Puneeth Rajkumar Birthday | ಅಪ್ಪು 50ನೇ ಜನ್ಮದಿನದ ಸಂಭ್ರಮ; ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳ ಜಾತ್ರೆ
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು(ಪುನೀತ್ ರಾಜ್‌ಕುಮಾರ್) ಸಮಾಧಿಗೆ ರಾತ್ರಿಯಿಂದಲೇ ಮಕ್ಕಳು, ಮಹಿಳೆಯರು, ಯುವಜನರು ಭೇಟಿ ನೀಡಿ ಅಪ್ಪು ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.;
ಇಂದು (ಮಾ.17) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳ ನೆಚ್ಚಿನ ನಟನ ಹುಟ್ಟುಹಬ್ಬದ ಸಡಗರ ಭಾನುವಾರ ಮಧ್ಯರಾತ್ರಿಯಿಂದಲೇ ಆರಂಭವಾಗಿದೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು(ಪುನೀತ್ ರಾಜ್‌ಕುಮಾರ್) ಸಮಾಧಿಗೆ ರಾತ್ರಿಯಿಂದಲೇ ಮಕ್ಕಳು, ಮಹಿಳೆಯರು, ಯುವಜನರು ಭೇಟಿ ನೀಡಿ ಅಪ್ಪು ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಅಪ್ಪು ಸಮಾಧಿಯನ್ನು ಬಣ್ಣದ ಹೂಗಳಿಂದ ಅಲಂಕರಿಸಿದ್ದು, ಅಭಿಮಾನಿಗಳು ಸರದಿ ಸಾಲಿನಲ್ಲಿ ಸಮಾಧಿ ದರ್ಶನ ಪಡೆದು, ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.
ಕಂಠೀರವ ಸ್ಟುಡಿಯೋ ಎದುರು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಸದಸ್ಯರು ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು. ಬೃಹದಾಕಾರದ ಅಪ್ಪು ಕಟೌಟ್ಗೆ ಹಾಲಿನ ಅಭಿಷೇಕ ಮಾಡಿದರು.
ಈ ಮಧ್ಯೆ, ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬದ ಪ್ರಯುಕ್ತ, ಮೊದಲ ಚಿತ್ರ ‘ಅಪ್ಪು’ ರೀ-ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾನುವಾರ ನಟಿಯರಾದ ರಮ್ಯ, ಶರ್ಮಿಳಾ ಮಾಂಡ್ರೆ ಅವರು ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಅಪ್ಪು ಸಿನಿಮಾ ವೀಕ್ಷಣೆ ಮಾಡಿದರು.
ಈ ವೇಳೆ ಮಾತನಾಡಿದ ನಟಿ ರಮ್ಯ, 23 ವರ್ಷದ ಹಿಂದೆ ಈ ಚಿತ್ರವನ್ನು ವೀಕ್ಷಿಸಿದ್ದೆ. ಆಗಿದ್ದ ಉತ್ಸಾಹವೇ ಇಂದಿಗೂ ಇದೆ. ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದು ಬಹಳ ಖುಷಿ ತಂದುಕೊಟ್ಟಿದೆ ಎಂದು ಹೇಳಿದರು.
ಪುನೀತ್ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಲು ಈಗಾಗಲೇ ಭಾರತೀಯ ಅಂಚೆ ಇಲಾಖೆ ಅಪ್ಪು ಪಿಚ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಿದೆ. ಅಭಿಮಾನಿಗಳು ಕಾಮನ್ ಡಿಪಿ ಡಿಸೈನ್ ಮಾಡಿ ವೈರಲ್ ಮಾಡುತ್ತಿದ್ದಾರೆ.
ಅಪ್ಪು ಯೂತ್ ಬ್ರಿಗೇಡ್‌ನಿಂದ ವಿದ್ಯಾರ್ಥಿಗಳಿಗೆ ಪುಸ್ತಕ, ಕಂಠೀರವ ಸ್ಟೂಡಿಯೋದಲ್ಲಿ ಕೆಲಸ ಮಾಡುವವರಿಗೆ ಬಟ್ಟೆ ವಿತರಣೆ ಮಾಡಲಾಗುತ್ತಿದೆ. ಅಪ್ಪು ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ 25 ಕೆ.ಜಿ ತೂಕದ ಕೇಕ್ ಕತ್ತರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಸೋಮವಾರ ಬೆಳಿಗ್ಗೆ 9 ಗಂಟೆಗೆ ಪುನೀತ್ ರಾಜ್‌ಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಕುಟುಂಬ ಸದಸ್ಯರು ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ಸಹೋದರಿಯಋು ಕೂಡ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.
ಅಪ್ಪು ಸಮಾಧಿಯನ್ನು ದೇವಸ್ಥಾನ ಮಾದರಿಯ ಮಂಟಪದಂತೆ ಅಲಂಕರಿಸಲಾಗಿದೆ. ಕೆಲ ಅಭಿಮಾನಿಗಳು ಮಧ್ಯರಾತ್ರಿಯೇ ಕಂಠೀರವ ಸ್ಟುಡಿಯೋ ಮುಂಭಾಗ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಜೈಕಾರ ಹಾಕಿದರು.
ಅಪ್ಪು ಹುಟ್ಟುಹಬ್ಬದ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿ ಇಂದು(ಸೋಮವಾರ) ಅನ್ನದಾನ, ರಕ್ತದಾನ ಹಾಗೂ ನೇತ್ರದಾನ ಶಿಬಿರಗಳನ್ನು ಆಯೋಜಿಸಲಾಗಿದೆ.