ಹೂವಿನ ವ್ಯಾಪಾರಿಯಿಂದ ಒಂದು ವರ್ಷದಲ್ಲಿ 54 ಲಕ್ಷ ರೂ.ವಹಿವಾಟು, ನೋಟೀಸ್‌ ಜಾರಿ

ಹಲವಾರು ವ್ಯಾಪಾರಿಗಳು ಜಿಎಸ್‌ಟಿ ನೋಂದಣಿ ಮಾಡಿಕೊಳ್ಳದೆ ಯುಪಿಐ ಮೂಲಕವೇ ವರ್ಷವೊಂದರಲ್ಲಿ ಮಿತಿ ಮೀರಿ ಲಕ್ಷಾಂತರ ರೂಪಾಯಿ ಸ್ವೀಕರಿಸಿರುವುದು ವಾಣಿಜ್ಯ ತೆರಿಗೆ ಇಲಾಖೆ ಪರಿಶೀಲನೆ ವೇಳೆ ಕಂಡು ಬಂದಿದೆ.;

Update: 2025-07-19 08:56 GMT

ಸಾಂದರ್ಭಿಕ ಚಿತ್ರ

ಹೂವಿನ ವ್ಯಾಪಾರಿಯೊಬ್ಬರು ಹಣಕಾಸು ವರ್ಷದಲ್ಲಿ ಯುಪಿಐ ಮೂಲಕ 54 ಲಕ್ಷ ರೂ. ವ್ಯವಹಾರ ನಡೆಸಿದ್ದು,  ಸ್ವೀಕೃತವಾಗಿರುವ ಮೊತ್ತದ ಮೇಲೆ ಶೇ.18 ಜಿಎಸ್‌ಟಿ ಜತೆಗೆ ದಂಡ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ ನೀಡಿದೆ.     

ನಗರದಾದ್ಯಂತ ಸಣ್ಣ ವ್ಯಾಪಾರಿಗಳ ಯುಪಿಐ ವಹಿವಾಟು ಆಧರಿಸಿ ವಾಣಿಜ್ಯ ಇಲಾಖೆ ನೋಟಿಸ್‌ ನೀಡುತ್ತಿದ್ದು, ಇವರಲ್ಲಿ ಹಲವಾರು ಮಂದಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳದೆ ಯುಪಿಐ ಮೂಲಕವೇ ಮಿತಿ ಮೀರಿ ಲಕ್ಷಾಂತರ ರೂಪಾಯಿ ಸ್ವೀಕರಿಸಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ. ಸ್ವೀಕರಿಸಿರುವ ಮೊತ್ತದ ಕುರಿತು ವ್ಯಾಪಾರಿಗಳು ಸೂಕ್ತ ವಿವರಣೆ ನೀಡಿದಲ್ಲಿ ಜಿಎಸ್‌ಟಿ ಮೊತ್ತ ಕಡಿಮೆಯಾಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ತಿಳಿಸಿದೆ. 

ಜಿಗಣಿಯ ಮಾಂಸದ ಅಂಗಡಿ ಮಾಲೀಕರೊಬ್ಬರು ಯುಪಿಐ ಮೂಲಕ 2021-22 ರಲ್ಲಿ 31.73 ಲಕ್ಷ ರೂ, 2022-23 ರಲ್ಲಿ 57.72 ಲಕ್ಷ ರೂ, 2023-24 ರಲ್ಲಿ 53.58 ಲಕ್ಷ ರೂ, 2024-25 ರಲ್ಲಿ 66.57 ಲಕ್ಷ ರೂ. ಸ್ವೀಕರಿಸಿರುವುದು ಪತ್ತೆಯಾಗಿದೆ. ಕಾಂಡಿಮೆಂಟ್ಸ್‌ ಮಾಲೀಕರೊಬ್ಬರು 2022-23 ರಲ್ಲಿ 29.63 ಲಕ್ಷ ರೂ, 2023-24 ರಲ್ಲಿ 53 ಲಕ್ಷ ರೂ, 2024-25 ರಲ್ಲಿ 55 ಲಕ್ಷ ರೂ. ಸ್ವೀಕರಿಸಿರುವುದು ಪತ್ತೆಯಾಗಿದ್ದು, ನೋಟಿಸ್‌ ನೀಡಲಾಗಿದೆ.

ಹಣಕಾಸು ವರ್ಷವೊಂದರಲ್ಲೇ ಪೇ ಟಿಎಂ ಹಾಗೂ ಪೋನ್‌ ಪೇ ಮೂಲಕ 40 ಲಕ್ಷಕ್ಕೂ ಅಧಿಕ ಹಣ ರವಾನೆಯಾಗಿದೆ. ಯುಪಿಐ ಹೊರತಾಗಿ ನಗದು ವ್ಯಾಪಾರ ಶೇ.30 ರಷ್ಟು ಪರಿಗಣಿಸಿದರೂ ವಹಿವಾಟಿನ ಮೊತ್ತ ಹೆಚ್ಚಳವಾಗಲಿದೆ. ವ್ಯಾಪಾರಿಗಳು ಜಿಎಸ್‌ಟಿ ನೋಂದಣಿ ಮಾಡಿಕೊಂಡರೆ ಶೇ.18 ರಷ್ಟು ತೆರಿಗೆ ಪಾವತಿಸಬೇಕು. ಕಳೆದ ವರ್ಷಗಳ ವಹಿವಾಟಿಗೆ ದಂಡ ಕಟ್ಟಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಬಡ ವ್ಯಾಪಾರಿಗಳಿಗೆ ಬರೆ

ಬೀದಿ ಬದಿ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌ ನೀಡುವ ಮೂಲಕ ಸರ್ಕಾರ ಅವರ ಆದಾಯದ ಮೇಲೆ ಬರೆ ಎಳೆಯುತ್ತಿದೆ. ಬೊಕ್ಕಸದಲ್ಲಿ ಹಣ ಖಾಲಿಯಾಗಿರುವುದರಿಂದ ಆದಾಯ ಕ್ರೂಢೀಕರಣಕ್ಕೆ ಸರ್ಕಾರ ಈ ಕ್ರಮ ಅನುಸರಿಸುತ್ತಿದೆ ಎಂದು ಬಿಜಿಪಿ ರಾಜ್ಯಾಧ್ಯಕ್ಷ ಬಿ.ವೈ, ವಿಜಯೇಂದ್ರ ಆರೋಪಿಸಿದ್ದಾರೆ. 

ವ್ಯಾಪಾರಿಗಳಿಂದ ಬಂದ್‌ ಎಚ್ಚರಿಕೆ 

ನಗರದ ಬೇಕರಿ, ಕಾಂಡಿಮೆಂಟ್ಸ್‌, ಕಾಫಿ-ಟೀ ಅಂಗಡಿ, ಹೂವಿನ ವ್ಯಾಪರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ‌ ನೋಟಿಸ್ ನೀಡಿರುವುದನ್ನು ಖಂಡಿಸಿ ಇತ್ತೀಚೆಗೆ ವ್ಯಾಪಾರಿಗಳ ಸಂಘ ಸಭೆ ನಡೆಸಿತ್ತು. ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ನೋಟಿಸ್‌ ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ವ್ಯಾಪಾರಿಗಳು ಅಂಗಡಿಗಳನ್ನು ಬಂದ್‌ ಮಾಡಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

Tags:    

Similar News