ಯತೀಂದ್ರ ಇಂತಹ ಹೇಳಿಕೆ ಕೊಡಬಾರದು; ಸಿಎಂ ಪುತ್ರನಿಗೆ ಡಿಕೆಶಿ ಆಪ್ತ ಶಾಸಕ ಟಾಂಗ್
ಕಾಂಗ್ರೆಸ್ ಪಕ್ಷವು ಜಾತ್ಯಾತೀತ ತತ್ವದಡಿ ನಡೆಯುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಇಬ್ಬರೂ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ರಂಗನಾಥ್ ಹೇಳಿದ್ದಾರೆ.
ಶಾಸಕ ರಂಗನಾಥ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಸಿಎಂ ಉತ್ತರಾಧಿಕಾರಿ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂಬಂಧಿಯೂ ಆಗಿರುವ ಕುಣಿಗಲ್ ಶಾಸಕ ರಂಗನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರು ಇಂತಹ ಹೇಳಿಕೆ ನೀಡಬಾರದು, ಈ ರೀತಿಯ ಮಾತುಗಳಿಂದ ಪಕ್ಷದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗುತ್ತದೆ. ನಾವೆಲ್ಲರೂ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಜನರ ಸಮಸ್ಯೆ ಪರಿಹರಿಸುವ ಬಗ್ಗೆ ಗಮನಹರಿಸಬೇಕು. ಇಂತಹ ಅನಗತ್ಯ ಹೇಳಿಕೆಗಳನ್ನು ನೀಡಿ ಸಣ್ಣವರಾಗಬಾರದು ಎಂದು ತಿರುಗೇಟು ನೀಡಿದ್ದಾರೆ.
"ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ನಾವು ನಮ್ಮ ಜವಾಬ್ದಾರಿ ನಿರ್ವಹಿಸಬೇಕು. ನಮ್ಮದು ಹೈಕಮಾಂಡ್ ಪಾರ್ಟಿ, ಶಿಸ್ತುಬದ್ಧ ಪಾರ್ಟಿ. ಈ ರೀತಿಯ ಹೇಳಿಕೆಗಳ ಅಗತ್ಯವಿಲ್ಲ. ಇದನ್ನು ಯತೀಂದ್ರ ಅವರು ಅರ್ಥ ಮಾಡಿಕೊಳ್ಳಬೇಕು. ಇನ್ನು ಮುಂದೆಯಾದರೂ ಈ ರೀತಿ ಮಾತನಾಡಬಾರದು" ಎಂದು ರಂಗನಾಥ್ ಸಲಹೆ ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಬೇಕು ಎಂದು ತಾವು ಈ ಹಿಂದೆ ಹೇಳಿಕೆ ನೀಡಿದ್ದರ ಕುರಿತು ಸ್ಪಷ್ಟನೆ ನೀಡಿದ ಅವರು, "ಒಂದಲ್ಲ ಒಂದು ದಿನ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿದ್ದೇನೆ. ಆದರೆ, ಅದನ್ನು ಶಾಸಕರು ಮತ್ತು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಷ್ಟೇ ಹೇಳಿದ್ದೆ" ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಜಾತ್ಯಾತೀತ ಧರ್ಮದ ಆಧಾರದಲ್ಲಿ ನಡೆಯುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಇಬ್ಬರೂ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಪ್ರತಿಪಕ್ಷವಾಗಿ ಉಳಿಯಬೇಕೆಂದು ಬಿಜೆಪಿಯವರು ಇಂತಹ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ ಎಂದೂ ಟೀಕಿಸಿದ್ದಾರೆ.