ಬೆಳೆಹಾನಿ ಮೌಲ್ಯಮಾಪನಕ್ಕೆ ಜಂಟಿ ಸಮೀಕ್ಷೆ; ಹತ್ತು ದಿನದಲ್ಲಿ ವರದಿಗೆ ಸೂಚನೆ

ಸೆಪ್ಟೆಂಬರ್ ಮೊದಲ ವಾರದವರೆಗೆ ಸುರಿದ ಭಾರೀ ಮಳೆಯಿಂದಾಗಿ ಸುಮಾರು 5.29 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಗಳು ಜಲಾವೃತಗೊಂಡು ನಷ್ಟವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Update: 2025-10-08 07:33 GMT

ಕಂದಾಯ ಸಚಿವ ಕೃಷ್ಣ ಬೈರೇಗೌಡ

Click the Play button to listen to article

ರಾಜ್ಯದಲ್ಲಿ ಸೆಪ್ಟೆಂಬರ್ ಮೊದಲ ವಾರದವರೆಗೆ ಸುರಿದ ಭಾರೀ ಮಳೆಯಿಂದಾಗಿ ಸುಮಾರು 5.29 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿವೆ. ಈ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಜಂಟಿ ಸಮೀಕ್ಷೆ ಆರಂಭಿಸಲು ಕಂದಾಯ ಇಲಾಖೆ ಮುಂದಾಗಿದೆ.  

2025ರ ನೈಋತ್ಯ ಮುಂಗಾರು ಅವಧಿಯಲ್ಲಿ ಸುರಿದ ಅತಿವೃಷ್ಟಿಯಿಂದ ರಾಜ್ಯದ ಹಲವೆಡೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಭಾರೀ ಹಾನಿಗೊಳಗಾಗಿವೆ.  ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಸುರಿದ ಮತ್ತೊಂದು ಭಾರೀ ಮಳೆ ಮತ್ತು ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಹೊರಬಿಟ್ಟ ಕಾರಣ ಕಲಬುರಗಿ, ಯಾದಗಿರಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಇದರಿಂದ 7.24 ಲಕ್ಷ ಹೆಕ್ಟೇರ್‌ ಬೆಳೆ ಹಾನಿ ಸಂಭವಿಸಿದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. 

ಕಲ್ಯಾಣ ಕರ್ನಾಟಕದ ಈ ಜಿಲ್ಲೆಗಳಲ್ಲಿ ಎರಡನೇ ಬಾರಿಗೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. ಬೆಳೆ ಹಾನಿಯ ಪರಿಷ್ಕೃತ ಅಂಕಿ ಅಂಶಗಳು ಮುಂದಿನ 10 ದಿನಗಳಲ್ಲಿ ಲಭ್ಯವಾಗಲಿವೆ. ಮೊದಲ ಹಂತದಲ್ಲಿ ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಂಡ 9 ಜಿಲ್ಲೆಗಳ 5.29 ಲಕ್ಷ ಹೆಕ್ಟೇರ್‌ ಪ್ರದೇಶದ ರೈತರಿಗೆ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭಗೊಂಡಿದೆ ಎಂದು ತಿಳಿಸಿದ್ದಾರೆ.  

ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರಿಗೆ  ಹೆಚ್ಚುವರಿ ರೂ.8,500 ಒಳಗೊಂಡಂತೆ, ಮಳೆಯಾಶ್ರಿತ ಬೆಳೆಗಳಿಗೆ ರೂ.17,000, ನೀರಾವರಿ ಬೆಳೆಗಳಿಗೆ ರೂ.25,500, ದೀರ್ಘಕಾಲಿಕ ಬೆಳೆಗಳಿಗೆ ರೂ.31,000 ಪರಿಹಾರ ನೀಡುತ್ತಿದೆ.  ಈ ಮೊತ್ತವನ್ನು ರೈತರ ಆಧಾರ್‌ ಜೋಡಿಸಲಾದ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮಾ ಮಾಡುವ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.  

ಇತ್ತೀಚೆಗೆ ಹಾನಿಗೊಳಗಾದ 7.24 ಲಕ್ಷ ಹೆಕ್ಟೇರ್‌ ಪ್ರದೇಶದ ರೈತರಿಗೆ ಮುಂದಿನ 10 ದಿನಗಳಲ್ಲಿ ಪರಿಹಾರ ನೀಡಲಾಗುವುದು. ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ರೈತರ ಬೆಳೆ ಹಾನಿ ಪರಿಹಾರಕ್ಕಾಗಿ ಸುಮಾರು ರೂ.2,000 ಕೋಟಿ ಮೊತ್ತದ ಪಾವತಿ ಪ್ರಕ್ರಿಯೆ ಆರಂಭಗೊಂಡಿದೆ. ಮುಂದಿನ 30 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಮಹಾರಾಷ್ಟ್ರ ಸುರಿಯುತ್ತಿದ್ದ ವ್ಯಾಪಕ ಮಳೆಯಿಂದಾಗಿ ಕಲಬುರಗಿ, ಯಾದಗಿರಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಪರಿಸ್ಥಿತಿ ಅವಲೋಕಿಸಲು ಕಲಬುರಗಿ ಜಿಲ್ಲೆಯ ವಿವಿಧೆಡೆ ಸಿ.ಎಂ ಸಿದ್ದರಾಮಯ್ಯ ಅವರು ವೈಮಾನಿಕ ಸಮೀಕ್ಷೆ ಕೂಡ ನಡೆಸಿದ್ದರು.

Tags:    

Similar News