ನನ್ನ ಗೆಲುವಿಗೆ ಕಾಂಗ್ರೆಸ್ ನಾಯಕರ ಸಹಕಾರವೂ ಇತ್ತು: ವಿ. ಸೋಮಣ್ಣ ಅಚ್ಚರಿಯ ಹೇಳಿಕೆ
ಲೋಕಸಭೆ ಚುನಾವಣೆಯ ಉಸ್ತುವಾರಿ ವಹಿದ್ದ ಸಚಿವ ಜಿ. ಪರಮೇಶ್ವರ ಅವರು ವೇದಿಕೆಯ ಮೇಲಿದ್ದಾಗಲೇ ಸೋಮಣ್ಣ ಈ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಕೇವಲ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾತ್ರವಲ್ಲ, ಕಾಂಗ್ರೆಸ್ ನಾಯಕರು ಕೂಡ ಸಹಕಾರ ನೀಡಿದ್ದಾರೆ ಎಂದು ತುಮಕೂರು ಸಂಸದ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಶನಿವಾರ ನಗರದ ಹೊರವಲಯದ ಹೆಗ್ಗೆರೆಯಲ್ಲಿ ರೈಲ್ವೆ ಮೇಲುಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಅಚ್ಚರಿಯ ವಿಷಯವನ್ನು ಬಹಿರಂಗಪಡಿಸಿದರು. ವಿಶೇಷವೆಂದರೆ, ಲೋಕಸಭೆ ಚುನಾವಣೆಯ ಉಸ್ತುವಾರಿ ವಹಿದ್ದ ಸಚಿವ ಜಿ. ಪರಮೇಶ್ವರ ಅವರು ವೇದಿಕೆಯ ಮೇಲಿದ್ದಾಗಲೇ ಸೋಮಣ್ಣ ಈ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಪಿ. ಮುದ್ದಹನುಮೇಗೌಡ ಅವರ ಸೋಲಿಗೆ ಸ್ವಪಕ್ಷೀಯರೇ ಕಾರಣರಾಗಿದ್ದರೇ ಎಂಬ ಗುಮಾನಿಗೆ ಸೋಮಣ್ಣ ಅವರ ಮಾತುಗಳು ಪುಷ್ಟಿ ನೀಡುವಂತಿವೆ.
ಪರಮೇಶ್ವರ್ ಸಿಎಂ ಆಗಲಿ ಎಂದ ಸೋಮಣ್ಣ
ಕಾರ್ಯಕ್ರಮದಲ್ಲಿ ಸಚಿವ ಜಿ. ಪರಮೇಶ್ವರ್ ಅವರನ್ನು ಮುಕ್ತಕಂಠದಿಂದ ಹೊಗಳಿದ ಸೋಮಣ್ಣ, "ಪರಮೇಶ್ವರ್ ಅವರು ಮುಂದಿನ ಮುಖ್ಯಮಂತ್ರಿಯಾಗಲಿ," ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ, "ಹಾಗಾದರೆ ಡಿ.ಕೆ. ಶಿವಕುಮಾರ್ ಏನಾಗಬೇಕು?" ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, "ಅದರ ಬಗ್ಗೆ ಆಮೇಲೆ ಮಾತನಾಡೋಣ, ಅದೆಲ್ಲ ಸೆಕೆಂಡರಿ. ಅವರ ನಡವಳಿಕೆಯೂ ಬೇಕಲ್ಲ," ಎಂದು ಮಾರ್ಮಿಕವಾಗಿ ಉತ್ತರಿಸುವ ಮೂಲಕ ವಿಷಯಾಂತರ ಮಾಡಿದರು.
ಸೋಮಣ್ಣ ಅವರ ಈ ಹೇಳಿಕೆಗಳು ತುಮಕೂರು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕಾಂಗ್ರೆಸ್ ಒಳಗೆ ನಡೆದಿರಬಹುದಾದ ಒಳ ಒಪ್ಪಂದಗಳ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.