"ಸೋಲಿನ ಶತಕದತ್ತ ರಾಹುಲ್, ಅಭಿನಂದನೆಗಳು": ಆರ್. ಅಶೋಕ ವ್ಯಂಗ್ಯ

ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸಿಬಿಡಬಹುದೇನೋ. ಆದರೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನು ಎಷ್ಟು ಚುನಾವಣೆಗಳಲ್ಲಿ ಸೋಲಿಸಿದ್ದಾರೆ ಎನ್ನುವುದನ್ನು ಲೆಕ್ಕ ಮಾಡುವುದು ಕಷ್ಟ" ಎಂದು ಟೀಕಿಸಿದ್ದಾರೆ.

Update: 2025-11-14 08:09 GMT

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌

Click the Play button to listen to article

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಭರ್ಜರಿ ಗೆಲುವಿನತ್ತ ಮುನ್ನುಗ್ಗುತ್ತಿದ್ದಂತೆ, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಸೋಲಿನ ಶತಕದತ್ತ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು" ಎಂದು ಅವರು ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಮಾಧ್ಯಮ 'ಎಕ್ಸ್' ನಲ್ಲಿ (X) ಪೋಸ್ಟ್ ಮಾಡಿರುವ ಅವರು, "ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸಿಬಿಡಬಹುದೇನೋ. ಆದರೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನು ಎಷ್ಟು ಚುನಾವಣೆಗಳಲ್ಲಿ ಸೋಲಿಸಿದ್ದಾರೆ ಎನ್ನುವುದನ್ನು ಲೆಕ್ಕ ಮಾಡುವುದು ಕಷ್ಟ" ಎಂದು ಟೀಕಿಸಿದ್ದಾರೆ.

'ವೋಟ್ ಚೋರಿ' ಕಟ್ಟುಕಥೆ

"ಸುಶಾಸನ, ಭ್ರಷ್ಟಾಚಾರ ಮುಕ್ತ ಆಡಳಿತ, ಮತ್ತು ಅಭಿವೃದ್ಧಿ ರಾಜಕಾರಣದಿಂದ ಜನಮನ್ನಣೆ ಗಳಿಸಿರುವ ನಿತೀಶ್ ಕುಮಾರ್ ಅವರ ನೇತೃತ್ವದ ಎನ್‌ಡಿಎ ಸರ್ಕಾರದ ಮುಂದೆ 'ಜಂಗಲ್ ರಾಜ್' ಕುಖ್ಯಾತಿಯ ಆರ್‌ಜೆಡಿ - ಕಾಂಗ್ರೆಸ್ ಮಹಾಘಟಬಂಧನ ಗೆಲ್ಲಲು ಸಾಧ್ಯವೇ ಇಲ್ಲ ಎಂಬುದು ಕಾಂಗ್ರೆಸ್‌ಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕಾಗಿಯೇ ರಾಹುಲ್ ಗಾಂಧಿ ಅವರು, ಮುಖಭಂಗ ತಪ್ಪಿಸಿಕೊಳ್ಳಲು 'ವೋಟ್ ಚೋರಿ' ಎಂಬ ಕಟ್ಟುಕಥೆಯ ಮೂಲಕ ಜನರನ್ನು ದಿಕ್ಕು ತಪ್ಪಿಸಲು ಹೊರಟಿದ್ದರು" ಎಂದು ಅಶೋಕ ಆರೋಪಿಸಿದ್ದಾರೆ.

ಕರ್ನಾಟಕದಲ್ಲೂ ಕಾಂಗ್ರೆಸ್ ಧೂಳೀಪಟ

"ಬಿಹಾರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರ 'ವೋಟ್ ಚೋರಿ' ಪ್ರಹಸನವನ್ನು ತಿರಸ್ಕರಿಸಿ, ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಜನಾದೇಶ ನೀಡಿದ್ದಾರೆ. ಹರಿಯಾಣ, ಮಹಾರಾಷ್ಟ್ರ, ಬಿಹಾರದಲ್ಲಿ ಬಂದಿರುವ ಸ್ಥಿತಿಯೇ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲೂ ಬರುವ ದಿನ ಬಹಳ ದೂರವಿಲ್ಲ. ಈಗಾಗಲೇ ಜನಮನ್ನಣೆ ಕಳೆದುಕೊಂಡಿರುವ ಕಾಂಗ್ರೆಸ್‌ ಪಕ್ಷ, ಕರ್ನಾಟಕದಲ್ಲೂ ಧೂಳೀಪಟ ಆಗುವುದು ನೂರಕ್ಕೆ ನೂರು ಗ್ಯಾರಂಟಿ," ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಬಹುಮತದ ಗಡಿ ದಾಟಿ ಮುನ್ನಡೆ ಕಾಯ್ದುಕೊಂಡಿದ್ದು, ಮಹಾಘಟಬಂಧನ್‌ಗೆ ಭಾರೀ ಹಿನ್ನಡೆಯಾಗಿದೆ.

Tags:    

Similar News