Conference in Mysore to protest governments acquittal in RCB case
x

ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಾಕ್ಷ ಬಿ.ವೈ. ವಿಜಯೇಂದ್ರ

ಕಾಂಗ್ರೆಸ್​​ನದ್ದು ಸಾಧನಾ ಸಮಾವೇಶವಲ್ಲ; ಆರ್​​ಸಿಬಿಯನ್ನು ಬಲಿಪಶು ಮಾಡಿದ ಸಂಭ್ರಮೋತ್ಸವ; ವಿಜಯೇಂದ್ರ

ಕಾಲ್ತುಳಿತ ಪ್ರಕರಣದ ಹೊಣೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೊರಬೇಕಿತ್ತು. ಆದರೆ, ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಬಲಿ ಕೊಟ್ಟಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.


ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರ ವರದಿ ಮೂಲಕ ಆರ್‌ಸಿಬಿಯನ್ನು ಬಲಿಪಶು ಮಾಡಲಾಗಿದ್ದು, ತಾವು ನಿರಪರಾಧಿ ಎಂದು ಬಿಂಬಿಸಿಕೊಂಡಿದ್ದಕ್ಕಾಗಿ ಸರ್ಕಾರ ಸಾಧನಾ ಸಮಾವೇಶ ಮಾಡುತ್ತಿದೆಯೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೊರಬೇಕಿತ್ತು. ಆದರೆ, ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಬಲಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು. ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿ 11 ಅಭಿಮಾನಿಗಳು ಮೃತಪಟ್ಟಿದ್ದರು. ನಿವೃತ್ತ ನ್ಯಾ. ಮೈಕಲ್ ಕುನ್ಹಾ ಅವರು ಸಂಪೂರ್ಣ ವರದಿ ನೀಡಿಲ್ಲ. ಆರ್‌ಸಿಬಿ ಗೆಲುವಿನಲ್ಲಿ ತಮ್ಮ ಪ್ರಚಾರ ಗಿಟ್ಟಿಸಿಕೊಳ್ಳಲು ಸಿಎಂ ಮತ್ತು ಡಿಸಿಎಂ ಪೈಪೋಟಿ ಮಾಡಿದ್ದರು. ಆ ಪ್ರಚಾರದ ಹಪಾಹಪಿಯಿಂದ 11 ಜನರು ಪ್ರಾಣ ಕಳೆದುಕೊಂಡರು. ಇದೀಗ ಅಪೂರ್ಣ ವರದಿಯನ್ನು ಹೈಕೋರ್ಟಿಗೆ ನೀಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಸಿಎಂ ರಾಜೀನಾಮೆಗೆ ಆಗ್ರಹ

ನವೆಂಬರ್ ವೇಳೆಗೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯುವುದು ನಿಶ್ಚಿತ ಎಂದು ವಿಜಯೇಂದ್ರ ಭವಿಷ್ಯ ನುಡಿದರು. ತಂತ್ರ-ಕುತಂತ್ರಗಳಿಗೆ ಅದರದೇ ಆದ ಇತಿಮಿತಿ ಇರುತ್ತದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಸಿಎಂ ಅಧಿಕಾರ ಹಂಚಿಕೆ ಕುರಿತು ಎರಡೂವರೆ ವರ್ಷದ ಒಪ್ಪಂದ ಆಗಿದೆ ಎಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಈಗ ರಾಜೀನಾಮೆ ಕೊಡಲೇಬೇಕಾದ ಸನ್ನಿವೇಶ ನಿರ್ಮಾಣವಾಗಿದೆ ಎಂದು ವಿಜಯೇಂದ್ರ ಆಗ್ರಹಿಸಿದರು.

ಸರ್ಕಾರದ ವಿರುದ್ಧ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದ ಆರೋಪ

ಸರ್ಕಾರ ರಚನೆಯಾಗಿ ಎರಡೂವರೆ ವರ್ಷವಾಗಿದ್ದು, ಇವರ ಆಡಳಿತದ ಬಗ್ಗೆ ರಾಜ್ಯದ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ವಿಜಯೇಂದ್ರ ಆರೋಪಿಸಿದರು. ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹವಾಗದೆ ಜಿಎಸ್‌ಟಿ ಮೂಲಕ ಬೀದಿ ವ್ಯಾಪಾರಿಗಳಿಗೂ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ವಿರೋಧ ಪಕ್ಷವಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದು, ನಮಗೆ ಸಂತೃಪ್ತಿ ಇದೆ ಎಂದರು.

ಬಿಜೆಪಿ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿತ್ತು. ಈಗ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದೆ. ಆದರೆ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರನ್ನು ಅಪಮಾನ ಮಾಡಿ ಸಿಎಂ ಗಾದಿಯಿಂದ ಕೆಳಗಿಳಿಸಿತ್ತು. "ಅರಸು ಅವರ ದಾಖಲೆಯನ್ನು ಮುರಿಯಬೇಕೆಂದು ಹಪಾಹಪಿ ಸಿದ್ದರಾಮಯ್ಯನವರಲ್ಲಿದೆ. ಅರಸುಗೆ ಕಾಂಗ್ರೆಸ್ ಮಾಡಿದ ಅಪಮಾನವನ್ನು ಸಿಎಂ ನೆನಪಿಸಿಕೊಳ್ಳಲಿ" ಎಂದು ವಿಜಯೇಂದ್ರ ಹೇಳಿದರು.

ಅಹಿಂದ ಕೇವಲ ಮತ ಬ್ಯಾಂಕ್: ಮುಖವಾಡ ಕಳಚಿಬಿದ್ದಿದೆ

ಮುಖ್ಯಮಂತ್ರಿ ತಮ್ಮ ಕುರ್ಚಿ ಉಳಿವಿಗೆ ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು. ಅಹಿಂದ ಜನರ ಭಜನೆ ಮಾಡುತ್ತಿದ್ದರೂ ಆ ಸಮುದಾಯಗಳಿಗೆ ನ್ಯಾಯ ನೀಡಲು ಸಾಧ್ಯವಾಗಿಲ್ಲ. "ನಿಮ್ಮ ಮುಖವಾಡ ಕಳಚಿ ಬಿದ್ದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆದೇಶದಂತೆ ಸಿಎಂ ಕಾಂತರಾಜು ವರದಿಯನ್ನು ಕಸದ ಬುಟ್ಟಿಗೆ ಹಾಕಿದರು. ಅಹಿಂದ ಸಮುದಾಯಗಳು ಇವರಿಗೆ ಕೇವಲ ಮತಬ್ಯಾಂಕ್. ಆ ಸಮುದಾಯದ ಅಭಿವೃದ್ಧಿಗೆ ಬದ್ಧತೆ, ಕಳಕಳಿ ಇಲ್ಲ" ಎಂದು ವಾಗ್ದಾಳಿ ನಡೆಸಿದರು.

ಮೈಸೂರು ಜಿಲ್ಲೆಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಾವೇಶ ಮಾಡುತ್ತಿಲ್ಲ. ಬದಲಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಂದರ್ಭ ಸನ್ನಿಹಿತವಾಗುತ್ತಿರುವುದರಿಂದ ಈಗ ಸಮಾವೇಶದ ಮೂಲಕ ಕಾಂಗ್ರೆಸ್ ಹೈಕಮಾಂಡಿಗೆ ಬೆದರಿಸುವ ಷಡ್ಯಂತ್ರ ಇದಾಗಿದೆ. ಮುಡಾ ಹಗರಣದ ವಿರುದ್ಧ ಬಿಜೆಪಿ ಪಾದಯಾತ್ರೆ ಮಾಡಿತ್ತು. "ಆತಂಕಕ್ಕೆ ಒಳಗಾದ ಸಿಎಂ ಮೈಸೂರು ಮತ್ತಿತರ ಕಡೆ ಸಮಾವೇಶ ಮಾಡಿದ್ದರು. ಮುಖ್ಯಮಂತ್ರಿ ಕುರ್ಚಿಗೆ ಕಂಟಕ ಬಂದಾಗ, ರಾಜೀನಾಮೆ ಕೊಡುವ ಸಂದರ್ಭದಲ್ಲಿ ಅಹಿಂದ ಸಮುದಾಯಗಳು ನೆನಪಾಗುತ್ತವೆ" ಎಂದು ವಿಜಯೇಂದ್ರ ತಿಳಿಸಿದರು.

Read More
Next Story