ನಟಿ ಉಮಾಶ್ರೀಗೆ ಅತ್ಯುನ್ನತ ಪ್ರಶಸ್ತಿ; ವಿಧಾನಮಂಡಲದಲ್ಲಿ ಅಭಿನಂದನೆಗಳ ಮಹಾಪೂರ!
ಮೇಲ್ಮನೆಯ ಹಿರಿಯ ಸದಸ್ಯೆ ಡಾ.ಉಮಾಶ್ರೀ ಅವರಿಗೆ ಬೆಳಗಾವಿಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಅಭಿನಂದಿಸಲಾಯಿತು.
ರಾಜ್ಯ ಸರ್ಕಾರದಿಂದ 2019ನೇ ಸಾಲಿನ ಡಾ.ರಾಜಕುಮಾರ ಜೀವಮಾನ ಸಾಧನೆ ಪುರಸ್ಕಾರಕ್ಕೆ ಭಾಜನರಾದ ಖ್ಯಾತ ಚಲನಚಿತ್ರ ತಾರೆ, ಮೇಲ್ಮನೆಯ ಹಿರಿಯ ಶಾಸಕರಾದ ಡಾ.ಉಮಾಶ್ರೀ ಅವರಿಗೆ ಬೆಳಗಾವಿಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಅಭಿನಂದಿಸಲಾಯಿತು. ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಭಾರತಿ ಶೆಟ್ಟಿ ಮತ್ತು ಹೇಮಲತಾ ನಾಯಕ ಅವರ ಮನವಿ ಮೇರೆಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಡಿ.17ರಂದು ಪರಿಷತ್ ಕಲಾಪದ ಮಧ್ಯೆ ಅಭಿನಂದನಾ ಪ್ರಸ್ತಾವಕ್ಕೆ ಅವಕಾಶ ಕಲ್ಪಿಸಿದರು.
ಹಮ್ಮು ಬಿಮ್ಮುಗಳಿಲ್ಲದೇ, ಎಲ್ಲರನ್ನೂ ಸಮಾನರಾಗಿ ಕಾಣುವ ದೊಡ್ಡ ಗುಣವನ್ನು ಕಲಾವಿದೆ ಉಮಾಶ್ರೀ ಅವರಲ್ಲಿ ಕಾಣುತ್ತೇವೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಅಭಿನಂದಿಸಿದರು. ಸುಖಜೀವನ ತ್ಯಾಗ ಮಾಡಿ, ಮೂಲವೃತ್ತಿಯಲ್ಲಿ ನಿರಂತರ ಮುಂದುವರೆಯುತ್ತಿರುವ ಹಿರಿಯರಾದ ಉಮಾಶ್ರೀ ಅವರು ಅತ್ಯುತ್ತಮ ಅಭಿನೇತ್ರಿ ಎಂದು ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಉಮಾಶ್ರೀ ಅವರಿಗೆ ಗೌರವಿಸಿದರು.
ಎಲ್ಲರ ಮನಸಿನಲ್ಲಿ ಇರುವ ಹಿರಿಯ ಕಲಾವಿದೆ ಮತ್ತು ನಟಿಯಾಗಿ ಸರ್ಕಾರದ ಅತ್ಯುನ್ನತ ಪುರಸ್ಕಾರ ಗಿಟ್ಟಿಸಿದ ಡಾ.ಉಮಾಶ್ರೀ ಅವರು ಮೇಲ್ಮನೆಯ ಹಿರಿಯ ಸದಸ್ಯರು ಎಂಬುದಾಗಿ ಹೇಳುವುದು ನಮಗೆ ಹೆಮ್ಮೆಯ ಸಂಗತಿ ಎಂದು ಸದಸ್ಯರಾದ ಭಾರತಿ ಶೆಟ್ಟಿ ಅವರು ಸಂತಸ ವ್ಯಕ್ತಪಡಿಸಿದರು.
ರಂಗಭೂಮಿ, ಕಿರುತೆರೆ-ಬೆಳ್ಳಿತೆರೆಯಲ್ಲಿ ಜೀವಮಿಡಿತದ ನಟನೆಯಿಂದ ಗಮನ ಸೆಳೆದ ಡಾ.ಉಮಾಶ್ರಿ ಅವರು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ಹಾಗೆ ತಮ್ಮ ಮೂಲವೃತ್ತಿಗೆ ನ್ಯಾಯ ಒದಗಿಸಿ ಮಾದರಿಯಾಗಿದ್ದಾರೆ ಎಂದು ಸದಸ್ಯೆ ಹೇಮಲತಾ ನಾಯಕ ಅವರು ಉಮಾಶ್ರೀ ಅವರ ನಟನೆಯ ಪರಿಯನ್ನು ಬಣ್ಣಿಸಿದರು.
ವೃತ್ತಿ ಬದ್ಧತೆಯ ಕಲಾವಿದೆಯಾದರೂ, ದೊಡ್ಡ ಹುದ್ದೆಗೇರಿದರೂ ಮೂಲವೃತ್ತಿಯಲ್ಲಿದ್ದು ಆತ್ಮ ಸಂತೋಷ ಕಾಣುವುದನ್ನು ನಾನು ಉಮಾಶ್ರೀ ಅವರಲ್ಲಿ ಕಂಡಿದ್ದೇನೆ ಎಂದು ಸದಸ್ಯರಾದ ಐವನ್ ಡಿ'ಸೋಜಾ ತಿಳಿಸಿದರು. ಹಿರಿ-ಕಿರಿಯರೆಲ್ಲರೂ ಮೆಚ್ಚುವ ಕಲಾವಿದೆ ಉಮಾಶ್ರೀ ಅವರಿಗೆ ಡಾ.ರಾಜಕುಮಾರ ಜೀವಮಾನ ಸಾಧನೆ ಪ್ರಶಸ್ತಿಯ ದೊರೆತು ಪ್ರಶಸ್ತಿಯ ಘನತೆ ಹೆಚ್ಚಿದೆ ಎಂದು ಸದಸ್ಯರಾದ ಬಲ್ಕೀಸ್ ಬಾನು ಹೇಳಿದರು.
ಸಾಕವ್ವನ ಪಾತ್ರಕ್ಕೆ ಜೀವತುಂಬಿದ ಡಾ.ಉಮಾಶ್ರೀ ಅವರ ಅಭಿನಯವು ಶರ್ಮಿಷ್ಠೆ ನಾಟಕದಲ್ಲೂ ಸಹ ಮನೋಜ್ಞವಾಗಿದೆ ಎಂದು ಸದಸ್ಯರಾದ ಕೇಶವ ಪ್ರಸಾದ್ ತಿಳಿಸಿದರು. ನಗುವಲ್ಲೂ ಗಂಭೀರತೆ, ಕಲೆಯ ಜೊತೆಗೂ ಜನ ಕಾಳಜಿ ಹೊಂದಿದ ಕಲಾವಿದೆ ಎಂದು ಕವಿತೆಯ ಮೂಲಕ ಸದಸ್ಯರಾದ ಡಾ.ಧನಂಜಯ ಸುರ್ಜಿ ಅವರು ಉಮಾಶ್ರೀ ಅವರಿಗೆ ಅಭಿನಂದಿಸಿದರು.
ಬಹಳಷ್ಟು ಜನರು ತಿದ್ದಿ, ಸಲಹೆ ಮಾಡಿ ನನಗೆ ಕಲಾವಿದೆಯಾಗುವ ಅವಕಾಶ ನೀಡಿದರು. ಬಹಳಷ್ಟು ಪ್ರಶಂಸೆ, ಶಿಳ್ಳೆ ಮತ್ತು ಚಪ್ಪಾಳೆಯನ್ನು ಕರ್ನಾಟಕದ ಜನತೆ ನೀಡಿದ್ದು ಜನರ ಪ್ರೀತಿ ಉಳಿಸಿಕೊಳ್ಳುವೆ. ಮೇರುನಟ ಡಾ.ರಾಜಕುಮಾರ ಅವರ ಹೆಸರಿನ ಪ್ರಶಸ್ತಿ ಪಡೆದಿದ್ದು ಬದುಕಿನ ಸಾರ್ಥಕ ದಿನ ಮತ್ತು ಕ್ಷಣ ಅನಿಸಿದೆ. ನನ್ನ ತಾಯಿ ನಿಂಗವ್ವ ಮತ್ತು ಈ ನಾಡಿನ ಮಹಿಳಾ ಶಕ್ತಿಗೆ ಈ ಪುರಸ್ಕಾರವನ್ನು ಅರ್ಪಿಸುತ್ತೇನೆ ಎಂದು ಇದೆ ವೇಳೆ ಡಾ.ಉಮಾಶ್ರೀ ಅವರು ತಮ್ಮ ಮನದಾಳದ ಸಂತಸ ಹಂಚಿಕೊಂಡರು.