ಚಿತ್ತಾಪುರ ಆರ್​​ಎಸ್​​ಎಸ್​​ ಪಥಸಂಚಲನ: ವಿಷಯವನ್ನು ಎಳೆಯಬೇಡಿ, ಶಾಂತಿ ಸಭೆ ನಡೆಸಿ; ಹೈಕೋರ್ಟ್​​

ಶೀಘ್ರದಲ್ಲೇ ಶಾಂತಿ ಸಭೆ ನಡೆಸಿ, ಅದರ ಮಾಹಿತಿಯನ್ನು ಅರ್ಜಿದಾರರಿಗೆ ತಿಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಾಲಯ, ವಿಚಾರಣೆಯನ್ನು ಅಕ್ಟೋಬರ್​ 30ಕ್ಕೆ ಮುಂದೂಡಿದೆ

Update: 2025-10-24 12:11 GMT

ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ಪ್ರಕರಣದ ವಿಚಾರಣೆ ಹೈಕೋರ್ಟ್​​ನಲ್ಲಿ ಶುಕ್ರವಾರ ನಡೆಯಿತು. ವಿಚಾರಣೆ ವೇಳೆ ನ್ಯಾಯಪೀಠ. "ಈ ವಿಷಯವನ್ನು ಹೆಚ್ಚು ದಿನ ಎಳೆಯುವುದು ಒಳಿತಲ್ಲ, ಆದಷ್ಟು ಬೇಗ ಇದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಿ," ಎಂದು ಎರಡೂ ಕಡೆಯವರಿಗೆ ಮೌಖಿಕವಾಗಿ ಸಲಹೆ ನೀಡಿದೆ.

ಶೀಘ್ರದಲ್ಲೇ ಶಾಂತಿ ಸಭೆ ನಡೆಸಿ, ಅದರ ಮಾಹಿತಿಯನ್ನು ಅರ್ಜಿದಾರರಿಗೆ ತಿಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಾಲಯ, ವಿಚಾರಣೆಯನ್ನು ಅಕ್ಟೋಬರ್​ 30ಕ್ಕೆ ಮುಂದೂಡಿದೆ

ಏನಿದು ಪ್ರಕರಣ?

ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯ 100ನೇ ವರ್ಷಾಚರಣೆಯ ಅಂಗವಾಗಿ, ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಅನುಮತಿ ಕೋರಿ ಕಲಬುರಗಿ ಜಿಲ್ಲಾ ಆರ್‌ಎಸ್‌ಎಸ್‌ ಸಂಚಾಲಕ ಅಶೋಕ್ ಪಾಟೀಲ್ ಅವರು ಸ್ಥಳೀಯ ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅದೇ ದಿನಾಂಕದಂದು ಭೀಮ್ ಆರ್ಮಿ ಮತ್ತು ದಲಿತ ಪ್ಯಾಂಥರ್ಸ್‌ನಂತಹ ಇತರ ಸಂಘಟನೆಗಳೂ ಮೆರವಣಿಗೆಗೆ ಅನುಮತಿ ಕೋರಿದ್ದವು. ಇದರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಕಾರಣ ನೀಡಿ ಚಿತ್ತಾಪುರ ತಹಶೀಲ್ದಾರ್ ಅವರು ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಅಶೋಕ್ ಪಾಟೀಲ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ನ್ಯಾಯಾಲಯದಲ್ಲಿ ನಡೆದ ವಾದ-ವಿವಾದ

ಸರ್ಕಾರದ ಪರ ವಾದ ಮಂಡಿಸಿದ ಎಜಿ ಶಶಿಕಿರಣ್ ಶೆಟ್ಟಿ, "ನಾವು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿಲ್ಲ, ಕೇವಲ ಬಾಕಿ ಇರಿಸಿದ್ದೇವೆ," ಎಂದು ಸ್ಪಷ್ಟಪಡಿಸಿದರು. "ಇದೇ ದಿನಾಂಕದಂದು ಪಥಸಂಚಲನ ನಡೆಸಲು ಆರ್‌ಎಸ್‌ಎಸ್‌ ಅಲ್ಲದೆ, ಇನ್ನೂ 8 ಬೇರೆ ಸಂಘಟನೆಗಳೂ ಅನುಮತಿ ಕೋರಿವೆ. ಹೀಗಾಗಿ, ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಎಲ್ಲವನ್ನೂ ಪರಿಗಣಿಸಬೇಕಿದೆ," ಎಂದರು. ಶಾಂತಿ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಎರಡು ವಾರಗಳ ಕಾಲಾವಕಾಶ ನೀಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಸರ್ಕಾರದ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆರ್‌ಎಸ್‌ಎಸ್‌ ಪರ ಹಿರಿಯ ವಕೀಲ ಅರುಣ್ ಶ್ಯಾಮ್, "ನವೆಂಬರ್ 2ರಂದು ಪಥಸಂಚಲನ ನಡೆಸಲು ನಾವು ಒಪ್ಪಿದ್ದೆವು. ಆದರೆ, ಈಗ ಸರ್ಕಾರವು ಉದ್ದೇಶಪೂರ್ವಕವಾಗಿ ಅಡ್ಡಿ ಸೃಷ್ಟಿಸುತ್ತಿದೆ," ಎಂದು ಆರೋಪಿಸಿದರು. "ಪಥಸಂಚಲನ ನಡೆಸುವುದು ನಮ್ಮ ಮೂಲಭೂತ ಹಕ್ಕು. ರಾಜ್ಯ ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದರೆ, ಕೇಂದ್ರದ ಪಡೆಗಳನ್ನು ನಿಯೋಜಿಸಲಿ," ಎಂದು ಖಾರವಾಗಿ ವಾದಿಸಿದರು. ನಾಳೆಯೇ ಶಾಂತಿ ಸಭೆ ಕರೆಯುವಂತೆ ಅವರು ಆಗ್ರಹಿಸಿದರು.

ಹೈಕೋರ್ಟ್‌ನ ಖಡಕ್ ನಿರ್ದೇಶನ

ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಪೀಠವು, ಸರ್ಕಾರದ ಎರಡು ವಾರಗಳ ಮನವಿಯನ್ನು ತಿರಸ್ಕರಿಸಿತು. "ಅರ್ಜಿಯನ್ನು ಬಾಕಿ ಇರಿಸಿದ್ದರೆ, ಯಾವಾಗ ತೀರ್ಮಾನ ಕೈಗೊಳ್ಳುತ್ತೀರಿ? ಸಮಸ್ಯೆ ಬಗೆಹರಿಯುವ ಬಗ್ಗೆ ನಿಮ್ಮ ವರದಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ."

"ಸಭೆ ಯಾವಾಗ ಕರೆಯಬೇಕು ಎಂದು ಅರ್ಜಿದಾರರು ಆದೇಶಿಸುವಂತಿಲ್ಲ," ಎಂದು ಹೇಳಿದರೂ, "ಈ ವಿಚಾರವನ್ನು ಹೆಚ್ಚು ಲಂಬಿಸಬೇಡಿ. ಅಕ್ಟೋಬರ್ 28ರಂದು ಎಲ್ಲಾ ಸಂಘಟನೆಗಳೊಂದಿಗೆ ಶಾಂತಿ ಸಭೆ ನಡೆಸಬೇಕು. ಚಿತ್ತಾಪುರದಲ್ಲಿನ ಪರಿಸ್ಥಿತಿಯನ್ನು ಪರಿಗಣಿಸಿ ನಿರ್ಧಾರ ಕೈಗೊಂಡು, ಅದರ ವರದಿಯನ್ನು ಅಕ್ಟೋಬರ್ 30ರಂದು ನಮಗೆ ಸಲ್ಲಿಸಬೇಕು," ಎಂದು ಕಟ್ಟುನಿಟ್ಟಿನ ಸೂಚನೆ ನೀಡಿತು.

ಮುಂದೇನು?

ಹೈಕೋರ್ಟ್ ಸೂಚನೆಯಂತೆ, ಸರ್ಕಾರವು ಅಕ್ಟೋಬರ್ 28ರಂದು ಶಾಂತಿ ಸಭೆ ನಡೆಸಿ, ಚಿತ್ತಾಪುರದ ಸ್ಥಿತಿಗತಿಗಳ ಬಗ್ಗೆ ಅಕ್ಟೋಬರ್ 30ರಂದು ವರದಿ ಸಲ್ಲಿಸಬೇಕಿದೆ. ಆ ವರದಿಯನ್ನು ಆಧರಿಸಿ ನ್ಯಾಯಾಲಯವು ತನ್ನ ಅಂತಿಮ ತೀರ್ಪನ್ನು ನೀಡಲಿದೆ. ಹೀಗಾಗಿ, ಸರ್ಕಾರ ಸಲ್ಲಿಸಲಿರುವ ವರದಿ ಮತ್ತು ನ್ಯಾಯಾಲಯದ ಮುಂದಿನ ಆದೇಶದ ಬಗ್ಗೆ ತೀವ್ರ ಕುತೂಹಲ ಮೂಡಿದೆ.

ಒಂದೇ ದಿನ, ಹಲವು ಸಂಘಟನೆಗಳ ಅರ್ಜಿ

ನವೆಂಬರ್ 2 ರಂದು ಚಿತ್ತಾಪುರದಲ್ಲಿ ಮೆರವಣಿಗೆ ನಡೆಸಲು ಆರ್‌ಎಸ್‌ಎಸ್‌ ಮಾತ್ರವಲ್ಲದೆ, ಭೀಮ್ ಆರ್ಮಿ, ದಲಿತ ಪ್ಯಾಂಥರ್ಸ್, ಕುರುಬ ಸಮುದಾಯದ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರಾಜ್ಯ ಕ್ರಿಶ್ಚಿಯನ್ ಕಲ್ಯಾಣ ಸೊಸೈಟಿ ಸೇರಿದಂತೆ ಒಟ್ಟು ಆರು ಸಂಘಟನೆಗಳು ಅನುಮತಿ ಕೋರಿ ಅರ್ಜಿ ಸಲ್ಲಿಸಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಕಠಿಣ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯತೆಗೆ ಸಿಲುಕಿದೆ. ಶಾಂತಿ ಸಭೆಯ ನಂತರ ತೆಗೆದುಕೊಳ್ಳುವ ತೀರ್ಮಾನದ ಮೇಲೆ ಚಿತ್ತಾಪುರದಲ್ಲಿ ನಡೆಯಲಿರುವ ಪಥಸಂಚಲನದ ಭವಿಷ್ಯ ನಿಂತಿದೆ.  

Tags:    

Similar News