ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಐಪಿಎಲ್ ಪಂದ್ಯ ಆಯೋಜನೆ: ಡಿಸಿಎಂ ಭರವಸೆ
ಇದು ಕರ್ನಾಟಕ ಹಾಗೂ ಬೆಂಗಳೂರಿನ ಗೌರವದ ವಿಚಾರ. ಮುಂದಿನ ಐಪಿಎಲ್ ಪಂದ್ಯಗಳನ್ನು ಇಲ್ಲೇ ನಡೆಸುವಂತೆ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಯಾವೆಲ್ಲಾ ಪಂದ್ಯಗಳಿವೆಯೋ ಅವುಗಳಿಗೆ ಅವಕಾಶ ನೀಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣ
ಆರ್‌ಸಿಬಿ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಬಳಿಕ ಅಂತರಾಷ್ಟ್ರೀಯ ಪಂದ್ಯಗಳಿಂದ ವಂಚಿತವಾಗಿದ್ದ ಎಂ.ಚಿನ್ನಸ್ವಾಮಿ ಕ್ರೀಡಾಂಗಣವನ್ನು ಸ್ಥಳಾಂತರಿಸುವ ಮಾತುಗಳು ಬಲವಾಗಿ ಕೇಳಿ ಬರುತ್ತಿದ್ದ ಬೆನ್ನಲ್ಲೇ ಅಭಿಮಾನಿಗಳಿಗೆ ಸರ್ಕಾರ ಧೈರ್ಯ ತುಂಬಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಐಪಿಎಲ್ ಸೇರಿದಂತೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಇತ್ತೀಚೆಗೆ ನಡೆದ ಮಹಿಳಾ ವಿಶ್ವಕಪ್, ಭಾರತ-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಗಳು ಬೆಂಗಳೂರಿನಿಂದ ಕೈತಪ್ಪಿದ್ದವು. ಈ ಮಧ್ಯೆ, ಕ್ರೀಡಾಂಗಣ ಸ್ಥಳಾಂತರಿಸುವ ಮಾತುಗಳು ಕೇಳಿಬಂದಿದ್ದವು.
ಭಾನುವಾರ(ಡಿ.7) ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾತನಾಡಿದ ಅವರು, "ಇದು ಕರ್ನಾಟಕ ಹಾಗೂ ಬೆಂಗಳೂರಿನ ಗೌರವದ ವಿಚಾರ. ಮುಂದಿನ ಐಪಿಎಲ್ ಪಂದ್ಯಗಳನ್ನು ಇಲ್ಲೇ ನಡೆಸುವಂತೆ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಯಾವೆಲ್ಲಾ ಪಂದ್ಯಗಳಿವೆಯೋ ಅವುಗಳಿಗೆ ಅವಕಾಶ ನೀಡುತ್ತೇವೆ" ಎಂದು ತಿಳಿಸಿದರು.
ನಾನು ಕೆಎಸ್‌ಸಿಎ ಸದಸ್ಯ. ಚಿಕ್ಕ ವಯಸ್ಸಿನಲ್ಲಿದ್ದಾಗಲೇ, ನಾಗರಾಜ್ ಅವರು ನನಗೆ ಸದಸ್ಯತ್ವ ನೀಡಿದರು. ಅವರ ಮಗ ನನ್ನ ಸಹಪಾಠಿ. ನನಗೆ ಬ್ರಿಜೇಶ್ ಪಟೇಲ್ ಅವರಿಂದ ಅನಿಲ್ ಕುಂಬ್ಳೆ, ಪ್ರಸನ್ನ ಸೇರಿದಂತೆ ಅನೇಕರು ಬಹಳ ಪರಿಚಯ. ನನಗೆ ಬೇಕಾದವರಿಗೆ ನಾನು ಮತ ಹಾಕಿದ್ದೇನೆ ಎಂದರು.
ಅನಾಹುತ ಮರುಕಳಿಸದಂತೆ ಎಚ್ಚರ
"ನಾನು ಕ್ರಿಕೆಟ್ ಅಭಿಮಾನಿ. ಇತ್ತೀಚಿಗೆ ಆಗಿರುವ ಅನಾಹುತ ಮುಂದೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಕ್ರೀಡಾಂಗಣದ ಗೌರವ ಉಳಿಯುವಂತೆ ಮಾಡುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಜನದಟ್ಟಣೆ ನಿಭಾಯಿಸಿಕೊಂಡು ಕ್ರೀಡಾಂಗಣ ಬೆಳೆಸಲಾಗುವುದು. ಇದರ ಜೊತೆಗೆ ಪರ್ಯಾಯವಾಗಿ ದೊಡ್ಡ ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ" ಎಂದು ತಿಳಿಸಿದರು.
ಅನುಮತಿ ನಿರಾಕರಿಸಿದ್ದ ಪೊಲೀಸ್ ಇಲಾಖೆ
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದಕ್ಕೆ ಕರ್ನಾಟಕದ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ಮಹಾರಾಜ ಟ್ರೋಫಿ ಟಿ20 ಲೀಗ್ ಈ ಬಾರಿ ರಾಜಧಾನಿ ಬೆಂಗಳೂರಿನಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಸ್ಥಳಾಂತರಗೊಂಡಿತ್ತು. ಪೊಲೀಸ್ ಇಲಾಖೆಯ ಈ ಕಠಿಣ ನಿಲುವಿನ ಹಿಂದೆ ಕಳೆದ ಜೂನ್ ತಿಂಗಳಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತದ ಕರಾಳ ಘಟನೆಯಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಈ ದುರ್ಘಟನೆ ಸಂಭವಿಸಿ 11 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯ ಕುರಿತು ಆಳವಾದ ತನಿಖೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಕುನ್ಹಾ ಆಯೋಗವು, ಇತ್ತೀಚೆಗೆ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದ್ದು, ಅದರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳಲ್ಲಿ ಗಂಭೀರ ಲೋಪಗಳಿವೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಈ ವರದಿಯು ಕ್ರೀಡಾಂಗಣದ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರಿಂದ, ಯಾವುದೇ ರೀತಿಯ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಇಚ್ಛಿಸದ ಪೊಲೀಸ್ ಇಲಾಖೆಯು, ಮಹಾರಾಜ ಲೀಗ್ ಆಯೋಜನೆಗೆ ಅನುಮತಿ ನೀಡಲು ಖಡಾಖಂಡಿತವಾಗಿ ನಿರಾಕರಿಸಿತ್ತು. ಅದಾದ ನಂತರ ಹಲವು ಅಂತರಾಷ್ಟ್ರೀಯ ಪಂದ್ಯಗಳು ಸ್ಥಳಾಂತರಗೊಂಡಿದ್ದವು.
ಪಿಡಬ್ಲ್ಯೂಡಿ ಇಲಾಖೆಯಿಂದ ನೋಟಿಸ್
ಕ್ರೀಡಾಂಗಣದ ಕಟ್ಟಡದ ಸ್ಥಿರತೆ ಮತ್ತು ಪ್ರೇಕ್ಷಕರ ಸುರಕ್ಷತೆ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಪಿಡಬ್ಲ್ಯೂಡಿ ಇಲಾಖೆಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (KSCA) ಅಧಿಕೃತ ಮತ್ತು ಕಠಿಣ ಸ್ವರೂಪದ ನೊಟೀಸ್ ಜಾರಿ ಮಾಡಿತ್ತು. ಇದರ ಪರಿಣಾಮವಾಗಿ, ಈ ಸುಂದರ ಕ್ರೀಡಾಂಗಣದಲ್ಲಿ ಮುಂದಿನ ದಿನಗಳಲ್ಲಿ ನಡೆಯಬೇಕಿದ್ದ ಪಂದ್ಯಗಳ ಭವಿಷ್ಯ ಅನಿಶ್ಚಿತತೆಯ ಸುಳಿಯಲ್ಲಿ ಸಿಲುಕಿತ್ತು.