ನವೆಂಬರ್ ಕ್ರಾಂತಿ ಜನವರಿಗೆ ಶಿಫ್ಟ್? ಡಿಕೆಶಿ ಸಿಎಂ ಪಟ್ಟಕ್ಕೆ ದಿನಾಂಕವನ್ನೇ ಘೋಷಿಸಿದ 'ರಾಮನಗರ'ದ ಆಪ್ತ!

ರಾಮನಗರ ಶಾಸಕ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪರಮಾಪ್ತ ಎಂದೇ ಗುರುತಿಸಿಕೊಂಡಿರುವ ಇಕ್ಬಾಲ್ ಹುಸೇನ್ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

Update: 2025-12-08 10:29 GMT
Click the Play button to listen to article

ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಬಹುಚರ್ಚಿತವಾಗಿದ್ದ 'ನವೆಂಬರ್ ಕ್ರಾಂತಿ'ಯ ಗುಸುಗುಸು ತಣ್ಣಗಾಯಿತು ಎಂದು ಭಾವಿಸುವಷ್ಟರಲ್ಲೇ, ಅದು ಈಗ 'ಜನವರಿ ಕ್ರಾಂತಿ'ಯ ರೂಪ ಪಡೆದುಕೊಂಡಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಇತ್ತೀಚಿನ 'ಬ್ರೇಕ್ ಫಾಸ್ಟ್ ಮೀಟಿಂಗ್' ಮೂಲಕ ನಾಯಕತ್ವ ಬದಲಾವಣೆ ಚರ್ಚೆಗೆ ತಾತ್ಕಾಲಿಕ ವಿರಾಮ ಬಿದ್ದಿದೆ ಎನ್ನಲಾಗಿತ್ತು. ಆದರೆ, ಈ ವಿರಾಮವನ್ನು ಭೇದಿಸಿರುವ ಡಿಕೆಶಿ ಆಪ್ತ ಬಳಗ, ಇದೀಗ ನೇರವಾಗಿ ಮುಖ್ಯಮಂತ್ರಿ ಬದಲಾವಣೆಯ ಮುಹೂರ್ತವನ್ನೇ ಘೋಷಿಸುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

Full View

ಜನವರಿ 6 ಅಥವಾ 9ಕ್ಕೆ ಡಿಕೆಶಿ ಸಿಎಂ: ಇಕ್ಬಾಲ್ ಹುಸೇನ್ ಭವಿಷ್ಯ

ರಾಮನಗರ ಶಾಸಕ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪರಮಾಪ್ತ ಎಂದೇ ಗುರುತಿಸಿಕೊಂಡಿರುವ ಇಕ್ಬಾಲ್ ಹುಸೇನ್ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. "ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದು ನಿಶ್ಚಿತ. ಈಗ ನಾನೇನು ಹೆಚ್ಚು ಮಾತನಾಡುವುದಿಲ್ಲ. ಆದರೆ ಜನವರಿ 6 ಅಥವಾ 8ಕ್ಕೆ ಡಿ.ಕೆ.ಶಿ ಅವರು ಸಿಎಂ ಆಗುತ್ತಾರೆ, ಆಗ ನೋಡಿ," ಎಂದು ಹೇಳಿಕೆ ನೀಡಿದ್ದಾರೆ.

ಅಷ್ಟೇ ಅಲ್ಲದೆ, ತಮ್ಮ ಹೇಳಿಕೆಗೆ ಬದ್ಧರಾಗಿರುವಂತೆ, "ನಾನು ಯಾರಿಗೂ ಹೆದರುವುದಿಲ್ಲ, ಭಯಪಡುವವನೂ ಅಲ್ಲ," ಎಂದು ಹೇಳುವ ಮೂಲಕ, ಇದು ಕೇವಲ ಊಹಾಪೋಹವಲ್ಲ, ಬದಲಾಗಿ ಆಂತರಿಕವಾಗಿ ನಡೆದಿರುವ ಪ್ರಬಲ ನಿರ್ಧಾರದ ಸುಳಿವು ಎಂಬರ್ಥದಲ್ಲಿ ಮಾತನಾಡಿದ್ದಾರೆ.

Full View

ಜನವರಿಯವರೆಗೂ ಕಾಯಿರಿ ಎಂದ ಶಿವಗಂಗಾ ಬಸವರಾಜು

ಇಕ್ಬಾಲ್ ಹುಸೇನ್ ಅವರ ಹೇಳಿಕೆಗೆ ಪುಷ್ಠಿ ನೀಡುವಂತೆ, ಡಿಕೆಶಿ ಅವರ ಮತ್ತೋರ್ವ ಆಪ್ತ ಹಾಗೂ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು ಕೂಡ ಜನವರಿ ಗಡುವನ್ನು ಪ್ರಸ್ತಾಪಿಸಿದ್ದಾರೆ. "ನಾಯಕತ್ವ ಬದಲಾವಣೆ ವಿಚಾರವಾಗಿ ನಾನು ಈಗಲೇ ಏನನ್ನೂ ಹೇಳುವುದಿಲ್ಲ. ಜನವರಿ ನಂತರ ಮಾತನಾಡುತ್ತೇನೆ, ಅಲ್ಲಿಯವರೆಗೂ ಕಾಯಿರಿ," ಎಂದು ಹೇಳುವ ಮೂಲಕ ಜನವರಿ ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳು ಕಾದಿವೆ ಎಂಬುದನ್ನು ಪರೋಕ್ಷವಾಗಿ ದೃಢಪಡಿಸಿದ್ದಾರೆ.

ಬ್ರೇಕ್ ಫಾಸ್ಟ್ ಮೀಟಿಂಗ್ ತಂತ್ರ ವಿಫಲ?

ಬೆಳಗಾವಿ ಅಧಿವೇಶನಕ್ಕೂ ಮುನ್ನ ಸಿಎಂ ಮತ್ತು ಡಿಸಿಎಂ ನಡುವೆ ನಡೆದಿದ್ದ ಬ್ರೇಕ್ ಫಾಸ್ಟ್ ಮೀಟಿಂಗ್, ಬಂಡಾಯದ ದನಿಗಳನ್ನು ಅಡಗಿಸುವ ತಂತ್ರ ಎಂದು ವಿಶ್ಲೇಷಿಸಲಾಗಿತ್ತು. ನಾಯಕತ್ವ ಬದಲಾವಣೆಯ ಚರ್ಚೆಗೆ ಆ ಮೂಲಕ ಬ್ರೇಕ್ ಹಾಕಲಾಗಿತ್ತು. ಆದರೆ, ಆಪ್ತ ಶಾಸಕರುಗಳಾದ ಇಕ್ಬಾಲ್ ಹುಸೇನ್ ಮತ್ತು ಶಿವಗಂಗಾ ಬಸವರಾಜು ಅವರು ಅಧಿವೇಶನದ ಸಂದರ್ಭದಲ್ಲೇ ನೀಡಿರುವ ಈ ಹೇಳಿಕೆಗಳು, ಆ ಕೃತಕ ವಿರಾಮಕ್ಕೆ ತೆರೆ ಎಳೆದಂತಿದೆ. ನವೆಂಬರ್‌ನಲ್ಲಿ ನಡೆಯಬೇಕಿದ್ದ ನಾಯಕತ್ವ ಬದಲಾವಣೆಯ ಪ್ರಕ್ರಿಯೆ (ನವೆಂಬರ್ ಕ್ರಾಂತಿ) ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿದ್ದು, ಅದು ಹೊಸ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂಬ ಸ್ಪಷ್ಟ ಸಂದೇಶವನ್ನು ಡಿಕೆಶಿ ಪಾಳೆಯ ರವಾನಿಸಿದಂತಿದೆ.

Tags:    

Similar News