Sugarcane growers struggle; CM should intervene to fix fair prices
x

ಸಿಎಂ ಸಿದ್ದರಾಮಯ್ಯ ಹಾಗೂ ಸಂಸದ ಬಸವರಾಜ ಬೊಮ್ಮಾಯಿ

ಕಬ್ಬು ಬೆಳೆಗಾರರಿಗೆ ನ್ಯಾಯ ಸಮ್ಮತ ದರ ನೀಡಲು ಮಾಜಿ ಸಿಎಂ ಆಗ್ರಹ

ರಾಜ್ಯದ ಕಬ್ಬು ಬೆಳೆಗಾರರು ನ್ಯಾಯ ಸಮ್ಮತ ಬೆಲೆ ನಿಗದಿಗೆ ಒತ್ತಾಯಿಸಿ ಕಳೆದ ಏಳು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಆಗ್ರಹಿಸಿದ್ದೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.


Click the Play button to hear this message in audio format

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ ಮಾದರಿ ನ್ಯಾಯ ಸಮ್ಮತ ಬೆಲೆ ನಿಗದಿಗೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಸ್ಪಂದಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

ರಾಜ್ಯದ ಕಬ್ಬು ಬೆಳೆಗಾರರ ಬೇಡಿಕೆಯಂತೆ ಪ್ರತಿ ಟನ್ ಕಬ್ಬಿಗೆ 3500 ರೂ. ದರ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು. ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಟನ್ ಕಬ್ಬಿಗೆ 3300 ರೂ. ಹಾಗೂ ರಾಜ್ಯ ಸರ್ಕಾರ 200. ರೂ. ನೀಡಿ, ರೈತರ ಬೇಡಿಕೆ ಈಡೇರಿಸಬೇಕು. ಆದರೆ, ಸಿಎಂ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಅಸಡ್ಡೆ ಭಾವನೆ ವ್ಯಕ್ತಪಡಿಸಿ, ಕೇವಲ ಸಿಎಂ ಸ್ಥಾನ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ ಎಂದು ಮಾಜಿ ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದರ ನಿಗದಿ ಅಧಿಕಾರ ರಾಜ್ಯಕ್ಕಿದೆ

ಕಬ್ಬು ಬೆಳೆಗಾರರ ಸಮಸ್ಯೆ ಪ್ರತಿ ವರ್ಷ ಇರುತ್ತದೆ. ಕೇಂದ್ರ ಸರ್ಕಾರ ನ್ಯಾಯ ಸಮ್ಮತ ಬೆಲೆ (ಎಫ್‌ಆರ್‌ಪಿ) ನಿಗದಿ ಮಾಡಿದ ನಂತರ ಸಕ್ಕರೆ ಕಾರ್ಖಾನೆಗಳು ಎಥೆನಾಲ್, ವಿದ್ಯುತ್ ಸೇರಿದಂತೆ ಇತರೆ ಉಪ ಉತ್ಪನ್ನ ತಯಾರಿಸುತ್ತಾರೆ. ಹೀಗಾಗಿ ರೈತರು ಕೇಳುವ ದರ ನೀಡಲು ಸಾಧ್ಯವಿದೆ. ರಾಜ್ಯ ಸರ್ಕಾರ ಕಬ್ಬಿನ ದರವನ್ನು ನಿಗದಿ ಮಾಡಬೇಕು. ರಾಜ್ಯ ಸರ್ಕಾರಕ್ಕೆ ಕಾನೂ‌ನು ಪ್ರಕಾರ, ದರ ನಿಗದಿ ಮಾಡಲು ಅಧಿಕಾರವಿದೆ. ರೈತರ ಬೇಡಿಕೆ ತಕ್ಕಂತೆ ದರ ನಿಗದಿ ಮಾಡಿ ಸರ್ಕಾರ ಆದೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸಕ್ಕರೆ ಹಾಗೂ ಇತರ ಉಪ ಉತ್ಪನ್ನಗಳ ಮೂಲಕ ಸರ್ಕಾರಕ್ಕೆ ಸುಮಾರು 27 ಸಾವಿರ ಕೊಟಿ ರೂ. ಆದಾಯ ಬರುತ್ತದೆ. ಇದರಲ್ಲಿ ಸರ್ಕಾರ ಪ್ರತಿ ಟನ್ ಗೆ 200 ರೂಪಾಯಿ ಕೊಡಬೇಕು. ಸಕ್ಕರೆ ಕಾರ್ಖಾನೆ ಮಾಲಿಕರು ಪ್ರತಿ ಟನ್ ಕಬ್ಬಿಗೆ 3,300 ರೂ. ಕೊಡಲು ಮುಂದೆ ಬರಬೇಕು. ಇದರಿಂದ ರೈತರಿಗೆ ಪ್ರತಿ ಟನ್ ಕಬ್ಬಿಗೆ 3500 ರೂ. ದರ ನೀಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಕಾರ್ಖಾನೆ ಮಾಲೀಕರ ಜತೆ ಸಿಎಂ ಚರ್ಚಿಸಲಿ

ಸಕ್ಕರೆ ಜೊತೆಗೆ ವಿದ್ಯುತ್ ಉತ್ಪಾದನೆಯಾಗುತ್ತದೆ. ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಪಿಪಿಎ (ಪವರ್ ಪರ್ಚೇಸ್ ಅಗ್ರಿಮೆಂಟ್) ಮಾಡಿಕೊಳ್ಳಲಾಗಿದೆ. ಅಲ್ಲಿ ಕಾರ್ಖಾನೆ ಮಾಲೀಕರಿಗೆ ಪ್ರತಿ ಯುನಿಟ್ ಗೆ 5.5 ರೂ. ಸಿಗುತ್ತದೆ. ಅದೇ ರೀತಿ ರಾಜ್ಯದಲ್ಲಿ ಒಪ್ಪಂದ ಮಾಡಿಕೊಂಡರೆ ಈಗ ನೀಡುತ್ತಿರುವ ಪ್ರತಿ ಯುನಿಟ್‌ಗೆ 3 ರೂ ಬದಲು 5.5 ರೂ. ದೊರೆಯಲಿದೆ. ಇದರಿಂದ ಕಬ್ಬಿಗೆ ಹೆಚ್ಚಿಗೆ ದರ ಕೊಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನಗಿರುವ ಅಧಿಕಾರ ಚಲಾವಣೆ ಮಾಡಿ, ಕಬ್ಬಿನ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ ದರ ಪಟ್ಟಿಯನ್ನು ಪ್ರಕರಟಿಸಬೇಕು. ರೈತರ ನ್ಯಾಯ ಸಮ್ಮತ ಬೇಡಿಕೆಯಂತೆ 3500 ರಿಂದ ದರ ಪಟ್ಟಿ ನಿಗದಿ ಮಾಡಬೇಕು. ಇಲ್ಲದಿದ್ಧರೆ ರೈತರ ಆಕ್ರೋಶ ಕಟ್ಟೆ ಒಡೆದರೆ ಸರ್ಕಾರದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದಿದ್ದಾರೆ.

ರೈತರ ಪರ ಬಿಜೆಪಿ ಹೋರಾಟ

ಬಿಜೆಪಿ ಯಾವಾಗಲೂ ರೈತರ ಪರ ಹೋರಾಟದಲ್ಲಿ ನಿಲ್ಲುತ್ತದೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸಕ್ಕರೆ ನುರಿಸುವುದನ್ನು ಕೂಡಲೇ ಆರಂಭಿಸಬೇಕು. ಈ ವಿಚಾರದಲ್ಲಿ ಸಿಎಂ ಮಧ್ಯ ಪ್ರವೇಶ ಮಾಡಬೇಕು. ಸಚಿವರು ಒಂದಿಲ್ಲೊಂದು ರೀತಿಯಲ್ಲಿ ಸಕ್ಕರೆ ವ್ಯವಹಾರದ ಹಿತಾಸಕ್ತಿಯಲ್ಲಿ ಭಾಗಿಯಾಗಿರುವುದರಿಂದ ಸ್ವತಃ ಮುಖ್ಯಮಂತ್ರಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Read More
Next Story