Sugarcane Crisis:ಗಾಜಿನ ಚೂರುಗಳ ಮೇಲೆ ಉರುಳಿ ರೈತನ ಆಕ್ರೋಶ, ಕಬ್ಬಿಗೆ ನ್ಯಾಯಯುತ ದರಕ್ಕಾಗಿ ವಿನೂತನ ಪ್ರತಿಭಟನೆ

ಕಳೆದ ಎಂಟು ದಿನಗಳಿಂದ ಗುರ್ಲಾಪುರದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು, ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಕಾರಣ, ಹೋರಾಟವನ್ನು ತೀವ್ರಗೊಳಿಸಿದ್ದಾರೆ.

Update: 2025-11-07 07:14 GMT

ರೈತ ಹೋರಾಟಗಾರರು ಗ್ಲಾಸ್‌ ಮೇಲೆ ಮಲಗಿರುವುದು.

Click the Play button to listen to article

ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸದ ಸರ್ಕಾರದ ಧೋರಣೆಯನ್ನು ಖಂಡಿಸಿ, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿರುವ ರೈತರ ಹೋರಾಟವು ಶುಕ್ರವಾರ ಮತ್ತಷ್ಟು ತೀವ್ರಗೊಂಡಿದೆ. ಸುರೇಶ್ ಬೆಳವಿ ಎಂಬ ರೈತರೊಬ್ಬರು ಗಾಜಿನ ಬಾಟಲಿಗಳನ್ನು ಒಡೆದು, ಚೂಪಾದ ಗಾಜಿನ ಚೂರುಗಳ ಮೇಲೆ ಉರುಳು ಸೇವೆ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ಸರ್ಕಾರದ ಗಮನ ಸೆಳೆಯಲು ಯತ್ನಿಸಿದ್ದಾರೆ.

ಕಳೆದ ಎಂಟು ದಿನಗಳಿಂದ ಗುರ್ಲಾಪುರದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು, ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಕಾರಣ, ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಇಂದು ಬೆಳಿಗ್ಗೆ, ಸುರೇಶ್ ಬೆಳವಿ ಎಂಬ ರೈತರು, ಖಾಲಿ ಬಾಟಲಿಗಳನ್ನು ಒಡೆದು, ಗಾಜಿನ ಚೂರುಗಳನ್ನು ರಸ್ತೆಯ ಮೇಲೆ ಹರಡಿ, ಅದರ ಮೇಲೆ ಉರುಳು ಸೇವೆ ಮಾಡಿದರು. ಕೊರೆಯುವ ಗಾಜಿನ ಚೂರುಗಳನ್ನೂ ಲೆಕ್ಕಿಸದೆ ಅವರು ಉರುಳು ಸೇವೆ ಮಾಡಿ, "ಇವತ್ತಿನ ಸಭೆಯಲ್ಲಿ ಕಬ್ಬಿಗೆ ದರ ನಿಗದಿ ಮಾಡಲೇಬೇಕು" ಎಂದು ಆಗ್ರಹಿಸಿದರು. ಈ ದೃಶ್ಯವು ಎಲ್ಲರನ್ನೂ ಒಂದು ಕ್ಷಣ ಬೆಚ್ಚಿಬೀಳಿಸಿತು.

ಸರ್ಕಾರದ ಸಭೆಯತ್ತ ಎಲ್ಲರ ಚಿತ್ತ

ಕಬ್ಬು ಬೆಳೆಗಾರರ ಹೋರಾಟವು ತೀವ್ರಗೊಳ್ಳುತ್ತಿದ್ದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕಬ್ಬಿಗೆ ಸೂಕ್ತ ದರ ನಿಗದಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ, ಇಂದಿನ ಸಭೆಯಲ್ಲೂ ತಮ್ಮ ಬೇಡಿಕೆ ಈಡೇರದಿದ್ದರೆ, ರಾಷ್ಟ್ರೀಯ ಹೆದ್ದಾರಿ ತಡೆದು, ಉಗ್ರ ಹೋರಾಟ ನಡೆಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಗುರ್ಲಾಪುರದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಗೆ ರಾಜ್ಯದ ವಿವಿಧ ಭಾಗಗಳಿಂದ ರೈತರು ಮತ್ತು ಸಂಘಟನೆಗಳು ಬೆಂಬಲ ಸೂಚಿಸುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.

Tags:    

Similar News