The Federal Exclusive| ಸಿದ್ದರಾಮಯ್ಯ ಅಪ್ತರ ಬಣ ಜಗಳ; ಮರಳು ದಂಧೆ ನೆಪ, ರಾಜಕೀಯ ಕಾದಾಟ
ಕೊಪ್ಪಳದಲ್ಲಿ ಅಕ್ರಮ ಮರಳು ದಂಧೆ ಭಾರೀ ಸದ್ದು ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯಗ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಬರೆದಿರುವ ಪತ್ರವು ಸಂಚಲನ ಸೃಷ್ಟಿಸಿದೆ.
ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಭಾರೀ ಸದ್ದು ಮಾಡಿದ್ದು, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರವು ಸಂಚಲನ ಸೃಷ್ಟಿಸಿದೆ. ಇದೇ ವಿಚಾರವು ತೀವ್ರ ಜಟಾಪಟಿಗೆ ಕಾರಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಲ್ಲಿಯೇ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಜಿಲ್ಲೆಯ ರಾಜಕೀಯ ಕಿತ್ತಾಟ ಸಿದ್ದರಾಮಯ್ಯಗೆ ತಲೆಬಿಸಿಯಾಗಿದೆ.
ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ್ ಮತ್ತು ಬಸವರಾಜ ರಾಯರೆಡ್ಡಿ ಪ್ರಭಾವಿ ನಾಯಕರಾಗಿದ್ದಾರೆ. ಅವರೆಲ್ಲರೂ ಸಿದ್ದರಾಮಯ್ಯ ಆಪ್ತರೇ. ಆದರೆ, ಇವರ ನಡುವಿನ ಅಂತರ್ಯುದ್ಧ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಬಸವರಾಜ ರಾಯರೆಡ್ಡಿ ಕೊಪ್ಪಳ ಜಿಲ್ಲೆಯಲ್ಲಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನ ನಡೆಸುತ್ತಿರುವುದೇ ಶಿವರಾಜ ತಂಗಡಗಿ ಮತ್ತು ರಾಘವೇಂದ್ರ ಹಿಟ್ನಾಳ್‌ಗೆ ಮುನಿಸಿಗೆ ಕಾರಣವಾಗಿದೆ. ಬಸವರಾಜ ರಾಯರೆಡ್ಡಿಯ ಸಾರ್ವಭೌಮ ನಡೆಯು ಇವರಿಬ್ಬರಿಗೆ ಮಾತ್ರವಲ್ಲದೇ, ಗಣಿ ಇಲಾಖೆಯ ಅಧಿಕಾರಿಗಳಿಗೂ ಕಸಿವಿಸಿಯಾಗಿದೆ. ಹೀಗಾಗಿ ಬಸವರಾಜ ರಾಯರೆಡ್ಡಿ ಏಕಪಕ್ಷೀಯ ಧೋರಣೆ ವಿರುದ್ಧ ಅಧಿಕಾರಿಗಳು ಸಹ ಸಿಡಿದೆದಿದ್ದಾರೆ ಎಂದು ಹೇಳಲಾಗಿದೆ.
ಬಸವರಾಜ ರಾಯರೆಡ್ಡಿ ಅವರು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾಗಿದ್ದರೂ, ಸಚಿವರಂತೆ ವರ್ತನೆ ತೋರುತ್ತಿದ್ದಾರೆ. ಪ್ರತಿಯೊಂದು ವಿಚಾರದಲ್ಲಿಯೂ ಮೂಗು ತೂರಿಸಿ ದರ್ಪ ತೋರಿಸುತ್ತಿದ್ದಾರೆ. ತಮ್ಮದೇ ಬೆಂಬಲಿಗರು ಸಹ ಅಕ್ರಮ ಮರಳುದಂಧೆಯಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ, ಜಿಲ್ಲೆಯ ಮರಳುದಂಧೆಯಲ್ಲಿ ಅವರಿಗೆ ಸೊಪ್ಪು ಹಾಕದಿರುವುದು ನಿಯಂತ್ರಣ ಇಲ್ಲದಂತಾಗಿದೆ. ಹೀಗಾಗಿ ತಮ್ಮ ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದು, ಯಾರು ಮಾತು ಕೇಳದ ಕಾರಣ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ನಾಯಕರ ನಡುವಿನ ರಾಜಕೀಯ ಕಿತ್ತಾಟವು ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿದೆ. ಜಿಲ್ಲೆಯಲ್ಲಿ ಶಕ್ತಿಪ್ರದರ್ಶನ, ವೈಯಕ್ತಿಕ ಅಸಮಾಧಾನವು ಪಕ್ಷಕ್ಕೆ ಇರುಸುಮುರುಸು ಉಂಟಾಗಿದೆ. ಅಕ್ರಮ ಮರಳು ದಂಧೆ ನಾಯಕರಲ್ಲಿನ ಒಡಕಿಗೆ ಕಾರಣ ಎಂಬುದು ಕೇವಲ ನೆಪ ಮಾತ್ರವಾಗಿದ್ದು, ಜಿಲ್ಲೆ ಹಿಡಿತಕ್ಕೆ ತೆಗೆದುಕೊಳ್ಳಲು ನಡೆಯುತ್ತಿರುವ ಕದನವಾಗಿದೆ. ಇದು ಹಲವು ತಿಂಗಳುಗಳಿಂದಲೇ ನಡೆಯುತ್ತಿದೆ. ಪ್ರಭಾವಿ ನಾಯಕರು ಒಂದೇ ಪಕ್ಷಕ್ಕೆ ಸೇರಿದವರಾದರೂ ಸ್ಥಳೀಯ ಮಟ್ಟದಲ್ಲಿ ತಮ್ಮ ಪ್ರಭಾವ ಬಲಪಡಿಸಲು ಪರಸ್ಪರ ರಾಜಕೀಯ ಕಸರತ್ತುಗಳು ನಡೆಯುತ್ತಿವೆ. ಇದಕ್ಕೆ ಸ್ಥಳೀಯ ಅಧಿಕಾರಿಗಳು ಸಹ ಎರಡು ಬಣವಾಗಿ ರಾಜಕೀಯ ನಾಯಕರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ನಾಯಕರ ಕಿತ್ತಾಟವು ಮುಖ್ಯಮಂತ್ರಿಯ ಅಂಗಳಕ್ಕೆ ಬಂದಿದ್ದು, ಜಿಲ್ಲೆಯ ರಾಜಕೀಯ ಜಗಳವನ್ನು ನಿವಾರಣೆ ಮಾಡುವುದು ಮುಖ್ಯಮಂತ್ರಿಗಳಿಗೂ ತಲೆಬಿಸಿಯಾಗಿದೆ. ಭಿನ್ನಾಭಿಪ್ರಾಯ ಮೂಡಿಸಿರುವ ನಾಯಕರು ತಮಗೆ ಆಪ್ತರಾಗಿದ್ದು, ಅವರಲ್ಲಿಯೇ ಕಚ್ಚಾಟ ನಡೆಯುತ್ತಿರುವುದು ಪಕ್ಷಕ್ಕೆ ಚ್ಯುತಿ ತರಲಿದೆ. ಅಲ್ಲದೇ, ಪ್ರತಿಪಕ್ಷ ಬಿಜೆಪಿ, ಜೆಡಿಎಸ್‌ಗೆ ತನ್ನ ಪ್ರಾಬಲ್ಯ ಬೆಳೆಸಿಕೊಳ್ಳಲು ಅಸ್ತ್ರವಾಗಲಿದೆ. ಹೀಗಾಗಿ ಇದರ ನಿವಾರಣೆ ಮಾಡಲು ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಸಿಎಂಗೆ ಬಸವರಾಜ ರಾಯರೆಡ್ಡಿ ಪತ್ರ
ಅಕ್ರಮ ಮರಳು ದಂಧೆ ವಿಚಾರವು ಕೊಪ್ಪಳದಲ್ಲಿ ಬಸವರಾಜ ರಾಯರೆಡ್ಡಿ ಹಾಗೂ ಅಧಿಕಾರಿಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ತುಂಗಭದ್ರೆಯ ತೀರದಲ್ಲಿ ಮರಳು ಮಾಫಿಯಾ ರಾಜಾರೋಷವಾಗಿ ಯಾವುದೇ ಕಡಿವಾಣ ಇಲ್ಲದೇ ನಡೆಯುತ್ತಿದೆ. ಆದರೂ ಅಧಿಕಾರಿಗಳು ಅಕ್ರಮಕ್ಕೆ ಬ್ರೇಕ್ ಹಾಕದೇ ಕೈ ಕಟ್ಟಿ ಕುಳಿತಿದ್ದಾರೆ. ಮರಳು ದಂಧೆಕೋರರಿಗೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದು, ಈ ಮೂಲಕ ರಾಜ್ಯದ 400 ಕೋಟಿ ರೂ.ಗಿಂತ ಹೆಚ್ಚು ರಾಜಧನ ದೋಚುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಸವರಾಜ ರಾಯರೆಡ್ಡಿ ಪತ್ರ ಬರೆದು ಬೆಳಕು ಚೆಲ್ಲಿದ್ದರು. ಸಿದ್ದರಾಮಯ್ಯ ಅವರಿಗೆ ಬಸವರಾಜ ರಾಯರೆಡ್ಡಿ ಬರೆದಿರುವ ಪತ್ರವು ದ ಫೆಡರಲ್ ಕರ್ನಾಟಕಕ್ಕೆ ಲಭ್ಯವಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 85 ಕಿ.ಮೀ.ಕ್ಕೂ ಹೆಚ್ಚು ತುಂಗಭಧ್ರಾ ನದಿಯ ತಟವಿದ್ದು, ನೈಸರ್ಗಿಕವಾಗಿ ಸಾಕಷ್ಟು ಮರಳು ಶೇಖರಣೆಯಾಗುತ್ತಿರುತ್ತದೆ. ಪ್ರತಿ ದಿನ ಸುಮಾರು 100 ರಿಂದ 150 ಟ್ರಕ್ ಮರಳು ಹಾಗೂ ಜಲ್ಲಿ ಕೊಪ್ಪಳ ಜಿಲ್ಲೆಯಿಂದ ಗದಗ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಚಿತ್ರದುರ್ಗ ಮತ್ತು ಬೆಂಗಳೂರು ನಗರಗಳಿಗೆ ಅನಧಿಕೃತವಾಗಿ ಸಾಗಣೆಯಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಅಪಾರ ಪ್ರಮಾಣದ ರಾಜಧನದ ನಷ್ಟವುಂಟಾಗುತ್ತಿದೆ. ಇದರಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಇತರೆ ಸ್ಥಳೀಯ ಇಲಾಖೆಗಳ ಅಧಿಕಾರಿಗಳು ಶಾಮಿಲಾಗಿ ಭಾರಿ ಭ್ರಷ್ಟಾಚಾರ ನಡೆಸುತ್ತಿದ್ದಾರೆಂದು ಸಾರ್ವಜನಿಕರಿಂದ ದೂರು ಬಂದಿರುತ್ತದೆ. ಸುಮಾರು 200ಕ್ಕೂ ಹೆಚ್ಚು ಜನರ ಮರಳು ದಂಧೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆಯ ಅಧಿಕಾರಿಗಳು ಇದರೊಂದಿಗೆ ಶಾಮೀಲಾಗಿ ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಆದ್ದರಿಂದ ಈ ಮರಳು ಹಾಗೂ ಜಲ್ಲಿ ದಂದೆಗಳನ್ನು ನಿಲ್ಲಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಬೇಕು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಬಸವರಾಜ ರಾಯರೆಡ್ಡಿಗೆ 20 ಪ್ರಶ್ನೆಗಳು!
ರಾಯರೆಡ್ಡಿ ಬರೆದಿರುವ ಪತ್ರಕ್ಕೆ ಜಿಲ್ಲೆಯ ಅಧಿಕಾರಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಪರೋಕ್ಷವಾಗಿ ರಾಯರೆಡ್ಡಿ ಮತ್ತು ಅಧಿಕಾರಿಗಳ ನಡುವೆ ಜಟಾಪಟಿ ಶುರುವಾಗಿದೆ. ರಾಯರೆಡ್ಡಿಗೆ ಪತ್ರ ಬರೆದು 20 ಪ್ರಶ್ನೆಗಳನ್ನು ಕೇಳಲಾಗಿದೆ. ಅದನ್ನು ಅಧಿಕಾರಿಗಳೇ ಬರೆದಿದ್ದು ಎಂಬ ಮಾತುಗಳು ಕೇಳಿಬಂದಿದೆ. ಕೊಪ್ಪಳ ಅಧಿಕಾರಿಗಳ ವೃಂದ ಎನ್ನಲಾದ ಪತ್ರಕ್ಕೆ ಯಾವುದೇ ಅಧಿಕಾರಿಯ ಸಹಿ ಇಲ್ಲ. ಈ ಪತ್ರದಲ್ಲಿ ರಾಯರೆಡ್ಡಿ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಪತ್ರವು ದ ಫೆಡರಲ್ ಕರ್ನಾಟಕಕ್ಕೆ ಲಭ್ಯವಾಗಿದೆ.
* ಸಿಎಂ ಆರ್ಥಿಕ ಸಲಹೆಗಾರರಾಗಿ ತಾವೇ ಕೆಲ ಯೋಜನೆಗಳಿಗೆ ರಾಜಧನ ವಿನಾಯಿತಿ ನೀಡಿರುವುದು ಎಷ್ಟು ಸರಿ?
* ಕುಕನೂರ ಬೈಪಾಸ್ ರಸ್ತೆಗೆ ಬಳಸಲಾಗುತ್ತಿರುವ ಮರಳಿಗೆ ರಾಜಧನ ಪಾವತಿ ಮಾಡಲು ನೀಡಿರುವ ಸೂಚನೆ ಭ್ರಷ್ಟಾಚಾರವೇ?
* ಶಾಸಕರ ಸಂಬಂಧಿಗಳ ಹೆಸರಿನಲ್ಲಿ ಶಿರೂರ್ ಪ್ರದೇಶದಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆಯಲ್ಲಿ ಉಲ್ಲಂಘನೆಗಳಿಲ್ಲವೇ?
* ಮರಳು ಗಣಿಗಾರಿಕೆಯಿಂದ ಸರ್ಕಾರದ ಖಜಾನೆಗೆ ನಷ್ಟ ಉಂಟಾಗುತ್ತಿಲ್ಲವೇ?
* ತಮ್ಮ ಪ್ರತಿಷ್ಠೆಗಾಗಿ ಕೆಳಮಟ್ಟದ ಅಧಿಕಾರಿಗಳ ಮೇಲೆ ದರ್ಪವೇ?
* ಶಾಸಕರೇ, ನಿಮ್ಮ ಆಪ್ತರ ಮರಳು ಪಾಯಿಂಟ್‌ಗಳಿಲ್ಲವೇ?
* ದಂಧೆಯಿಂದ ರಾಜಧನ ನಷ್ಟ ಮಾಡಿ ಸರ್ಕಾರಕ್ಕೆ ನಷ್ಟ ಮಾಡುತ್ತಿಲ್ಲವೇ?
* ನಿಮ್ಮ ಒಣಪ್ರತಿಷ್ಠೆಗೆ ಮಹಿಳಾ ನೌಕರರ ಮೇಲೂ ಆರೋಪವೇಕೆ?
* ಮರಳು ವಾಹನ ಸೀಜ್ ಮಾಡಿದ್ದಾಗ ನೀವು ಕರೆ ಮಾಡುತ್ತಿರಲಿಲ್ಲವೇ?
* ಅಧಿಕಾರ ಬಳಸಿ ಧಮ್ಕಿ ಹಾಕಿ ವಾಹನಗಳನ್ನು ಬಿಡಿಸಿರಲಿಲ್ಲವೇ?
* ಪೊಲೀಸರು ದಂಧೆಗೆ ಸಾಥ್ ಕೊಡುತ್ತಿರುವುದು ನಿಮಗೆ ಕಾಣ್ತಿಲ್ಲವೇ?
ಹೀಗೆ ಬಸವರಾಜ ರಾಯರೆಡ್ಡಿಗೆ 20 ಪ್ರಶ್ನೆಗಳನ್ನು ಕೇಳಲಾಗಿದೆ. ಇದು ಅವರಿಗೂ ಇದೀಗ ಮುಜುಗರವನ್ನುಂಟು ಮಾಡಿದೆ ಎಂದು ಹೇಳಲಾಗಿದೆ.
ಐವರು ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ?
ಸಿದ್ದರಾಮಯ್ಯಗೆ ಬಸವರಾಜ ರಾಯರೆಡ್ಡಿ ಬರೆದಿರುವ ಪತ್ರದಲ್ಲಿ 10 ಅಧಿಕಾರಿಗಳ ವಿರುದ್ಧ ಆರೋಪ ಮಾಡಲಾಗಿದೆ. ಬಸವರಾಜ ರಾಯರೆಡ್ಡಿ ಪತ್ರದಲ್ಲಿ ಮಾಡಿರುವ ಆರೋಪದ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಐವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಒಂದೇ ಸ್ಥಳದಲ್ಲಿ 9 ರಿಂದ 12 ವರ್ಷಗಳ ಕಾಲ ಕೆಲಸ ಮಾಡುತ್ತಿರುವ ಕಾರಣ ನೀಡಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಒಟ್ಟಾರೆ ಬಸವರಾಜ ರಾಯರೆಡ್ಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಮಾಡಿದ ಆರೋಪಗಳು ಹಾಗೂ ಅದಕ್ಕೆ ಅಧಿಕಾರಿಗಳ ವರ್ಗದಿಂದ ಬಂದಿರುವುದು ಎನ್ನಲಾದ ಪ್ರತ್ಯುತ್ತರ ಪತ್ರ ಮತ್ತು ರಾಯರೆಡ್ಡಿ ಬಗ್ಗೆ ಶಿವರಾಜ್ ತಂಗಡಗಿ, ರಾಘವೇಂದ್ರ ಹಿಟ್ನಾಳ್ ಅವರಲ್ಲಿನ ಮುನಿಸು ಇದೀಗ ಕೊಪ್ಪಳ ಜಿಲ್ಲೆಯ ರಾಜಕೀಯ ವಾತಾವರಣದ ಕಾವು ಹೆಚ್ಚಿಸಿದೆ. ಅಕ್ರಮ ಮರಳು ಗಣಿಗಾರಿಕೆ ನೆಪದಲ್ಲಿ ನಡೆಯಿತ್ತಿರುವ ಕಾದಾಟಕ್ಕೆ ಮುಖ್ಯಮಂತ್ರಿಗಳು ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಮುಂದೆ ಗೊತ್ತಾಗಲಿದೆ.