Raising the height of Almatti dam is our right, BJP MP meets Union Minister
x

ರಾಜ್ಯ ಬಿಜೆಪಿ ಸಂಸದರ ನಿಯೋಗ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌. ಪಾಟೀಲ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. 

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವುದು ನಮ್ಮ ಹಕ್ಕು, ಬಿಜೆಪಿ ಸಂಸದರಿಂದ ಕೇಂದ್ರ ಸಚಿವರ ಭೇಟಿ

ಕೇಂದ್ರ ಹಾಗೂ ಮೂರು ರಾಜ್ಯಗಳ ತಂಡದಿಂದ ಜಂಟಿ ಸಮೀಕ್ಷೆ ಮಾಡಿ, ಹೈಡಾಲಜಿಕಲ್ ಸ್ಟಡಿ ಮಾಡಿ ಡ್ಯಾಮ್‌ನಿಂದ ಪ್ರವಾಹ ಉಂಟಾಗುವುದಿಲ್ಲ ಎಂಬ ವರದಿ ನೀಡಿದ್ದರು ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.


ಕೃಷ್ಣಾ ಮೇಲ್ಮಂಡೆ ಯೋಜನೆ 2ನೇ ಹಂತದಲ್ಲಿ ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್ ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರ ಅನವಶ್ಯಕ ಕ್ಯಾತೆ ತೆಗೆಯುತ್ತಿರುವುದು ಖಂಡನೀಯ. ಕೃಷ್ಣಾ ನ್ಯಾಯಾಧೀಕರಣದ ಆದೇಶದಂತೆ ಅಣೆಕಟ್ಟು ಎತ್ತರ ಹೆಚ್ಚಳ ಮಾಡುವುದು ಕರ್ನಾಟಕದ ಹಕ್ಕು ಎಂದು ರಾಜ್ಯದ ಬಿಜೆಪಿ ಸಂಸದರ ನಿಯೋಗ ಕೇಂದ್ರ ಜಲ ಶಕ್ತಿ ಸಚಿವ ಸಿ.ಆ‌ರ್. ಪಾಟೀಲ ಅವರಿಗೆ ಮನವರಿಕೆ ಮಾಡಿಕೊಟ್ಟಿದೆ.

ಗುರುವಾರ ನವದೆಹಲಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾಧ್ಯಮಗಳೊಂದಿಗೆ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಬಿಜೆಪಿ ಸಂಸದರ ನಿಯೋಗ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ಹಾಗೂ ವಿ.ಸೋಮಣ್ಣರನ್ನು ಭೇಟಿ ಮಾಡಿ, ಆಲಮಟ್ಟಿ ಆಣೆಕಟ್ಟೆ ಎತ್ತರ ಹೆಚ್ಚಳ ಮಾಡಲು ಮಹಾರಾಷ್ಟ್ರ ಕ್ಯಾತೆ ತೆಗೆಯುತ್ತಿರುವುದು ಖಂಡನೀಯ ಎಂದು ತಿಳಿಸಿದ್ದೇವೆ ಎಂದರು.

ಕೃಷ್ಣಾ ನ್ಯಾಯಾಧೀಕರಣ 2ರಲ್ಲಿ ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀಟರ್‌ಗೆ ಹೆಚ್ಚಳ ಮಾಡಲು ಒಪ್ಪಿಗೆ ಕೊಟ್ಟಿದೆ. ಇದಕ್ಕೂ ಪೂರ್ವದಲ್ಲಿ ಕೇಂದ್ರ ಹಾಗೂ ಮೂರು ರಾಜ್ಯಗಳ ತಂಡದಿಂದ ಜಂಟಿ ಸಮೀಕ್ಷೆ ಮಾಡಿ, ಹೈಡಾಲಜಿಕಲ್ ಸ್ಟಡಿ ಮಾಡಿ ಅಣೆಕಟ್ಟಿನಿಂದ ಪ್ರವಾಹ ಉಂಟಾಗುವುದಿಲ್ಲ ಎಂದು ಹೇಳಿದ್ದಾರೆ. 2005 ರಲ್ಲಿ ಪ್ರವಾಹ ಆದಾಗ ಕೇಂದ್ರ ಜಲ ಆಯೋಗವೂ ಕೂಡ ಸಾಂಗ್ಲಿ ಮತ್ತು ಕೊಲ್ಲಾಪುರದಲ್ಲಿ ಅಣೆಕಟ್ಟಿನಿಂದ ಪ್ರವಾಹ ಆಗುವುದಿಲ್ಲ ಎಂದು ಹೇಳಿದೆ. ಹೀಗಾಗಿ ಮಹಾರಾಷ್ಟ್ರ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ಮಾಡಲು ಕ್ಯಾತೆ ತೆಗೆದಿರುವುದು ಸರಿಯಲ್ಲ ಮತ್ತು ದುರುದ್ದೇಶದಿಂದ ಕೂಡಿದೆ ಎಂದು ತಿಳಿಸಿದರು.

ನ್ಯಾಯಮಂಡಳಿ ಆದೇಶದಂತೆ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ಮಾಡುವುದು ನಮ್ಮ ಹಕ್ಕು. ನಮ್ಮ ಹಕ್ಕನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿ ಕೊಟ್ಟಿದ್ದೇವೆ. ಗೆಜೆಟ್ ಅಧಿಸೂಚನೆ ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಮೀರಿ ಏನೂ ಮಾಡುವುದಿಲ್ಲ ಎಂದು ಸಕಾರಾತ್ಮಕವಾಗಿ ತಿಳಿಸಿದ್ದಾರೆ. ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಆದಷ್ಟು ಬೇಗ ವಿಚಾರಣೆಗೆ ಬರುವಂತೆ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಮಾಡಿಸಲು ತಮ್ಮ ಎಲ್ಲಾ ಪ್ರಯತ್ನ ಮಾಡಬೇಕು ಎಂದರು.

ಅಂತಾರಾಜ್ಯ ಜಲ ವಿವಾದ ಕಾಯ್ದೆ ಸಷ್ಟವಾಗಿದೆ. ಕಾಯ್ದೆ 3 ಪ್ರಕಾರ ದೂರು ಕೊಟ್ಟ ಮೇಲೆ ಕೇಂದ್ರ ಸರ್ಕಾರ ನ್ಯಾಯ ಮಂಡಳಿ ರಚನೆ ಮಾಡಿ, ನ್ಯಾಯ ಮಂಡಳಿ ಎರಡೂ ಕಡೆ ವಿಚಾರಣೆ ನಡೆಸಿ ಆದೇಶ ಹೊರಡಿಸಿದರೆ ಅದು ಸುಪ್ರೀಂ ಕೋರ್ಟ್ ಆದೇಶದಂತೆ. ಉದಾಹರಣೆಗೆ ಕಾವೇರಿ ವಿಚಾರದಲ್ಲಿ ಸುಮಾರು ಹನ್ನೆರಡು ವರ್ಷಗಳ ನಂತರ ಸುಪ್ರೀಂ ಕೋರ್ಟ್ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಹೇಳಿತ್ತು. ಸಂವಿಧಾನದಲ್ಲಿ ಸುಪ್ರೀಂ ಕೋರ್ಟ್‌ಗೆ ಕೆಲವು ಅಧಿಕಾರವಿದೆ. ಅದನ್ನು ಕೋರ್ಟ್ ಬಳಕೆ ಮಾಡುತ್ತದೆ ಎಂದರು.


Read More
Next Story