ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ: ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ್ದ ಮನೆ ಶೀಘ್ರ ತೆರವು ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜುಲೈ 4ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರುವ ನಟ ದರ್ಶನ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಪ್ರದೇಶದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿದ್ದ ವಿಷಯ ಇದೀಗ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಒತ್ತುವರಿ ಮಾಡದಂತೆ ದರ್ಶನ್‌ ತಡೆಯಾಜ್ಞೆ ತಂದಿದ್ದರು. ಅದನ್ನು ತಡೆಯಾಜ್ಞೆ ತೆರವು ಮಾಡಲು ಇದೀಗ ಬಿಬಿಎಂಪಿ ಮುಂದಾಗಿದೆ.

Update: 2024-06-23 00:50 GMT
ಆರ್‌.ಆರ್‌ ನಗರದಲ್ಲಿರುವ ನಟ ದರ್ಶನ್‌ ಮನೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜುಲೈ 4ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರುವ ನಟ ದರ್ಶನ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

ರೇಣುಕಾಸ್ವಾಮಿ ಎನ್ನುವ ವ್ಯಕ್ತಿಯ ಕೊಲೆಯಲ್ಲಿ ಭಾಗಿಯಾದ ಆರೋಪದ ಮೇಲೆ ಕನ್ನಡದ ಖ್ಯಾತ ನಟ ದರ್ಶನ್ ಅವರನ್ನು ಜೂನ್ 11ರಂದು ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿದಿದೆ. ಇದೀಗ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಪ್ರದೇಶದ ರಾಜಕಾಲುವೆ ವ್ಯಾಪ್ತಿಯಲ್ಲಿ ಮೇಲೆ ನಟ ದರ್ಶನ್ ಅವರ ಮನೆ ಕಟ್ಟಿದ್ದಾರೆ ಎನ್ನುವ ವಿಷಯ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಜಕಾಲುವೆಯ ಮೇಲೆ ನಟ ದರ್ಶನ್ ಐಡಿಯಲ್ ಹೋಮ್ಸ್ ನಿರ್ಮಿಸಿದ್ದಾರೆ ಎನ್ನುವ ಆರೋಪ 2016ರಲ್ಲೇ ಕೇಳಿಬಂದಿತ್ತು. ಅಲ್ಲದೇ ರಾಜಕಾಲುವೆ ಒತ್ತುವರಿ ತೆರವು ಮಾಡುವುದಕ್ಕೆ 2016ರಲ್ಲೇ ಬಿಬಿಎಂಪಿ ಮುಂದಾಗಿತ್ತು. ಆದರೆ, ಬಡವರು ಹಾಗೂ ಸಾಮಾನ್ಯ ಜನರ ಮನೆಗಳನ್ನು ತೆರವು ಮಾಡುವಲ್ಲಿ ಉತ್ಸಾಹ ತೋರಿಸಿದ್ದ ಬಿಬಿಎಂಪಿ ಪ್ರಭಾವಿಗಳಿಂದ ಆಗಿರುವ ಒತ್ತುವರಿ ತೆರವಿಗೆ ಮುಂದಾಗಲಿಲ್ಲ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿಬಂದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ 2016ರ ನಂತರ ಇಲ್ಲಿಯವರೆಗೆ ಅಂದರೆ, 8 ವರ್ಷ ಕಳೆದರೂ, ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಪ್ರದೇಶದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭವಾಗಿಲ್ಲ. ರಾಜಕಾಲುವೆ ಒತ್ತುವರಿ ತೆರವಿಗೆ ನಟ ದರ್ಶನ್ ಸೇರಿದಂತೆ ಹಲವರು ಹೈಕೋರ್ಟ್‌ನಿಂದ  ತಡೆಯಾಜ್ಞೆ ತಂದಿರುವುದು ಸಹ ಇದಕ್ಕೆ ಕಾರಣವಾಗಿದೆ.

ದರ್ಶನ್ ಸೇರಿದಂತೆ ಹಲವು ಪ್ರಭಾವಿಗಳು ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಮಾಡದಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಈ ಸಂಬಂಧ ಈಚೆಗೆ ಪ್ರತಿಕ್ರಿಯಿಸಿದ್ದ ಬೆಂಗಳೂರು ನಗರ ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಯಾರೇ ತಡೆಯಾಜ್ಞೆ ತಂದಿದ್ದರು ರಾಜಕಾಲುವೆ ಒತ್ತುವರಿ ತೆರವು ಮಾಡಲಾಗುವುದು ಎಂದಿದ್ದರು.

2016ರಲ್ಲೇ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡ 67 ಪ್ರಮುಖ ಕಟ್ಟಡಗಳನ್ನು ಗುರುತಿಸಲಾಗಿತ್ತು. ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ವ್ಯಾಪ್ತಿಯಲ್ಲಿ ರಾಜಕಾಲುವೆ ಮೇಲೆ ದರ್ಶನ್ ಅವರ ತೂಗುದೀಪ ನಿವಾಸ, ಪ್ರಭಾವಿ ಶಾಸಕ ಹಾಗೂ ಉದ್ಯಮಿ ಶಾಮನೂರು ಶಿವಶಂಕರಪ್ಪ ಅವರ ಒಡೆತನದ ಎಸ್. ಎಸ್ ಆಸ್ಪತ್ರೆ ಸೇರಿಂದತೆ 67 ಕಟ್ಟಡಗಳಿಂದ ಒತ್ತುವರಿ ಆಗಿದೆ ಎಂದು ಗುರುತಿಸಲಾಗಿತ್ತು. ಆದರೆ, ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭವಾದ ಬೆನ್ನಲ್ಲೇ ಪ್ರಭಾವಿಗಳು ಕಟ್ಟಡ ತೆರವು ಮಾಡದಂತೆ ತಡೆಯಾಜ್ಞೆ ತಂದಿದ್ದರು. ಈ ಬೆಳವಣಿಗೆ ನಡೆದು ಇದೀಗ 8 ವರ್ಷಗಳೇ ಕಳೆದಿದ್ದು, ದರ್ಶನ್ ಬಂಧನದ ನಂತರ ಈ ವಿಷಯ ಮತ್ತೆ ಚರ್ಚೆಯಾಗುತ್ತಿದೆ.

2016ರಲ್ಲಿ ಚುರುಕು ಪಡೆದುಕೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆ

ಬೆಂಗಳೂರಿನಲ್ಲಿ 2016ರಲ್ಲಿ ಸುರಿದ ಭಾರೀ ಮಳೆಯಿಂದ ರಾಜಕಾಲುವೆ ಒತ್ತುವರಿಯಿಂದ ಭಾರೀ ಅನಾಹುತ ಸೃಷ್ಟಿಯಾಗಿತ್ತು. ರಾಜಕಾಲುವೆ ಒತ್ತುವರಿಯಾಗಿದ್ದ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿತ್ತು. ಅಲ್ಲದೇ ಪ್ರಾಥಮಿಕ ಕಾಲುವೆ ಹಾಗೂ ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವವರ ಪಟ್ಟಿಯ ಆಧಾರದ ಮೇಲೆ ಒತ್ತುವರಿ ತೆರುವು ಕಾರ್ಯಾಚರಣೆ ಪ್ರಾರಂಭವಾಗಿತ್ತು.

ನಟ ದರ್ಶನ್ ಅವರ ಮನೆಯನ್ನು ಪ್ರಾಥಮಿಕ ಕಾಲುವೆಗಳಿಂದ ಕೇವಲ 7 ಅಡಿ ದೂರದಲ್ಲಿ ನಿರ್ಮಾಣ ಮಾಡಲಾಗಿದೆ. ಕಾನೂನಿನ ಪ್ರಕಾರ, ಪ್ರಾಥಮಿಕ ಕಾಲುವೆಯಿಂದ 150 ಮೀಟರ್ ದೂರದಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಾಣ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ನಟ ದರ್ಶನ್ ಅಲ್ಲದೇ ಪ್ರಭಾವಿ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರು ಸೇರಿದಂತೆ 67 ಜನ ಈ ಭಾಗದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಬಿಬಿಎಂಪಿ ಗುರುತಿಸಿತ್ತು.  


ತಡೆಯಾಜ್ಞೆ ತೆರವಿಗೆ ಬಿಬಿಎಂಪಿಯಿಂದ ಸಿದ್ಧತೆ

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ಹಲವರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದು, ತಡೆಯಾಜ್ಞೆ ತೆರವು ಮಾಡುವುದಕ್ಕೆ ಬಿಬಿಎಂಪಿಯಿಂದ ಸಿದ್ಧತೆ ನಡೆಸಿದೆ.

ʻರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದ್ದು, ಅದನ್ನು ತೆರವು ಮಾಡಲು ಬಿಬಿಎಂಪಿಯಿಂದ ಸಿದ್ಧತೆ ನಡೆಸಿದೆ. ಶೀಘ್ರ ತಡೆಯಾಜ್ಞೆ ತೆರವು ಮಾಡಲು ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು. ತಡೆಯಾಜ್ಞೆ ತೆರವು ಪ್ರಕ್ರಿಯೆ ನಿಂತಿತ್ತು. ಅದನ್ನು ಇದೀಗ ಮುಂದುವರಿಸಲಿದ್ದೇವೆʼ ಎಂದು ರಾಜರಾಜೇಶ್ವರಿ ನಗರದ ಬಿಬಿಎಂಪಿ ವಲಯ ಆಯುಕ್ತ ಶಿವಾನಂದ ಕಪಾಶಿ ತಿಳಿಸಿದರು. 

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ʻಬಿಬಿಎಂಪಿಯ ಕಾನೂನು ವಿಭಾಗವು ರಾಜಕಾಲುವೆ ಒತ್ತುವರಿ ತೆರವಿಗೆ ತಂದಿರುವ ತಡೆಯಾಜ್ಞೆಯನ್ನು ತೆರವು ಮಾಡುವುದಕ್ಕೆ ಬೇಕಾದ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಹೀಗಾಗಿ, ಎಲ್ಲ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದಿನ ದಿನಗಳಲ್ಲಿ ಏಕಕಾಲಕ್ಕೆ ಪ್ರಾರಂಭಿಸಲಾಗುವುದುʼ ಎಂದು ಹೇಳಿದರು.

ರಾಜಕಾಲುವೆ ಒತ್ತುವರಿ ತೆರವಿಗೆ ಬದ್ಧ: ಡಿಸಿಎಂ

ʻರಾಜಕಾಲುವೆ ಒತ್ತುವರಿಯನ್ನು ಯಾರೇ ಮಾಡಿದ್ದರೂ, ತೆರವು ಮಾಡಲಾಗುವುದುʼ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ʻಯಾವುದೇ ಪ್ರಭಾವಿಗಳು (ನಾನು ಮಾಡಿದ್ದರೂ) ಕಾನೂನಿನ ಪ್ರಕಾರ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆʼ ಎಂದಿದ್ದಾರೆ.

ತಡೆಯಾಜ್ಞೆ ತೆರವು ಮಾಡಲು ಕ್ರಮ: ಬಿಬಿಎಂಪಿ ಮುಖ್ಯ ಆಯುಕ್ತ

ʻಬಿಬಿಎಂಪಿಗೆ ಒತ್ತುವರಿ ತೆರವು ಮಾಡುವ ಅಧಿಕಾರವಿದ್ದು, ಅದಕ್ಕೆ ಯಾರ ಅನುಮತಿಗಾಗಿ ಕಾಯುವ ಅವಶ್ಯಕತೆಯೂ ಇಲ್ಲ. ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರುವ ಕಾರ್ಯಾಚರಣೆ ಪ್ರಾರಂಭಿಸಲಿದ್ದೇವೆʼ ಎಂದು  ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ʻಪ್ರಜಾಪ್ರಭುತ್ವದಲ್ಲಿ ಕೋರ್ಟ್‌ಗೆ ಮನವಿ ಸಲ್ಲಿಸಲು ಹಾಗೂ ತಡೆಯಾಜ್ಞೆ ತರುವುದಕ್ಕೆ ಅವಕಾಶವಿದೆ. ಅದೇ ಸಂದರ್ಭದಲ್ಲಿ ನಾವು ಸಹ ವಾದ ಮಂಡನೆ ಮಾಡಿ ತಡೆಯಾಜ್ಞೆ ತೆರವಿಗೆ ಕೋರಲಿದ್ದೇವೆʼ ಎಂದು ತಿಳಿಸಿದ್ದಾರೆ.  

Tags:    

Similar News