Law and Order | ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿದೆಯೇ?
ಕಾನೂನು ಸುವ್ಯವಸ್ಥೆ ಸರ್ಕಾರದ ಕೈ ಜಾರಿ ಹೋಗುತ್ತಿದೆ ಎಂದು ಭಾಸವಾಗುವುದಕ್ಕೆ ಪ್ರಮುಖ ಕಾರಣ ರಾಜ್ಯಾದ್ಯಂತ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಘಟಿಸಿದ ಅಪರಾಧ ಘಟನೆಗಳೇ ಸಾಕ್ಷಿ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಅಂಕಿ ಅಂಶಗಳ ಪ್ರಕಾರ ಕೇವಲ ನಾಲ್ಕೇ ತಿಂಗಳಲ್ಲಿ ಸುಮಾರು 430 ಕೊಲೆಗಳು ಹಾಗೂ 198 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.
ರಾಜ್ಯದ ವಿವಿಧ ಕಡೆಗಳಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳು ಹೆಚ್ಚುತ್ತಿರುವುದು ಕಾನೂನು ಸುವ್ಯವಸ್ಥೆಯ ಹಳಿ ತಪ್ಪಿದೆಯೋ ಎಂಬ ಆತಂಕಕ್ಕೆ ಕಾರಣವಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯ ಅವಳಿ ಕೊಲೆಗಳಿಂದ ನಾಡಿನಾದ್ಯಂತ ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ಮತ್ತು ಪೊಲೀಸ್ ವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಒಂದೇ ತಿಂಗಳಲ್ಲಿ ಇಬ್ಬರು ಹದಿಹರೆಯದ ಕಾಲೇಜು ಯುವತಿಯರು ಹತ್ಯೆಗೀಡಾಗಿರುವುದು ಹುಬ್ಬಳ್ಳಿ ಮಾತ್ರವಲ್ಲದೆ ರಾಜ್ಯಾದ್ಯತ ಆತಂಕಕ್ಕೆ ಕಾರಣವಾಗಿದೆ. ಇವು ಕೇವಲ ಉದಾಹರಣೆಗಳಷ್ಟೇ!
ಇದೇ ರೀತಿಯ ಜನಸಾಮಾನ್ಯರು ಅಂಜುವಂತಹ ಮತ್ತು ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತಹ ಅಪರಾಧ ಪ್ರಕರಣಗಳು ದಿನನಿತ್ಯ ರಾಜ್ಯಾದ್ಯಂತ ವರದಿಯಾಗುತ್ತಲೇ ಇವೆ. ಸಾರ್ವಜನಿಕರ ಆಸ್ತಿಪಾಸ್ತಿ, ಪ್ರಾಣ ರಕ್ಷಣೆಯ ಹೊಣೆ ಹೊತ್ತ ಪೊಲೀಸ್ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ನಿವಾರಿಸುವಲ್ಲಿ ಸರ್ಕಾರ, ಪ್ರಮುಖವಾಗಿ ಅದರ ಅಂಗವಾಗಿರುವ ಗೃಹ ಇಲಾಖೆ ಸರಿಯಾದ ಉಪಕ್ರಮಗಳನ್ನು ಕೈಗೊಳ್ಳುತ್ತಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಪೊಲೀಸ್ ವ್ಯವಸ್ಥೆಯ ಹೊಣೆ ಹೊತ್ತಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ ಮತ್ತು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಜನರ ಆತಂಕ ನಿವಾರಣೆ ಮಾಡಬೇಕು ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಕಾನೂನು ಸುವ್ಯವಸ್ಥೆ ಸರ್ಕಾರದ ಕೈ ಜಾರಿ ಹೋಗುತ್ತಿದೆ ಎಂದು ಭಾಸವಾಗುವುದಕ್ಕೆ ಪ್ರಮುಖ ಕಾರಣ ರಾಜ್ಯಾದ್ಯಂತ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಘಟಿಸಿದ ಅಪರಾಧ ಘಟನೆಗಳೇ ಸಾಕ್ಷಿ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಅಂಕಿ ಅಂಶಗಳ ಪ್ರಕಾರ ಕೇವಲ ನಾಲ್ಕೇ ತಿಂಗಳಲ್ಲಿ ಸುಮಾರು 430 ಕೊಲೆಗಳು ಹಾಗೂ 198 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದು ನಿಜಕ್ಕೂ ರಾಜ್ಯದ ಜನರನ್ನು ಭಯದ ವಾತಾವರಣಕ್ಕೆ ತಳ್ಳಿದೆ. ಹೆಚ್ಚೇಕೆ, ಕೆಲವು ಪ್ರಕರಣಗಳಲ್ಲಿ ಕೊಲೆ ಸಂತ್ರಸ್ತರ ಸಂಬಂಧಿಗಳು ಘಟನೆ ನಡೆಯುವ ಮುನ್ನವೇ ಪೊಲೀಸರ ಗಮನಸೆಳೆದಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡ ಘಟನೆಗಳು ಹಾಗೂ ಪೊಲೀಸರ ನಿರ್ಲಕ್ಷ್ಯದಿಂದ ಕೊಲೆ, ಆರೋಪಿ ಪರಾರಿಯಾಗುವ ಘಟನೆಗಳೂ ನಡೆದಿರುವವುದು ಗೃಹ ಇಲಾಖೆಯ ಕಾಯಕಲ್ಪದ ಅವಶ್ಯಕತೆಯನ್ನು ಎತ್ತಿಹಿಡಿದಿದೆ.
Also Read: ಅಂಜಲಿ ಹತ್ಯೆ ಪ್ರಕರಣ | ಪೊಲೀಸರ ಲೋಪ ಒಪ್ಪಿಕೊಂಡ ಗೃಹ ಸಚಿವ ಪರಮೇಶ್
ಇತ್ತೀಚೆಗೆ ರಾಷ್ಟ್ರಾದ್ಯಂತ ಗಮನಸೆಳೆದ ಹಾಸನ ಪೆನ್‌ಡ್ರೈವ್ ಪ್ರಕರಣದ ಆರೋಪಿ ಆಗಿರುವ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿರುವುದು, (ರಾಜಕೀಯವಾಗಿ ಆರೋಪ ಮತ್ತು ಪ್ರತ್ಯಾರೋಪ ಏನೇ ಇದ್ದರೂ) ಪೊಲೀಸ್ ವ್ಯವಸ್ಥೆಯ ಲೋಪಗಳನ್ನು ಎತ್ತಿಹಿಡಿದಿರುವ ಘಟನೆಯಾಗಿದೆ.
ನೂರಾರು ಮಹಿಳೆಯರ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು ಪ್ರಜ್ವಲ್ ಅವರದ್ದು ಎನ್ನಲಾದ ರಾಸಲೀಲೆಯ ಸಾವಿರಾರು ವಿಡಿಯೋಗಳು ಏಪ್ರಿಲ್ 22ರಿಂದ ಹಾಸನ ಜಿಲ್ಲೆಯಾದ್ಯಂತ ಹರಿದಾಡಿವೆ ಆದರೂ ಅವರು ರಾಜಾರೋಷವಾಗಿ ಫ್ಲೈಟ್ ಏರಿ ವಿದೇಶಕ್ಕೆ ಹಾರಿರುವುದು ಮತ್ತು ಸಂತ್ರಸ್ತೆಯರದು ಎನ್ನಲಾದ ವಿಡಿಯೋಗಳು ಸಾರ್ವಜನಿಕಗೊಂಡಿರುವುದು.. ಇವೆಲ್ಲವೂ ತಮ್ಮ ಮೂಗಿನಡಿ ನಡೆದಿದ್ದರೂ ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿತ್ತು ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಹೆಚ್ಚೇಕೆ, ಪ್ರಜ್ವಲ್ ದೇಶ ಬಿಟ್ಟು ಪರಾರಿಯಾಗುವ ಮುನ್ನವೇ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲು ಅವಕಾಶಗಳಿತ್ತು, ಅವರ ಚಲನವಲನಗಳ ಮೇಲೆ ನಿಗಾ ಇಡಬಹುದಿತ್ತು. ಅಲ್ಲೂ ಇಲಾಖೆ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂಬ ದೂರು ಸಾರ್ವಜನಿಕವಾಗಿ ಕೇಳಿಬಂದಿದೆ.
ಅಪರಾಧ ಸರಣಿ ಮತ್ತು ಪೊಲೀಸ್ ವೈಫಲ್ಯ?
ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣ: ಹುಬ್ಬಳ್ಳಿಯ ವೀರಾಪುರ ಓಣಿಯ 21 ವರ್ಷ ಅಂಜಲಿ ಎಂಬ ಯುವತಿಯನ್ನು ಬುಧವಾರ (ಮೇ 15) ಬೆಳಗಿನ ಜಾವ ವಿಶ್ವನಾಥ್ ಅಲಿಯಾಸ್ ಗೀರಿಶ್ ಎಂಬ ಯುವಕ ಭೀಕರವಾಗಿ ಹತ್ಯೆ ಮಾಡಿದ್ದನು. ಈ ಹತ್ಯೆಯು ಪೊಲೀಸರ ನಿರ್ಲಕ್ಷ್ಯದಿಂದಲೇ ಆಗಿದೆ ಎಂದು ಸ್ವತಃ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರೇ ಒಪ್ಪಿಕೊಂಡಿದ್ದಾರೆ.
ಹತ್ಯೆಯಾದ ಅಂಜಲಿ ಮತ್ತು ಆರೋಪಿ ವಿಶ್ವನಾಥ್ ಸಹಪಾಠಿಗಳಾಗಿದ್ದರು. ಆರೋಪಿ ವಿಶ್ವನಾಥ್ ಅಂಜಲಿಯನ್ನು ಪ್ರೀತಿಸುವುದಾಗಿ ಹೇಳಿದ್ದು, ಆಕೆ ನಿರಾಕರಿಸಿದ್ದಳು ಬಳಿಕ ಆತ ಆಕೆಗೆ ಬೆದರಿಕೆ ಹಾಕಿದ್ದ ಅತ ತನ್ನ ಜೊತೆ ಬರದೇ ಇದ್ದರೆ ತಿಂಗಳ ಹಿಂದೆ ಕೊಲೆಯಾದ ನೇಹಾ ಹತ್ಯೆಯ ರೀತಿಯೇ ಕೊಲೆ ಮಾಡುವುದಾಗಿ ಹೇಳಿದ್ದ ಎಂದು ಅಂಜಲಿ ಮನೆಯವರು ತಮ್ಮ ಮನೆಯ ವ್ಯಾಪ್ತಿಯ ಬೆಂಡಿಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ನಿರ್ಲಕ್ಷ್ಯ ತೋರಿಸಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೇ 15 ಬೆಳಗಿನ ಜಾವ ಆರೋಪಿ ವಿಶ್ವ ಏಕಾಏಕಿ ಅಂಜಲಿ ಮನೆಯ ಬಾಗಿಲು ಬಡಿದಿದ್ದಾನೆ. ಅಂಜಲಿಯೇ ಬಾಗಿಲು ತೆರೆದಿದ್ದಾಳೆ. ಮೊದಲಿಗೆ ಅಂಜಲಿ ಅಜ್ಜಿ ಮತ್ತು ಸಹೋದರಿಯರ ಜೊತೆಗೆ ಮಾತನಾಡಿದ ವಿಶ್ವ, ಬಳಿಕ ಸ್ವಲ್ಪ ಪರ್ಸನಲ್ ಮಾತನಾಡಬೇಕು ಎಂದು ಅಂಜಲಿಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಏಕಾಏಕಿ ಚಾಕು ಹಾಕಿ ಅಂಜಲಿ ಸತ್ತ ಬಳಿಕ ಅಲ್ಲಿಂದ ಪರಾರಿಯಾಗಿದ್ದ ಘಟನೆ ನಡದಿತ್ತು. ಅಂಜಲಿ ಕುಟುಂಬಸ್ಥರು ಘಟನೆ ನಡೆಯುವ ಒಂದು ವಾರ ಮುನ್ನ ಠಾಣೆಗೆ ಮಾಹಿತಿ ನೀಡೀದ್ದಾಗಲೇ ಪೊಲೀಸರು ಎಚ್ಚರವಹಿಸಿದ್ದರೆ, ಒಂದು ಹೆಣ್ಣಮಗಳು ಭೀಕರವಾಗಿ ಹತ್ಯೆಗೀಡಾಗುವುದನ್ನು ತಪ್ಪಿಸಬಹುದಿತ್ತು.
ಒಂದು ತಿಂಗಳವಷ್ಟೇ ನೇಹಾ ಹೀರೇಮಠ ಎನ್ನುವ ವಿದ್ಯಾರ್ಥಿನಿಯನ್ನು ಹಾಡುಹಗಲೇ ಪ್ರೇಮಿಯೊಬ್ಬ 15 ಬಾರಿ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ್ದನು. ಈ ಘಟನೆಯಿಂದ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಆ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯಲ್ಲಿ ಕೊಲ್ಲುವುದಾಗಿ ಇನ್ನೊಂದು ಯುವತಿಗೆ ಬೆದರಿಕೆ ಬಂದಾಗ ತಮ್ಮದೇ ವ್ಯಾಪ್ತಿಯಲ್ಲಿ ಇನ್ನೊಂದು ಘಟನೆ ಮರುಕಳಿಸದಂತೆ ಹುಬ್ಬಳ್ಳಿ ಪೊಲೀಸರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿತ್ತು, ಆದರೆ ಪೊಲೀಸರ ನಿರ್ಲಕ್ಷ್ಯದಿಂದ ಒಂದು ಅಮಾಯಕ ಯುವತಿಯ ಜೀವ ಬಲಿಯಾಯಿತು.
ಅಂಜಲಿ ಹತ್ಯೆ ನಡೆದ ಮರುದಿನವೇ ಬೆಂಗಳೂರು ಹೊರವಲಯದ ಚಂದಾಪುರ ಸಮೀಪದ ಹೀಲಲಿಗೆ ಬಳಿಯಿರುವ ಬಿಸಿಇಟಿ ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಹರ್ಷಿತಾ (18ವ) ಮೃತದೇಹ ಪತ್ತೆಯಾಗಿದೆ. ಇದು ಆತ್ಮಹತ್ಯೆಯೋ ಕೊಲೆಯೋ ಎನ್ನುವ ಬಗ್ಗೆ ಇನ್ನೂ ತಿಳಿದುಬಂದಿಲ್ಲ ಆದರೆ, ಯುವತಿಯ ಪೋಷಕರು ಕೊಲೆ ಎಂದು ಆರೋಪಿಸಿದ್ದಾರೆ.
ಟೀಕೆಗೆ ಕಾರಣವಾದ ಗೃಹ ಸಚಿವರ ಹೇಳಿಕೆ
ಕಳೆದ ಏಪ್ರಿಲ್ 18 ರಂದು ಹಾಡಹಗಲೇ ಹುಬ್ಬಳ್ಳಿ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ನೇಹಾಳನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣ ನಡೆದ ಬಳಿಕೆ ತನಿಖೆಯೇ ನಡೆಯದೇ ರಾಜ್ಯದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಇದೊಂದು ಆಕಸ್ಮಿಕ ಕೊಲೆ ಎಂದು ಹೇಳಿಕೆ ನೀಡಿದ್ದರು. ಇದು ಅವರ ಬೇಜವಾಬ್ದಾರಿ ಹೇಳಿಕೆ ಎಂದು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದರು.
ಕೊಲೆಯಾದ ನೇಹಾ ಹುಬ್ಬಳ್ಳಿ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಹಿರೇಮಠ್ ಅವರ ಪುತ್ರಿಯಾಗಿದ್ದು, ಒಬ್ಬ ಜನಪ್ರತಿನಿಧಿಯ ಮಗಳನ್ನೇ ಹಾಡುಹಗಲೇ ಬರ್ಬರವಾಗಿ ಕೊಲೆ ಮಾಡಲಾಗಿದೆ ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಕಥೆ ಏನು ಎಂಬುದು ಹುಬ್ಬಳ್ಳಿ-ಧಾರವಾಡದ ಜನಸಾಮಾನ್ಯರ ಪ್ರಶ್ನೆಯಾಗಿತ್ತು.
ಬಾಲ್ಯ ವಿವಾಹದಿಂದ ಪಾರಾಗಿದ್ದ 15 ವರ್ಷದ ಬಾಲಕಿಯನ್ನು ಕೊಲೆ ಮಾಡಿದ ಹಂತಕ ಆಕೆಯ ರುಂಡದೊಂದಿಗೆ ಪರಾರಿಯಾಗಿರುವ ಘಟನೆ ಮೇ 9ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆಯ ಮುತ್ಲು ಗ್ರಾಮದಲ್ಲಿ ನಡೆಯಿತು.
ಮೇಲಿನ ಎಲ್ಲ ಪ್ರಕರಣಗಳಲ್ಲಿ ಬಲಿಯಾಗಿದ್ದು ಹೆಣ್ಣುಮಕ್ಕಳು ಮತ್ತು ಅದಕ್ಕೆ ಕಾರಣವಾಗಿದ್ದು ಪೊಲೀಸ್ ವ್ಯವಸ್ಥೆಯ ಲೋಪಗಳು.
ಈ ಬಗ್ಗೆ ʻದ ಫೆಡೆರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಲೇಖಕಿ ಪ್ರೀತಿ ನಾಗರಾಜ್ ಅವರು, "ಸರ್ಕಾರ, ಪೊಲೀಸ್ ಇಲಾಖೆ ಹಾಗೂ ವ್ಯವಸ್ಥೆ ವೈಫಲ್ಯ ಕಂಡಿರುವುದು ಒಂದು ಕಡೆಯಾದರೆ, ಆರೋಪಿಗಳ ಮನಸ್ಥಿತಿಯನ್ನು ಆ ಹಂತಕ್ಕೆ ಕೊಂಡೊಯ್ದಿರುವುದು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳು.. ಕೊಲೆಯನ್ನು ವೈಭವಿಕರಿಸುವುದು ನಿಲ್ಲಬೇಕಿದೆ. ಮನಸ್ಸಿಗೆ ಸಂಬಂಧಿಸಿದ ಜಾಹೀರಾತುಗಳ ಮೇಲೆ ನಿಯಂತ್ರಣ ಹೇರಬೇಕಿದೆ ಎಂದು ಹೇಳಿದರು.
"ಶಿಕ್ಷಣ ವ್ದವಸ್ಥೆಯಲ್ಲಿ ಬದಲಾವಣೆ ತರಬೇಕಿದೆ, ಮೌಲ್ಯಗಳನ್ನು ಬಿತ್ತಬೇಕಿದೆ. ಅಂತಹ ಕೆಟ್ಟ ಮನಸ್ಥಿತಿಯಿಂದ ಯುವಕರನ್ನು ಹೊರತರಲು ತಜ್ಞರನ್ನು ಸಂಪರ್ಕಿಸಿ ಸರ್ಕಾರ ಕಾರ್ಯಕ್ರಮ ನಡೆಸಬೇಕು. ಸರ್ಕಾರ ಮಹಿಳಾ ಪರವಾಗಿದೆ ಎಂದು ಹೇಳುತ್ತಾ ಮಹಿಳೆಯರಿಗಾಗಿ ಗ್ಯಾರಂಟಿ ಸ್ಕೀಮ್‌ಗಳನ್ನು ತರುವುದು ಮಾತ್ರವಲ್ಲ, ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆಯೂ ಕಾರ್ಯಕ್ರಮಗಳನ್ನು ಮಾಡಬೇಕು, ನಾವು ಬದುಕಿದ್ದರೇ ಮಾತ್ರ ಸರ್ಕಾರದ ಗ್ಯಾರಂಟಿ ಭಾಗ್ಯಗಳು... ಹೆಣ್ಣುಮಕ್ಕಳನ್ನೇ ಬಲಿ ಪಡೆಯಲಾಗುತ್ತಿದೆ" ಎಂದು ಪ್ರೀತಿ ನಾಗರಾಜ್ ಬೇಸರ ವ್ಯಕ್ತಪಡಿಸಿದರು.
ಮಾಜಿ ಗೃಹ ಸಚಿವ ಪಿಜಿಆರ್ ಸಿಂಧ್ಯಾ ಅವರು ʻದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ , ʻʻರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗಿರುವುದು ನಮ್ಮ ಗಮನಕ್ಕೂ ಬಂದಿದೆ. ಇಷ್ಟು ದಿನ ಸರ್ಕಾರ ಚುನಾವಣೆಯ ಕೆಲಸಗಳಲ್ಲಿ ತೊಡಗಿತ್ತು, ಈಗ ಎಲ್ಲಾ ಮುಗಿದಿದೆ. ಈಗ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸೇರಿ ಹಿರಿಯ ಅಧಿಕಾರಿಗಳ ಸಭೆ ನಡೆಸಬೇಕು. ರಾಜ್ಯದಲ್ಲಿ ನಡೆಯುತ್ತಿರುವ ಕೊಲೆ ಅತ್ಯಾಚಾರ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಆದೇಶ ಮಾಡಬೇಕು. ಉನ್ನತ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸಲು ಆರಂಭಿಸಿದರೆ, ಪೊಲೀಸ್ ಕಾನ್ಸ್ಟೇಬಲ್ ವರೆಗೂ ಸರಿ ಹೋಗುತ್ತದೆ. ಹಾಗಾಗಿ ಸಿಎಂ ಹಾಗೂ ಹೋಂ ಮಿನಿಸ್ಟರ್ ಸೇರಿ ಉನ್ನತ ಅಧಿಕಾರಿಗಳ ಸಭೆ ಕರೆಯಬೇಕುʼʼ ಎಂದು ಆಗ್ರಹಿಸಿದರು.
ʻದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ನಿವೃತ್ತ ಎಡಿಜಿಪಿ ಗೋಪಾಲ್ ಹೊಸೂರ್ ಮಾತನಾಡಿ, ʻʻಈ ಪ್ರಕರಣಗಳಿಂದ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಕುಸಿದು ಹೋಗಿದೆ ಎಂದು ಹೇಳಲು ಸಾಧ್ಯವಿಲ್ಲ. ಚುನಾವಣೆ ಸಮಯದಲ್ಲಿ ಕೊಲೆ ಪ್ರಕರಣಗಳು ಹಿಂದೆಯೂ ನಡೆದಿವೆ, ಈಗಲೂ ನಡೆಯುತ್ತಿವೆ, ಮುಂದೆಯೂ ನಡೆಯುತ್ತವೆ. ಆದರೆ ಅದಕ್ಕೆ ಕಡಿವಾಣ ಹಾಕುವ ಕೆಲಸವನ್ನು ಮಾಡಬೇಕಿದೆ. ಎಲ್ಲ ಕೊಲೆ ಪ್ರಕರಣಗಳಿಗೆ ಅದರದೇ ಆದ ಹಿನ್ನೆಲೆಗಳಿರುತ್ತವೆ. ಒಟ್ಟಾರೆ ಪೊಲೀಸ್ ವ್ಯವಸ್ಥೆ ಕುಸಿದಿದೆ ಎನ್ನುವ ಮಾತನ್ನು ಒಪ್ಪಿಕೊಳ್ಳಲು ಆಗಲ್ಲ ಎಂದು ಹೇಳಿದರು.
ಪ್ರತಿಪಕ್ಷಗಳ ಟೀಕೆ:ಬಗ್ಗೆ ರಾಜ್ಯ ಬಿಜೆಪಿ ಘಟಕ ಇದೇ ʻಆ ದಿನಗಳ ಗೂಂಡಾ ರಾಜ್ಯʼ ಎಂದು ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ʻʻಕೊಲೆ, ಸುಲಿಗೆ, ಅತ್ಯಾಚಾರ, ಗೂಂಡಾಗಿರಿ, ಭಯೋತ್ಪಾದನೆಯ ಗ್ಯಾರಂಟಿಯನ್ನು ಕಾಂಗ್ರೆಸ್ ಸರ್ಕಾರ ಯಾವುದೇ ಅಡೆತಡೆಗಳು ಇಲ್ಲದೆ ಜಾರಿ ಮಾಡಿದೆ. ಪರಿಣಾಮ ಕಳೆದ 4 ತಿಂಗಳಲ್ಲೇ 430 ಕೊಲೆಗಳು ನಡೆದಿವೆ. ಇನ್ನೂ ಸುಲಿಗೆ, ಅತ್ಯಾಚಾರ, ಪೋಕ್ಸೊ, ಗಲಭೆ ಇತ್ಯಾದಿಗಳ ಲೆಕ್ಕವೇ ಬೇರೆʼʼ ಎಂದು ಟೀಕೆ ಮಾಡಿದೆ.
ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಬೆನ್ನಲ್ಲೇ ನಡೆದ ಅಂಜಲಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ಲೋಪವೂ ಇದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿರುವುದನ್ನು ಸ್ಮರಿಸಬಹುದು. ಇತ್ತೀಚೆಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಕರ್ತವ್ಯ ಲೋಪದಡಿ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಮಹಿಳಾ ಹೆಡ್ಕಾನ್ಸ್ಟೇಬಲ್ ಅವರನ್ನು ಅಮಾನತುಗೊಳಿಸಲಾಗಿದೆ," ಎಂದೂ ಹೇಳಿದ್ದರು.
ರಾಜ್ಯದಲ್ಲಿ ನಡೆದ ಇತರ ಕೆಲವು ಘಟನೆಗಳು:
ಗದಗ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂದ ನಾಲ್ವರ ಕೊಲೆ
ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ಏಪ್ರಿಲ್ ೧೮ರ ತಡರಾತ್ರಿ ನಡೆದಿತ್ತು.
ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ (27), ಕೊಪ್ಪಳದ ಭಾಗ್ಯ ನಗರ ನಿವಾಸಿ, ಹೋಟೆಲ್ ಉದ್ಯಮಿ ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರು.
ಮಂಡ್ಯ: ಕೌಟುಂಬಿಕ ಕಲಹದಿಂದ ಮಕ್ಕಳಿಗೆ ವಿಷ ಉಣಿಸಿ ಕೊಂದ ತಾಯಿ
ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ಮೂರು ಮಕ್ಕಳಿಗೆ ವಿಷ ಉಣಿಸಿ ಕೊಲೆ ಮಾಡಿರುವ ಘಟನೆ ಏ. ೧೮ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಗುರುವಾರ ನಡೆದಿದೆ.
ಮತ್ತೊಂದೆಡೆ ಇದರ ಬೆನ್ನಲ್ಲೇ, ಕೌಟುಂಬಿಕ ಕಲಹದಿಂದ ವ್ಯಕ್ತಿಯೋರ್ವ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷದ ನೀರು ಕುಡಿಸಿ ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಹಾಡಹಗಲೇ ಡಬಲ್ ಮರ್ಡರ್!
ಬೆಂಗಳೂರಿನ ಸಾರಕ್ಕಿ ಬಳಿಯಿರುವ ಪಾರ್ಕ್ನಲ್ಲಿ ಸುರೇಶ್ ಮತ್ತು ಅನುಷಾ ಎನ್ನುವ ಜೋಡಿ ಏಪ್ರಿಲ್ 18ರಂದು ಹತ್ಯೆಗೀಡಾಗಿದ್ದಾರೆ. ಘಟನೆಯಲ್ಲಿ ಸುರೇಶ್ ಎಂಬಾತ ಅನುಷಾಳನ್ನು ಕೊಲೆ ಮಾಡಿದ್ದರೆ, ಸುರೇಶ್ನನ್ನು ಅನುಷಾಳ ತಾಯಿ (ಗೀತಾ) ಕೊಲೆ ಮಾಡಿದ್ದರು ಎಂಬುದು ನಂತರ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು.
ಬೆಳಗಾವಿ: ಭಗ್ನಪ್ರೇಮಿಗೆ ಚಾಕು ಇರಿದ ಯುವತಿಯ ತಂದೆ, ಬಿಡಿಸಲು ಬಂದ ಸಹೋದರನೂ ಬಲಿ!
ಜಿಲ್ಲೆಯ ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದಲ್ಲಿ ಯುವತಿಯೊಬ್ಬಳನ್ನು ಪ್ರೀತಿಸುವಂತೆ ಬೆನ್ನು ಬಿದ್ದಿದ್ದ ಯುವಕ ಮತ್ತು ಆತನ ಸಹೋದರನನ್ನು ಮೇ ೮ರಂದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯುವತಿ ತಂದೆ ಚಾಕುವಿನಿಂದ ಇರಿದು ಇಬ್ಬರನ್ನೂ ಹತ್ಯೆಗೈದಿದ್ದಾನೆ.
ಸವದತ್ತಿ ತಾಲೂಕಿನ ದುಂಡನಕೊಪ್ಪ ಗ್ರಾಮದ ಫಕೀರಪ್ಪ ಭಾಂವಿಹಾಳ (50) ಎಂಬಾತ ಈ ಭೀಕರ ಕೃತ್ಯ ಎಸಗಿದ್ದು, ಮೃತ ದುರ್ದೈವಿ ಸಹೋದರರು ಕಾರಿಮನಿ ಗ್ರಾಮದ ಯಲ್ಲಪ್ಪ ಹಳೇಗೋಡಿ (22) ಮಾಯಪ್ಪ ಹಳೇಗೋಡಿ (22) ಎಂದು ಗುರುತಿಸಲಾಗಿದೆ.
ಬೆಳಗಾವಿ: ಪ್ರೇಯಸಿ ಜತೆ ಹೋಗುತ್ತಿದ್ದವನನ್ನು ಅಡ್ಡಗಟ್ಟಿ ಸ್ಕ್ರೂಡ್ರೈವರ್ನಿಂದ ಚುಚ್ಚಿ ಬರ್ಬರ ಹತ್ಯೆ
ಸ್ಕ್ರೂಡ್ರೈವರ್ನಿಂದ ಚುಚ್ಚಿ ಯುವಕನೋರ್ವನನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳಗಾವಿಯ ಮಹಾಂತೇಶನಗರದ ಬ್ರಿಡ್ಜ್ ಬಳಿ ಮೇ.16ರ ಮಧ್ಯಾಹ್ನ ನಡೆದಿದೆ. ಬೆಳಗಾವಿಯ ಗಾಂಧಿನಗರ ನಿವಾಸಿ ಇಬ್ರಾಹಿಂ ಗೌಸ್(22) ಕೊಲೆಯಾದ ಯುವಕ.
ʻʻಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಖುದ್ದು ಒಂದಿಷ್ಟು ಗಲಭೆಗಳನ್ನು ಸೃಷ್ಟಿಸಿದೆ. ಹನುಮ ಧ್ವಜ, ಹಿಂದೂಗಳ ಮೇಲೆ ಕೇಸ್, ಹಿಂದೂಗಳ ಬಂಧನ, ರಾಮನಗರ ವಕೀಲರ ಪ್ರಕರಣಗಳಲ್ಲಿ ಸರ್ಕಾರವೇ ಕೈ ಮಿಲಾಯಿಸಿದೆʼʼ ಎಂದು ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಜೆಡಿಎಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ʻʻಹಾದಿಬೀದಿಯಲ್ಲಿ ಕೊಲೆಗಳಾಗುತ್ತಿವೆ. ರಾಜ್ಯವು ಅತ್ಯಾಚಾರಿಗಳ ಆಡಂಬೋಲವಾಗಿದೆ. ಬೆಂಗಳೂರು ಆಡಂಬೋಲವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ. ಕೇವಲ ನಾಲ್ಕು ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆʼʼ ಎಂದು ಪತ್ರಿಕೆಯ ವರದಿಗಳನ್ನು ಪೋಸ್ಟ್ ಮಾಡಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹಾದಿಬೀದಿಯಲ್ಲಿ ಕೊಲೆಗಳಾಗುತ್ತಿವೆ. ರಾಜ್ಯವು ಅತ್ಯಾಚಾರಿಗಳ ಆಡಂಬೋಲವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ. ಕೇವಲ 4 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ!! 1/2#ಜನರಿಗಿಲ್ಲ_ನೆಮ್ಮದಿಯ_ಗ್ಯಾರಂಟಿ pic.twitter.com/iu3tqqEYZ3
— Janata Dal Secular (@JanataDal_S) May 18, 2024
ʻʻರಾಜ್ಯ ಗೃಹ ಇಲಾಖೆ ಎನ್ನುವುದು ಕೆಲಸ ಮಾಡುತ್ತಿದೆಯಾ? ಅಥವಾ ನಿದ್ದೆ ಮಾಡುತ್ತಿದೆಯಾ? ದಯಮಾಡಿ ಹೇಳುವಿರಾ ಡಾ. ಜಿ ಪರಮೇಶ್ವರ್ ಅವರೇ?ʼʼ ಎಂದು ಗೃಹ ಸಚಿವರಿಗೆ ಜೆಡಿಎಸ್ ಪ್ರಶ್ನೆ ಮಾಡಿದೆ.