ಅಂಬೇಡ್ಕರ್ ಸೋಲಿಸಿದ್ದು ಸಾವರ್ಕರ್ ಮತ್ತು ಡಾಂಗೆ: ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಅಂಬೇಡ್ಕರ್ ಮ್ಯೂಸಿಯಮ್ ರಚಿಸಲಾಗುವುದು ಮತ್ತು ಇಡೀ ದೇಶದಲ್ಲೇ ಅತ್ಯಂತ ಎತ್ತರದ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.;
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣಾ ರಾಜಕೀಯದಲ್ಲಿ ಸೋಲಿಸಿದ್ದು ಕಾಂಗ್ರೆಸ್ಸಿಗರು ಎಂದು ಮನುವಾದಿಗಳು, ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ವಿನಾಯಕ ದಾಮೋದರ್ ಸಾವರ್ಕರ್ ಮತ್ತು ಶ್ರೀಪಾದ್ ಅಮೃತ್ ಢಾಂಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸೋಮವಾರ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, "1952 ರ ಜನವರಿ 18 ರಂದು ಅಂಬೇಡ್ಕರ್ ಅವರು ತಮ್ಮ ಕೈಯಾರೆ ತಮ್ಮದೇ ಹಸ್ತಾಕ್ಷರದಲ್ಲಿ ಒಂದು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ತಮ್ಮನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಮತ್ತು ಢಾಂಗೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಆದರೂ ಬಿಜೆಪಿಯವರು ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಎಂದು ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಸತ್ಯವನ್ನು ಹೇಳುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿಯವರಿಗೆ ಸಾರ್ವಕರ್ ಮತ್ತು ಗಾಂಧಿಯನ್ನು ಕೊಲೆ ಮಾಡಿದ ಗೋಡ್ಸೆ ಬಿಟ್ಟು ಉಳಿದ ಯಾರೂ ಬೇಕಾಗಿಲ್ಲ. ಆದರೆ ನಮಗೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎನ್ನುವ ಮೂರು ಮಂತ್ರಗಳನ್ನು ನಮಗೆ ನೀಡಿದ ಅಂಬೇಡ್ಕರ್ ನಮ್ಮವರು, ಇವರು ನಮಗೆ ಬೇಕು ಎಂದರು.
ಬಳಿಕ ಕೆಪಿಸಿಸಿಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಿದ್ದ 134ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಪರಿವಾರ ಹೇಳುವ ಸುಳ್ಳುಗಳನ್ನು ಮೆಟ್ಟಿ, ಸತ್ಯ ಹೇಳುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್ ಕಾರ್ಯಕರ್ತರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು. ಸೈದ್ದಾಂತಿಕ ಹೋರಾಟವನ್ನು ನಾವು ನೀವೆಲ್ಲಾ ಮುನ್ನಡೆಸಬೇಕು ಎಂದು ಸಿಎಂ ಕರೆ ನೀಡಿದರು.
ಮನುವಾದಿಗಳು ನಮ್ಮ ಸಂವಿಧಾನವನ್ನು ವಿರೋಧಿಸಿದ್ದನ್ನು, ಅಂಬೇಡ್ಕರ್ ಅವರು ಮನುಸ್ಮೃತಿಗೆ ಬೆಂಕಿ ಹಾಕಿ ಸುಟ್ಟಿದ್ದು ಏಕೆ ಎನ್ನುವುದನ್ನು ನಮ್ಮ ಕಾರ್ಯಕರ್ತರು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಜನರಿಗೆ, ಇವತ್ತಿನ ಯುವ ಸಮುದಾಯಕ್ಕೆ ಸತ್ಯವನ್ನು ಅರ್ಥ ಮಾಡಿಸಬೇಕು ಎಂದರು. ಮನುಸ್ಮೃತಿ ಮತ್ತು ಜಾತಿ ವ್ಯವಸ್ಥೆ ಕಾರಣದಿಂದ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾಗಿದ್ದ ಎಲ್ಲಾ ಜಾತಿ, ಸಮುದಾಯಗಳನ್ನು ದೌರ್ಜನ್ಯಮುಕ್ತಗೊಳಿಸಲು ಅಂಬೇಡ್ಕರ್ ಅವರ ಬದುಕು ಮುಡಿಪಾಗಿತ್ತು ಎಂದರು.
ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್ ಅವರು ಮಾಡಿದ ಐತಿಹಾಸಿಕ ಸಭೆಯಲ್ಲಿ, "ಸಂವಿಧಾನ ಜಾರಿಯ ಈ ದಿನದಿಂದ ನಾವು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಅಸಮಾನತೆ ಇರುವ ಸಮಾಜಕ್ಕೆ ಪ್ರವೇಶ ಪಡೆಯುತ್ತಿದ್ದೇವೆ. ಈ ಅಸಮಾನತೆ ಹೋಗದೆ ಸಂವಿಧಾನದ ಆಶಯಗಳು ಈಡೇರಲು ಸಾಧ್ಯವಿಲ್ಲ ಎಂದಿದ್ದರು. ಸಂವಿಧಾನದ ಕಾರಣದಿಂದ ಶಿಕ್ಷಣದಿಂದ ವಂಚಿತರಾಗಿದ್ದ ನೂರಾರು ಜಾತಿ, ಸಮುದಾಯಗಳಿಗೆ ಶಿಕ್ಷಣ ದೊರೆಯುವಂತಾಯಿತು ಎಂದರು.
ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗಾಗಿ, ಅಸ್ಪೃಶ್ಯತೆ ಹೋಗಲಾಡಿಸುವುದಕ್ಕಾಗಿ ತಾನು ಶಿಕ್ಷಣ ಪಡೆದದ್ದಾಗಿ ಅಂಬೇಡ್ಕರ್ ಹೇಳಿದ ಮಾತನ್ನು ಉಲ್ಲೇಖಿಸಿದರು.
ಇದೇ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ಅಂಬೇಡ್ಕರ್ ಮ್ಯೂಸಿಯಮ್ ರಚಿಸಲಾಗುವುದು ಮತ್ತು ಇಡೀ ದೇಶದಲ್ಲೇ ಅತ್ಯಂತ ಎತ್ತರದ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ಪ್ರಧಾನಿ ಮೋದಿಗೆ ಸವಾಲೆಸೆದ ಸಿಎಂ
ನಾವು ರಾಜ್ಯದಲ್ಲಿ ಜಾರಿಗೆ ತಂದಿರುವ scp/tsp ಕಾಯ್ದೆಯನ್ನು ಇಡೀ ದೇಶದಲ್ಲಿ ಜಾರಿಗೆ ತರಲು ನಿಮ್ಮಿಂದ ಸಾಧ್ಯವಾ ಎಂದು ಪ್ರಶ್ನಿಸಿದ ಪ್ರಧಾನಿ ಮೋದಿ ಅವರಿಗೆ ಸಿಎಂ ನೇರ ಸವಾಲು ಹಾಕಿದರು. ರಾಷ್ಟ್ರಮಟ್ಟದಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದು ತೋರಿಸಿ ಎಂದು ಸವಾಲು ಹಾಕಿದರು.