ಕಾರವಾರದ ಕಡಲತೀರದಲ್ಲಿ 'ಚೀನಾ ಜಿಪಿಎಸ್' ಹೊತ್ತ ಹಕ್ಕಿ ಪ್ರತ್ಯಕ್ಷ; ಗೂಢಚರ್ಯೆಯ ಶಂಕೆ?
ಕಾರವಾರದ ಐಎನ್ಎಸ್ ಕದಂಬ (ಸೀಬರ್ಡ್) ನೌಕಾನೆಲೆಯ ಸಮೀಪದ ಕಡಲತೀರದಲ್ಲಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ ಸಮುದ್ರ ಹಕ್ಕಿ (ಸೀಗಲ್) ಪತ್ತೆಯಾಗಿದ್ದು ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ತಲುಪಿದ ಅರಣ್ಯ ಅಧಿಕಾರಿಗಳು ಪಕ್ಷಿಯನ್ನು ಸುರಕ್ಷಿತವಾಗಿ ಸೆರೆಹಿಡಿದು ಸಾಧನವನ್ನು ಪರಿಶೀಲಿಸಿದರು.
ಕಾರವಾರ: ದೇಶದ ಅತ್ಯಂತ ಮಹತ್ವದ ಹಾಗೂ ಸೂಕ್ಷ್ಮ ಪ್ರದೇಶವಾಗಿರುವ ಐಎನ್ಎಸ್ ಕದಂಬ ನೌಕಾನೆಲೆಯ (ಸೀಬರ್ಡ್) ಸಮೀಪವಿರುವ ಕಾರವಾರದ ಕಡಲತೀರದಲ್ಲಿ, ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕರ್ ಅಳವಡಿಸಲಾದ ಸಮುದ್ರ ಹಕ್ಕಿಯೊಂದು (Seagull) ಪತ್ತೆಯಾಗಿದ್ದು ತೀವ್ರ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ.
ಬುಧವಾರ ಸಂಜೆ ತಿಮ್ಮಕ್ಕ ಗಾರ್ಡನ್ ಹಿಂಭಾಗದ ಕಡಲತೀರದಲ್ಲಿ ಹಕ್ಕಿ ಕಂಡುಬಂದಿದ್ದು, ಭದ್ರತಾ ಸಂಸ್ಥೆಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ತನಿಖೆ ಆರಂಭಿಸಿದ್ದಾರೆ.
ಸ್ಥಳೀಯರು ಕಡಲತೀರದಲ್ಲಿ ವಿಹರಿಸುತ್ತಿದ್ದಾಗ ಈ ಹಕ್ಕಿಯ ಬೆನ್ನಿನ ಮೇಲೆ ವಿಚಿತ್ರವಾದ ಎಲೆಕ್ಟ್ರಾನಿಕ್ ಸಾಧನವಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅವರು ಅರಣ್ಯ ಇಲಾಖೆಯ ಸಾಗರ ವಿಭಾಗದ (Marine Wing) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಹಕ್ಕಿಯನ್ನು ಸುರಕ್ಷಿತವಾಗಿ ಸೆರೆಹಿಡಿದು ಪರಿಶೀಲಿಸಿದಾಗ, ಅದರ ಮೇಲಿದ್ದ ಜಿಪಿಎಸ್ ಸಾಧನವು ಚೀನಾ ದೇಶಕ್ಕೆ ಸೇರಿದ್ದೆಂದು ತಿಳಿದುಬಂದಿದೆ. ಸಾಧನದ ಮೇಲೆ 'ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್' ಅಡಿಯಲ್ಲಿ ಬರುವ ಪರಿಸರ ವಿಜ್ಞಾನ ಸಂಶೋಧನಾ ಕೇಂದ್ರದ (Research Centre for Eco-Environmental Sciences) ಹೆಸರು ಮತ್ತು ಲೋಗೋ ಕಂಡುಬಂದಿದೆ.
ಪಕ್ಷಿ ಸಂಶೋಧನೆ
ಪ್ರಾಥಮಿಕ ತನಿಖೆಯ ಪ್ರಕಾರ, ಇದು ಯಾವುದೇ ಗೂಢಚರ್ಯೆಯ ಕೃತ್ಯವಾಗಿರುವ ಸಾಧ್ಯತೆ ಕಡಿಮೆ ಎಂದು ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯವಾಗಿ ಪಕ್ಷಿಗಳ ವಲಸೆ ಮಾರ್ಗ, ಅವುಗಳ ಆಹಾರ ಪದ್ಧತಿ ಮತ್ತು ಚಲನವಲನಗಳನ್ನು ಅಧ್ಯಯನ ಮಾಡಲು ವಿಜ್ಞಾನಿಗಳು ಇಂತಹ ಟ್ಯಾಗ್ ಅಳವಡಿಸುವುದು ಜಾಗತಿಕವಾಗಿ ನಡೆಯುವ ಪ್ರಕ್ರಿಯೆ. ಆದರೂ, ಆಯಕಟ್ಟಿನ ನೌಕಾನೆಲೆಯ ಕೂಗಳತೆ ದೂರದಲ್ಲಿ ಈ ಹಕ್ಕಿ ಪತ್ತೆಯಾಗಿರುವುದರಿಂದ ಭದ್ರತಾ ದೃಷ್ಟಿಯಿಂದ ಕಟ್ಟೆಚ್ಚರ ವಹಿಸಲಾಗಿದೆ. ಹಕ್ಕಿಯನ್ನು ಸದ್ಯ ಸಾಗರ ಅರಣ್ಯ ವಿಭಾಗದ ಕಚೇರಿಯಲ್ಲಿ ನಿಗಾದಲ್ಲಿ ಇರಿಸಲಾಗಿದೆ.
ಈ ಭಾಗದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ಇದೇ ಕಾರವಾರದ ಬೈತ್‌ಖೋಲ್ ಬಂದರು ಪ್ರದೇಶದಲ್ಲಿ ಟ್ರ್ಯಾಕಿಂಗ್ ಸಾಧನವಿದ್ದ ಹದ್ದು (War Eagle) ಪತ್ತೆಯಾಗಿತ್ತು. ಅಂದೂ ಕೂಡ ಅದು ವನ್ಯಜೀವಿ ಸಂಶೋಧನೆಯ ಭಾಗ ಎಂದು ದೃಢಪಟ್ಟಿತ್ತು. ಸದ್ಯದ ಪ್ರಕರಣದಲ್ಲಿ, ಹಕ್ಕಿಯ ಮೇಲಿರುವ ಟ್ರ್ಯಾಕರ್ ಮೂಲಕ ಸಂಗ್ರಹಿಸಲಾದ ದತ್ತಾಂಶ ಮತ್ತು ಅದರ ಮೂಲವನ್ನು ಪತ್ತೆಹಚ್ಚಲು ಅಧಿಕಾರಿಗಳು ಸಂಬಂಧಪಟ್ಟ ಸಂಶೋಧನಾ ಸಂಸ್ಥೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.