ಈರುಳ್ಳಿ ಬೆಲೆ ಕುಸಿತ: 'ಪಿಡಿಪಿಎಸ್' ಅಡಿ ಖರೀದಿಗೆ ಕೇಂದ್ರಕ್ಕೆ ಪ್ರಸ್ತಾವನೆ

ರೈತರು ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಮಾರುಕಟ್ಟೆಗೆ ತಂದಾಗ, ದರವು ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆಯಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ.

Update: 2025-10-24 10:29 GMT

ರಾಜ್ಯದಲ್ಲಿ ಈರುಳ್ಳಿ ಬೆಲೆ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ರೈತರ ಹಿತ ಕಾಪಾಡಲು ಪಿಡಿಪಿಎಸ್ (ಬೆಲೆ ಕೊರತೆ ಪಾವತಿ ಯೋಜನೆ) ಅಡಿಯಲ್ಲಿ ಈರುಳ್ಳಿ ಖರೀದಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ, ಕಟಾವಿಗೆ ಸಿದ್ಧವಾಗಿದ್ದ ಈರುಳ್ಳಿ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಇದರ ಪರಿಣಾಮವಾಗಿ, ರೈತರು ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಮಾರುಕಟ್ಟೆಗೆ ತಂದಾಗ, ದರವು ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆಯಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಈ ದಿಢೀರ್ ಬೆಲೆ ಕುಸಿತದಿಂದಾಗಿ ರೈತರು ಜಮೀನಿನಲ್ಲೇ ಈರುಳ್ಳಿಯನ್ನು ನಾಶಪಡಿಸುತ್ತಿರುವ ಘಟನೆಗಳು ವರದಿಯಾಗಿವೆ.

ಕೇಂದ್ರಕ್ಕೆ ಪ್ರಸ್ತಾವನೆ

ಈ ಹಿನ್ನೆಲೆಯಲ್ಲಿ, ರಾಜ್ಯದ ಈರುಳ್ಳಿ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲು ಪಿಡಿಪಿಎಸ್ ಯೋಜನೆಯಡಿ ಈರುಳ್ಳಿ ಖರೀದಿಗೆ ಅನುಮತಿ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಸಭೆಯಲ್ಲಿ, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (MIS) ಅಡಿಯಲ್ಲಿ ಈರುಳ್ಳಿ ಖರೀದಿಸಲು ತೋಟಗಾರಿಕೆ ಇಲಾಖೆಯು ಶಿಫಾರಸು ಮಾಡಿತ್ತು. ಆದರೆ, ಸಭೆಯಲ್ಲಿ ನಡೆದ ಚರ್ಚೆಯ ನಂತರ, ರೈತರಿಗೆ ನೇರವಾಗಿ ಪ್ರಯೋಜನ ನೀಡುವ 'ಪಿಡಿಪಿಎಸ್' ಯೋಜನೆಯೇ ಹೆಚ್ಚು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ರಾಜ್ಯದ ಈರುಳ್ಳಿ ಉತ್ಪಾದನೆ

ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮುಗಳೆರಡನ್ನೂ ಸೇರಿ ಒಟ್ಟು 2.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿಯನ್ನು ಬೆಳೆಯಲಾಗುತ್ತದೆ. ವಾರ್ಷಿಕವಾಗಿ ಸುಮಾರು 27.00 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಉತ್ಪಾದನೆಯಾಗುತ್ತದೆ. ಪ್ರಮುಖವಾಗಿ ವಿಜಯಪುರ, ಚಿತ್ರದುರ್ಗ, ಬಾಗಲಕೋಟೆ, ವಿಜಯನಗರ, ಬೆಳಗಾವಿ, ಧಾರವಾಡ, ಕೊಪ್ಪಳ ಮತ್ತು ಗದಗ ಜಿಲ್ಲೆಗಳು ಈರುಳ್ಳಿ ಬೆಳೆಯಲ್ಲಿ ಮುಂಚೂಣಿಯಲ್ಲಿವೆ. 

Tags:    

Similar News