ಲೈಂಗಿಕ ಕಿರುಕುಳ, ಡ್ರಗ್ಸ್‌… ಬೆಂಗಳೂರಿನ ಈ ಅಪಾರ್ಟ್‌ಮೆಂಟ್‌ಗೆ ಕಾನೂನು ಕಟ್ಟಳೆಗಳಿಲ್ಲ

ಕುಂಬಳಗೋಡು ಪೊಲೀಸರು ಪ್ರಾವಿಡೆಂಟ್ ಸನ್‌ವರ್ತ್ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಮತ್ತು ಸಂಕೀರ್ಣಕ್ಕೆ ಭದ್ರತಾ ಸೇವೆಗಳನ್ನು ಒದಗಿಸುವ ಸಂಸ್ಥೆಯಾದ ಟೈಕೋ ಸೆಕ್ಯುರಿಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Update: 2025-12-18 02:19 GMT
ಬೆಂಗಳೂರು ಅಪಾರ್ಟ್‌ಮೆಂಟ್‌
Click the Play button to listen to article

ಅಪಾರ್ಟ್‌ಮೆಂಟ್‌ನಲ್ಲಿ ಲೈಂಗಿಕ ಕಿರುಕುಳ, ಮಾದಕವಸ್ತು ಹೀಗೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ ಅದನ್ನು ಪೊಲೀಸರ ಗಮನಕ್ಕೆ ತರದೇ ಆರೋಪಿಗಳಿಗೆ ಕೇವಲ ದಂಡ ವಿಧಿಸಿ ಬಿಟ್ಟಿರುವ ಘಟನೆಯೊಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಕ್ರಿಮಿನಲ್ ಅಪರಾಧಗಳನ್ನು ಆಂತರಿಕವಾಗಿ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಮತ್ತು ಅದರ ಖಾಸಗಿ ಭದ್ರತಾ ಗುತ್ತಿಗೆದಾರರ ವಿರುದ್ಧ ಬೆಂಗಳೂರಿನ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ಘಟನೆ ನಡೆದಿರುವುದು ಎಲ್ಲಿ?

ಕುಂಬಳಗೋಡು ಪೊಲೀಸರು ಅಪಾರ್ಟ್‌ಮೆಂಟ್‌ವೊಂದರ ಅಸೋಸಿಯೇಷನ್ ಮತ್ತು ಸಂಕೀರ್ಣಕ್ಕೆ ಭದ್ರತಾ ಸೇವೆಗಳನ್ನು ಒದಗಿಸುವ ಸಂಸ್ಥೆಯಾದ ಟೈಕೋ ಸೆಕ್ಯುರಿಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರು ಅಪಾರ್ಟ್‌ಮೆಂಟ್‌ನಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳ ಆಂತರಿಕವಾಗಿ ಬಗೆಹರಿಸಲು ಅನಧಿಕೃತ ದಂಡ ವಿಧಿಸುವ ನಿಯಮಗಳನ್ನು ರಚಿಸಿ ಜಾರಿಗೊಳಿಸಿದ್ದಾರೆ. ಆಂತರಿಕ ವಿಚಾರಣೆಗಳನ್ನು ನಡೆಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ನಿವಾಸಿಗಳಿಗೆ ದಂಡ ವಿಧಿಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ನೈಋತ್ಯ ಬೆಂಗಳೂರಿನ ದೊಡ್ಡಬೆಲೆಯಲ್ಲಿರುವ ಅಪಾರ್ಟ್‌ಮೆಂಟ್ ಸಂಕೀರ್ಣವು ವಿದ್ಯಾರ್ಥಿಗಳು ಸೇರಿದಂತೆ ದೇಶದ ವಿವಿಧ ಭಾಗಗಳ ನಿವಾಸಿಗಳನ್ನು ಹೊಂದಿದೆ. ಲೈಂಗಿಕ ದೌರ್ಜನ್ಯ, ಕಳ್ಳತನ, ಮಾದಕ ವಸ್ತುಗಳ ಸೇವನೆ ಮತ್ತು ಅಪಾರ್ಟ್ಮೆಂಟ್ ಆವರಣದಲ್ಲಿ ಸರ್ವೇ ಸಮಾನ್ಯವಾಗಿದೆ. ಇಲ್ಲಿ ಸಣ್ಣಪುಟ್ಟ ಕಾನೂನು ನಿಯಮಗಳ ಉಲ್ಲಂಘನೆಗಳಿಂದ ಹಿಡಿದು ಗಂಭೀರ ಅಪರಾಧಗಳವರೆಗೆ ಹಲವಾರು ನಿವಾಸಿಗಳು ಭಾಗಿಯಾಗಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

ಈ ಘಟನೆಗಳನ್ನು ಪೊಲೀಸರಿಗೆ ವರದಿ ಮಾಡುವ ಬದಲು, ಅಪಾರ್ಟ್‌ಮೆಂಟ್ ಅಸೋಸಿಯೇಷನ್ ತನ್ನದೇ ಆದ ನಿಯಮಗಳನ್ನು ರೂಪಿಸಿದೆ. ಆರೋಪಿಗಳನ್ನು ಆಂತರಿಕವಾಗಿ ವಿಚರಿಸಿ ದಂಡಗಳನ್ನು ವಿಧಿಸಿದೆ. ಈ ಕ್ರಮಗಳನ್ನು ಕೈಗೊಳ್ಳುವಲ್ಲಿ ಖಾಸಗಿ ಭದ್ರತಾ ಸಂಸ್ಥೆಯು ಸಂಘಕ್ಕೆ ಸಹಾಯ ಮಾಡಿದೆ ಎಂದು ಆರೋಪಿಸಲಾಗಿದೆ.

25,000 ರೂ.ಗಳವರೆಗೆ ದಂಡ ಸಂಗ್ರಹ

ಈ ಬಗ್ಗೆ ನೈಋತ್ಯ ವಿಭಾಗದ ಉಪ ಪೊಲೀಸ್ ಆಯುಕ್ತೆ ಅನಿತಾ ಬಿ ಹದ್ದಣ್ಣವರ್ ಮಾಹಿತಿ ಹಂಚಿಕೊಂಡಿದ್ದು, ಅಪಾರ್ಟ್‌ಮೆಂಟ್‌ನ ಕೆಲವು ನಿವಾಸಿಗಳಿಂದ ಬಂದಿರುವ ದೂರಿನಾಧಾರದಲ್ಲಿ ತನಿಖೆ ನಡೆಸಿದಾಗ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರನ್ನು ರಕ್ಷಿಸಲು ಅಪಾರ್ಟ್‌ಮೆಂಟ್‌ ಅಸೋಸಿಯೇಶನ್‌ ಮುಂದಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪಿಗಳಿಗೆ ವಿಧಿಸಿರುವ ದಂಡ 25,000 ರೂ.ವರೆಗೆ ಸಂಗ್ರಹವಾಗಿದೆ.

ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 211, 238, 239, 3(5) ಮತ್ತು 3(6) ರ ಅಡಿಯಲ್ಲಿ ಮತ್ತು 1985 ರ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (NDPS) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕ್ರಿಮಿನಲ್ ಅಪರಾಧಗಳನ್ನು ತನಿಖೆ ಮಾಡಲು ಅಥವಾ ದಂಡ ವಿಧಿಸಲು ಯಾವುದೇ ಕಾನೂನು ಅಧಿಕಾರವನ್ನು ಖಾಸಗಿ ಸಂಘಗಳು ಹೊಂದಿಲ್ಲ ಮತ್ತು ಎಲ್ಲಾ ಅಪರಾಧಗಳನ್ನು ಪೊಲೀಸರಿಗೆ ವರದಿ ಮಾಡಬೇಕು ಎಂದು ಪೊಲೀಸರು ಪುನರುಚ್ಚರಿಸಿದ್ದಾರೆ.

Tags:    

Similar News