ʼಮಂಡ್ಯಕ್ಕೆ ನನ್ನ ಕೊಡುಗೆ ಹೇಳುತ್ತೇನೆ; ನಿಮ್ಮ ಕೊಡುಗೆ ಪಟ್ಟಿ ಕೊಡಿʼ : ಸಿಎಂಗೆ ಎಚ್‌ಡಿಕೆ ಸವಾಲು

ಸಿಎಂ ಆಗಿದ್ದಾಗ ಮಂಡ್ಯದ ರೈತರ 900 ಕೋಟಿ ರೂ. ಸಾಲ ಮನ್ನಾ ಮಾಡಿ ರೈತರ ಜೀವ ಉಳಿಸಿದ್ದೇನೆ. ಕಳೆದ ಐದು ವರ್ಷಗಳ ಆಡಳಿತದಲ್ಲಿ ಮಂಡ್ಯವೊಂದರಲ್ಲೇ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Update: 2025-12-08 08:47 GMT
Click the Play button to listen to article

"ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು?" ಎಂದು ಪ್ರಶ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

"ನಾನು ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯ ಜಿಲ್ಲೆಯ ರೈತರ 900 ಕೋಟಿ ರೂ. ಸಾಲಮನ್ನಾ ಮಾಡುವ ಮೂಲಕ ರೈತರ ಜೀವ ಉಳಿಸಿದ್ದೇನೆ. ಆದರೆ, ನಿಮ್ಮ ಕಳೆದ ಐದು ವರ್ಷಗಳ ಆಡಳಿತದಲ್ಲಿ ಮಂಡ್ಯವೊಂದರಲ್ಲೇ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು ಎಂದು ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೂ ಹರಿಹಾಯ್ದರು.

"ನಾನು ಏನು ಕೊಟ್ಟಿದ್ದೇನೆಯೋ ಅದನ್ನು ಪಟ್ಟಿ ಮಾಡಿ ಹೇಳುತ್ತೇನೆ. ಆದರೆ ನೀವು ಐದು ವರ್ಷ ಸಿಎಂ ಆಗಿದ್ದಾಗ ಮತ್ತು ಈಗೇನು ಕೊಟ್ಟಿದ್ದೀರಿ ಎಂಬುದನ್ನು ಮೊದಲು ಹೇಳಿ. ರೈತರು ಸಂಕಷ್ಟದಲ್ಲಿದ್ದಾಗ ನಾನು ಸಾಲ ಮನ್ನಾ ಮಾಡಿದೆ. ಆದರೆ ನಿಮ್ಮ ಅವಧಿಯಲ್ಲಿ ರೈತರು ಸರಣಿ ಆತ್ಮಹತ್ಯೆ ಮಾಡಿಕೊಂಡರು. ಇದಕ್ಕಿಂತ ಸಾಕ್ಷಿ ಬೇಕೇ?" ಸಿದ್ದರಾಮಯ್ಯ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. 

ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಮತ್ತು ರೈತರ ಸಂಕಷ್ಟದ ಬಗ್ಗೆ ಪ್ರಸ್ತಾಪಿಸಿದ ಅವರು, "ಜನರು ಮಳೆ, ಪ್ರವಾಹದಿಂದ ಕಣ್ಣೀರು ಹಾಕುತ್ತಿದ್ದರೆ ಸರ್ಕಾರ ಮೋಜು-ಮಸ್ತಿಯಲ್ಲಿ ತೊಡಗಿದೆ. ಕಲ್ಯಾಣ ಕರ್ನಾಟಕದಲ್ಲಿ ತೊಗರಿ ದರ ಕುಸಿದಿದ್ದರೂ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ನಾಲ್ಕು ತಿಂಗಳ ನಂತರ ಇವರಿಗೆ ಜ್ಞಾನೋದಯವಾಗಿದ್ದು, ಈಗ ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ," ಎಂದು ಟೀಕಿಸಿದರು.

'ನೀರಿನ ಹೆಜ್ಜೆ' ಪುಸ್ತಕ ಕಟ್ ಅಂಡ್ ಪೇಸ್ಟ್!

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 'ನೀರಿನ ಹೆಜ್ಜೆ' ಪುಸ್ತಕದ ಬಗ್ಗೆ ವ್ಯಂಗ್ಯವಾಡಿದ ಕುಮಾರಸ್ವಾಮಿ, "ಅದೊಂದು ಕೇವಲ 'ಕಟ್ ಅಂಡ್ ಪೇಸ್ಟ್' ಪುಸ್ತಕ. ಬೇರೆ ಪುಸ್ತಕಗಳಲ್ಲಿನ ಅಂಶಗಳನ್ನೇ ಕತ್ತರಿಸಿ ಇಲ್ಲಿ ಅಂಟಿಸಲಾಗಿದೆ. ಅದರಲ್ಲಿರುವುದು ಅವರ ಹೆಜ್ಜೆಗಳಲ್ಲ, ಬೇರೆಯವರ ಹೆಜ್ಜೆಗಳನ್ನು ತಮ್ಮದೆಂದು ತೋರಿಸಿಕೊಳ್ಳುವ ಕಸರತ್ತು," ಎಂದು ಲೇವಡಿ ಮಾಡಿದರು.

ಮೇಕೆದಾಟು ಮತ್ತು ಮೈತ್ರಿ

ಮೇಕೆದಾಟು ಯೋಜನೆ ವಿಚಾರವಾಗಿ ಮಾತನಾಡಿದ ಅವರು, "ನಮ್ಮ ನೀರು-ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದರು. ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿರುವ ಡಿಎಂಕೆ ಇವರ ರಾಜಕೀಯ ಪಾರ್ಟನರ್‌ ಆಗಿದ್ದರೂ, ಅವರೊಂದಿಗೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಲು ಇವರಿಗೆ ಧೈರ್ಯವಿಲ್ಲವೇ? ಸುಪ್ರೀಂ ಕೋರ್ಟ್ ಸೂಚನೆಯಂತೆ ಸಿಡಬ್ಲ್ಯೂಸಿ ಮುಂದೆ ಸಮರ್ಥ ವಾದ ಮಂಡಿಸುವ ಬದಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ," ಎಂದು ಆರೋಪಿಸಿದರು.

ಮೇಕೆದಾಟು ಪ್ರದೇಶದಲ್ಲಿ ಸುಮಾರು 12 ಸಾವಿರ ಎಕರೆಯಷ್ಟು ಅರಣ್ಯ ಮುಳಗಡೆ ಆಗುತ್ತದೆ. ವನ್ಯ ಸಂಪತ್ತು ನಾಶವಾಗುತ್ತದೆ ಎಂದು ಹೇಳುತ್ತಿದ್ದಾರೆ. ಬರೀ ಕೇಂದ್ರ ಸರಕಾರದ ಅಧಿಕಾರ ಮಾತ್ರವಲ್ಲ, ರಾಜ್ಯ ಸರ್ಕಾರಕ್ಕೂ ಹಕ್ಕು, ಜವಾಬ್ದಾರಿ ಇರುತ್ತದೆ. ಪಲಾಯನ ಮಾಡುವ ಅಗತ್ಯವಿಲ್ಲ, ಇನ್ನೆಷ್ಟು ದಿನ ನುಣುಚಿಕೊಳ್ಳುತ್ತೀರಿ? ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಮೀರಿದೆ. ಅದರಲ್ಲಿ 50 ವರ್ಷಕಾಲ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸಿದೆ. ಆಗ ಮೇಕೆದಾಟು ಬಗ್ಗೆ ಏನು ಮಾಡಿದಿರಿ ಎಂದು ಜನರಿಗೆ ಹೇಳಬೇಕಲ್ಲವೇ? ಎಂದು ರಾಜ್ಯ ಸರ್ಕಾರವನ್ನು ಕೇಂದ್ರ ಸಚಿವರು ಪ್ರಶ್ನಿಸಿದರು.

ಮಾತೆತ್ತಿದರೆ ರಾಜ್ಯಕ್ಕೆ ಕೇಂದ್ರ ಸರಕಾರ ಸಹಕಾರ ನೀಡುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಹಾಗಾದರೆ ರಾಜ್ಯ ಸರ್ಕಾರ ಮಾಡುತ್ತಿರುವುದೇನು?  ಕೇಂದ್ರ ಸಚಿವನಾದ ಕೂಡಲೇ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಕುದುರೆಮುಖ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ದೇವದಾರಿ ಗಣಿ ಯೋಜನೆಗೆ ಹಣಕಾಸು ಖಾತರಿ ನೀಡುವ ಕಡತಕ್ಕೆ ಸಹಿ ಹಾಕಿದೆ. ಮರು ದಿನದಿಂದಲೇ ಅದಕ್ಕೆ ಅಡ್ಡಿ ಉಂಟು ಮಾಡುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಯಿತು.

ಈಗ ಅವರ ಪಕ್ಷದ ಜನಪ್ರತಿನಿಧಿ ಒಬ್ಬರು ಬಳ್ಳಾರಿಯಲ್ಲಿ ದಿನನಿತ್ಯ ಪ್ರತಿಭಟನೆ ಮಾಡಿಸುವ ಮೂಲಕ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ತಮಗೆ ವೈಯಕ್ತಿಕವಾಗಿ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (ಎನ್ಎಂಡಿಸಿ) ದಿಂದ ಲಾಭವಾಗುವ ಕೆಲಸ ಆಗಲಿಲ್ಲ ಎಂದು ಯೋಜನೆ ಅಡ್ಡಿಪಡಿಸುತ್ತಿದ್ದಾರೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಸಾಧ್ಯವೇ? ಸಹಕಾರ ಪಡೆಯುವುದು, ಕೊಡುವುದು ಎಂದರೆ ಹೀಗೇನಾ? ಎಂದು ಸಚಿವ ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದ್ದಾರೆ. 

Tags:    

Similar News