮೊತ್ತ 20 ಕೋಟಿ ರೂ. ಮುಟ್ಟುವ ಸಾಧ್ಯತೆಯಿದೆ.
ಖರ್ಚಿನ ಲೆಕ್ಕಾಚಾರ: ವರ್ಷದಿಂದ ವರ್ಷಕ್ಕೆ ಏರಿಕೆ
ಅಧಿವೇಶನದ ಖರ್ಚು-ವೆಚ್ಚಗಳ ಅಂಕಿಅಂಶಗಳನ್ನು ಗಮನಿಸಿದರೆ, ಪ್ರತಿ ವರ್ಷವೂ ವೆಚ್ಚ ಏರಿಕೆಯಾಗುತ್ತಲೇ ಇದೆ.
2021: 13.85 ಕೋಟಿ ರೂ.
2022: 14.20 ಕೋಟಿ ರೂ.
2023: 16.50 ಕೋಟಿ ರೂ.
2024 (ಕಳೆದ ಬಾರಿ): 15.30 ಕೋಟಿ ರೂ.
ಈ ಬಾರಿ ಬೆಲೆ ಏರಿಕೆ ಮತ್ತು ಹೆಚ್ಚುವರಿ ಭದ್ರತಾ ವ್ಯವಸ್ಥೆಗಳ ಕಾರಣದಿಂದ, ಅಂದಾಜು ವೆಚ್ಚ 20 ಕೋಟಿ ರೂ. ತಲುಪುವ ಸಾಧ್ಯತೆಯಿದೆ ಎಂದು ಲೆಕ್ಕಪತ್ರ ಅಧಿಕಾರಿಗಳು ಸಿದ್ಧಪಡಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೇವಲ ವಸತಿ ಮತ್ತು ಊಟೋಪಚಾರಕ್ಕಾಗಿಯೇ 10 ರಿಂದ 12 ಕೋಟಿ ರೂ. ವೆಚ್ಚವಾಗುವ ಸಾಧ್ಯತೆಯಿದ್ದು, ಪೊಲೀಸ್ ಹಾಗೂ ಇತರೆ ಖರ್ಚುಗಳು ಸೇರಿದರೆ ಈ ಮೊತ್ತ 17 ರಿಂದ 18 ಕೋಟಿ ರೂ. ದಾಟಲಿದೆ ಎಂದು ಅಂದಾಜಿಸಲಾಗಿದೆ.
ದೆಹಲಿ ಸ್ಫೋಟದ ಹಿನ್ನೆಲೆಯಲ್ಲಿ ಕಟ್ಟೆಚ್ಚರ?
ಇತ್ತೀಚಿನ ದಿನಗಳಲ್ಲಿನ ಭದ್ರತಾ ಸವಾಲುಗಳು ಮತ್ತು ದೆಹಲಿ ಸ್ಫೋಟದಂತಹ ಘಟನೆಗಳ ಹಿನ್ನೆಲೆಯಲ್ಲಿ, ಸುವರ್ಣ ವಿಧಾನಸೌಧಕ್ಕೆ ಅಭೂತಪೂರ್ವ ಭದ್ರತೆ ಒದಗಿಸಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 6,800 ರಿಂದ 7 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಈ ಬೃಹತ್ ಭದ್ರತಾ ಪಡೆಯನ್ನು ನಿರ್ವಹಿಸುವುದು ಕೂಡ ಒಂದು ದೊಡ್ಡ ಆರ್ಥಿಕ ಹೊರೆಯಾಗಿದೆ. ಭದ್ರತಾ ಸಿಬ್ಬಂದಿಯಲ್ಲಿ ಗುಪ್ತಚರ ದಳ, ಐಪಿಎಸ್ ಅಧಿಕಾರಿಗಳು, ಎಸಿಪಿ, ಪಿಎಸ್‌ಐ ಹಾಗೂ ಕಾನ್ಸ್‌ಟೇಬಲ್‌ಗಳು ಒಳಗೊಂಡಿದ್ದಾರೆ. ಇವರಿಗಾಗಿ ಪ್ರತ್ಯೇಕ ವಸತಿ ಟೆಂಟ್ ವ್ಯವಸ್ಥೆ, ವಾಹನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪೋಲಿಸರ ಖರ್ಚು ವೆಚ್ಚಗಳಿಗಾಗಿ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಜಿಲ್ಲಾಧಿಕಾರಿಗಳ ಸ್ಪಷ್ಟನೆ: ಮಿತವ್ಯಯಕ್ಕೆ ಆದ್ಯತೆ
ಈ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ , ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ 8,500 ಕ್ಕೂ ಅಧಿಕ ಜನರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಕಳೆದ ಬಾರಿ ಅಧಿವೇಶನಕ್ಕೆ 15.30 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಈ ಬಾರಿ ಬೆಲೆ ಏರಿಕೆ ಮತ್ತು ಇತರ ಕಾರಣಗಳಿಂದ ವೆಚ್ಚ ಶೇ. 10 ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಆರ್ಥಿಕ ಹೊರೆ
ಸುವರ್ಣ ವಿಧಾನಸೌಧವನ್ನು ನಿರ್ಮಿಸಿದ ಮುಖ್ಯ ಉದ್ದೇಶವೇ ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವುದು. ವರ್ಷಕ್ಕೊಮ್ಮೆಯಾದರೂ ಸರ್ಕಾರ ಇಲ್ಲಿಗೆ ಬಂದು, ಇಲ್ಲಿನ ಜನರ ಕಷ್ಟ-ಸುಖಗಳಿಗೆ ಕಿವಿಯಾಗಬೇಕು ಎಂಬುದು ಇದರ ಆಶಯ. ಆದರೆ, ವಾಸ್ತವದಲ್ಲಿ ಅಧಿವೇಶನವು ಒಂದು "ರಾಜಕೀಯ ಪ್ರವಾಸೋದ್ಯಮ"ವಾಗಿ ಮಾರ್ಪಡುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಕೋಟ್ಯಂತರ ರೂ. ಖರ್ಚು ಮಾಡಿದರೂ, ಅನೇಕ ಶಾಸಕರು ಅಧಿವೇಶನಕ್ಕೆ ಗೈರಾಗುತ್ತಾರೆ. ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ, ಭತ್ಯೆ ಪಡೆದು, ಸದನದಲ್ಲಿ ಕುಳಿತುಕೊಳ್ಳದೆ ಹೊರಗೆ ಅಡ್ಡಾಡುವ ಪ್ರವೃತ್ತಿ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಪ್ರಮುಖ ವಿಷಯಗಳಾದ ಮಹದಾಯಿ ನೀರು ಹಂಚಿಕೆ, ಕೃಷ್ಣಾ ಮೇಲ್ದಂಡೆ ಯೋಜನೆ, ಕಬ್ಬು ಬೆಳೆಗಾರರ ಸಮಸ್ಯೆಗಳು ಮತ್ತು ಮೂಲಸೌಕರ್ಯಗಳ ಕೊರತೆಯ ಬಗ್ಗೆ ಗಂಭೀರ ಚರ್ಚೆ ನಡೆಯುವ ಬದಲು, ರಾಜಕೀಯ ಕೆಸರೆರಚಾಟದಲ್ಲಿ ಸಮಯ ವ್ಯರ್ಥವಾಗುತ್ತದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಳಲು.10 ದಿನಕ್ಕೆ 20 ಕೋಟಿ ಖರ್ಚು ಮಾಡುವ ಬದಲು, ಆ ಹಣವನ್ನು ಈ ಭಾಗದ ಯಾವುದಾದರೂ ಒಂದು ಕೆರೆ ಅಭಿವೃದ್ಧಿಗೋ ಅಥವಾ ಶಾಲಾ ಕೊಠಡಿಗಳ ನಿರ್ಮಾಣಕ್ಕೋ ಬಳಸಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು ಎಂಬ ವಾದವೂ ಇದೆ.
ದುಂದುವೆಚ್ಚ ತಡೆಯಲು ಸಮಿತಿಗಳ ರಚನೆ
ಅಧಿವೇಶನದ ನೆಪದಲ್ಲಿ ನಡೆಯುವ ದುಂದು ವೆಚ್ಚವನ್ನು ತಡೆಯಲು ಮತ್ತು ಅಕ್ರಮಗಳನ್ನು ತಡೆಯಲು ಸರ್ಕಾರ ಮತ್ತು ಜಿಲ್ಲಾಡಳಿತ ಹಲವು ಸಮಿತಿಗಳನ್ನು ರಚಿಸಿದೆ.
ದುಂದು ವೆಚ್ಚ ತಡೆಗಟ್ಟುವ ಸಮಿತಿ
ಬೆಳಗಾವಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ, ಅಧಿವೇಶನದ ಖರ್ಚು-ವೆಚ್ಚಗಳು ಮಿತಿಮೀರುವುದನ್ನು ತಡೆಯಲು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೋಟೆಲ್‌ಗಳು ಮತ್ತು ವಸತಿಗೃಹಗಳು ಮನಸೋ ಇಚ್ಛೆ ಬಾಡಿಗೆ ಹೆಚ್ಚಳ ಮಾಡದಂತೆ ತಡೆಯುವುದು. ಇದಕ್ಕಾಗಿ ಜಿಲ್ಲಾಡಳಿತವು ಹೋಟೆಲ್ ಮಾಲೀಕರೊಂದಿಗೆ ಸಭೆ ನಡೆಸಿ, ಸರ್ಕಾರಿ ದರದಲ್ಲೇ ಕೊಠಡಿಗಳನ್ನು ನೀಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ದರ ನಿಗದಿ ಮತ್ತು ಪರಿಶೀಲನಾ ಸಮಿತಿ
ಅಧಿವೇಶನಕ್ಕೆ ಬರುವ 8,500 ಕ್ಕೂ ಹೆಚ್ಚು ಜನರಿಗೆ ಊಟ, ವಸತಿ ಮತ್ತು ಸಾರಿಗೆ ವ್ಯವಸ್ಥೆ ಮಾಡುವಾಗ ಭ್ರಷ್ಟಾಚಾರ ನಡೆಯದಂತೆ ತಡೆಯಲು ಈ ಸಮಿತಿ ಕೆಲಸ ಮಾಡುತ್ತದೆ. ಖಾಸಗಿ ಹೋಟೆಲ್‌ಗಳು ದುಬಾರಿ ಬಿಲ್ ಮಾಡುವುದನ್ನು ತಡೆಯಲು, ಈ ಸಮಿತಿಯು ನ್ಯಾಯಯುತ ದರವನ್ನು ನಿಗದಿಪಡಿಸುತ್ತದೆ. ಆಹಾರ ಸಮಿತಿಯು ಊಟದ ಗುಣಮಟ್ಟ ಮತ್ತು ಅದಕ್ಕೆ ತಗಲುವ ವೆಚ್ಚದ ಮೇಲೆ ನಿಗಾ ಇಡುತ್ತದೆ. ಪ್ರತಿ ಪ್ಲೇಟ್ ಊಟಕ್ಕೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಬಿಲ್ ಮಾಡದಂತೆ ತಡೆಯಲಿದೆ.
ಈ ಬಾರಿಯ ಅಧಿವೇಶನದಲ್ಲಿ ಮಿತವ್ಯಯಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಮತ್ತು ಸಭಾಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಆದರೆ, ಈಗ 20 ಕೋಟಿ ರೂ. ವೆಚ್ಚ ಸಾರ್ಥಕವಾಗಬೇಕಾದರೆ, ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕು. ಕೇವಲ ಚರ್ಚೆಗಾಗಿ ಚರ್ಚೆ ನಡೆಯದೆ, ನಿರ್ಣಾಯಕ ನಿರ್ಧಾರಗಳು ಕೈಗೊಳ್ಳಲ್ಪಟ್ಟರೆ ಮಾತ್ರ ಸುವರ್ಣ ವಿಧಾನಸೌಧದ ನಿರ್ಮಾಣ ಮತ್ತು ಈ ದುಬಾರಿ ಅಧಿವೇಶನದ ಉದ್ದೇಶ ಈಡೇರಿದಂತಾಗುತ್ತದೆ. ಇಲ್ಲದಿದ್ದರೆ, ಇದು ಮತ್ತೊಂದು ವಾರ್ಷಿಕ ಜಾತ್ರೆಯಾಗಿ ಇತಿಹಾಸದ ಪುಟ ಸೇರುತ್ತದೆ ಎಂಬ ಮಾತುಗಳು ಕೇಳಿಬಂದಿವೆ.
(ಸರಣಿ ವರದಿಯ ಮೊದಲ ಭಾಗ ಇದಾಗಿದೆ. ಎರಡನೇ 7/12/2025 ರಂದು ಪ್ರಕಟವಾಗಲಿದೆ)

