ʼಪೊಲೀಸರೇ ಕಳ್ಳರಾಗಿದ್ದಾರೆ, ಜೈಲಿನಲ್ಲಿ ಭಯೋತ್ಪಾದಕರಿಗೆ ರಾಜಾತಿಥ್ಯʼ: ಸದನದಲ್ಲಿ ಪ್ರತಿಪಕ್ಷ ದಾಳಿ

ಚಳಿಗಾಲದ ಅಧಿವೇಶನದಲ್ಲಿ ಕಾನೂನು ಸುವ್ಯವಸ್ಥೆಯ ಮೇಲಿನ ಚರ್ಚೆಯನ್ನು ಆರಂಭಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಪೊಲೀಸ್ ಇಲಾಖೆ ಮತ್ತು ಕಾರಾಗೃಹ ವ್ಯವಸ್ಥೆಯ ವಿರುದ್ಧ ಕಿಡಿಕಾರಿದರು

Update: 2025-12-17 15:37 GMT

ರಾಜ್ಯದಲ್ಲಿ ರಕ್ಷಣೆ ನೀಡಬೇಕಾದ ಪೊಲೀಸರೇ ಕಳ್ಳರಾಗಿದ್ದು, ಪರಪ್ಪನ ಅಗ್ರಹಾರ ಜೈಲು ಸುಖವಿಹಾರದ ತಾಣವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸರ್ಕಾರ ವಿರುದ್ಧ ಹರಿಹಾಯ್ದಿದ್ದಾರೆ. 

ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕಾನೂನು ಸುವ್ಯವಸ್ಥೆಯ ಮೇಲಿನ ಚರ್ಚೆಯನ್ನು ಆರಂಭಿಸಿದ  ಆರ್. ಅಶೋಕ್, ರಾಜ್ಯ ಪೊಲೀಸ್ ಇಲಾಖೆ ಮತ್ತು ಕಾರಾಗೃಹ ವ್ಯವಸ್ಥೆಯ ವಿರುದ್ಧ ಕಿಡಿಕಾರಿದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ದುಸ್ಥಿತಿಯ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಅಶೋಕ್, ಜೈಲಿನೊಳಗೆ ಕೈದಿಗಳು ರಾಜಾರೋಷವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವೀಡಿಯೋ ಸಾಕ್ಷ್ಯವನ್ನು ಪೆನ್‌ಡ್ರೈವ್ ಮೂಲಕ ಪ್ರದರ್ಶಿಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಜೈಲಿನೊಳಗೆ ಬಂದ ಕೇಕ್ ಮೇಲೆ 'ಗುಬ್ಬಚ್ಚಿ ಸೀನ' ಎಂದು ಬರೆಯಲಾಗಿದೆ.  ಅಲ್ಲಿರುವ ಆಹ್ವಾನಿತರೆಲ್ಲರೂ ಕೊಲೆಗಡುಕರೇ ಆಗಿರುತ್ತಾರೆ. ಗೃಹ ಸಚಿವರು ಇದೆಲ್ಲ ಸುಳ್ಳು ಎನ್ನಬಹುದು. ಆದರೆ ಈ ವೀಡಿಯೋ ಸಾಕ್ಷ್ಯ ಸುಳ್ಳಾಗಲು ಸಾಧ್ಯವಿಲ್ಲ ಎಂದು ಸಾಕ್ಷ್ಯಾಧಾರ ಸಮೇತ ವಾಗ್ದಾಳಿ ನಡೆಸಿದರು.

ಜೈಲಿನ ಭದ್ರತಾ ವೈಫಲ್ಯದ ಬಗ್ಗೆ ಕಿಡಿ ಕಾರಿದ ಅವರು, ಜೈಲಾಧಿಕಾರಿ ದಯಾನಂದ್ ಅವರೇ ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ, ಭಯೋತ್ಪಾದಕರ ಕೈಗೆ ಮೊಬೈಲ್ ಸಿಗುತ್ತಿದೆ. ದೇಶದ್ರೋಹಿ ಕೃತ್ಯ ಎಸಗುವವನಿಗೆ ಸಂಪರ್ಕ ಸಾಧನ ಸಿಕ್ಕರೆ ಅವನು ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸುತ್ತಾನೆ ಎಂಬ ಸಾಮಾನ್ಯ ಜ್ಞಾನವೂ ಪೊಲೀಸರಿಗೆ ಇಲ್ಲವೇ? ಪೊಲೀಸರು ಅಲ್ಲಿ ಕತ್ತೆ ಕಾಯುತ್ತಿದ್ದಾರೆಯೇ?" ಎಂದು ಅಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಕಾರಾಗೃಹದ ಮ್ಯಾನ್ಯುಯಲ್ ಪ್ರದರ್ಶಿಸಿದ ಅಶೋಕ್, ಇದನ್ನು ಗೃಹ ಸಚಿವರು ಅಥವಾ ಅಧಿಕಾರಿಗಳು ಓದಿದ್ದಾರೆಯೇ ಎಂದು ಪ್ರಶ್ನಿಸಿದರು.

ಹಿಂದೆ ಜೈಲಿನಲ್ಲಿ ಊಟ ನಮ್ಮದು ಎನ್ನುತ್ತಿದ್ದರು, ಈಗ ಊಟದ ಜೊತೆ ಎಣ್ಣೆಯೂ (ಮದ್ಯ) ನಮ್ಮದು ಎನ್ನುವಂತಾಗಿದೆ. ಹೊರಗಿನಿಂದ ಸ್ಪಿರಿಟ್ ಹೇಗೆ ಒಳಗೆ ಹೋಗುತ್ತಿದೆ? ಜೈಲಿನಲ್ಲೇ ಮದ್ಯ ತಯಾರಾಗುತ್ತಿದೆ. ಜೈಲಿನ ಗೇಟ್ ಬಳಿ ನಿಲ್ಲುವ ಸಿಬ್ಬಂದಿ ಲಕ್ಷಾಂತರ ರೂಪಾಯಿ ಡೀಲ್ ಮಾಡುತ್ತಿದ್ದಾರೆ. ಪೊಲೀಸರಿಗೆ ಅತಿ ಹೆಚ್ಚು ಅಕ್ರಮ ಹಣ ಸಿಗುವ ಜಾಗವೇ ಜೈಲು. ಅಲ್ಲಿ ಕೆಲಸ ಮಾಡುವ ಪೊಲೀಸರು ಕೋಟ್ಯಾಧೀಶರಾಗಿದ್ದಾರೆ, ಇವರಿಗೆ ಮಾನ ಮರ್ಯಾದೆ ಇದೆಯಾ?" ಎಂದು ಕಿಡಿಕಾರಿದರು. 

ಬೆಂಗಳೂರಿನಲ್ಲಿ ನಡೆದ ೭ ಕೋಟಿ ರೂ. ಎಟಿಎಂ ಹಣ ಕಳ್ಳತನ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ಈ ದರೋಡೆಗೆ ಸ್ಕೆಚ್ ಹಾಕಿಕೊಟ್ಟವರೇ ಪೊಲೀಸರು. ವಾಹನಗಳನ್ನು ಬದಲಿಸಿ, ಪ್ಲಾನ್ ಮಾಡಿ ದರೋಡೆ ಮಾಡಲಾಗಿದೆ. ಪೊಲೀಸರೇ ಕಳ್ಳರಾದರೆ ಜನಸಾಮಾನ್ಯರ ಗತಿಯೇನು? ಪಾಪ ಪರಮೇಶ್ವರ್ ಅವರು 24 ಗಂಟೆಯಲ್ಲಿ ಹಿಡಿಯಿರಿ ಎಂದು ಆದೇಶಿಸುತ್ತಾರೆ. ಆದರೆ ಪ್ಲಾನ್ ಮಾಡಿದವರೇ ಪೊಲೀಸರಾಗಿದ್ದಾಗ ಹಿಡಿಯುವವರಾರು? ಎಂದು ಲೇವಡಿ ಮಾಡಿದರು.

ಮಂಗಳೂರಿನ ದರೋಡೆ ಪ್ರಕರಣವನ್ನೂ ಪ್ರಸ್ತಾಪಿಸಿದ ಅಶೋಕ್, ಪೊಲೀಸರ ಪೋಸ್ಟಿಂಗ್ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹಿಂದೆ ಬೆಂಗಳೂರಿನಲ್ಲಿ 7-8 ಖಡಕ್ ಇನ್ಸ್‌ಪೆಕ್ಟರ್‌ಗಳಿದ್ದರು, ರೌಡಿಗಳು ಅವರನ್ನು ಕಂಡರೆ ಗಡಗಡ ನಡುಗುತ್ತಿದ್ದರು. ಆದರೆ ಇಂದು ಲಂಚ ಕೊಟ್ಟು ಪೋಸ್ಟಿಂಗ್ ಪಡೆಯುವವರಿಂದ ದಕ್ಷತೆ ನಿರೀಕ್ಷಿಸಲು ಸಾಧ್ಯವಿಲ್ಲ. ಸಮರ್ಥ ಅಧಿಕಾರಿಗಳಿಗೆ ಪೋಸ್ಟಿಂಗ್ ನೀಡದೆ, ಭ್ರಷ್ಟಾಚಾರಕ್ಕೆ ಮಣೆ ಹಾಕುತ್ತಿರುವುದೇ ಇಂದಿನ ದುಸ್ಥಿತಿಗೆ ಕಾರಣ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು. ಡಿಜಿ ಅವರೇ ಮರ್ಯಾದೆ ಹೋಗುತ್ತಿದೆ ಎಂದು ಪತ್ರ ಬರೆಯುವ ಸ್ಥಿತಿ ಬಂದಿದೆ ಎಂದು ಅಶೋಕ್ ಕಳವಳ ವ್ಯಕ್ತಪಡಿಸಿದರು.

ಜನರನ್ನು ಶೋಷಿಸುವ ಸರ್ಕಾರ

ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ದಿಕ್ಕು ತಪ್ಪಿದೆ. ರಕ್ಷಣೆ ನೀಡಬೇಕಾದ ಪೊಲೀಸರೇ ಅಪರಾಧಿಗಳಿಗೆ ನೆರವು ನೀಡುತ್ತಿದ್ದಾರೆ. ನಿಮ್ಮದು ಜನರ ಕಷ್ಟ ಆಲಿಸುವ ಸರ್ಕಾರವಲ್ಲ, ಬದಲಾಗಿ ಜನರನ್ನು ಶೋಷಿಸುವ ಸರ್ಕಾರ. ಪೊಲೀಸ್ ಇಲಾಖೆಯ ಮೌಲ್ಯ ಕುಸಿಯುತ್ತಿದೆ. ರಾಜ್ಯ ಕಂಡ ದಕ್ಷ ಅಧಿಕಾರಿ ಅಜಯ್ ಸಿಂಗ್ ಅವರು 'ಪೊಲೀಸ್ ಎಂದರೆ ಠಾಣೆಗೆ ಬಂದ ನೊಂದವರಿಗೆ ನೀರು ಕೊಡುವವರು' ಎಂದು ಅರ್ಥಪೂರ್ಣವಾಗಿ ಹೇಳಿದ್ದರು. ಸ್ವತಃ ಗೃಹ ಸಚಿವರು ಕೂಡ ಪೊಲೀಸರು ಜನಸ್ನೇಹಿಯಾಗಿರಬೇಕು ಎಂದು ಹೇಳುತ್ತಲೇ ಇರುತ್ತಾರೆ. ಆದರೆ ವಾಸ್ತವ ಬೇರೆಯೇ ಇದೆ. ಇಂದು ಠಾಣೆಗೆ ಯಾರೇ ನೊಂದವರು ಬಂದರೂ, ಅವರಿಗೆ ನ್ಯಾಯ ಸಿಗುತ್ತಿಲ್ಲ. ಬದಲಾಗಿ ಪೊಲೀಸರೇ ಅಪರಾಧಿಗಳಿಗೆ ನೆರವು ನೀಡುತ್ತಿದ್ದಾರೆ. ಗೃಹ ಸಚಿವರಿಗೆ ಇಲಾಖೆಯ ಮೇಲೆ ಆಸಕ್ತಿ ಇಲ್ಲವೇ ಅಥವಾ ಹಿಡಿತ ತಪ್ಪಿದೆಯೇ?" ಎಂದು ವಾಗ್ದಾಳಿ ನಡೆಸಿದರು.

ದೇವನಹಳ್ಳಿಯಲ್ಲಿ ಮಹಿಳೆಯೊಬ್ಬರು ಗಂಭೀರವಾದ ಪೋಕ್ಸೋ ಪ್ರಕರಣದಡಿ ದೂರು ನೀಡಲು ಹೋದರೆ, ಅಲ್ಲಿನ ಪೊಲೀಸರು ದೂರು ಸ್ವೀಕರಿಸಿಲ್ಲ. ಬದಲಾಗಿ ಆರೋಪಿಗಳಿಂದ 5 ಲಕ್ಷ ರೂ. ಲಂಚ ಪಡೆದು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ. ರಕ್ಷಣೆ ಸಿಗದ ಆ ಮಹಿಳೆ ಅನಿವಾರ್ಯವಾಗಿ ಲೋಕಾಯುಕ್ತಕ್ಕೆ ದೂರು ನೀಡಬೇಕಾಯಿತು. ಇದು ಮಹಿಳಾ ರಕ್ಷಣೆಗೆ ನಿಮ್ಮ ಸರ್ಕಾರ ನೀಡುತ್ತಿರುವ ಆದ್ಯತೆಯೇ? ಉಡುಪಿಯಲ್ಲಿ ಅಕ್ಷತಾ ಪೂಜಾರಿ ಎಂಬುವವರ ನಿವಾಸಕ್ಕೆ ಬೇರೆ ಯಾವುದೋ ಪ್ರಕರಣದ ನೆಪದಲ್ಲಿ ಹೋದ ಪೊಲೀಸರು, ಆ ಮಹಿಳೆಯ ಮೇಲೆಯೇ ಹಲ್ಲೆ ನಡೆಸಿದ್ದಾರೆ. ರಕ್ಷಣೆ ಕೊಡಬೇಕಾದವರೇ ಭಕ್ಷಕರಾದರೆ ಜನ ಯಾರ ಬಳಿ ಹೋಗಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಕಾಲದಲ್ಲಿ ಕರ್ನಾಟಕ ಪೊಲೀಸ್ ಎಂದರೆ ಇಡೀ ದೇಶಕ್ಕೆ ಹೆಮ್ಮೆ ಇತ್ತು. ಆದರೆ ಇಂದು ಆ ಪರಿಸ್ಥಿತಿ ಇಲ್ಲ. ಈ ಸರ್ಕಾರ ಜನರ ಧ್ವನಿಯನ್ನು ಆಲಿಸುವ ಸರ್ಕಾರವಲ್ಲ, ಶೋಷಿಸುವ ಸರ್ಕಾರವಾಗಿದೆ. ರಾಜ್ಯದಲ್ಲಿ ಇಲಾಖೆ ಯಾಕೆ ಈ ಮಟ್ಟಕ್ಕೆ ಕುಸಿದಿದೆ ಎಂಬುದಕ್ಕೆ ಗೃಹ ಸಚಿವರು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು. 

Tags:    

Similar News