ನಮ್ಮನ್ನು ಬೆಂಬಲಿಸಿದರೆ ನಾನು ನಿಮ್ಮ ಪರ : ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಡಿ.ಕೆ. ಶಿವಕುಮಾರ್ ಎಚ್ಚರಿಕೆ!
ಹೊಸ ವಿಧೇಯಕದ ಕುರಿತು ಮಾತನಾಡಿದ ಡಿಸಿಎಂ, 1972ರ ನಂತರ ಯಾವುದೇ ಸರ್ಕಾರ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡಲಿಲ್ಲವಾದ್ದರಿಂದ, ತಾವು ಈ ಐತಿಹಾಸಿಕ ವಿಧೇಯಕವನ್ನು ಜಾರಿಗೆ ತರಲು ಮುಂದಾಗಿರುವುದಾಗಿ ತಿಳಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್
ರಾಜ್ಯ ಸರ್ಕಾರವು ಅಪಾರ್ಟ್‌ಮೆಂಟ್ ನಿವಾಸಿಗಳು ಹಾಗೂ ಮನೆ ಖರೀದಿದಾರರ ಪರವಾಗಿ ದೃಢವಾಗಿ ನಿಲ್ಲಲಿದ್ದು, ಮುಂಬರುವ ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ಬಹಿರಂಗವಾಗಿ ಮನವಿ ಮಾಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ 'ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025' ಕುರಿತು ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಅವರು, ಇದೇ ವೇಳೆ ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ರವಾನಿಸುವ ಮೂಲಕ, ಬೆದರಿಕೆ ಹಾಕುವವರಿಗೆ ಬಗ್ಗುವ ಜಾಯಮಾನ ತನ್ನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೊಸ ವಿಧೇಯಕದ ಕುರಿತು ಮಾತನಾಡಿದ ಡಿಸಿಎಂ, 1972ರ ನಂತರ ಯಾವುದೇ ಸರ್ಕಾರ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡಲಿಲ್ಲವಾದ್ದರಿಂದ, ತಾವು ಈ ಐತಿಹಾಸಿಕ ವಿಧೇಯಕವನ್ನು ಜಾರಿಗೆ ತರಲು ಮುಂದಾಗಿರುವುದಾಗಿ ತಿಳಿಸಿದರು. ಈ ವಿಧೇಯಕದ ಬಗ್ಗೆ ಸಲಹೆಗಳನ್ನು ನೀಡಲು ಇಚ್ಛಿಸುವವರು gbasuggesion@gmail.com ಇ-ಮೇಲ್ ವಿಳಾಸಕ್ಕೆ 10 ದಿನಗಳ ಒಳಗೆ ಕಳುಹಿಸಬಹುದಾಗಿದೆ ಎಂದು ಅವರು ಸೂಚಿಸಿದರು. ತಾವು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಹಾಯ ಮಾಡಲು ಸಿದ್ಧರಿದ್ದು, ಬದಲಾಗಿ ತಮಗೂ ಜಿಬಿಎ ಚುನಾವಣೆಯಲ್ಲಿ ಮತಗಳ ಮೂಲಕ ಸಹಾಯ ಬೇಕಿದೆ ಎಂದು ನೇರವಾಗಿ ಕೇಳಿಕೊಂಡರು. ತಮ್ಮ ಮೇಲೆ ನಂಬಿಕೆ ಇಟ್ಟರೆ ನಿರಾಸೆ ಮಾಡುವುದಿಲ್ಲ ಎಂದು ಅವರು ಭರವಸೆ ನೀಡಿದರು.
ಜೈಲಿಗೆ ಹೋಗಿ ಬಂದಿದ್ದೇನೆ, ನೀವ್ಯಾವ ಲೆಕ್ಕ!
ಸಭೆಯಲ್ಲಿ ಕಿರಣ್ ಹೆಬ್ಬಾರ್ ಎಂಬ ನಿವಾಸಿಯೊಬ್ಬರು ಬರೆದ ಪತ್ರದ ವಿಷಯವನ್ನು ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳ ದೊಡ್ಡ ಮತದಾರರ ಸಮೂಹವಿದ್ದು, ಸರ್ಕಾರದ ಮೇಲೆ ಪರಿಣಾಮ ಬೀರಬಲ್ಲೆವು ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿತ್ತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಡಿಸಿಎಂ, ಈ ದೇಶದ ಪ್ರಧಾನಿ ಹಾಗೂ ಗೃಹ ಸಚಿವರಿಗೇ ಹೆದರದೆ ಜೈಲಿಗೆ ಹೋಗಿ ಬಂದಿರುವ ತಾವು, ಇನ್ಯಾರೋ ವ್ಯಕ್ತಿಯ ಪತ್ರಕ್ಕೆ ಹೆದರುತ್ತೇನೆಯೇ ಎಂದು ಪ್ರಶ್ನಿಸಿದರು. ಯಾರಿಗೂ ಜಗ್ಗುವ ಅಥವಾ ಹೆದರುವ ಪ್ರಮೇಯವೇ ಇಲ್ಲದಿದ್ದರೂ, ಮಾತನಾಡುವಾಗ ಯಾರೊಂದಿಗೆ ಮಾತನಾಡುತ್ತಿದ್ದೇವೆ ಎಂಬ ಕನಿಷ್ಠ ಪರಿಜ್ಞಾನ ಇರಬೇಕು ಎಂದು ಎಚ್ಚರಿಸಿದರು. ಎಲ್ಲರನ್ನೂ ಆಟವಾಡಿಸಿದಂತೆ ತಮ್ಮನ್ನು ಆಟವಾಡಿಸಲು ಸಾಧ್ಯವಿಲ್ಲ ಎಂದು ಅವರು ಖಾರವಾಗಿ ನುಡಿದರು.
ಅನೇಕ ಯೋಜನೆಗಳ ಪ್ರಸ್ತಾಪ
ಬೆಂಗಳೂರಿನ ಅಭಿವೃದ್ಧಿಯ ಕನಸನ್ನು ಬಿಚ್ಚಿಟ್ಟ ಶಿವಕುಮಾರ್, ನಗರದ ಸ್ವರೂಪ ಬದಲಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ, 26 ಸಾವಿರ ಕೋಟಿ ರೂ. ವೆಚ್ಚದಲ್ಲಿ 130 ಕಿ.ಮೀ. ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್, 40 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ ಹಾಗೂ 117 ಕಿ.ಮೀ. ಹೊಸ ಮೇಲ್ಸೇತುವೆಗಳ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ ಎಂದು ವಿವರಿಸಿದರು. 50x80 ಅಡಿವರೆಗಿನ ನಿವೇಶನಗಳಿಗೆ ಸುಲಭವಾಗಿ ಕಟ್ಟಡ ನಕ್ಷೆ ಅನುಮೋದನೆ ಸಿಗುವಂತೆ 'ನಂಬಿಕೆ ನಕ್ಷೆ' ಜಾರಿಗೆ ತರಲಾಗಿದೆ. ಬೆಂಗಳೂರಿನಲ್ಲಿ ತಮ್ಮ ಶಾಶ್ವತ ಹೆಜ್ಜೆಗುರುತು ಉಳಿಯಬೇಕು ಎಂಬ ಆಸೆ ತಮಗಿದೆ, ಆದರೆ ಇದಕ್ಕೆಲ್ಲ ಸಮಯ ಮತ್ತು ತಾಳ್ಮೆ ಅಗತ್ಯವಿದ್ದು ಒಂದೇ ದಿನದಲ್ಲಿ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಹಿಂದಿನ ಚುನಾವಣೆಗಳಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳಿಂದ ನಿರೀಕ್ಷಿತ ಬೆಂಬಲ ಸಿಗದ ಬಗ್ಗೆಯೂ ಡಿಸಿಎಂ ಇದೇ ವೇದಿಕೆಯಲ್ಲಿ ತಮ್ಮ ಬೇಸರವನ್ನು ಹೊರಹಾಕಿದರು. ಚುನಾವಣೆ ಸಮಯದಲ್ಲಿ ನೂರಾರು ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿ ಬೆಂಬಲ ಕೋರಿದ್ದೆ ಮತ್ತು ನಗರದಲ್ಲಿ ಕೊಳವೆಬಾವಿಗಳು ಬತ್ತಿಹೋದಾಗ ಕಷ್ಟಪಟ್ಟು ನೀರಿನ ವ್ಯವಸ್ಥೆ ಮಾಡಿ ಸಹಾಯ ಮಾಡಿದ್ದೆ ಎಂದು ಸ್ಮರಿಸಿದರು. ಇಷ್ಟೆಲ್ಲಾ ಮಾಡಿದರೂ ತಮ್ಮ ತಮ್ಮ ಡಿ.ಕೆ. ಸುರೇಶ್ ಅವರನ್ನು ಒಂದೇ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಅಂತರದಿಂದ ಸೋಲಿಸಲಾಯಿತು, ಆಗ ತಮಗೆ ಯಾಕೆ ಸಹಾಯ ಮಾಡಬೇಕು ಎಂದು ಅನಿಸಿದ್ದು ನಿಜ ಎಂದು ಅವರು ನೇರವಾಗಿ ಹೇಳಿದರು. ಆದರೂ, ಜನರ ಮೇಲೆ ಪ್ರೀತಿ-ವಿಶ್ವಾಸವಿಟ್ಟು ಈ ವಿಧೇಯಕದ ಬಗ್ಗೆ ಅಭಿಪ್ರಾಯ ಕೇಳಲು ಕರೆದಿದ್ದು, ಈ ಹೊಸ ಕಾನೂನು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.