ಇಂದು ಅಪ್ಪು 50ನೇ ಹುಟ್ಟುಹಬ್ಬ; ಅಭಿಮಾನಿಗಳಲ್ಲಿ ಗರಿಗೆದರಿದ ಸಂಭ್ರಮ
ಮೈಸೂರಿನಲ್ಲಿ ಅಪ್ಪು ಚಿತ್ರವನ್ನು ಬಿಡಿಸಿದ ಕಲಾವಿದರು, ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿದ್ದಾರೆ . ಪುನೀತ್ ಕುಮಾರ್ ನೇತೃತ್ವದ ಐವರ ತಂಡ ಒಟ್ಟು 8,500 ಚದರಡಿ ವಿಸ್ತೀರ್ಣದಲ್ಲಿ ಚಿತ್ರ ಬಿಡಿಸಿ ನಮನ ಸಲ್ಲಿಸಿದ್ದಾರೆ.;
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ಗರಿಗೆದರಿದೆ. ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಪುನೀತ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ನೆನಪಿಗಾಗಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಆಯೋಜಿಸಿದ್ದಾರೆ.
ಭಾನುವಾರ ಮೈಸೂರಿನಲ್ಲಿ ಪುನೀತ್ ಕುಮಾರ್, ಲಕ್ಷ್ಮಿ, ರಾಘವ ಸೇರಿದಂತೆ ಐವರು ಕಲಾವಿದರು ರಂಗೋಲಿ ಮೂಲಕ ಅಪ್ಪು ಚಿತ್ರವನ್ನು ಬಿಡಿಸಿ, ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿದ್ದಾರೆ . ಪುನೀತ್ ಕುಮಾರ್ ನೇತೃತ್ವದ ತಂಡ ಒಟ್ಟು 8,500 ಚದರಡಿ ವಿಸ್ತೀರ್ಣದಲ್ಲಿ ಚಿತ್ರ ಬಿಡಿಸಿ ನಮನ ಸಲ್ಲಿಸಿದ್ದಾರೆ.
ಇನ್ನು ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಮೊದಲ ಚಿತ್ರ ಅಪ್ಪು ಚಿತ್ರವನ್ನು ಮರು ಬಿಡುಗಡೆ ಮಾಡಿದ್ದು, ಅಭಿಮಾನಿಗಳಲ್ಲಿ ಸಂತಸ ಮಡುಗಟ್ಟಿದೆ. ಚಿತ್ರಮಂದಿರಗಳಲ್ಲಿ ಪುನೀತ್ ರಾಜ್‌ಕುಮಾರ್ ಕಟೌಟ್‌ಗಳು ರಾರಾಜಿಸುತ್ತಿವೆ. ಚಿತ್ರಮಂದಿರದಲ್ಲಿ ದೊಡ್ಡ ಪರದೆಯ ಮೇಲೆ ಪುನೀತ್ ಅವರನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಪುನೀತ್ ರಾಜ್‌ಕುಮಾರ್ ಇಲ್ಲದೇ ಹುಟ್ಟುಹಬ್ಬ ಆಚರಿಸುತ್ತಿರುವ ನೋವಿದ್ದರೂ ನಗುವಿನ ಒಡೆಯನ 50ನೇ ಹುಟ್ಟುಹಬ್ಬವನ್ನು ಸಂಭ್ರಮಿಸಬೇಕು ಎಂದು ಅಭಿಮಾನಿಗಳು ನಿರ್ಧರಿಸಿದ್ದಾರೆ. ಮಾರ್ಚ್ 17 ರಂದು ಅಪ್ಪು ಹುಟ್ಟು ಹಬ್ಬದ ಅಂಗವಾಗಿ ರಾಜ್ಯಾದ್ಯಂತ ಅನ್ನದಾನ, ರಕ್ತದಾನ ಸೇರಿದಂತೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ.
ಬೆಂಗಳೂರಿನ ಪುನೀತ್ ಅಭಿಮಾನಿಯೊಬ್ಬರು ಮಸಾಲಾ ಪುರಿ ಹಾಗೂ ಪಾನಿ ಪೂರಿಯನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ ಅವರು ಮಾರ್ಚ್ 17ರಂದು ಸಂಜೆ 5 ಗಂಟೆಯ ನಂತರ ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಉಚಿತವಾಗಿ ಪಾನಿ ಪೂರಿ ಹಾಗೂ ಮಸಾಲಾ ಪುರಿ ನೀಡುವುದಾಗಿ ಬ್ಯಾನರ್ ಅಳವಡಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ “ಧ್ರುವ 369” ಚಿತ್ರದ ಟೀಸರ್ ಬಿಡುಗಡೆ ಮಾಡಲಾಗುತ್ತಿದೆ.
ದೊಡ್ಡಬಳ್ಳಾಪುರದಲ್ಲಿ ಭಾನುವಾರ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ʼಪವರ್ ಸ್ಟೆಪ್ಸ್ʼ ಹೆಸರಿನಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು. ಶಾಸಕ ಧೀರಜ್ ಮುನಿರಾಜು, ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.