ಕೃಷ್ಣಾ ಮೇಲ್ದಂಡೆ ಯೋಜನೆ: ಪರಿಹಾರಕ್ಕಾಗಿ ರೈತರು ಕೋರ್ಟ್‌ಗೆ ಹೋಗದಂತೆ ಸಿಎಂ ಸಲಹೆ

ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಈ ಹಿಂದೆ ಬೆಳಗಾವಿಯಲ್ಲಿ ರೈತ ಹೋರಾಟಗಾರರೊಂದಿಗೆ ಸಭೆ ನಡೆಸಲಾಗಿತ್ತು. ಅಲ್ಲಿ ಎಲ್ಲರೂ ಒಪ್ಪಿಗೆ ಪ್ರಶಸ್ತಿ ನೀಡುವಂತೆ ಕೋರಿದ್ದ ಹಿನ್ನೆಲೆಯಲ್ಲಿ ಸರ್ಕಾರವೂ ಅದನ್ನು ಒಪ್ಪಿಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.;

Update: 2025-09-06 11:29 GMT

ಆಲಮಟ್ಟಿ ಅಣೆಕಟ್ಟೆಗೆ ಸಿಎಂ ಸಿದ್ದರಾಮಯ್ಯ ಹಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಬಾಗಿನ ಅರ್ಪಿಸಿದರು.

Click the Play button to listen to article

ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತಕ್ಕೆ ಸಂಬಂಧಿಸಿದಂತೆ, ಮುಂದಿನ ವಾರದೊಳಗೆ ಸಭೆ ಕರೆದು ಭೂ ಪರಿಹಾರಕ್ಕೆ ದರ ನಿಗದಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. "ರೈತರು ಯಾರೂ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಬಾರದು, ಇದರಿಂದ ಯೋಜನೆ ವಿಳಂಬವಾಗುತ್ತದೆ," ಎಂದು ಅವರು ರೈತರಲ್ಲಿ ಮನವಿ ಮಾಡಿದರು.

ಶನಿವಾರ ಆಲಮಟ್ಟಿಯ ಲಾಲ್ ಬಹುದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಕೃಷ್ಣಾ ನದಿಗೆ ಗಂಗಾಪೂಜೆ ಮತ್ತು ಬಾಗಿನ ಅರ್ಪಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಭೂ ಪರಿಹಾರ ಇತ್ಯರ್ಥಕ್ಕೆ ಸರ್ಕಾರದ ಬದ್ಧತೆ

ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಈ ಹಿಂದೆ ಬೆಳಗಾವಿಯಲ್ಲಿ ರೈತ ಹೋರಾಟಗಾರರೊಂದಿಗೆ ಸಭೆ ನಡೆಸಲಾಗಿತ್ತು. ಅಲ್ಲಿ ಎಲ್ಲರೂ ಒಪ್ಪಿಗೆ ಪ್ರಶಸ್ತಿ ನೀಡುವಂತೆ ಕೋರಿದ್ದ ಹಿನ್ನೆಲೆಯಲ್ಲಿ ಸರ್ಕಾರವೂ ಅದನ್ನು ಒಪ್ಪಿಕೊಂಡಿದೆ. ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಭಾಗದ ರೈತರು ಮತ್ತು ಶಾಸಕರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದು, ಒಪ್ಪಿಗೆ ಆದೇಶ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. "ಎಲ್ಲರ ಒಪ್ಪಿಗೆಯ ಮೇರೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಮತ್ತು ಮುಂದಿನ ವಾರದೊಳಗೆ ಈ ವಿಚಾರವನ್ನು ಇತ್ಯರ್ಥಪಡಿಸಲಾಗುವುದು," ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಗೆಜೆಟ್ ಅಧಿಸೂಚನೆ ಮತ್ತು ನೀರಾವರಿ ಯೋಜನೆ

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದಲ್ಲಿ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.6 ಮೀಟರ್‌ನಿಂದ 524.25 ಮೀಟರ್‌ಗೆ ಏರಿಸುವುದರಿಂದ, ಹೆಚ್ಚುವರಿಯಾಗಿ 130 ಟಿಎಂಸಿ ನೀರನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಇದರಿಂದ ಒಟ್ಟು 173 ಟಿಎಂಸಿ ನೀರನ್ನು ಬಳಸಿಕೊಂಡು 6.6 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದು. "ಈ ಹಂತದ ಬಗ್ಗೆ ತೀರ್ಮಾನವಾಗಿದ್ದರೂ, ಕೇಂದ್ರದಿಂದ ಗೆಜೆಟ್ ಅಧಿಸೂಚನೆ ಹೊರಬಿದ್ದಿಲ್ಲ. ಅಧಿಸೂಚನೆಯಾದರೆ ನೀರಾವರಿ ಹಾಗೂ ಅಣೆಕಟ್ಟು ಎತ್ತರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ," ಎಂದು ಅವರು ತಿಳಿಸಿದರು. ಈ ವಿಚಾರವಾಗಿ ಕೇಂದ್ರ ಸಚಿವರು ಮತ್ತು ಪ್ರಧಾನ ಮಂತ್ರಿಗಳನ್ನು ತಾವು ಮೂರು ಬಾರಿ ಹಾಗೂ ಉಪಮುಖ್ಯಮಂತ್ರಿಗಳು ಐದು ಬಾರಿ ಭೇಟಿಯಾಗಿ ಒತ್ತಾಯಿಸಿದ್ದಾರೆ ಎಂದು ಹೇಳಿದರು.

ದಸರಾ ಉದ್ಘಾಟನೆ ಮತ್ತು ರಾಜಕೀಯ ವಿರೋಧ

ನಾಡಹಬ್ಬ ದಸರಾವನ್ನು ಸಾಹಿತಿ ಬಾನು ಮುಷ್ತಾಕ್ ಅವರಿಂದ ಉದ್ಘಾಟನೆ ಮಾಡುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, "ಈ ವಿಷಯವನ್ನು ನ್ಯಾಯಾಲಯವೇ ತೀರ್ಮಾನಿಸಲಿ. ಈ ಹಿಂದೆ ಸಾಹಿತಿ ನಿಸ್ಸಾರ್ ಅಹ್ಮದ್ ಅವರು ಉದ್ಘಾಟಿಸಿದ್ದಾಗ ಯಾರೂ ವಿರೋಧಿಸಿರಲಿಲ್ಲ. ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ಇದನ್ನು ವಿರೋಧಿಸುತ್ತಿದ್ದು, ಸರ್ಕಾರ ರಾಜಕೀಯವಾಗಿಯೇ ಪ್ರತ್ಯುತ್ತರ ನೀಡಲಿದೆ. ಬಾನು ಮುಷ್ತಾಕ್ ಕನ್ನಡಾಂಬೆಗೆ ಅವಮಾನ ಮಾಡಿದ್ದಾರೆ ಎನ್ನಲು ಯಾವುದೇ ಪುರಾವೆಗಳಿಲ್ಲ. ಅವರ ಕನ್ನಡ ಕೃತಿಯ ಅನುವಾದಕ್ಕೆ ಬುಕರ್ ಪ್ರಶಸ್ತಿ ಬಂದಿದೆ," ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಹಂತಹಂತವಾಗಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಗುರಿ ಹೊಂದಲಾಗಿದೆ. 2025-26ರ ಬಜೆಟ್‌ನಲ್ಲಿ ವಿಜಯಪುರದಲ್ಲಿಯೂ ಕಾಲೇಜು ಸ್ಥಾಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಇವಿಎಂಗಳಲ್ಲಿನ ಗೊಂದಲ ಮತ್ತು ತಕರಾರುಗಳನ್ನು ತಪ್ಪಿಸಲು, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸುವಂತೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಿಎಂ ಹೇಳಿದರು. 

ಮಲಪ್ರಭಾ ಮತ್ತು ಡೋಣಿ ನದಿಗಳ ಪ್ರವಾಹದಿಂದ ರೈತರಿಗೆ ಆಗುತ್ತಿರುವ ಹಾನಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

Tags:    

Similar News