ಸ್ಮಶಾನ ಭೂಮಿ ಒತ್ತುವರಿ; ́ಮಿಸ್ಟರ್ ಕ್ಲೀನ್‌ʼ ಕೃಷ್ಣ ಬೈರೇಗೌಡ ವಿರುದ್ಧ ಭೂ ಹಗರಣ ಆರೋಪ

'ಮಿಸ್ಟರ್ ಕ್ಲೀನ್' ಖ್ಯಾತಿಯ ಕಂದಾಯ ಸಚಿವ ಕೃಷ್ಣಬೈರೇಗೌಡ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭೂ ಕಬಳಿಕೆ ಆರೋಪ ಮಾಡಿದ್ದಾರೆ. ದಾಖಲೆಗಳನ್ನು ಬಿಡುಗಡೆ ಮಾಡಿ ಕಿಡಿಕಾರಿದರು

Update: 2025-12-17 14:54 GMT
Click the Play button to listen to article

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆಯೊಂದರಲ್ಲಿ, 'ಮಿಸ್ಟರ್ ಕ್ಲೀನ್' ಖ್ಯಾತಿಯ ಕಂದಾಯ ಸಚಿವ ಕೃಷ್ಣಬೈರೇಗೌಡ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಸ್ವರೂಪದ ಭೂ ಕಬಳಿಕೆ ಆರೋಪವನ್ನು ಮಾಡಿದ್ದಾರೆ. ಬೆಳಗಾವಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಅವರು ನಡೆಸಿರುವ ವಾಗ್ದಾಳಿಯು ಸರ್ಕಾರದ ಪಾರದರ್ಶಕತೆಯನ್ನೇ ಪ್ರಶ್ನಿಸುವಂತಿದೆ.

ಹಗರಣದ ಮೂಲ ಕೋಲಾರ ಜಿಲ್ಲೆಯ ನರಸಾಪುರ ಹೋಬಳಿಯ ಗರುಡನಪಾಳ್ಯ ಗ್ರಾಮದಲ್ಲಿದೆ. ಇಲ್ಲಿನ ಸರ್ವೇ ನಂಬರ್ 47ರ 1 ಎಕರೆ ಜಮೀನು ಅಧಿಕೃತವಾಗಿ 'ಸರ್ಕಾರಿ ಖರಾಬು ಸ್ಮಶಾನ'ವಾಗಿದೆ. ಹಾಗೆಯೇ, ಸರ್ವೇ ನಂಬರ್ 46ರ 20 ಎಕರೆ 16 ಗುಂಟೆ ಜಮೀನು ಮೂಲತಃ 'ಕೆರೆ ಅಂಗಳ'ವಾಗಿದೆ. ಈ ಎರಡೂ ಸೇರಿ ಒಟ್ಟು 21 ಎಕರೆ 16 ಗುಂಟೆ ವಿಶಾಲವಾದ ಭೂಮಿಯಾಗಿದ್ದು, ಪ್ರಸ್ತುತ ಮಾರುಕಟ್ಟೆ ಮೌಲ್ಯದ ಪ್ರಕಾರ ಪ್ರತಿ ಎಕರೆಗೆ 5 ರಿಂದ 6 ಕೋಟಿ ರೂಪಾಯಿ ಬೆಲೆ ಬಾಳುತ್ತದೆ.

ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ,  ‘ಮಿಸ್ಟರ್ ಕ್ಲೀನ್’ ಎಂದು ಬಿಂಬಿಸಿಕೊಳ್ಳುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿದ್ದು, ತಕ್ಷಣ ರಾಜೀನಾಮೆ ಕೊಡಬೇಕು. ಸ್ಮಶಾನ ಭೂಮಿ ಮತ್ತು ಕೆರೆ ಭೂಮಿಯನ್ನು ವರ್ಗಾಯಿಸಿದ್ದರ ಕುರಿತು ಸರ್ಕಾರ ತನಿಖೆ ನಡೆಸಬೇಕು. ಇದರ ಕುರಿತು ಸದನದಲ್ಲಿ ಉತ್ತರಿಸಬೇಕು ಎಂದು ಆಗ್ರಹಿಸಿದರು. 

ಕಾನೂನಿನ ಪ್ರಕಾರ ಸ್ಮಶಾನ ಮತ್ತು ಕೆರೆ ಅಂಗಳವನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾಯಿಸಲು ಅವಕಾಶವಿಲ್ಲ. 1978ರ ಮೂಲ ದಾಖಲೆಗಳಲ್ಲಿ ಸರ್ವೇ ನಂಬರ್ 46ನ್ನು ಸ್ಪಷ್ಟವಾಗಿ 'ಕೆರೆ' ಎಂದು ನಮೂದಿಸಲಾಗಿತ್ತು. ಆದರೆ ಇತ್ತೀಚೆಗೆ ಅದನ್ನು ತಿದ್ದಿ, 'ಖರಾಬು' ಎಂದು ಬದಲಾಯಿಸಲಾಗಿದೆ. ಸ್ಮಶಾನ ಭೂಮಿಯ ದಾಖಲೆಗಳನ್ನು2024ರ ಏ.20 ರಂದು ಬದಲಾವಣೆ ಮಾಡಲಾಗಿದೆ. ದಿವಂಗತ ಸಿ. ಬೈರೇಗೌಡರ ಪುತ್ರ ಕೃಷ್ಣಬೈರೇಗೌಡರ ಹೆಸರಿಗೆ ಈ ಆಸ್ತಿಗಳನ್ನು ವರ್ಗಾಯಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು. 

ಭೂ ದಾಖಲೆಗಳ ರಕ್ಷಕರಾಗಬೇಕಾದ ಕಂದಾಯ ಸಚಿವರೇ ಸ್ಮಶಾನ ಮತ್ತು ಕೆರೆ ಭೂಮಿಯನ್ನು ಕಬಳಿಸಿದ್ದಾರೆ. ಈ ಆರೋಪವು ಸರ್ಕಾರದ ನೈತಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಸರ್ಕಾರ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ಒತ್ತುವರಿಯಾದ ಜಮೀನನ್ನು ವಾಪಸ್ ಪಡೆಯಬೇಕು. ಒಂದು ಕೋಲಾರ ಜಿಲ್ಲೆ ನರಸಾಪುರ ಹೋಬಳಿ ಗರುಡನಪಾಳ್ಯ ಗ್ರಾಮದ ಸರ್ವೇ ನಂಬರ್ 47ರ 1 ಎಕರೆ ಜಾಗ ಮತ್ತು 46 ಸರ್ವೇ ನಂಬರ್‌ ವಿಚಾರವಾಗಿದ್ದು, ಎರಡನೆಯದು ಕೆರೆ ಅಂಗಳ, 20 ಎಕರೆ 16 ಗುಂಟೆ ಜಾಗ ಆಗಿದೆ. ಒಟ್ಟು ಸೇರಿದರೆ 21 ಎಕರೆ 16 ಗುಂಟೆ. ಪ್ರತಿ ಎಕರೆಗೆ 5ರಿಂದ 6 ಕೋಟಿ ಬೆಲೆಯ ಜಮೀನುಗಳು ಇವಾಗಿದೆ. ಸರ್ವೇ ನಂಬರ್ 47ರ 1 ಎಕರೆ ಜಾಗ ಸ್ಮಶಾನದ ಜಮೀನು. ಇದನ್ನು ಯಾರೂ ತಮ್ಮ ಹೆಸರಿಗೆ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಗಮನ ಸೆಳೆದರು.

ಮೂಲ ದಾಖಲೆಗಳ ಪ್ರಕಾರ ಸರ್ಕಾರಿ ಖರಾಬು ಸ್ಮಶಾನ ಎಂದಿದೆ. ಇದನ್ನು ಕಂದಾಯ ಸಚಿವರ ಹೆಸರಿಗೆ ವರ್ಗಾಯಿಸಿದ್ದು ಹೇಗೆ ಎಂದು ಕೇಳಿದರು. ಸ್ಮಶಾನವನ್ನು ದಾಖಲೆಗಳಲ್ಲಿ ತಿದ್ದುಪಡಿ ಮಾಡಿ ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಎರಡನೆಯದಾಗಿ 20 ಎಕರೆ 16 ಗುಂಟೆ ಜಮೀನಿನಲ್ಲಿ ಮೂಲ ದಾಖಲೆಯಡಿ ಕೆರೆ ಎಂದಿದೆ. ಕೆಳಗಡೆ ಡಾಟ್ ಹಾಕಿ ಖರಾಬು ಎಂದು ಬರೆದಿದ್ದಾರೆ. ಎರಡೂ ಜಮೀನನ್ನು ವಾಪಸ್ ಪಡೆಯಬೇಕು. ಇಂತಹ ಅನೇಕ ಪ್ರಕರಣಗಳು ಇನ್ನು ಮುಂದೆ ಬರಲಿವೆ ಎಂದು ತಿಳಿಸಿದರು.

ಬಿಜೆಪಿ ಆರೋಪಕ್ಕೆ ಸಚಿವ ಕೃಷ್ಣ ಬೈರೇಗೌಡರ ತಿರುಗೇಟು

ಗರುಡನಪಾಳ್ಯದ ಕೆರೆ ಮತ್ತು ಸ್ಮಶಾನ ಭೂಮಿಯನ್ನು ಕಬಳಿಸಿದ್ದಾರೆ ಎಂಬ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಗಂಭೀರ ಆರೋಪಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ವಿಷಯವೇ ಇಲ್ಲದ ಕಡೆ ಇಲ್ಲಸಲ್ಲದ ಆರೋಪ ಮಾಡುವುದು ಬಿಜೆಪಿಗರ ಸಂಸ್ಕೃತಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವರು ವಿವಾದಿತ ಭೂಮಿಯ ಮಾಲೀಕತ್ವದ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ತಾವು ಅಧಿಕಾರ ದುರ್ಬಳಕೆ ಮಾಡಿಕೊಂಡು ಪಡೆದ ಗ್ರ್ಯಾಂಟ್  ಜಮೀನು ಅಲ್ಲ ಅಥವಾ ಒತ್ತುವರಿ ಮಾಡಿಕೊಂಡ ಸರ್ಕಾರಿ ಜಮೀನೂ ಅಲ್ಲ ಎಂದು ಹೇಳಿದ್ದಾರೆ. ಈ ಆಸ್ತಿ ನಮ್ಮ ತಾತನ ಕಾಲದಿಂದಲೂ ಕುಟುಂಬದ ಒಡೆತನದಲ್ಲಿದೆ. ತಾತನಿಂದ ನಮ್ಮ ತಂದೆ (ಸಿ. ಬೈರೇಗೌಡ) ಮತ್ತು ಚಿಕ್ಕಪ್ಪಂದಿರಿಗೆ ಹಸ್ತಾಂತರವಾಗಿ, ನಂತರ ಕೌಟುಂಬಿಕ ವಿಭಾಗ ಪತ್ರದ ಮೂಲಕ ನಮಗೆ ಬಂದಿದೆ. ದಶಕಗಳಿಂದ ನಮ್ಮ ಕುಟುಂಬದ ಅನುಭವದಲ್ಲಿರುವ, ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯನ್ನು ಇಂದಿನ ದಿನಮಾನದಲ್ಲಿ 'ಭೂ ಕಬಳಿಕೆ' ಎಂದು ಬಿಂಬಿಸುವುದು ಅಸಂಬದ್ಧ ಎಂದು ತಿರುಗೇಟು ನೀಡಿದರು. 

ಬಿಜೆಪಿ ನಾಯಕರ ನಡೆಯನ್ನು ಕಟುವಾಗಿ ಟೀಕಿಸಿದ ಅವರು, ವಿರೋಧ ಪಕ್ಷಗಳು ಕೇವಲ ರಾಜಕೀಯ ದ್ವೇಷ ತೀರಿಸಿಕೊಳ್ಳಲು ಮತ್ತು ತೇಜೋವಧೆ ಮಾಡಲು ಇಂತಹ ಸುಳ್ಳುಗಳನ್ನು ಸೃಷ್ಟಿಸುತ್ತಿವೆ. ಅಭಿವೃದ್ಧಿ ವಿಷಯಗಳಲ್ಲಿ ಚರ್ಚೆ ಮಾಡಲು ಸಾಧ್ಯವಾಗದವರು ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ ಎಂದು ಕಿಡಿಕಾರಿದ್ದಾರೆ.

ಲೋಕಾಯುಕ್ತ ತನಿಖೆಗೆ ಮುಕ್ತ ಸವಾಲು

ತಮ್ಮ ಮೇಲಿನ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರತಿಪಾದಿಸಿದ ಕೃಷ್ಣ ಬೈರೇಗೌಡರು, ಛಲವಾದಿ ನಾರಾಯಣಸ್ವಾಮಿ ಅವರಿಗೆ ನೇರ ಸವಾಲು ಹಾಕಿದ್ದಾರೆ. "ಕೇವಲ ಮಾಧ್ಯಮಗಳ ಮುಂದೆ ದಾಖಲೆ ಪ್ರದರ್ಶನ ಮಾಡುವುದಲ್ಲ, ನಿಮ್ಮ ಬಳಿ ಅಧಿಕೃತ ಸಾಕ್ಷ್ಯಾಧಾರಗಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಿ. ತನಿಖೆ ನಡೆಯಲಿ, ಸತ್ಯಾಸತ್ಯತೆ ಜನರಿಗೆ ತಿಳಿಯಲಿ ಎಂದು ಹೇಳಿದರು. 

Tags:    

Similar News