ಅಂಜಲಿ ಹತ್ಯೆ ಪ್ರಕರಣ | ಪೊಲೀಸರ ಲೋಪ ಒಪ್ಪಿಕೊಂಡ ಗೃಹ ಸಚಿವ ಪರಮೇಶ್ವರ್‌
x

ಅಂಜಲಿ ಹತ್ಯೆ ಪ್ರಕರಣ | ಪೊಲೀಸರ ಲೋಪ ಒಪ್ಪಿಕೊಂಡ ಗೃಹ ಸಚಿವ ಪರಮೇಶ್ವರ್‌


ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಬೆನ್ನಲ್ಲೇ ನಡೆದ ಅಂಜಲಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ಲೋಪವೂ ಇದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಕರ್ತವ್ಯ ಲೋಪದಡಿ ಪೊಲೀಸ್​ ಇನ್ಸ್​ಪೆಕ್ಟರ್​ ಮತ್ತು ಮಹಿಳಾ ಹೆಡ್​​ಕಾನ್​ಸ್ಟೇಬಲ್​ ಅವರನ್ನು ಅಮಾನತುಗೊಳಿಸಲಾಗಿದೆ. ನನ್ನ ಮೊಮ್ಮಗಳಿಗೆ ಜೀವ ಬೆದರಿಕೆ ಇದೆ ಎಂದು ಕೊಲೆಯಾದ ಅಂಜಲಿಯ ಅಜ್ಜಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ದೂರು ನೀಡಿರಲಿಲ್ಲ. ಅಂಜಲಿ ಪೋಷಕರು, ಪೊಲೀಸರಿಗೆ ಮೊದಲೆ ಮಾಹಿತಿ ನೀಡಿದ್ದೆವು ಎಂದು ಹೇಳಿದ್ದಾರೆ. ಸದ್ಯ ಕೊಲೆ ಆರೋಪಿ ವಿಶ್ವನನ್ನು ಪೊಲೀಸರು ಬಂಧಿಸಿದ್ದಾರೆ. ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದುʼʼ ಎಂದು ಹೇಳಿದರು.

ಇದನ್ನೂ ಓದಿ: ತಿಂಗಳಲ್ಲಿ ಇಬ್ಬರು ಯುವತಿಯರ ಹತ್ಯೆ: ಹುಬ್ಬಳ್ಳಿ ಪೊಲೀಸ್‌ ವೈಫಲ್ಯ ಕಾರಣವೇ?

ಪರಮೇಶ್ವರ್‌ ರಾಜೀನಾಮೆಗೆ ಆಗ್ರಹ

ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸೂಕ್ಷ್ಮತೆ, ಹಿರಿತನ ಇದ್ದರೆ ಅವರು ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು' ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸುತ್ತಿದೆ. ಈ ಒಂದು ವರ್ಷದ ಅವಧಿಯಲ್ಲಿ ಇಡೀ ಕರ್ನಾಟಕದಲ್ಲಿ ಕೊಲೆ, ಸುಲಿಗೆ, ಮತಾಂಧ ಶಕ್ತಿಗಳ ವಿಜೃಂಭಣೆ, ತುಷ್ಟೀಕರಣದ ರಾಜಕಾರಣ ಸೇರಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.

ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ. ನೇಹಾ ಕೊಲೆ ಬಳಿಕ ಅಂಜಲಿ ಹತ್ಯೆ ನಡೆದಿದೆ. ಗುರುವಾರ ಬೆಳಿಗ್ಗೆ ಸುಬ್ರಹ್ಮಣ್ಯಪುರದಲ್ಲಿ ಇನ್ನೊಂದು ಕೊಲೆ ನಡೆದಿದೆ. ಹುಬ್ಬಳ್ಳಿಯ ಅಂಜಲಿ ಮನೆಯವರು ಯುವತಿಗೆ ಜೀವ ಬೆದರಿಕೆ ಇರುವ ಕುರಿತು ಠಾಣೆಗೆ ತಿಳಿಸಿದ್ದರೂ ಸಹ ಕ್ರಮ ವಹಿಸಲು ವಿಫಲವಾಗಿದ್ದಾರೆ. ಭಂಡ ಸರಕಾರ ಎಲ್ಲ ಸೂಕ್ಷ್ಮತೆಯನ್ನು ಕಳಕೊಂಡಿದೆ ಎಂದು ಅಶ್ವತ್ಥನಾರಾಯಣ್ ಕಿಡಿಕಾರಿದ್ದಾರೆ.

ʻʻಸಿಎಂ ಸಿದ್ದರಾಮಯ್ಯ ಅವರು ತಕ್ಷಣವೇ ರಾಜ್ಯದ ಗೃಹ ಸಚಿವರನ್ನು ವಜಾ ಮಾಡಬೇಕು. ಈ ಸರಕಾರಕ್ಕೆ ಜೀವ ಇದೆಯೇ? ಸರಕಾರ ಸತ್ತು ಹೋಗಿದೆಯೇ? ಮಹಿಳೆಯರು, ದಲಿತರು, ಹಿಂದುಳಿದವರನ್ನು ರಕ್ಷಿಸುವಲ್ಲಿ ಅಮಾಯಕರನ್ನು ರಕ್ಷಿಸುವಲ್ಲಿ ಈ ಸರಕಾರ ವಿಫಲವಾಗಿದೆʼʼ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹರಿಹಾಯ್ದಿದ್ದಾರೆ.

Read More
Next Story