
ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ? ಸುಳಿವುಕೊಟ್ಟ ಸಿಎಂ ಪುತ್ರ ಯತೀಂದ್ರ
ಲೋಕೊಪಯೋಗಿ ಸಚಿವ ಸತೀಶ್ ಜಾರಕಿಹೊಳಿ 'ಮಾರ್ಗದರ್ಶಕ'ರಾಗಬೇಕು ಎಂದು ಎಂಎಲ್‌ಸಿ ಯತೀಂದ್ರ ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಡಿ.ಕೆ.ಶಿ ಬಣಕ್ಕೆ ಸಿದ್ದರಾಮಯ್ಯ ಬಣ ನೀಡಿರುವ ಸಂದೇಶವೂ ಆಗಿದೆ.
ಮುಖ್ಯಮಂತ್ರಿ ಬದಲಾವಣೆ ಚರ್ಚೆ ಕರ್ನಾಟಕ ರಾಜಕಾರಣದಲ್ಲಿ ಪದೇ ಪದೇ ಸದ್ದು ಮಾಡುತ್ತಲೇ ಇದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ಬುಧವಾರ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದು, ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಅವರ ಆಪ್ತ ಸತೀಶ್ ಜಾರಕಿಹೊಳಿ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಬದಲಾವಣೆ ಚರ್ಚೆ ಸಂದರ್ಭದಲ್ಲಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಗಾದಿಯ ಕನಸುಕಾಣುತ್ತಿರುವ ಸಂದರ್ಭದಲ್ಲೇ ಯತೀಂದ್ರ ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಆಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಕನಸಿಗೆ ಅಡ್ಡಗಾಲಾಗುವ ಮುನ್ಸೂಚನೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಬುಧವಾರ (ಅ. 22) ಮಾತನಾಡಿದ ಅವರು, ತಮ್ಮ ತಂದೆ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದ ಅಂತಿಮ ಹಂತದಲ್ಲಿದ್ದಾರೆ. ಸಿದ್ದರಾಮಯ್ಯ ಅವರಂತೆಯೇ ತತ್ವ, ಸಿದ್ಧಾಂತಗಳನ್ನು ಹೊಂದಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ 'ಮಾರ್ಗದರ್ಶಕ'ರಾಗಬೇಕು ಎಂದು ಹೇಳಿರುವುದು ಮಹತ್ವ ಪಡೆದಿದೆ.
ಜಾರಕಿಹೊಳಿ ಶ್ಲಾಘಿಸಿದ ಎಂಎಲ್‌ಸಿ ಯತೀಂದ್ರ
ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಉಪಸ್ಥಿತರಿದ್ದರು. ಈ ವೇಳೆ ಯತೀಂದ್ರ ಜಾರಕಿಹೊಳಿ ಅವರ ನಾಯಕತ್ವವನ್ನು ಶ್ಲಾಘಿಸಿದರು ಮತ್ತು "ನನ್ನ ತಂದೆ ತಮ್ಮ ರಾಜಕೀಯ ಜೀವನದ ಅಂತಿಮ ಹಂತದಲ್ಲಿದ್ದಾರೆ. ಈ ಹಂತದಲ್ಲಿ, ಬಲವಾದ ಸಿದ್ಧಾಂತ ಮತ್ತು ಪ್ರಗತಿಪರ ಮನಸ್ಥಿತಿಯನ್ನು ಹೊಂದಿರುವ ನಾಯಕನ ಅಗತ್ಯವಿದೆ, ಜಾರಕಿಹೊಳಿ ಅವರು ಮಾರ್ಗದರ್ಶಕ ಆಗಬಹುದು" ಎಂದು ಹೇಳಿದರು.
ಜಾರಕಿಹೊಳಿ 'ಅಪರೂಪದ ನಾಯಕ'
ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಸಿದ್ಧಾಂತವನ್ನು ಎತ್ತಿಹಿಡಿಯುವ ಸಾಮರ್ಥ್ಯ ಹೊಂದಿದ್ದಾರೆ ಮತ್ತು ಪಕ್ಷವನ್ನು ಪರಿಣಾಮಕಾರಿಯಾಗಿ ಮುನ್ನಡೆಸಬಲ್ಲರು. ಅಂತಹ "ಸೈದ್ಧಾಂತಿಕ ನಂಬಿಕೆ" ಹೊಂದಿರುವ ನಾಯಕ ಅಪರೂಪ. ಈ ಉತ್ತಮ ಕೆಲಸವನ್ನು ಸಚಿವರು ಮುಂದುವರಿಸಬೇಕೆಂದು ನಾನು ಬಯಸುತ್ತೇನೆ" ಎಂದು ಹೇಳಿದ್ದಾರೆ .
ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳು ಇಲ್ಲ ಎಂದು ನಾಯಕರೂ ಹೇಳಿಕೆ ನೀಡಿದರೂ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಎರಡು ಬಣಗಳು ಸಕ್ರಿಯವಾಗಿ ಪರಸ್ಪರ ಆರೋಪ ಮಾಡುತ್ತಿವೆ. ಸಿಎಂ ಸಿದ್ದರಾಮಯ್ಯ ಬಣದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರಮುಖ ನಾಯಕರಾಗಿದ್ದಾರೆ.
ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್
2028ರ ಚುನಾವಣೆಗೆ ತಂದೆಯವರು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಜಾತ್ಯಾತೀತವಾಗಿ ಕಾಂಗ್ರೆಸ್ ತತ್ವ ಸಿದ್ದಾಂತ ಹೊಂದಿರುವ ಹಲವು ರಾಜಕಾರಣಿಗಳಿದ್ದಾರೆ, ಅಂತವರಿಗೆ ಸತೀಶ್ ಜಾರಕಿಹೊಳಿ ಅವರು ಮಾರ್ಗದರ್ಶನ ಮಾಡಲಿ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ರಾಜಕೀಯ ಜೀವನದ ಅಂತಿಮ ಘಟ್ಟದಲ್ಲಿದ್ದಾರೆ ಎಂದರೆ ನಾಳೆಯೇ ಕೊನೆ ದಿನ ಅಂತಲ್ಲ, 2028 ಗಮನದಲ್ಲಿಟ್ಟುಕೊಂಡು ಹೇಳಿದ್ದೇನೆ, ನಾನು ರಾಜಕೀಯ ಉತ್ತರಾಧಿಕಾರಿ ಬಗ್ಗೆ ಮಾತನಾಡಿಲ್ಲ, ಆದರೆ, ಆ ರೀತಿಯ ಸೈದಾಂತಿಕ ರಾಜಕಾರಣ ಮಾಡುವವರನ್ನು ಮುನ್ನೆಡೆಸಲಿ ಎಂಬ ಉದ್ದೇಶವಿಟ್ಟುಕೊಂಡು ಹೇಳಿದ್ದೇನೆ, ನವೆಂಬರ್ ಕ್ರಾಂತಿ ಬರೀ ಊಹಾಪೋಹ ಎಂದು ಹೇಳಿದ್ದಾರೆ.
ಸದ್ಯ ನಾಯಕತ್ವದ ಬದಲಾವಣೆ ಇಲ್ಲ
ಪ್ರಸ್ತುತ, ಪಕ್ಷದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ.ಈ ರೀತಿಯ ಚರ್ಚೆ ಪಕ್ಷದಲ್ಲಿ ನಡೆದಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿರುವ ಅನೇಕ ನಾಯಕರು ಇದ್ದಾರೆ, ಆದರೆ, ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡಲಿದೆ. ಸದ್ಯಕ್ಕಂತೂ ಸಿಎಂ ಬದಲಾವಣೆ ಚರ್ಚೆ ಇಲ್ಲ, ಸಿದ್ದರಾಮಯ್ಯ ಹೊರತುಪಡಿಸಿದರೆ ಅವರ ಸ್ಥಾನ ತುಂಬುವ ಶಕ್ತಿ ಸತೀಶ್ ಜಾರಕಿಹೊಳಿ ಅವರಿಗೆ ಮಾತ್ರವಿದೆ ಎಂದು ಹೇಳಿದ್ದಾರೆ.