ಜಪ್ತಿ ʼಅಸ್ತ್ರʼದಿಂದ ಬಾಧಿತರಿಗೆ ಪರಿಹಾರ; ಕೋರ್ಟ್ ಛಡಿಯೇಟಿಗೆ ಕಕ್ಕಾಬಿಕ್ಕಿಯಾದ ಆಡಳಿತ ವ್ಯವಸ್ಥೆ

ಶಿವಮೊಗ್ಗದಲ್ಲಿ ರೈತರೊಬ್ಬರಿಗೆ ಪರಿಹಾರ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಾರು ಹಾಗೂ ಪಿಠೋಪಕರಣಗಳನ್ನು ಜಪ್ತಿ ಮಾಡಲು ಜಿಲ್ಲಾ ಪ್ರಧಾನ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ.

Update: 2025-12-18 01:30 GMT

ಎಐ ಚಿತ್ರ

Click the Play button to listen to article

ನ್ಯಾಯಾಂಗವು ಕೇವಲ ಕಾನೂನು ವಿವಾದ ಪರಿಹರಿಸುವ ವೇದಿಕೆಯಷ್ಟೇ ಅಲ್ಲ, ಪ್ರಜಾಪ್ರಭುತ್ವದ ಅಸ್ತಿತ್ವ ಉಳಿಸುವ ವಿಶ್ವಾಸಾರ್ಹ ವ್ಯವಸ್ಥೆಯೂ ಆಗಿದೆ. ಅಧಿಕಾರ ದುರ್ಬಳಕೆ ಮೂಲಕ ನಾಗರಿಕರ ಹಕ್ಕು ಮತ್ತು ಸ್ವಾತಂತ್ರ್ಯಗಳಿಗೆ ಧಕ್ಕೆಯಾಗುವ ಸಂದರ್ಭದಲ್ಲಿ ನ್ಯಾಯಾಲಯಗಳು ಕ್ರಿಯಾಶೀಲವಾಗಿ ಪ್ರಬಲ ಪ್ರತಿರೋಧ ತೋರಿದ ಉದಾಹರಣೆಗಳಿವೆ. ಅನ್ಯಾಯಕ್ಕೆ ಒಳಗಾದವರನ್ನು ರಕ್ಷಿಸಿ, ಆಡಳಿತದ ನಿರ್ಲಕ್ಷ್ಯಕ್ಕೆ ಪರಿಹಾರವನ್ನೂ ಸೂಚಿಸಿದೆ. ಮಾನವೀಯತೆ, ನ್ಯಾಯ, ನಿಷ್ಠೆ ಮತ್ತು ಪಾರದರ್ಶಕತೆಯ ತತ್ವಗಳನ್ನು ಆಧರಿಸಿದ ಈ ನ್ಯಾಯಿಕ ವ್ಯವಸ್ಥೆಯು ಇದೀಗ ನಾಗರಿಕರ ವಿಶ್ವಾಸ ವೃದ್ಧಿಸಿದೆ.

ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಯು ಕೇವಲ ಕಾನೂನು ವ್ಯಾಜ್ಯ ಇತ್ಯರ್ಥಪಡಿಸುವ ಜಾಗವಾಗಿ ಉಳಿದಿಲ್ಲ. ಬದಲಿಗೆ, ಸಂವಿಧಾನದ ಆಶಯಗಳನ್ನು ರಕ್ಷಿಸುವ, ಪ್ರಜೆಗಳ ಹಕ್ಕುಗಳನ್ನು ಗೌರವಿಸುವ ಮತ್ತು ಪ್ರಜಾಪ್ರಭುತ್ವದ ಅಸ್ತಿತ್ವ ಉಳಿಸುವ "ವಿಶ್ವಾಸಾರ್ಹ ಶಕ್ತಿ"ಯಾಗಿ ಹೊರಹೊಮ್ಮಿದೆ.

ಸಾಮಾನ್ಯವಾಗಿ ನ್ಯಾಯಾಲಯ ಎಂದರೆ ಜಗಳ ಬಗೆಹರಿಸುವ ವೇದಿಕೆ ಎಂಬ ಭಾವನೆಯಿತ್ತು. ಆದರೆ, ಇತ್ತೀಚಿನ ದಶಕಗಳಲ್ಲಿ ನ್ಯಾಯಾಂಗವು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ. ಅದು ಕೇವಲ ಕಾನೂನಿಗೆ ಸೀಮಿತವಾಗದೇ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಸಂವಿಧಾನದ ಮೌಲ್ಯಗಳಿಗೆ ಧಕ್ಕೆಯಾದಾಗ, ಶಾಸಕಾಂಗ-ಕಾರ್ಯಾಂಗ ಎಡವಿದಾಗ ಮೌನ ವಹಿಸದೇ ಅದನ್ನುತಿದ್ದುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದೆ.

ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗ 'ಸುಮೋಟೋ' ಪ್ರಕರಣ ದಾಖಲಿಸಿಕೊಂಡು ಸರ್ಕಾರಗಳಿಗೆ ಎಚ್ಚರಿಕೆ ನೀಡಿರುವ ಉದಾಹರಣೆಗಳೂ ಇವೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ ಇತ್ತೀಚೆಗೆ ಶಿವಮೊಗ್ಗದಲ್ಲಿ ರೈತರೊಬ್ಬರು ತಮ್ಮ ಜಮೀನಿನ ಪರಿಹಾರ ಪಡೆಯುವ ಸಲುವಾಗಿ ವರ್ಷಗಟ್ಟಲೇ ಕಚೇರಿಗಳಿಗೆ ಅಲೆದಾಡಿ ಹೈರಾಣಾದ ಘಟನೆ ನಡೆದಿದೆ.

ಪರಿಹಾರ ಪಡೆಯಲು ಪದೇ ಪದೇ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರೂ ಸಬೂಬು ಹೇಳಿ ವಾಪಸ್ ಕಳಿಸಿದ್ದ ಅಧಿಕಾರಿಗಳಿಗೆ ನ್ಯಾಯಾಲಯ ಚಾಟಿ ಬೀಸಿದೆ. ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡುವಂತೆ ಆದೇಶ ನೀಡುವ ಮೂಲಕ ಕಠಿಣ ಸಂದೇಶ ರವಾನಿಸಿದೆ. ಇಂತಹದ್ದೇ ಘಟನೆಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ನಡೆದಿದ್ದವು.

ಏನಿದು ಪ್ರಕರಣ ?

ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ 1995ರಲ್ಲಿ ರೈತರೊಬ್ಬರ ಭೂಮಿಗೆ 22 ಲಕ್ಷ ರೂ. ಪರಿಹಾರ ಘೋಷಿಸಿ ಭೂಮಿ ವಶಪಡಿಸಿಕೊಂಡಿತ್ತು. ಆದರೆ, ರೈತರಿಗೆ ಕೇವಲ 9 ಲಕ್ಷ ರೂ. ನೀಡಿ 13 ಲಕ್ಷ ರೂ. ಬಾಕಿ ಉಳಿಸಿಕೊಂಡಿತ್ತು. ಇದರ ವಿರುದ್ದ ರೈತ ನಂದ್ಯಪ್ಪ ಎಂಬುವವರು ದ್ವಿತೀಯ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿ ತೀರ್ಪು ನೀಡಿದ ಕೋರ್ಟ್, ರೈತ ನಂದ್ಯಪ್ಪ ಅವರಿಗೆ 1995ರಲ್ಲಿ 13 ಲಕ್ಷ ಬಾಕಿ ನೀಡಬೇಕಿತ್ತು. ಪ್ರಸ್ತುತ ಅದರ ಮೊತ್ತ 95.88 ಲಕ್ಷ ರೂ. ಗಳಿಗೆ ತಲುಪಿದೆ. ಈ ಬೃಹತ್ ಮೊತ್ತವನ್ನು ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಾರು ಹಾಗೂ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಿ ಹರಾಜು ಹಾಕುವಂತೆ ಆದೇಶಿಸಿತ್ತು.

ಕಚೇರಿಗಳಿಗೆ ಅಲೆದಾಡಲು ಜಮೀನನ್ನೇ ಮಾರಿದ್ದ ರೈತ

"ರಸ್ತೆ ಅಭಿವೃದ್ಧಿಗೆ ಸರ್ಕಾರ ಮೂರು ದಶಕಗಳ ಹಿಂದೆ ಭೂಮಿಯನ್ನು ವಶಪಡಿಸಿಕೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ಹಣ ಬಿಡುಗಡೆ ಆಗಿರಲಿಲ್ಲ. ಈ ಕುರಿತಂತೆ ಇಪ್ಪತ್ತು ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ, ಉಪವಿಭಾಗಾಧಿಕಾರಿ ಕಚೇರಿಗೆ ಅಲೆದು ಚಪ್ಪಲಿ ಸವೆಯಿತೇ ವಿನಾ ಹಣ ಬಿಡುಗಡೆ ಆಗಿರಲಿಲ್ಲ. ಪ್ರತಿದಿನ ಕಚೇರಿಗಳಿಗೆ ಅಲೆದಾಡಲು ಹಾಗೂ ನ್ಯಾಯವಾದಿಗಳಿಗೆ ಶುಲ್ಕ ಭರಿಸಲು ಒಂದು ಎಕರೆ ಜಮೀನನ್ನು ಮಾರಾಟ ಮಾಡಿದೆ. ಇದೀಗ ನ್ಯಾಯಾಲಯವು ಅಂತಿಮವಾಗಿ ಆದೇಶ ನೀಡಿದೆ. ಹಣ ಪಾವತಿಸಲು ತಪ್ಪಿದಲ್ಲಿ ಜಿಲ್ಲಾಧಿಕಾರಿಗಳ ಕಾರು ಜಪ್ತಿ ಮಾಡುವಂತೆ ಸೂಚಿಸಿದೆ. ಹಲವು ವರ್ಷಗಳ ನಿರಂತರ ಹೋರಾಟಕ್ಕೆ ಕೊನೆಯೂ ಜಯ ಸಿಕ್ಕಿದೆ" ಎಂದು ರೈತ ನಂದ್ಯಪ್ಪ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ನೋಟಿಸ್ ಹಿಡಿದು ಬಂದ ಕೋರ್ಟ್ ಸಿಬ್ಬಂದಿ

ದ್ವಿತೀಯ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯವು ರೈತ ನಂದ್ಯಪ್ಪ ಅವರಿಗೆ 95.88 ಲಕ್ಷ ರೂ.ಪರಿಹಾರದ ಹಣ ನೀಡಬೇಕು, ಇಲ್ಲವೇ ಜಿಲ್ಲಾಧಿಕಾರಿ ಕಾರನ್ನು ಜಪ್ತಿ ಮಾಡಬೇಕು ಎಂದು ಆದೇಶಿಸಿದ ಹಿನ್ನೆಲೆ ಕೋರ್ಟ್ ಸಿಬ್ಬಂದಿ ನೋಟಿಸ್ ನೀಡಿದ್ದರು. ರೈತ ನಂದ್ಯಪ್ಪ ಅವರಿಗೆ ಪರಿಹಾರ ಹಣ ನೀಡಿ, ಇಲ್ಲವೇ ಜಿಲ್ಲಾಧಿಕಾರಿಗಳ ಕಾರನ್ನು ವಶಪಡಿಕೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿತ್ತು.

"ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರ ವಾಹನ ಹಾಗೂ ಪೀಠೋಪಕರಣ ಜಪ್ತಿ ಪ್ರಕರಣಗಳು ಇಡೀ ರಾಜ್ಯಕ್ಕೆ ಮುಜುಗರ ತರುವ ಸಂಗತಿಗಳು. ರೈತರಿಗೆ ನೀಡಬೇಕಾದ ಪರಿಹಾರ ಹಣವನ್ನು ಸೂಕ್ತ ಸಂದರ್ಭದಲ್ಲಿ ನೀಡಿದರೆ ಸರ್ಕಾರಕ್ಕೆ ಇಂತಹ ಮುಜುಗರದ ಸಂಗತಿ ಎದುರಾಗುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಎರಡು-ಮೂರು ದಶಕಗಳಿಂದಲೂ ರೈತರಿಗೆ ಪರಿಹಾರ ನೀಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೋರ್ಟ್‌ಗೆ ಹೋಗುವುದು ಅನಿವಾರ್ಯ" ಎಂದು ಯುವ ರೈತ ಹೋರಾಟಗಾರ ಮಂಜುನಾಥ ದಂಡಿಕೆರೆ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಜಪ್ತಿ ಆದೇಶ ನೀಡಲು ಕೋರ್ಟ್‌ಗೆ ಅಧಿಕಾರವಿದೆ

"ರೈತರು ಅಥವಾ ಯಾರೇ ಫಲಾನುಭವಿಗಳಿಗೆ ಪರಿಹಾರ ನೀಡಲು ಅಧಿಕಾರಿಗಳು ವಿಳಂಬ ಮಾಡಿದರೆ ಪ್ರಕರಣದ ವಿಚಾರಣೆ ನಡೆಸಿ, ಪರಿಹಾರ ನೀಡುವಂತೆ ಸೂಚನೆ ನೀಡಲು ನ್ಯಾಯಾಲಯಕ್ಕೆ ಅಧಿಕಾರವಿದೆ. ಕೋರ್ಟ್ ಸೂಚನೆ ಪಾಲನೆಯಾಗದಿದ್ದರೆ ಅಧಿಕಾರಿಗಳ ಕಾರು, ಕಚೇರಿಯ ಪೀಠೋಪಕರಣಗಳ ಜಪ್ತಿ ಮಾಡಲು ಜಿಲ್ಲಾ ಹಾಗೂ ಗ್ರಾಹಕ ನ್ಯಾಯಾಲಯಗಳಿಗೆ ಅಧಿಕಾರವಿದೆ. ಈ ಆದೇಶದ ವಿರುದ್ಧ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ಗೆ ಅಧಿಕಾರಿಗಳು ಅರ್ಜಿ ಮೇಲ್ಮನವಿ ಸಲ್ಲಿಸಬಹುದು. ಆದರೆ, ಅವರಿಗೆ ಅಲ್ಲಿ ಹಿನ್ನಡೆಯಾಗುವುದೇ ಹೆಚ್ಚು" ಎಂದು ಹೈಕೋರ್ಟ್ ಹಿರಿಯ ವಕೀಲ ಉಮಾಪತಿ ʼದ ಫೆಡರಲ್ ಕರ್ನಾಟಕʼಕ್ಕೆ ಹೇಳಿದರು.

ಚಿಕ್ಕಬಳ್ಳಾಪುರದಲ್ಲೂ ಜಪ್ತಿಗೆ ಆದೇಶ ನೀಡಿತ್ತು!

ಇಲಾಖೆಗಳ ಪೀಠೋಪರಣ, ಕಾರು ಜಪ್ತಿಗೆ ಆದೇಶ ನೀಡಿರುವ ಪ್ರಕರಣ ಇದೇ ಮೊದಲಲ್ಲ, ರಾಜ್ಯದ ಹಲವೆಡೆ ಇಂತಹ ಪ್ರಕರಣಗಳು ಈ ಹಿಂದೆ ನಡೆದಿವೆ.

ಚಿಕ್ಕಬಳ್ಳಾಪುರದಲ್ಲಿ ರಸ್ತೆ ವಿಸ್ತರಣೆಗೆ ಜಾಗ ಕಳೆದುಕೊಂಡ ಮಾಲೀಕರಿಗೆ ಪರಿಹಾರ ನೀಡದೇ ಸತಾಯಿಸಿದ ಉಪವಿಭಾಧಿಕಾರಿ ಕಚೇರಿಯ ಚರಾಸ್ತಿ ಜಪ್ತಿಗೆ 2024 ರಲ್ಲಿ ನ್ಯಾಯಾಲಯವು ಆದೇಶಿಸಿತ್ತು. ನ್ಯಾಯಾಲಯದ ಸಿಬ್ಬಂದಿ ಬಂದು ಎಸಿ ಕಚೇರಿಯ ಪೀಠೋಪಕರಣಗಳು, ಕಂಪ್ಯೂಟರ್‌ಗಳನ್ನು ಜಪ್ತಿ ಮಾಡಿದ್ದರು. 2006 ರಲ್ಲಿ ಬಾಗೇಪಲ್ಲಿ ಪಟ್ಟಣದ ನ್ಯಾಯಾಲಯದ ಬಳಿಯಿಂದ ನ್ಯಾಷನಲ್ ಕಾಲೇಜುವರೆಗಿನ ಡಿವಿಜಿ ರಸ್ತೆಯನ್ನು 100 ಅಡಿ ವಿಸ್ತರಿಸಲಾಗಿತ್ತು. ಆಗ 390 ಅಂಗಡಿಗಳಿಗೆ ಚದರ ಅಡಿಗೆ 280 ನಿಗದಿಪಡಿಸಿ ಪರಿಹಾರ ನೀಡಲಾಗಿತ್ತು.

ಈ ಪೈಕಿ 32 ವರ್ತಕರು ಪರಿಹಾರ ಹಣ ಸಾಕಾಗುವುದಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಚದರಡಿಗೆ 850 ನಿಗದಿಪಡಿಸಿತ್ತು. ಈ ಹಣವನ್ನೂ ನೀಡದ ಅಧಿಕಾರಿಗಳ ವಿರುದ್ಧ ವ್ಯಾಪಾರಿಗಳು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು.

ಬೆಳಗಾವಿ ಡಿಸಿ ಕಾರು ಜಪ್ತಿ

ಸಣ್ಣ ನೀರಾವರಿ ಇಲಾಖೆಯು ಗುತ್ತಿಗೆದಾರರೊಬ್ಬರಿಗೆ ಕಾಮಗಾರಿಗಳ ಬಾಕಿಯನ್ನು ಪಾವತಿಸುವಲ್ಲಿ ವಿಳಂಬ ಮಾಡಿತ್ತು. ಸುಮಾರು ಮೂರು ದಶಕಗಳಷ್ಟು ಹಳೆಯದಾದ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ಹಣ ಪಾವತಿ ಮಾಡುವಂತೆ ತಿಳಿಸಿತ್ತು. ಆದರೆ ನ್ಯಾಯಲಯದ ಆದೇಶ ಪಾಲನೆ ಮಾಡದ ಕಾರಣಕ್ಕೆ ಇಲಾಖೆಯ ಮುಖ್ಯಸ್ಥರ ವಿರುದ್ಧವಾಗಿ ಜಿಲ್ಲಾಧಿಕಾರಿಗಳ ವಾಹನವನ್ನು ಜಪ್ತಿ ಮಾಡಲು ಜುಲೈ 2025ರಲ್ಲಿ ಆದೇಶಿಸಿತ್ತು.

ಕಲಬುರಗಿ, ಧಾರವಾಡ ಡಿಸಿ ಕಾರು ವಶ

ರೈತರಿಗೆ ಭೂಸ್ವಾಧೀನ ಪರಿಹಾರ ಹಾಗೂ ಗುತ್ತಿಗೆದಾರರಿಗೆ ಬಾಕಿ ಪಾವತಿ ಮಾಡಲು ವಿಳಂಬವಾದ ಕಾರಣ ಕಲಬುರಗಿ ಮತ್ತು ಧಾರವಾಡ ಜಿಲ್ಲಾಧಿಕಾರಿಗಳ ಕಾರು ಹಾಗೂ ಕಚೇರಿಯ ಕಂಪ್ಯೂಟರ್ ಮತ್ತು ಇತರ ಪೀಠೋಪಕರಣಗಳನ್ನು ಜಪ್ತಿ ಮಾಡಲು ಆದೇಶಿಸಿದ್ದವು.

ಪಾಂಡವಪುರ ಎಸಿ ಕಚೇರಿ ಜಪ್ತಿ

ರೈತರಿಗೆ ಭೂ ಪರಿಹಾರದ ಹಣ ನೀಡುವಲ್ಲಿ ವಿಪರೀತ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ರೈತರು ನ್ಯಾಯಾಲಯದ ಮೊರೆ ಹೋದ ಪರಿಣಾಮ ಮಂಡ್ಯ ಜಿಲ್ಲೆ ಪಾಂಡವಪುರದ ಉಪವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣ ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಲು ನ್ಯಾಯಾಲಯ 2025 ಅಕ್ಟೋಬರ್ನಲ್ಲಿ ಆದೇಶಿಸಿತ್ತು.

ಕಾರ್ಯಪಾಲಕ ಎಂಜಿನಿಯರ್ ಕಚೇರಿ ಜಪ್ತಿ

ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಪುನರ್ವಸತಿ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಹಣ ಬಿಡುಗಡೆಯಾಗದ ಕಾರಣ, ಕೆ.ಆರ್. ಪೇಟೆ ನೀರಾವರಿ ಇಲಾಖೆ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿತ್ತು. ವಿಚಾರಣೆ ನಡೆಸಿದ್ದ ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯವು ನೀರಾವರಿ ಇಲಾಖೆಯ ಕಚೇರಿಯ ಕಾರ್ಯಪಾಲಕ ಎಂಜಿನಿಯರ್ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲು ಆದೇಶಿಸಿತ್ತು. ಗ್ರಾಮಸ್ಥರು ನ್ಯಾಯಾಲಯದ ಸಿಬ್ಬಂದಿಯೊಂದಿಗೆ ಬಂದು ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗಿದ್ದರು.

ಕೊಪ್ಪಳ ಡಿಸಿ ಕಾರು ವಶ

ಗಂಗಾವತಿ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಖಾಸಗಿ ಭೂಮಿಯಲ್ಲಿ ರಸ್ತೆ ನಿರ್ಮಿಸಿದ್ದರೂ, ಭೂಮಾಲೀಕರಿಗೆ ಪರಿಹಾರ ನೀಡದೆ ವಿಳಂಬ ಮಾಡಿದ್ದರಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ನ್ಯಾಯಾಲಯವು ಜಿಲ್ಲಾಧಿಕಾರಿಯ ಅಧಿಕೃತ ಕಾರನ್ನು ಜಪ್ತಿ ಮಾಡಲು ಆದೇಶಿಸಿತ್ತು.

ಭೂಸ್ವಾಧೀನ ಕಚೇರಿ ಜಪ್ತಿ

ಯಗಚಿ ನಾಲೆ ಕಾಮಗಾರಿಗೆ ಭೂಮಿ ಕಳೆದುಕೊಂಡಿದ್ದ ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಳಂಬವಾದ ಕಾರಣ ಹಾಸನದಲ್ಲಿರುವ ಹೇಮಾವತಿ ಜಲಾಶಯದ ವಿಶೇಷ ಭೂಸ್ವಾಧೀನ ಕಚೇರಿಯ ಕುರ್ಚಿಗಳು, ಮೇಜುಗಳು, ಕಂಪ್ಯೂಟರ್‌ಗಳು ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳ ಕಾರನ್ನು 2017ರಲ್ಲಿ ಜಪ್ತಿ ಮಾಡಲಾಗಿತ್ತು.

Tags:    

Similar News