ಆಳಂದದಲ್ಲಿ ಬಿಜೆಪಿ ನಾಯಕರ ವಿರುದ್ಧ ಕ್ರಮ ಖಚಿತ: ಡಿಸಿಎಂ ಡಿ.ಕೆ. ಶಿವಕುಮಾರ್

"ಈ ಪ್ರಕರಣದಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಅಕ್ರಮ ನಡೆದಿರುವುದು ದೃಢಪಟ್ಟಿದೆ. ಪೊಲೀಸರು ಗಂಭೀರವಾದ ತನಿಖೆ ನಡೆಸಿ ಚಾರ್ಜ್ ಶೀಟ್ ಹಾಕಿದ್ದಾರೆ. ಮೊಬೈಲ್ ಫೋನ್‌ನಲ್ಲಿದ್ದ ದಾಖಲೆಗಳು ಡಿಲೀಟ್ ಆಗಿವೆ ಎಂಬ ಮಾಹಿತಿಯಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

Update: 2025-12-13 14:41 GMT

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಬಿಜೆಪಿ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌

Click the Play button to listen to article

"ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತ ಕಳ್ಳತನ ನಡೆದಿರುವುದು ಸತ್ಯ. ಈ ಗಂಭೀರ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ವಿರುದ್ಧ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸುವ ಮೂಲಕ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಂಡಿದೆ," ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಸದಾಶಿವನಗರದ ತಮ್ಮ ನಿವಾಸ ಹಾಗೂ ವಿಧಾನಸೌಧದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮತ ಕಳ್ಳತನದ ಆರೋಪ ಮತ್ತು ತನಿಖೆಯ ಬಗ್ಗೆ ವಿವರಣೆ ನೀಡಿದರು. "ಈ ಪ್ರಕರಣದಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಅಕ್ರಮ ನಡೆದಿರುವುದು ದೃಢಪಟ್ಟಿದೆ. ಪೊಲೀಸರು ಗಂಭೀರವಾದ ತನಿಖೆ ನಡೆಸಿ ಚಾರ್ಜ್ ಶೀಟ್ ಹಾಕಿದ್ದಾರೆ. ಮೊಬೈಲ್ ಫೋನ್‌ನಲ್ಲಿದ್ದ ದಾಖಲೆಗಳು ಡಿಲೀಟ್ ಆಗಿವೆ ಎಂಬ ಮಾಹಿತಿಯಿದೆ. ಇದರ ಬಗ್ಗೆ ವರದಿ ತರಿಸಿಕೊಂಡು ಪರಿಶೀಲಿಸಿದ ನಂತರ ಮಾತನಾಡುತ್ತೇನೆ," ಎಂದು ಹೇಳಿದರು.

ಸದನದಲ್ಲಿ ಪ್ರತಿಧ್ವನಿಸಲಿರುವ ಮತಗಳ್ಳತನ

ಈ ವಿಷಯವನ್ನು ಮಂಗಳವಾರ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಡಿಸಿಎಂ ತಿಳಿಸಿದರು. "ನಮ್ಮ ಶಾಸಕರು ಸದನದಲ್ಲಿ ಈ ಬಗ್ಗೆ ದನಿ ಎತ್ತಲಿದ್ದಾರೆ. ಇದು ಕೇವಲ ಕರ್ನಾಟಕದ ದನಿಯಲ್ಲ, ಇಡೀ ಭಾರತದ ದನಿ. ಜನರ ಕೃಪೆಯಿಂದ ನಾವು ಅಧಿಕಾರಕ್ಕೆ ಬಂದಿದ್ದು, ಪ್ರಜಾಪ್ರಭುತ್ವದ ರಕ್ಷಣೆ ನಮ್ಮ ಹೊಣೆ," ಎಂದರು. ರಾಹುಲ್ ಗಾಂಧಿ ಅವರ ಸಲಹೆಯಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ 'ಲೀಗಲ್ ಬ್ಯಾಂಕ್' (ಕಾನೂನು ನೆರವು ಘಟಕ) ಆರಂಭಿಸಿ ಹೋರಾಟ ಮಾಡುವುದಾಗಿ ತಿಳಿಸಿದರು.

ದೆಹಲಿಯಲ್ಲಿ ಬೃಹತ್ ಪ್ರತಿಭಟನೆ

ಮತದಾರರ ಹಕ್ಕಿನ ರಕ್ಷಣೆಗಾಗಿ ಕಾಂಗ್ರೆಸ್ ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಬಗ್ಗೆ ಮಾತನಾಡಿದ ಶಿವಕುಮಾರ್, "ಮತ ಕಳ್ಳತನದ ವಿರುದ್ಧದ ಹೋರಾಟ ನಮ್ಮ ರಾಜ್ಯದಿಂದಲೇ (ಚಿಲುಮೆ ಸಂಸ್ಥೆಯ ಅಕ್ರಮದ ವಿರುದ್ಧ) ಆರಂಭವಾಯಿತು. ಈಗ ರಾಷ್ಟ್ರಮಟ್ಟದಲ್ಲಿ ಜಾಗೃತಿ ಮೂಡಿಸಲು ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ನಾವು ಚುನಾವಣೆಯಲ್ಲಿ ಸೋತಿರಬಹುದು, ಆದರೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ. ರಾಜ್ಯದಿಂದ 100ಕ್ಕೂ ಹೆಚ್ಚು ಶಾಸಕರು, ಪರಿಷತ್ ಸದಸ್ಯರು ಹಾಗೂ ಸಾವಿರಾರು ಕಾರ್ಯಕರ್ತರು ದೆಹಲಿಗೆ ತೆರಳಿದ್ದಾರೆ," ಎಂದು ಮಾಹಿತಿ ನೀಡಿದರು.

ನ್ಯಾಷನಲ್ ಹೆರಾಲ್ಡ್ ನೋಟಿಸ್‌ಗೆ ಉತ್ತರ

ತಮ್ಮ ದೆಹಲಿ ಪ್ರವಾಸದ ಬಗ್ಗೆ ಸ್ಪಷ್ಟನೆ ನೀಡಿದ ಡಿಸಿಎಂ, "ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ನೋಟಿಸ್ ಬಂದಿದೆ. ಅದಕ್ಕೆ ಉತ್ತರ ನೀಡಬೇಕಿರುವುದರಿಂದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಅಲ್ಲಿ ಅಧಿಕಾರಿಗಳಿಗೆ ಸೂಕ್ತ ಉತ್ತರ ನೀಡುತ್ತೇನೆ," ಎಂದರು. ಇದೇ ವೇಳೆ, ಡ್ರಗ್ ಪೆಡ್ಲರ್‌ಗಳ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸುವ ಗೃಹ ಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

Tags:    

Similar News