
ವಿಜಯೇಂದ್ರ
ಮೊದಲು ಖರ್ಗೆ ಕುಟುಂಬಕ್ಕೆ ಪರಿಹಾರ ಕೊಡಿ; ಬಿ.ವೈ ವಿಜಯೇಂದ್ರ ಲೇವಡಿ
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ಪ್ರವಾಹಪೀಡಿತರಿಗೆ ಎನ್‍ಡಿಆರ್‌ಎಫ್ ಮಾದರಿ ನೆರವು ನೀಡಿದ್ದರು. ಆದರೆ, ಸಿದ್ದರಾಮಯ್ಯನವರಿಗೆ ಪ್ರವಾಹಪೀಡಿತ ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಬೆಳೆ ನಷ್ಟದ ಕುರಿತಂತೆ ಅಳಲು ತೋಡಿಕೊಳ್ಳಲು ಬಂದ ರೈತರ ಎದುರು ನನ್ನದೂ ಬೆಳೆ ನಷ್ಟವಾಗಿದೆ ಎಂದು ಕಳುಹಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೊದಲು ಬೆಳೆ ಪರಿಹಾರ ಕೊಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರೊಬ್ಬರು ಬೆಳೆ ನಾಶವಾಗಿದೆ. 4 ಎಕರೆಗೆ ಪರಿಹಾರ ಕೊಡಿಸಿ ಎಂದು ಕೇಳಿದರೆ, ನನ್ನದೇ 40 ಎಕರೆ ಇದೆ. ನನ್ನ ಬೆಳೆಯೂ ನಾಶವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಹಾಗಾಗಿ ಮೊದಲಿಗೆ ಅವರಿಗೆ ಕೊಡಿಸಿ, ಜತೆಗೆ ರೈತರ ಸಂಕಷ್ಟಕ್ಕೂ ಸ್ಪಂದಿಸಿ ಎಂದು ಒತ್ತಾಯಿಸಿದ್ದಾರೆ.
ಒಣಭೂಮಿಗೆ ಎನ್‍ಡಿಆರ್‌ಎಫ್ ನಿಯಮದಡಿ ಹೆಕ್ಟೇರ್‌ಗೆ 6 ಸಾವಿರ ರೂ. ಪರಿಹಾರ ಇದೆ. ಆದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ಪ್ರವಾಹ ಪೀಡಿತರಿಗೆ ರಾಜ್ಯದಿಂದ ಎನ್‍ಡಿಆರ್‌ಎಫ್ ಮಾದರಿಯಲ್ಲಿ ನೆರವು ನೀಡಿದ್ದರು. ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಹೇಳುವುದಿಲ್ಲ, ಆದರೆ, ಆ ಕಾಳಜಿ ವ್ಯಕ್ತವಾಗಲಿ ಎಂಬುದು ನಮ್ಮ ಆಶಯ. ಪ್ರವಾಹದಿಂದ ತತ್ತರಿಸಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ಬಗ್ಗೆ ಕಾಳಜಿ ತೋರಿಸದೇ ಇದ್ದರೆ ಹೇಗೆ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಎಕರೆಗೆ ಕೇವಲ 6 ಸಾವಿರ ರೂ. ಪರಿಹಾರ ನೀಡಿದರೆ ಸಾಕಾಗುವುದಿಲ್ಲ, ಕನಿಷ್ಠ 25ರಿಂದ 30 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹಿಂದೂ ಸಮಾಜ ಒಡೆಯಲು ಹೊರಟಿದ್ದಾರೆ
ಜಾತಿ ಸಮೀಕ್ಷೆ ಕುರಿತು ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ಮುಖ್ಯಮಂತ್ರಿಗಳು ನಿನ್ನೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕೇಂದ್ರ ಸರ್ಕಾರದ ಜಾತಿ ಸಮೀಕ್ಷೆಯನ್ನೂ ವಿರೋಧಿಸುತ್ತೀರಾ ಎಂದು ಕೇಳಿದ್ದಾರೆ. ಕಾಂತರಾಜು ವರದಿಗೆ 180 ಕೋಟಿ ಖರ್ಚು ಮಾಡಿದ್ದೀರಲ್ಲವೇ?, ನೀವೇ ಮುಖ್ಯಮಂತ್ರಿ ಇದ್ದರೂ ಅದನ್ನು ಅನುಷ್ಠಾನ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದರು.
ಬಿಜೆಪಿ ಜಾತಿ ಸಮೀಕ್ಷೆಗೆ ವಿರೋಧವಿಲ್ಲ, ಆದರೆ, ಕಾಂಗ್ರೆಸ್ ಸರ್ಕಾರವು ಹಿಂದೂ ಸಮಾಜವನ್ನು ಒಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಸಮಾಜದ ಹಿತಾಸಕ್ತಿ, ಶೈಕ್ಷಣಿಕ ಹಾಗೂ ಆರ್ಥಿಕ ನ್ಯಾಯ ನೀಡುವ ಬದ್ಧತೆ ಬಿಜೆಪಿಗಿದೆ. ಆದರೆ, ಸಿದ್ದರಾಮಯ್ಯ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೈಕೋರ್ಟ್ ಏನು ಆದೇಶ ಮಾಡಿದೆ?, ಯಾಕೆ ಕೆಲಸಕ್ಕೆ ಬಾರದ ಪ್ರಶ್ನೆಗಳನ್ನು ಇಟ್ಟುಕೊಂಡಿದ್ದಾರೆ?, 60ಕ್ಕೂ ಹೆಚ್ಚು ಪ್ರಶ್ನೆಗಳಿದ್ದು, ಇದರಲ್ಲಿ ಎಲ್ಲವೂ ಕಡ್ಡಾಯವಲ್ಲ ಎಂದು ರಾಜ್ಯ ಹೈಕೋರ್ಟ್ ತಿಳಿಸಿದೆ ಎಂದು ಗಮನ ಸೆಳೆದರು.
ಈ ವೇಳೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ, ಮಾಜಿ ಸಂಸದ ಉಮೇಶ್ ಜಾಧವ್, ಶಾಸಕ ಬಸವರಾಜ ಮತ್ತಿಮೂಡ್, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಶಶಿಲ್ ನಮೋಶಿ, ಮಾಜಿ ಶಾಸಕರಾದ ಅಮರನಾಥ ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ್, ಬಿಜೆಪಿ ಕಲಬುರಗಿ ನಗರ ಜಿಲ್ಲಾಧ್ಯಕ್ಷ ಚಂದ್ರಕಾಂತ್ ಬಿ. ಪಾಟೀಲ್, ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಹಾಗೂ ಮುಖಂಡರು ಇದ್ದರು.